ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ #Bengaluru ಪ್ರತಿಷ್ಠಿತ ಸಂಸ್ಥೆಯಾದ ಶ್ರೀರಾಮ ಲಲಿತ ಕಲಾ ಮಂದಿರ ಪ್ರತಿ ತಿಂಗಳು ಆಯೋಜಿಸುವ ಕಛೇರಿಗಳ ಸರಣಿಯಲ್ಲಿ ಇತ್ತೀಚೆಗೆ ಶ್ರೀಮತಿ ಶ್ರುತಿ ಭಟ್ #ShruthiBhat ಅವರ ಗಾಯನ ಕಾರ್ಯಕ್ರಮ ನಡೆಯಿತು. ವಿಭಿನ್ನ ರೀತಿಯಲ್ಲಿ ವಿಶೇಷವಾಗಿ ಮೂಡಿಬಂದ ಕಛೇರಿ ಇದಾಗಿತ್ತು. ಈ ಕಛೇರಿಯ ಬಗ್ಗೆ ನನ್ನ ಅನಸಿಕೆಗಳನ್ನು ಹಂಚಿಕೊಳ್ಳಲು ಸ್ಫೂರ್ತಿಯಾದ ಎಲ್ಲ ಕಲಾವಿದರಿಗೆ ನನ್ನ ಪ್ರಣಾಮಗಳನ್ನು ತಿಳಿಸುತ್ತಾ ಈ ಲೇಖನವನ್ನು ಪ್ರಿಯ ಓದುಗರ ಮುಂದಿಡುತ್ತಿದ್ದೇನೆ.
ಶ್ರುತಿ ಭಟ್… ಈಕೆ ಮುಂಚೂಣಿಯಲ್ಲಿರುವ ನಮ್ಮ ಕರ್ನಾಟಕದ ಹೆಮ್ಮೆಯ ಕಲಾವಿದೆ. ಇತ್ತೀಚೆಗೆ ಶ್ರೀ ರಾಮಲಲಿತ ಕಲಾ ಮಂದಿರದ #Ramalalithakalamandira ಆಶ್ರಯದಲ್ಲಿ ನೀಡಿದ ಕಛೇರಿ ಬಹಳ ಪ್ರಬುದ್ಧವಾಗಿತ್ತು. ಧೀರ ಶಂರಾಭರಣದ ಅಟ್ಟ ತಾಳ ವರ್ಣದೊಂದಿಗೆ ತಮ್ಮ ಪ್ರಸ್ತುತಿಯನ್ನು ಪ್ರಾರಂಭಿಸಿದ ಇವರ ಆಯ್ಕೆಗಳು ಕೇಳಲು ಎಷ್ಟು ಸೊಗಸೋ ಅಷ್ಟೂ ಹಾಡುವವರಿಗೆ ಗಹನವಾದದು ಹಾಗೂ ಸವಾಲು ಎನ್ನಬಹುದು.
ಶ್ರೀ ತ್ಯಾಗರಾಜರ #SriTyagarajaru ಸುಪ್ರಸಿದ್ಧ ರಾಮ ನಿನ್ನೇ ನಮ್ಮಿ ನಾನು ನಿಜಮುಗ ಸೀತ ಹುಸೇನಿ ರಾಗದಲ್ಲಿ ಸುಂದರವಾದ ಆಲಾಪನೆ ಹಾಗೂ ಸ್ವರ ಪ್ರಸ್ತಾರ, ಕೇದಾರಗೌಳ ರಾಗದ ಸವಿಸ್ತಾರವಾದ ಆಲಾಪನೆ, ಶ್ರೀ ತ್ಯಾಗರಾಜರ ಪ್ರಸಿದ್ಧ ಕೃತಿ ವೇಣುಗಾನಲೋಲುನಿ ಮತ್ತು ನೆರವಲ್’ಗೆ ಆಯ್ದುಕೊಂಡ ಭಾಗ ವಿಕಸಿತಪಂಕಜ ವದನುಲು ಇದರ ಉತ್ತಮ ನಿರೂಪಣೆ, ಬೃಂದಾವನ ಸಾರಂಗದಲ್ಲಿ ಮುತ್ತುಸ್ವಾಮಿ ದೀಕ್ಷಿತರ ಭವ್ಯವಾದ ಸೌಂದರರಾಜಂ ಹಾಡಿದ ಕಾಲ ಪ್ರಮಾಣ ವಿದ್ವತ್ಪೂರ್ಣವಾಗಿತ್ತು. ಇದಕ್ಕೆ ವಿರುದ್ಧವಾಗಿ ದುರಿತಕಾಲದ ಕುಂತಲವರಾಳಿ ರಾಗ ದೇಶಾದಿ ತಾಳದ ಚಿಂತನ ಸದಾ ಯೆಂಚು ಕೋವಯ್ಯ ಪ್ರೇಕ್ಷಕರನ್ನು ರಂಜಿಸಿತು.
ಕಛೇರಿಯ ಮುಖ್ಯ ಪ್ರಸ್ತುತಿಯಾದ, ಹೇಮಾವತಿ ರಾಗದಲ್ಲಿ ರಾಗ-ತಾನ-ಪಲ್ಲವಿ. ಖಂಡ ತ್ರಿಪುಟ ತಾಳದಲ್ಲಿ ಶ್ರೀ ಗುರು ರಾಘವೇಂದ್ರ ಅವರು ರಚಿಸಿರುವ ಪಲ್ಲವಿ ಶ್ರೀಕರ ಶುಭಕರ ಕರುಣಾಕರ ಆಕರ್ಷಕವಾಗಿ ಮೂಡಿ ಬಂದಿತು.ಆಲಾಪನೆ, ತಾನ, ತ್ರಿಶ, ಚತುರಶ್ರ ತ್ರಿಕಾಲದಲ್ಲಿ ಪಲ್ಲವಿಯ ಅನಾಯಾಸವಾದ ನಿರ್ವಹಣೆ, ಶಹನ, ನಾಗ ಸ್ವರಾವಳಿ, ಗೋರಖ್ ಕಲ್ಯಾಣ್ ಅಂತಹ ಅಪರೂಪದ ರಾಗಗಳಲ್ಲಿ ವಿಶೇಷವಾದ ಸ್ವರ ಪ್ರಸ್ತಾರ ಕಲಾವಿದರ ಪ್ರೌಢಿಮೆಗೆ ಒರೆಗಲ್ಲು.
ಕಛೇರಿಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿದವರು ಸಹ ಕಲಾವಿದರಾದ ಜ್ಯೋತ್ಸ್ನ ಮಂಜುನಾಥ್, ವೈಲಿನ್, ಮೃದಂಗದಲ್ಲಿ ಫಣೀಂದ್ರ ಭಾಸ್ಕರ್ ಹಾಗೂ ಘಟದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವಿದುಷಿ ಸುಕನ್ಯ ರಾಮಗೋಪಾಲ್.
ನಂತರ ಕನಕದಾಸರ #Kanakadasaru ದೇವರನಾಮ, ಇಂದು ಸೈರಿಸಿರಿ ಕೃಷ್ಣನ ತಪ್ಪ ತದನಂತರ ಸಂಗೀತ ಸಾಮ್ರಾಜ್ಯ ಸಂಚಾರಿಣಿ ಪ್ರೊ.ಬಿ. ರಾಮಮೂರ್ತಿ ರಾವ್ ಅವರ ಕಲ್ಯಾಣಿ ರಾಗದ ಸಂಯೋಜನೆ (ಅಂಕಿತ `ಕೃಷ್ಣದಾಸ’) ಸೊಗಸಾಗಿತ್ತು. ಡಾ.ಎಂ. ಬಾಲಮುರಳೀ ಕೃಷ್ಣ ಅವರ ಹಿಂದೋಳ ರಾಗದ ತಿಲ್ಲಾನದೊಂದಿಗೆ ಈ ಮಧುರವಾದ ಕಛೇರಿಯನ್ನು ನೆನಪಿನಲ್ಲಿ ಚಿರಸ್ಥಾಯಿಯಾಗುವಂತೆ ಸಮರ್ಪಿಸಿರುತ್ತಾರೆ ಶ್ರುತಿ ಭಟ್ ಮತ್ತು ವೃಂದ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post