ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಆಶಾಢ ಕಳೆದ ನಾಳೆಯಿಂದ ಶ್ರಾವಣ ಮಾಸ ಆರಂಭವಾಗುತ್ತಿದೆ. ಹಿಂದೂ ಧರ್ಮದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿರುವ ಈ ಮಾಸದ ವಿಶೇಷತೆಯ ಕುರಿತಾಗಿ ಇಂದಿನಿಂದ ಸರಣಿ ಲೇಖನವನ್ನು ಪ್ರಕಟಿಸುತ್ತಿದ್ದೇವೆ.
ಶ್ರಾವಣವೆಂದರೆ ಪ್ರಸನ್ನ ಚಿತ್ತದ ಭಕ್ತಿಯ , ಸಾತ್ವಿಕ ಮಾತುಗಳ ಶ್ರವಣದ, ಸಾಲು ಸಾಲು ಸಂಭ್ರಮದ ಮಾಸ. ಸಂಪ್ರದಾಯ -ಸಂಸ್ಕೃತಿಗಳ ಅನಾವರಣ ಈ ಮಾಸದಲ್ಲಿಯೇ ಇದು ಆಷಾಢದ ಬೇಸರವನ್ನು ಮರೆಸುವ ಉತ್ಸಾಹದ ಹೆಬ್ಬಾಗಿಲು. ಶ್ರಾವಣವೆನ್ನುವುದು ನಮ್ಮ ಮನಸಿನ ಹಿತಕ್ಕೆ, ನಮ್ಮ ಅಭಿರುಚಿಯ ಅನನ್ಯತೆಗೆ ಮತ್ತು ನಮ್ಮ ಜೀವನೋತ್ಸಾಹಕ್ಕೆ ಒಂದು ರೂಪಕ. ಇಂಥ ಶ್ರಾವಣವನ್ನು ಕುರಿತು ಒಂದು ಉಲ್ಲಾಸಪೂರ್ಣ ಲಹರಿ. ಈ ಮಾಸದ ವಿಶೇಷತೆ ಮತ್ತು ಅನನ್ಯತೆಯ ಕುರಿತು ಇದೋ ಇಲ್ಲಿದೆ.
ಸಂಭ್ರಮದ ಸಂಕ್ರಮಣ ಈ ಶ್ರಾವಣ, ಉತ್ಸಾಹದ ಹೂರಣ, ರಮ್ಯತೆಯ ಬಿನ್ನಾಣ ಸಂತಸಕೆ ಕಾರಣ.
ಆಷಾಢದ ನಂತರ ಬರುವ ಶ್ರಾವಣದಲ್ಲಿ ಸೂರ್ಯ ಪ್ರಖರತೆ ಹೊಂದದೆ ನವಿರಾದ ಹೂಬಿಸಿಲುನೊಂದಿಗೆ ನೆರಳಿನಾಟನಾಡುವನು, ಆಗಾಗ ತುಂತುರು ಮಳೆಯ ತುಷಾರ ಸಿಂಚನ, ತುಂಬಿ ಹರಿಯುವ ನದಿ ತೊರೆಗಳ ಜುಳು ಜುಳು ನಿನಾದ, ಸಂಪಿಗೆ ಕೇದಿಗೆ ಸೇವಂತಿಗೆ ಸುಮಧುರ ವಾಸನೆಯೊಂದಿಗೆ ಭೂದೇವಿಯು ಹೊಸ ಉಡುಗೆ ಉಟ್ಟು ನಲಿಯುವಂತೆ ಭಾಸವಾಗುವ ಕಾಲ ಧಾರ್ಮಿಕವಾಗಿಯೂ ಬಹಳ ಮಹತ್ವದ್ದು . ಹಿಂದೂ ಪಂಚಾಂಗದ ಪ್ರಕಾರ ಇದು ಐದನೇ ಮಾಸ.
ನಿಸರ್ಗದ ಜೊತೆ ನೇರ ಸಂಬಂಧ ಹೊಂದಿರುವ ಜನಪದರಲ್ಲಿ ಶ್ರಾವಣ ಸಂಭ್ರಮ ವೈವಿಧ್ಯಮಯವಾಗಿದೆ. ಶ್ರಾವಣ ಇಡೀ ನಿಸರ್ಗ ರಮಣಿ ಹಸಿರು ಸಿರಿಯುಟ್ಟು ಕುಣಿದು ಕುಪ್ಪಳಿಸಿ ಹಾಡುವ ಕಾಲ. ಕೃಷಿಕರು, ಸುಮಂಗಲೆಯರು, ಸನ್ಯಾಸಿಗಳು, ಗೃಹಸ್ಥಾಶ್ರಮಿಗಳು ಸರ್ವರಿಗೂ ಈ ತಿಂಗಳು ಒಂದಲ್ಲ ಒಂದು ವ್ರತ. ನಿಯಮದಲ್ಲಿ ತೊಡಗಿರುತ್ತಾರೆ. ಶ್ರಾವಣ ತಿಂಗಳಿಡೀ ಹಬ್ಬಗಳೋ ಹಬ್ಬಗಳು. ವರಮಹಾಲಕ್ಷ್ಮಿ ವ್ರತ. ಸಂಪದ ಗೌರೀ ವ್ರತ, ಮಂಗಳಗೌರಿವ್ರತ, ಗಾಯತ್ರಿ ಆರಾಧನೆ. ಅಂದರೆ ಶ್ರಾವಣ ಮಾಸ ಬರೀ ಧಾರ್ಮಿಕ ವ್ರತ. ಹಬ್ಬಗಳ ತಿಂಗಳು ಮಾತ್ರವಲ್ಲ ಎಲ್ಲರೂ ಕೂಡಿ ಸಹಕಾರದಿಂದ ಬಾಳು ತಿಳಿವಳಿಕೆ ನೀಡುವ ತಿಂಗಳು. ಈ ದೃಷ್ಟಿಯಿಂದ ಶ್ರಾವಣ ಹೆಚ್ಚು ಅರ್ಥಪೂರ್ಣ. ಪ್ರಕೃತಿಯೊಂದಿಗೆ ಒಂದಾಗು ಬಾಳು, ಗೃಹಸ್ಥಾಶ್ರಮಿಯಾಗಿ ಹೊಂದಿಕೊಂಡು ಬದುಕು, ಸನ್ಯಾಸಿಯಾಗಿ ಅಧ್ಯಯನ ಮಾಡು ಎಂದು ಸಂದೇಶ ನೀಡುವ ಶ್ರಾವಣ ಬದುಕಿನ ಒಂದು ಮಧುರ ಅಧ್ಯಾಯ.
ಶ್ರಾವಣ ಮಾಸ ಬಂತೆಂದರೆ ಹಬ್ಬ-ಹರಿದಿನಗಳ ಹಾಗೂ ಶುಭ ಕಾರ್ಯಗಳ ಮೆರವಣಿಗೆಯೇ ನಡೆಯುತ್ತಾದೆ! ದೇವತೆಗಳು ಸಾಲುಸಾಲಾಗಿ ಬಂದು ಪೂಜೆಯನ್ನೊಪ್ಪಿಕೊಂಡು ವರ ನೀಡುವ ಈ ಮಾಸ ಭಕ್ತರ ಪಾಲಿಗೆ ಸುಗ್ಗಿಕಾಲವೇ ಸರಿ! ಹೆಂಗಳೆಯರ ಜರತಾರಿ ಸೀರೆಗಳು, ಮಿನುಗುವ ಒಡವೆಗಳು, ಕೈಬಳೆಗಳ ಸಪ್ಪಳ, ಕಾಲ್ಗಿಜ್ಜೆಗಳ ಝೇಂಕಾರ, ಹಾಡು-ಭಜನೆ-ಸ್ತೋತ್ರ-ಮಂತ್ರಗಳ ಕಥಾ ಲಾಪಗಳ ಮಂಗಳಕರ ದನಿ ಪರಿಸರದಲ್ಲಿ ರಂಗೇರಿಸುತ್ತವೆ. ಬಗೆಬಗೆಯ ಗೀತನೃತ್ಯ ಕಾರ್ಯಕ್ರಮಗಳು ಬೀದಿ-ಬಡಾವಣೆಗಳಲ್ಲಿ ಮೊಳಗುತ್ತಿರುತ್ತವೆ. ಎಳೆಯ ತಳಿರು, ಮಾವಿನ ತೋರಣ, ಬಣ್ಣದ ರಂಗೋಲಿ, ಬಾಳೆಕಂಬ, ದೀಪಗಳ ಹೊಂಬೆಳಕು, ಧೂಪಗಳ ಸುವಾಸನೆ, ಅರಸಿನ- ಕುಂಕುಮ- ಗಂಧ-ಚಂದನ- ಹೂವು-ಹಣ್ಣುಗಳು ಪರಿಸರವನ್ನು ಶೋಭೆಗೊಳಿಸುತ್ತವೆ. ಭಕ್ಷ್ಯ- ಭೋಜ್ಯ-ಪೇಯಗಳಿಂದ ಕೂಡಿದ ಮೃಷ್ಟಾನ್ನಭೋಜನದ ಮನಮೋಹಕ ಪರಿಮಳ ಎಲ್ಲರನ್ನೂ ಅಹ್ವಾನಿಸುತ್ತಿರುತ್ತವೆ! ಏನಿಲ್ಲ ಎಂದರೂ ಮಾಮೂಲಿ ಅನ್ನ-ಸಾರು-ಹುಳಿ-ಕೋಸಂಬರಿ-ಪಲ್ಯಗಳ ಜೊತೆಗೆ ಕನಿಷ್ಟ ಪಾಯಸ, ಆಂಬೊಡೆ, ಹಪ್ಪಳ, ಕಲಸಿದನ್ನ ಒಬ್ಬಟ್ಟುಗಳಾದರೂ ಇರಲೇಬೇಕು ಅನ್ನಿ! ಎಂತಹ ನಾಸ್ತಿಕರೇ ಆದರೂ ಹಬ್ಬದ ಭೋಜನವನ್ನಂತೂ ಒಲ್ಲೆ ಎನ್ನಲಾರರು! ಇದರ ಜೊತೆ ಶ್ರಾವಣವೆಂದರೆ ಮದುವೆ ಮುಂಜಿ ಗೃಹಪ್ರವೇಶಾದಿ ಶುಭಕಾರ್ಯಗಳ ಸರಮಾಲೆ. ಧರ್ಮವೇದಿಕೆಗಳಲ್ಲಂತೂ ಸಾಮೂಹಿಕ-ವಿವಾಹ, ಅನ್ನಸಂತರ್ಪಣೆಗಳು ಜರುಗುತ್ತಲೇ ಇರುತ್ತವೆ. ಹೀಗೆ ವರ್ಣ-ಲಿಂಗ-ವಯಸ್ಸುಗಳ ಬೇಧವೆನ್ನದೆ ಎಲ್ಲರನ್ನೂ ತನ್ನ ಸಂತೋಷ-ಸಂಭ್ರಮದಲ್ಲಿ ತೊಡಗಿಸಿಕೊಳ್ಳುತ್ತದೆ ಈ ಶ್ರಾವಣಮಾಸ.
ಭೀಮನ ಅಮಾವಾಸ್ಯೆ ಶ್ರಾವಣಕ್ಕೆ ಮುನ್ನುಡಿ ಬರೆಯುವ ಹಬ್ಬ. ಸೃಷ್ಟಿ ಸೌಂರ್ದ್ಯದ ಕನ್ನಡಿಯಾಗಿ ಶ್ರಾವಣ ಚಿರನೂತನವಾಗಿದೆ. ನವದಂಪತಿಗಳಿಗೆ ಆಷಾಢದ ವಿರಹ ಮರೆಸಿ ಶ್ರಾವಣದ ಸಂತಸದಲ್ಲಿ ಮಿಂದೇಳುವ ಹಾಗೂ ಬದುಕನ್ನು ಸಮರಸದತ್ತ ಕೊಂಡ್ಯೊಯುವ ಪರ್ವಕಾಲ.
ಶ್ರಾವಣ ಮಾಸದ ಎರಡನೇ ಶುಕ್ರವಾರ ಮಹಾಲಕ್ಷ್ಮೀ ಜನನವಾದರೆ, ಸೆರೆಯ ಕಳೆವ ಹರಿ ಹುಟ್ಟಿದ ತಿಂಗಳು ಶ್ರಾವಣವಲ್ಲವೇ? ಎಂದು ಪುತಿನ ಕೇಳುವಂತೆ – ಪೂರ್ಣ ಪುಣ್ಯಾವತಾರವೆಂಬ ಹೆಗ್ಗಳಿಕೆಗೆ ಪಾತ್ರನಾದ ಶ್ರೀಕೃಷ್ಣ ಪರಮಾತ್ಮನು ಜನಿಸಿದ್ದು ಈ ಮಾಸದಲ್ಲೆ.
ಶ್ರಾವಣದ ಸಾಕ್ಷಾತ್ಕಾರವಾಗುವುದು ಹಸಿರಿನ ಮೂಲಕ. ಮಳೆ-ಗಾಳಿಗಳ ಸಾಂಗತ್ಯದಲ್ಲಿ ಮೈತುಂಬಿಕೊಳ್ಳುತ್ತಿರುತ್ತಾಳೆ. ಹೂವಿನ ಗಿಡಗಳ ಚಿಗುರಿ ಎಲ್ಲರ ಮೈಮನಗಳನ್ನು ರೋಮಾಂಚನೆಗೊಳಿಸುವ ಅಂದ ಚಂದದ ಜಾಜಿ, ಮಲ್ಲಿಗೆ, ಕೇದಗೆ, ಇನ್ನೂ ಅನೇಕ ಹೂವುಗಳು ಎಂಥವರ ಮನವನ್ನೂ ಸೂರೆಗೊಳ್ಳುತ್ತದೆ.
ಶ್ರಾವಣ ಮಾಸದ ಆಚರಣೆಗಳಿಗೆ ನೈಸರ್ಗಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳಿವೆ. ಮಳೆಗಾಲವಾದರೂ ಜನರ ಸಂತಸ ಸಂಭ್ರಮಗಳಿಗೆ ಮುಕ್ತ ಅಭಿವ್ಯಕ್ತಿ ಈ ಮಾಸದಲ್ಲಾಗುತ್ತದೆ ಎನ್ನುವುದು ಗಮನೀಯ. ಶ್ರಾವಣವನ್ನು ವೇದಗಳು ನಭಸ್ ಎಂದು ಕರೆಯುತ್ತವೆ. ಆಷಾಡದ ಗಾಳಿ ತಣಿದು ಮಳೆಗೆ ಅವಕಾಶ ಕಲ್ಪಿಸುವ ಈ ಮಾಸದ ಪ್ರಾರಂಭದಲ್ಲಿ ನಭದಂಗಳದಲ್ಲಿ ಮಳೆ-ಗಾಳಿ-ಬಿಸಿಲುಗಳು ಕಣ್ಣಾಮುಚ್ಚಾಲೆಯಾಡುವುದನ್ನು ಕಾಣಬಹುದು. ಬರಬರುತ್ತ ಮೋಡವೇ ಕವಿದಿದ್ದು, ಮಳೆ ಜಿನುಗುತ್ತಲೇ ಇದ್ದು, ಸೂರ್ಯಚಂದ್ರರು ಮಂಕಾಗಿ, ಹಗಲುರಾತ್ರಿಗಳು ಕಾಂತಿಹೀನವಾಗಿ, ನಮ್ಮನ್ನು ಮನೆಯೊಳಗೇ ಇರುವಂತೆ ಪ್ರೇರೇಪಿಸುತ್ತವೆ.
ಬಹಳ ಪ್ರಾಚೀನಕಾಲದಿಂದಲೂ ನಮ್ಮ ಕವಿಗಳು ಈ ಶ್ರಾವಣದ ಸೊಬಗನ್ನು ಬಗೆಬಗೆಯಾಗಿ ವರ್ಣಿಸುತ್ತ ಬಂದಿದ್ದಾರೆ. ಈ ಆಷಾಢ-ಶ್ರಾವಣಗಳಲ್ಲಿ ಮಧ್ಯಾಹ್ನ ಕಾಲ ಎರಡನೆಯ ಬೇಸಿಗೆಯೋ ಎಂಬಂತೆ ಸ್ವಲ್ಪಮಟ್ಟಿಗೆ ಕಂಡರೂ, ಆಗಾಗ ಮೋಡ-ಗಾಳಿಗಳು ಬಂದು, ರಾತ್ರಿಯೂ ಬೇಗನೆ ಆವರಿಸಿ ಹವಾಮಾನವನ್ನು ಬದಲಾಯಿಸುತ್ತ ಇರುತ್ತವೆ. ಹಣ್ಣೆಲೆಗಳು ವರ್ಣಾಂತರ ಹೊಂದುತ್ತ ಕಳಚಿ ಬೀಳುತ್ತ ಅಂಗಳವನ್ನೂ ರಸ್ತೆಗಳನ್ನೂ ಆವರಿಸಿ ವಿಶಿಷ್ಟ ಸೊಬಗನ್ನೀಯುತ್ತವೆ. ಈ ಕಾಲದಲ್ಲಿ ಸಮುದ್ರತೀರಗಳಲ್ಲಿ ಚಂಡಮಾರುತಗಳು ಅಪ್ಪಳಿಸುವುದೂ ಸರ್ವೇಸಾಮಾನ್ಯ. ಭೂಮಿಯ ಉತ್ತರಭಾಗದ ಪಕ್ಷಿಗಳು ದಕ್ಷಿಣ ದಿಕ್ಕಿಗೆ ವಲಸೆ ಬಂದು ನೋಡುಗರಿಗೆ ಮುದವೀಯುತ್ತವೆ.
ವರಕವಿ ಬೇಂದ್ರೆಯವರಿಗಂತೂ ಶ್ರಾವಣ ಮಾಸ ಅತಿಪ್ರಿಯವಾದ ಕಾಲ. ಆಷಾಡದ ಜಡಿಮಳೆಯಿಂದ ಜಡ್ಡುಕಟ್ಟಿದ ವರ್ಷಕ್ಕೆ ಹರ್ಷೋಲ್ಲಾಸ ತರುವ ಶ್ರಾವಣವೆಂದರೆ ಕವಿಗಳಿಗೆ ಮಾತ್ರವಲ್ಲ ವೇದಾಂತಿ, ದಾರ್ಶನಿಕರಿಗೂ ಅತಿ ಹೆಚ್ಚು ಮೆಚ್ಚು. ಪುರಾಣ ಪುಣ್ಯ ಕಥೆಗಳಲ್ಲಿ ಹೇಳಿರುವ ಪ್ರಕಾರ ಇದು ದೇವತೆಗಳಿಗೂ ಅತಿಪ್ರಿಯವಾದ ಕಾಲ. ಶ್ರಾವಣ ಮಾಸದಲ್ಲಿ ಹುಲುಸಾಗಿ ಬೆಳೆದಿರುವ ಗಿಡ ಬಳ್ಳಿ-ಹೂವುಗಳಲ್ಲಿ ಔಷಧೀಯ ಗುಣಗಳು ಸಾಕಷ್ಟು ತುಂಬಿರುತ್ತದೆ. ಇವುಗಳ ಸೇವನೆ ಅಘ್ರಾಣಿಸುವಿಕೆಯಿಂದ ಆರೋಗ್ಯ ಭಾಗ್ಯ ಲಭಿಸುವುದೆಂದು ವೈದ್ಯಶಾಸ್ತ್ರಗಳು ಹೇಳುತ್ತದೆ. ಒಟ್ಟಾರೆಯಾಗಿ ಶ್ರಾವಣ ಮಾಸದ ಹಸಿರು ಸಿರಿ ಇಡೀ ಪ್ರಕೃತಿಗೆ ಸಂಭ್ರಮ ತಂದಿರುತ್ತದೆ.
Get In Touch With Us info@kalpa.news Whatsapp: 9481252093
Discussion about this post