ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ಕರೋನಾ ವೈರಸ್ ಭೀತಿಯನ್ನು ಬಂಡವಾಳವನ್ನಾಗಿ ಮಾಡಿಕೊಂಡು ಅಗತ್ಯವಿರುವ ಮಾಸ್ಕ್’ಗಳನ್ನು ಹೆಚ್ಚಿನ ದರಕ್ಕೆ ವ್ಯಾಪಾರಿಗಳು ಮಾರಾಟ ಮಾಡಿದ್ದು, ಗಮನಕ್ಕೆ ಬಂದರೆ ಅಂತಹ ಮಳಿಗೆಗಳ ಪರವಾನಗಿ ರದ್ದು ಮಾಡುವುದಾಗಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕರೋನಾ ಕುರಿತಾಗಿ ಸಭೆ ನಡೆಸಿದ ಅವರು, ಮಾಸ್ಕ್ ಇತ್ಯಾದಿ ಅಗತ್ಯ ಸಾಮಾಗ್ರಿಗಳ ದರವನ್ನು ಹೆಚ್ಚಿಸಿ ಮಾರುವುದರ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ದರ ಹೆಚ್ಚಳ ಬಗ್ಗೆ ದೂರುಗಳು ಬಂದರೆ ಅಂತಹ ಅಂಗಡಿಗಳ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು. ತಾಲೂಕು ಮಟ್ಟದಲ್ಲಿ ತಹಶೀಲ್ದಾರ್’ಗಳು ಈ ಕುರಿತು ನಿಗಾ ವಹಿಸಬೇಕು ಎಂದವರು ಸೂಚಿಸಿದ್ದಾರೆ.
ದೊಡ್ಡ ವ್ಯಾಪಾರಸ್ತರು ಜನ ಸಾಮಾನ್ಯರಲ್ಲಿನ ಭಯವನ್ನು ಬಂಡವಾಳವನ್ನಾಗಿ ಮಾಡಿಕೊಂಡು ದರ ಏರಿಕೆ ಮಾಡುವ ಮೂಲಕ ಶಿವಮೊಗ್ಗ, ಭದ್ರಾವತಿ ಸೇರಿದಂತೆ ಜಿಲ್ಲೆಯ ಹಲವೆಡೆ ಕ್ಲಿನಿಕಲ್ ಮಾಸ್ಕ್ ದರವನ್ನು ಏರಿಕೆ ಮಾಡಿದ್ದಾರೆ ಎಂಬ ಕುರಿತಾಗಿ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನಾಲ್ಕು ದಿನಗಳ ಹಿಂದೆ ವಿವರವಾದ ವರದಿ ಪ್ರಕಟಿಸಿತ್ತು.
ಕರೋನಾ ವೈರಸ್ ಭೀತಿ: ಮಾಸ್ಕ್, ಸ್ಯಾನಿಟೈಸರ್’ಗೆ ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಬೇಡಿಕೆ!
ಹೋಲ್’ಸೇಲ್ ಮಾರಾಟಗಾರರಿಂದ ಕೃತಕ ಅಭಾವ ಸೃಷ್ಠಿ? ಜಿಲ್ಲಾಧಿಕಾರಿಗಳೇ ಒಮ್ಮೆ ಇತ್ತ ಗಮನಹರಿಸಿ
https://kalpa.news/coronavirus-virus-mask-sanitizer-is-a-huge-demand-in-shimoga-district/
ಕರೋನಾ ವೈರಸ್ ಸಂಪೂರ್ಣ ಗುಣಮುಖವಾಗುವ ರೋಗವಾಗಿದ್ದು, ಈ ಬಗ್ಗೆ ಗಾಬರಿಪಡುವ ಅಗತ್ಯವಿಲ್ಲ ಆದರೆ ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿಲ್ಲ. ಕರೋನಾ ಪೀಡಿತ ದೇಶಗಳಿಗೆ ಪ್ರವಾಸ ಕೈಗೊಳ್ಳದಂತೆ ನಾಗರಿಕರಿಗೆ ಸಲಹೆ ನೀಡಲಾಗಿದೆ. ವಿದೇಶಗಳಿಂದ ಆಗಮಿಸುವವರನ್ನು ಪ್ರಸ್ತುತ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಿ ಬಿಡಲಾಗುತ್ತಿದೆ. ಆದರೂ ಅಂತಹವರ ಮೇಲೆ ನಾಲ್ಕು ವಾರಗಳ ಕಾಲ ನಿಗಾ ವಹಿಸಲು ಸೂಚಿಸಲಾಗಿದೆ. ವಿದೇಶಗಳಿಂದ ಆಗಮಿಸುವವರ ಹಾಗೂ ವಿದೇಶಕ್ಕೆ ತೆರಳುವವರ ವಿವರಗಳನ್ನು ಒದಗಿಸುವಂತೆ ಟ್ರಾವೆಲ್ ಏಜೆನ್ಸಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಶಿಮ್ಸ್‌ನಲ್ಲಿ ಪ್ರಯೋಗಾಲಯ
ಕರೋನಾ ವೈರಸ್ ಪತ್ತೆಗೆ ಶಿವಮೊಗ್ಗ ಮೆಡಿಕಲ್ ಕಾಲೇಜು ಪ್ರಯೋಗಾಲಯದಲ್ಲಿ ವ್ಯವಸ್ಥೆ ಇದೆ. ಕರೋನಾ ವೈರಸ್ ಪರೀಕ್ಷೆಯನ್ನು ಕೇವಲ ಶಿಮ್ಸ್‌ನಲ್ಲಿ ಮಾತ್ರ ನಿರ್ವಹಿಸಬೇಕು. ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಕೈಗೊಳ್ಳಲು ಅವಕಾಶವಿಲ್ಲ ಎಂದಿದ್ದಾರೆ.
ಪೋಷಕರಿಗೆ ಸೂಚನೆ
ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡರೆ ಶಾಲೆಗೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದಿರುವುದು ಉತ್ತಮ. ಕೈಯನ್ನು ಸರಿಯಾಗಿ ತೊಳೆಯುವಂತೆ ವಿದ್ಯಾರ್ಥಿಗಳಿಗೆ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ. ವೈಯಕ್ತಿಕ ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಗಮನ ಹರಿಸಬೇಕು. ಜ್ವರ, ಕೆಮ್ಮು ಕಾಣಿಸಿಕೊಂಡರೆ ನಿರ್ಲಕ್ಷ್ಯ ವಹಿಸದೆ ವೈದ್ಯರಿಗೆ ತೋರಿಸಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಗಾಬರಿಗೊಳ್ಳುವ ಅಗತ್ಯವಿಲ್ಲ
ಕರೋನಾ ವೈರಸ್ ಬಾರದಂತೆ ಮುನ್ನೆಚ್ಚರಿಕೆ ವಹಿಸಿದರೆ, ಪ್ರತಿಶತ ಬಾರದಂತೆ ತಡೆಯಬಹುದಾಗಿದೆ. ಸಾಮಾನ್ಯ ವೈರಲ್ ಸೋಂಕಿಗೆ ನೀಡುವ ಔಷಧಿಯನ್ನೇ ಇದಕ್ಕೆ ನೀಡಲಾಗುವುದು. ಶೇ.80ರಷ್ಟು ಜನರ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯಿಂದಲೇ ಇದನ್ನು ನಿವಾರಿಸಬಹುದು. ಶೇ.99ರಷ್ಟು ಕರೋನಾ ವೈರಸ್ ಪೀಡಿತರು ಗುಣಮುಖರಾಗಬಲ್ಲರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಠಾರೆ, ಯೋಜನಾ ನಿರ್ದೇಶಕ ಡಾ.ನಾಗೇಂದ್ರ ಹೊನ್ನಳ್ಳಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post