ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬುದ್ಧಿರ್ಬಲಂ ಯಶೋಧೈರ್ಯಂ/
ನಿರ್ಭಯತ್ವಂ ಅರೋಗತಾ//
ಅಜಾಡ್ಯಂ ವಾಕ್ಪಟುತ್ವಂಚ/
ಹನೂಮತ್ಸ್ಮರಾಣಾದ್ಭವೇತ್//
ದಾವಣಗೆರೆ ಜಿಲ್ಲೆಯ ಚನ್ನಗಿರಿ ಟೌನಿಗೆ ಅಂಟಿಕೊಂಡಂತೆ ಮುದ್ದೇನಹಳ್ಳಿ ಎಂಬ ಪುಟ್ಟ ಗ್ರಾಮವಿದೆ. ಈ ಗ್ರಾಮಕ್ಕೆ ಹೊಂದಿಕೊಂಡಂತೆ ಸ್ವಲ್ಪ ಎತ್ತರ (ಸಣ್ಣಗುಡ್ಡ)ಪ್ರದೇಶದ ಮೇಲೆ ಶ್ರೀ ಆಂಜನೇಯಸ್ವಾಮಿ ಪ್ರತಿಷ್ಠಾಪನೆಗೊಂಡಿದ್ದಾನೆ. ಮುದ್ದೇನಹಳ್ಳಿಯ ಆಂಜನೇಯ ಸ್ವಾಮಿಯ ವಿಗ್ರಹ ಶ್ರೀಮೌದ್ಗಲ್ಯ ಋಷಿಗಳಿಂದ ಪ್ರತಿಷ್ಠಾಪನೆಗೊಂಡಿದೆ ಎಂದು ಸ್ಥಳ ಪುರಾಣದಿಂದ ತಿಳಿಯುತ್ತದೆ.
ದೇವಸ್ಥಾನಕ್ಕೆ ಸುಂದರವಾಗಿ ನಿರ್ಮಿಸಿರುವ ವಿಶಾಲವಾದ ಸುಮಾರು ಹತ್ತು-ಹದಿನೈದು ಮೆಟ್ಟಿಲುಗಳನ್ನು ಏರಿ ಹೋದರೆ ಸಿಗುವುದು ದೊಡ್ಡ ಗರುಢಗಂಬ. ಗರ್ಭಗುಡಿಯಲ್ಲಿರುವ ದೇವರಿಗೆ ಎದುರಾಗಿ ಕಾಣುವುದು ಈ ಗರುಢಗಂಬ. ಇದರ ಪಕ್ಕದಲ್ಲಿ ಅಚ್ಚುಕಟ್ಟಾಗಿ ನಿರ್ಮಿಸಿರುವ ಶ್ರೀಸಿದ್ಧಿ ವಿನಾಯಕನ ಮತ್ತು ನವಗ್ರಹಗಳ ಸನ್ನಿಧಿಯ ಗುಡಿ ಇದೆ.
ಹೊರಗಿನ ಪ್ರಾಕಾರ ಪ್ರದಕ್ಷಿಣೆ ಮಾಡುವಾಗ ಮೆಟ್ಟಲೇರಿ ಬರುವ ಆಯಾಸವೆಲ್ಲ ಕ್ಷಣಮಾತ್ರದಲ್ಲಿ ಮಾಯವಾಗುತ್ತದೆ. ಇದು ಸ್ಥಳ ಮಹಿಮೆಯ ಅನುಭವ. ಪ್ರಾಕಾರ ಪ್ರದಕ್ಷಿಣೆ ಮಾಡಿಕೊಂಡು ದೇವಾಲಯದ ಒಳಗೆ ಶ್ರೀ ಆಂಜನೇಯ ಸ್ವಾಮಿಯ ದರ್ಶನಕ್ಕೆ ಹೋಗುವಾಗ ದೇಹದಲ್ಲಿ ಭಕ್ತಿಯ ಕಂಪನವಾಗುತ್ತದೆ. ಶ್ರೀ ಆಂಜನೇಯ ಸ್ವಾಮಿ ರಾಜ್ಯದ ಮೂಲೆಮೂಲೆಗಳಿಂದ ಬಹಳ ಭಕ್ತ ಜನರನ್ನು ಹೊಂದಿದ್ದು ಅವರ ಸಂಕಷ್ಟಗಳನ್ನು ನಿವಾರಿಸುವ ಮುಖ್ಯಪ್ರಾಣನಾಗಿದ್ದಾನೆ.
ಈ ದೇವಾಲಯದ ಕೆಳಗೆ ಭಕ್ತರನ್ನು ಕಾಪಾಡುವ ಶ್ರೀಭೂತರಾಜರ ಗುಡಿಯಿದೆ. ಸುಂದರವಾದ ಕಲ್ಲುಮಂಟಪವಿದ್ದು, ಗ್ರಾಮದೇವತೆಯಾದ ಶ್ರೀ ದುರ್ಗಾಮಾತೆಯ ಮಂದಿರವೂ ಇಲ್ಲಿದೆ.
ಶ್ರೀ ಮೌದ್ಗಲ್ಯ ಋಷಿಗಳಿಂದ ಪ್ರತಿಷ್ಠಾಪನೆಯಾಗಿರುವ ಈ ಮುದ್ದೇನಹಳ್ಳಿಯ ಮುದ್ದು ಹನುಮಪ್ಪನನ್ನು ಹುಡುಕಿಕೊಟ್ಟವರು ಬೇಟೆಗಾರರೆಂದು ತಿಳಿದುಬರುತ್ತದೆ.
ಮೊದಲು ಈ ಪ್ರದೇಶದಲ್ಲಿ ದಟ್ಟ ಅರಣ್ಯವಿದ್ದು ನಿರ್ಜನ ಪ್ರದೇಶವಾಗಿದ್ದು, ಕಾಡುಪ್ರಾಣಿಗಳು ಇದ್ದವೆಂತಲೂ, ಬೇಟೆಗಾರರು ಪ್ರಾಣಿಗಳ ಬೇಟೆಯಾಡಲು ಅರಣ್ಯಕ್ಕೆ ಬರುತ್ತಿದ್ದರೆಂದು ಪ್ರತೀತಿ ಇದೆ. ಹೀಗೇ ಒಂದು ದಿನ ಬೇಟೆಗಾರರಿಗೆ ಜಿಂಕೆಯೊಂದು ಕಂಡು, ಬೇಟೆಯಾಡುತ್ತಾ ಅದು ತಪ್ಪಿಸಿಕೊಂಡು ಓಡುತ್ತಾ ಒಂದು ಗುಹೆಯೊಳಗೆ ಸೇರಿಕೊಳ್ಳುತ್ತದೆ. ಈ ಬೇಟೆಗಾರರೂ ಅದರ ಹಿಂದೆ ಹೋಗಿ ಆ ಗುಹೆಯ ಒಳಗೆ ನೋಡಿದಾಗ ದೊಡ್ಡ ಸುಂದರವಾದ ಆಂಜನೇಯನ ಮೂರ್ತಿಯನ್ನು ಕಂಡರಂತೆ. ಬೇಟೆಗಾರರು ಶ್ರೀಸ್ವಾಮಿಯ ಪೂಜೆ ಮಾಡಿ ಸೇವೆಯಿಂದ ಸಂತೃಪ್ತಿ ಪಡೆಯುತ್ತಿದ್ದರು. ಕ್ರಮೇಣ ಈ ಪ್ರಾಂತದಲ್ಲಿ ಜನರು ಮನೆಗಳನ್ನು ನಿರ್ಮಿಸಿಕೊಂಡು, ಹೊಲಗದ್ದೆಗಳನ್ನು ಹೊಂದಿ ರೈತಾಪಿ ಜೀವನವನ್ನು ಪ್ರಾರಂಭಿಸಿದರಂತೆ.
ಹೀಗಿರುವಾಗ ಒಂದು ದಿನ ರಾತ್ರಿ ಇಲ್ಲಿಯ ಗ್ರಾಮಸ್ಥರೊಬ್ಬರ ಕನಸಿನಲ್ಲಿ ಬಂದು ಶ್ರೀಸ್ವಾಮಿಯು ತಾನು ನೆಲೆಸಿರುವ ಜಾಗದ ಕುರುಹನ್ನು ತೋರಿಸಿದನಂತೆ. ಕನಸು ಬಿದ್ದ ಗ್ರಾಮಸ್ಥನು, ಗ್ರಾಮದ ಇತರೆ ಜನರೊಂದಿಗೆ ಆ ಜಾಗಕ್ಕೆ ಹೋಗಿ ಶ್ರೀಆಂಜನೇಯ ಸ್ವಾಮಿಯ ಮೂರ್ತಿಯನ್ನು ಪ್ರತ್ಯಕ್ಷ ಕಂಡು ಭಕ್ತಿಯಿಂದ ನಮಸ್ಕಾರ ಮಾಡಿ ಬಹಳ ಸಂತೋಷ ಪಟ್ಟನಂತೆ. ಮುಂದೆ ಗ್ರಾಮಸ್ಥರೆಲ್ಲಾ ಸೇರಿ ಈಗಿರುವ ದೇವಾಲಯವನ್ನು ಕಟ್ಟಿದರೆಂದು ತಿಳಿದವರು ಹೇಳುತ್ತಾರೆ.
ಪ್ರತಿ ವರ್ಷ ಚೈತ್ರಮಾಸದ ಶುದ್ಧ ನವಮಿಯ ದಿನದಂದು ಶ್ರೀಸ್ವಾಮಿಯ ಬ್ರಹ್ಮರಥೋತ್ಸವ ಭಕ್ತಾದಿಗಳ ಸಹಕಾರದಿಂದ ಬಹಳ ವಿಜೃಂಭಣೆಯಿಂದ ನೆರವೇರುತ್ತದೆ.
ರಥೋತ್ಸವದ ದಿನ ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ಆಗಮಿಸಿ ಶ್ರೀಸ್ವಾಮಿಯ ಉತ್ಸವ ಕಾರ್ಯದಲ್ಲಿ ಭಾಗವಹಿಸಿ ತೃಪ್ತಿ ಹೊಂದಿ ತಮ್ಮ ತಮ್ಮ ಊರುಗಳಿಗೆ ಹಿಂದಿರುಗುತ್ತಾರೆ. ಈ ಸ್ವಾಮಿಯ ಉತ್ಸವದಲ್ಲಿ ಭಾಗವಹಿಸಿ, ಅವನ ದರ್ಶನ ಪಡೆಯುವವರೇ ಭಾಗ್ಯವಂತರು.
ಇತ್ತೀಚಿನ ವರ್ಷಗಳಲ್ಲಿ ಧನುರ್ಮಾಸದಲ್ಲಿ ನಡೆಯುವ ಪೂಜಾ ಕಾರ್ಯದಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಭಾಗವಹಿಸಿ ಶ್ರೀ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಶ್ರೀ ಆಂಜನೇಯ ಸ್ವಾಮಿಯ ಸೇವೆಯನ್ನು ಚನ್ನಗಿರಿಯ ಜೋಯಿಸ್ ಮನೆತನದ ಕೀರ್ತಿಶೇಷ ನಾರಾಯಣ ಜೋಯಿಸರು ಬಹಳ ದೀರ್ಘಕಾಲ ಈ ದೇವಸ್ಥಾನದ ಮೇಲ್ವಿಚಾರಕರಾಗಿ ನಿರ್ವಹಣೆ ಮಾಡಿದ ಅನನ್ಯ ಭಕ್ತರು. ಇವರ ಮೇಲ್ವಿಚಾರಣೆಯ ಅವಧಿಯಲ್ಲಿ ಬಹಳಷ್ಟು ದೇವಾಲಯದ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ತಿಳಿದು ಬರುತ್ತದೆ. ಈಗ ಭಕ್ತಾದಿಗಳ ಪ್ರಯತ್ನದಿಂದ ಮತ್ತು ಸ್ಥಳೀಯ ಶಾಸಕರ ಮುಂದಾಳತ್ವದಲ್ಲಿ ಒಂದು ಸುಂದರವಾದ ಕಲ್ಯಾಣಮಂಟಪವು ನಿರ್ಮಾಣಗೊಂಡಿರುತ್ತೆ.
ಶ್ರೀಸ್ವಾಮಿಯ ಪೂಜಾಕಾರ್ಯವನ್ನು ಬಹಳ ನಿಷ್ಠೆಯಿಂದ ಅರ್ಚಕ ಮನೆತನದವರಾದ ಶ್ರೀ ಪ್ರಾಣೇಶಾಚಾರ್ಯರು ನೆರವೇರಿಸಿಕೊಂಡು ಬರುತ್ತಿದ್ದಾರೆ. ಮುದ್ದೇನಹಳ್ಳಿ ಗ್ರಾಮವು ಚನ್ನಗಿರಿ ಪಟ್ಟಣದ ಮುಖ್ಯ ಬಸ್ಸು ನಿಲ್ದಾಣದಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿದೆ. ದೇವಾಲಯಕ್ಕೆ ಹೋಗಿ ಬರಲು ಒಳ್ಳೆಯ ರಸ್ತೆ ಅನುಕೂಲತೆ ಇರುತ್ತದೆ.
Get In Touch With Us info@kalpa.news Whatsapp: 9481252093
Discussion about this post