ತುಮಕೂರು: ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಡಾ.ಶಿವಕುಮಾರ ಶ್ರೀಗಳ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ನಿರಂತರ ಚಿಕಿತ್ಸೆ ಮುಂದುವರೆದಿದೆ.
ಈ ಕುರಿತಂತೆ ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಶ್ರೀಗಳ ದೇಹದಲ್ಲಿ ಪ್ರೊಟೀನ್ ಅಂಶ ಕಡಿಮೆಯಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ವೆಂಟಿಲೇಟರ್ ಸಹಾಯದಿಂದ ಶ್ರೀಗಳು ಉಸಿರಾಡುತ್ತಿದ್ದು, ಅಗತ್ಯವಿರುವ ಎಲ್ಲ ಚಿಕಿತ್ಸೆಗಳನ್ನು ನೀಡುತ್ತಿದ್ದೇವೆ ಎಂದಿದ್ದಾರೆ.
ಶ್ರೀಗಳ ಬಿಪಿ ಏರುಪೇರಾಗಿದ್ದು, ಮತ್ತಷ್ಟು ನುರಿತ ವೈದ್ಯರ ತಂಡ ಆಗಮಿಸುತ್ತಿದೆ. ಶ್ರೀಗಳ ಆರೋಗ್ಯ ಸುಧಾರಣೆಗೆ ಸಕಲ ಪ್ರಯತ್ನಗಳನ್ನೂ ನಾವು ಮಾಡುತ್ತಿದ್ದೇವೆ ಎಂದಿದ್ದಾರೆ.
ಇನ್ನು, ಶ್ರೀಗಳ ಆರೋಗ್ಯ ಗಂಭೀರಗೊಂಡಿರುವ ಹಿನ್ನೆಲೆಯಲ್ಲಿ ಮಠದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಡಿಜಿ ಹಾಗೂ ಐಜಿ ಮಠದಲ್ಲಿ ಮೊಕ್ಕಾಂ ಹೂಡಿದ್ದು, ಇಡಿಯ ಪ್ರದೇಶದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ಈಗಾಗಲೇ ಡಿಸಿಎಂ ಪರಮೇಶ್ವರ್, ಗೃಹಸಚಿವ ಪಾಟೀಲ್, ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಮಠಕ್ಕೆ ಭೇಟಿ ನೀಡಿದ್ದು, ಸಿಎಂ ಎಚ್.ಡಿ. ಕುಮಾರಸ್ವಾಮಿಯವರೂ ಸಹ ಭೇಟಿ ನೀಡಲಿದ್ದಾರೆ.
Discussion about this post