ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂವಿಧಾನದ ಆಶಯಗಳನ್ನೇ ಆರ್‍ಎಸ್‍ಎಸ್ #RSS ಹೊಂದಿದ್ದರೂ ಕೂಡ ಕಾಂಗ್ರೆಸ್ಸಿನ ಕೆಲ ಮುಖಂಡರು ಇದನ್ನು ನಿಷೇದಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಖಂಡನೀಯ. ಅವರು ಸಂವಿಧಾನವನ್ನು ಮತ್ತೊಮ್ಮೆ ಓದಲಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಆರ್.ಕೆ. ಸಿದ್ಧರಾಮಣ್ಣ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಪ್ರಿಯಾಂಕ ಖರ್ಗೆಯವರು ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಂವಿಧಾನ ಬಾಹಿರ ಚಟುವಟಿಕೆಗಳಲ್ಲಿ ತೊಡಗಿದೆ. ಆದುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಇದರ ಚಟುವಟಿಕೆಗಳನ್ನು ನಿಷೇದಿಸಬೇಕು ಎಂದು ಮುಖ್ಯಮಂತ್ರಿಗಳಿಗೆ `ನಡವಳಿ’ ಪತ್ರವೊಂದನ್ನು ಬರೆದಿದ್ದು, ಸಂಘದ ಬಗ್ಗೆ ದ್ವೇಷ ಭಾವನೆ ಬಿಟ್ಟರೆ ಈ ಪತ್ರದಲ್ಲಿ ಬೇರೇನೂ ಇಲ್ಲ ಎಂದು ಕುಟುಕಿದರು.

ಪ್ರಿಯಾಂಕ ಖರ್ಗೆ ಬರೆದಿರುವ ಪತ್ರ ರಾಜಕೀಯವಾಗಿ ಯೋಚನೆ ಮಾಡುವುದೇ ಹೊರತು, ಬೇರೇನೂ ಇಲ್ಲ. ಸಂಘದ ಚಟುವಟಿಕೆ ವಿಭಜಕ ಚಟುವಟಿಕೆ ಅಲ್ಲ, ಇದು ಜನರನ್ನು, ಸಮಾಜವನ್ನು ಜೋಡಿಸುವ ಚಟುವಟಿಕೆಯಾಗಿದೆ. ಖರ್ಗೆ ಅವರು ಪತ್ರದಲ್ಲಿ ಉಲ್ಲೇಖಿಸಿರುವ `ದೊಣ್ಣೆ’ ಆರ್‍ಮ್ಡ್ ಕಾಯ್ದೆಯಲ್ಲಿ ಬರುವುದಿಲ್ಲ. ದೊಣ್ಣೆ, ಕತ್ತಿ, ಚಾಕು ಮೊದಲಾದವುಗಳನ್ನು ಗರಡಿಮನೆಯಲ್ಲಿ ವ್ಯಾಯಾಮಕ್ಕೋಸ್ಕರ, ರೈತರು ತಮ್ಮ ಹೊಲಗಳ ಕೆಲಸಕ್ಕೋಸ್ಕರ, ಮಹಿಳೆಯರು ತಮ್ಮ ಅಡುಗೆಮನೆ ಕೆಲಸಕ್ಕೋಸ್ಕರ ಉಪಯೋಗಿಸುತ್ತಾರೆಯೇ ಹೊರತು ಸಮಾಜದಲ್ಲಿ ವಿದ್ವಂಸಕ ಕೃತ್ಯಕ್ಕೆ ಇವುಗಳನ್ನು ಉಪಯೋಗಿಸುವುದಿಲ್ಲ ಎಂಬ ತಿಳುವಳಿಕೆ ಪ್ರಿಯಾಂಕ ಅವರಿಗೆ ಇಲ್ಲದೆ ಇರುವುದು ದುರದೃಷ್ಟಕರ ಎಂದರು.

ಆರ್‍ಎಸ್‍ಎಸ್ ವಿರೋಧಿಸುವವರು ದೇಶದ ಯಾವುದೇ ಸ್ಥಳಕ್ಕೆ ಹೋದರೂ ಅಲ್ಲಿ ಒಂದು ಆರ್‍ಎಸ್‍ಎಸ್ ನಿತ್ಯಶಾಖೆ ನಡೆಯುತ್ತಿರುತ್ತದೆ. ಆ ಶಾಖೆಗಳಿಗೆ ಭೇಟಿನೀಡಿ ಆರ್‍ಎಸ್‍ಎಸ್‍ನ ಕಾರ್ಯಚಟುವಟಿಕೆಗಳನ್ನು ಗಮನಿಸಲಿ ಎಂದು ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಪ್ರಮುಖರಾದ ಎಸ್. ದತ್ತಾತ್ರಿ, ಮೋಹನ್‍ರೆಡ್ಡಿ, ಮಂಜುನಾಥ್ ನವಿಲೆ, ಹರಿಕೃಷ್ಣ, ಶ್ರೀನಾಥ್, ಕೆ.ವಿ. ಅಣ್ಣಪ್ಪ, ಚಂದ್ರಶೇಖರ್, ಮುರಳಿ, ಹರೀಶ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post