ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶರಾವತಿ ಹಿನ್ನೀರು #Sharavathi Backwater ಸಂತ್ರಸ್ತರ 6 ದಶಕಗಳ ಬೇಡಿಕೆಯಾದ ಸಿಗಂದೂರು ಸೇತುವೆಯ #Siganduru Bridge ಉದ್ಘಾಟನೆ ಅಪಪ್ರಚಾರದ ನಡುವೆಯೂ ಯಶಸ್ವಿಯಾಗಿ ನಡೆದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರ ಮಧ್ಯೆ ಕೊಲ್ಲೂರು ಭಾಗದಿಂದ ಮತ್ತು ಸಾಗರದ ಸುತ್ತಮುತ್ತಲಿನ ಜನ ಅಭಿಮಾನದಿಂದ ಸಮುದ್ರ ರೀತಿಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮವಾದರೂ ಕೊನೆ ಗಳಿಗೆಯಲ್ಲಿ ರಾಜ್ಯ ಸರ್ಕಾರ ತಮ್ಮ ಅಧಿಕಾರಿಗಳನ್ನು ಮತ್ತು ಎಲ್ಲಾ ಸೌಲಭ್ಯಗಳನ್ನು ಹಿಂದಕ್ಕೆ ಪಡೆದರೂ ನಮ್ಮ ಕಾರ್ಯಕರ್ತರು ತಮ್ಮ ಸ್ವಂತ ಮನೆಗಳಿಂದ ಸನ್ಮಾನದ ಶಾಲು, ಪೇಟ, ಇನ್ನಿತರ ಕೊಡುಗೆಗಳನ್ನು ತಂದು ವೇದಿಕೆಯಲ್ಲಿ ನೆರೆದ ಗಣ್ಯರು, ಶಾಸಕರು ಮತ್ತು ಅಧಿಕಾರಿಗಳಿಗೆ ಸನ್ಮಾನಿಸಿದರು ಎಂದು ತಿಳಿಸಿದರು.
ವಾಸ್ತವ ಏನೆಂದರೆ ಜೂನ್ 27ರಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ನಾನು ಭೇಟಿ ಮಾಡಿ ಪ್ರಸ್ತುತ ಹಿನ್ನೀರಿನ ಮಟ್ಟ 1800 ಅಡಿ ಇದೆ. ಈ ಭಾಗದಲ್ಲಿ ಮಳೆ ಹೆಚ್ಚಾಗಿದೆ. ಅದು 1810 ಅಡಿ ತಲುಪಿದರೆ ಲಾಂಚ್ ಓಡಾಡುವುದು ಕಷ್ಟವಾಗುವುದರಿಂದ ಮತ್ತು ಆ ಭಾಗದ ಜನರಿಗೆ ಆರೋಗ್ಯ ಸಮಸ್ಯೆ ಆದಾಗ ಸಂಕಷ್ಟಕ್ಕೀಡಾಗುತ್ತಾರೆ. ತಾವು ದಯವಿಟ್ಟು ಆದಷ್ಟು ಬೇಗ ಸೇತುವೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವಿನಂತಿಸಿದ ಪರಿಣಾಮ ಅವರು ಜುಲೈ 14ಕ್ಕೆ ನನಗೆ ಸಮಯ ನೀಡಿದರು. ಅಂದೇ ನಾನು ಪತ್ರಿಕಾಗೋಷ್ಠಿ ಹಾಗೂ ವೈಯಕ್ತಿಕವಾಗಿ ರಾಜ್ಯ ಸರ್ಕಾರದ ಗಮನಕ್ಕೆ ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದೆ ಎಂದರು.
ಗೌರವಾನ್ವಿತ ಲೋಕೋಪಯೋಗಿ ಸಚಿವರು ಸಿಎಂಗೆ ಪೂರ್ವಯೋಜಿತ ಕಾರ್ಯಕ್ರಮ ಇರುವುದರಿಂದ ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ನಾನು ಸರ್ಕಾರದ ಪರವಾಗಿ ಹೋಗುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಲ್ಲದೇ ಕಾರ್ಯಕ್ರಮದ ಪೂಜಾ ಸ್ಥಳದವರೆಗೆ ಬಂದು 12 ಗಂಟೆಯವರೆಗೆ ಇದ್ದವರು ಏಕಾಏಕಿ ತಮ್ಮ ನಿಲುವು ಬದಲಿಸಿ ಸರ್ಕಾರದ ಸೂಚನೆ ಮೇರೆಗೆ ಎಂದು ವಾಪಸ್ ತೆರಳಿದ್ದು ದುರದೃಷ್ಟಕರ ಎಂದರು.
ಯಾರದ್ದೋ ಹಿತ್ತಾಳೆ ಕಿವಿಯ ಮಾತು ಕೇಳಿ ಸಿಎಂ ತಮ್ಮ ನಿಲುವು ಬದಲಿಸಿದ್ದಾರೆ. ಆತಿಥ್ಯವನ್ನು ವಹಿಸಿಕೊಳ್ಳಬೇಕಾದ ರಾಜ್ಯ ಸರ್ಕಾರ ಕೊನೆಗಳಿಗೆಯಲ್ಲಿ ತನ್ನ ನಿಲುವು ಬದಲಾಯಿಸಿದೆ. ಕೇಂದ್ರ ಕಾಂಗ್ರೆಸ್ ನಾಯಕ ಸುರ್ಜೇವಾಲಾ ಅವರು 7 ಕೋಟಿ ಕನ್ನಡಿಗರಿಗೆ ನಾವು ಅವಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಈ ಭಾಗದ ಜನರ ಕನಸನ್ನು ನನಸು ಮಾಡುವ ಸಂದರ್ಭದಲ್ಲಿ ರಾಜಕಾರಣ ಮಾಡಿ ಅವಮಾನ ಮಾಡಿದ್ದು ನಾವೋ ನೀವೋ ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವರೊಬ್ಬರು ಬರಬೇಕಾದರೆ ಹವಾಮಾನ ವೈಪರೀತ್ಯವಿತ್ತು. ವಿಮಾನ ಇಳಿಯುವುದು ಕಷ್ಟವಿತ್ತು. ವಿಸಿಬಿಲಿಟಿ ಪರಿಕರವನ್ನು ಕೇಂದ್ರದಿಂದ ವಿಮಾನ ನಿಲ್ದಾಣಕ್ಕೆ ತಂದು 15 ದಿನವಾದರೂ ಕೇವಲ ಒಂದು ಕೋಟಿ ರೂ. ವೆಚ್ಚದಲ್ಲಿ ಅದನ್ನು ಕೆ.ಎಸ್.ಐ.ಡಿ.ಸಿಯವರು ಅಳವಡಿಸಿಲ್ಲ. ಎಂಪಿಯಾಗಿ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ. ನನಗಾಗಲಿ, ನಮ್ಮ ಕುಟುಂಬಕ್ಕಾಗಲೀ ಪ್ರಚಾರ ಗಿಟ್ಟಿಸುವ ಆತುರವಾಗಲಿ, ಅಗತ್ಯವಾಗಲೀ ಇಲ್ಲ ಎಂದರು.
ಒಂದೇ ದಿನದಲ್ಲಿ ಆರ್.ಸಿ.ಬಿ. ಕಾರ್ಯಕ್ರಮ ಆಯೋಜಿಸಿ ಬೇರೆಲ್ಲಾ ಕಾರ್ಯಕ್ರಮ ರದ್ದು ಮಾಡಲು ಈ ಸರ್ಕಾರಕ್ಕೆ ಸಮಯವಿದೆ. ಆದರೆ, ಸಿಗಂದೂರು ಸೇತುವೆ ಕಾರ್ಯಕ್ರಮದ ಉದ್ಘಾಟನೆಗೆ ಸಲ್ಲದ ಕಾರಣವನ್ನು ನೀಡುತ್ತಿದ್ದಾರೆ. ಜನರಿಗೆ ಸರ್ಕಾರದ ನಿಲುವು ಅರ್ಥವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ, ಶಾಸಕರಾದ ಡಿ.ಎಸ್. ಅರುಣ್, ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಶಿವರಾಜ್, ಮಾಲತೇಶ್, ಹರಿಕೃಷ್ಣ, ಅಣ್ಣಪ್ಪ ಕೆ.ವಿ., ಚಂದ್ರಶೇಖರ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post