ಶಿಕಾರಿಪುರ: ಮೈಸೂರಿನಲ್ಲಿ ಸೋಲಿನ ಸೇಡು ತೀರಿಸಿಕೊಳ್ಳಲು ಹಪಾಹಪಿಸುತ್ತಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಅಸ್ಥಿತ್ವಕ್ಕೆ ಧಕ್ಕೆ ತರಲು ಯತ್ನಿಸುತ್ತಿರುವ ಜೆಡಿಎಸ್’ನಿಂದಾಗಿ ಲೋಕಸಭಾ ಚುನಾವಣೆಯ ನಂತರದಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರ ಪತನಗೊಳ್ಳುವುದು ನಿಶ್ಚಿತ ಎಂದು ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದು ಹೊಸ ಕೆಲಸ ಆರಂಭಗೊಳ್ಳದೆ ಹಣ ನೀಡಲಾಗಿದೆ. ಮಾನ ಮರ್ಯಾದೆ ಬಿಟ್ಟು ಹಗಲು ದರೋಡೆಗೆ ಇಳಿದಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿದೆಯೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಬಿಜೆಪಿ 22 ಸ್ಥಾನ ಪಡೆಯುವುದು ಖಚಿತ, ಗುಲ್ಬರ್ಗಾದಲ್ಲಿ ಮಲ್ಲಿಕಾರ್ಜುನ ಖರ್ಗೆ, ತುಮಕೂರಿನಲ್ಲಿ ದೇವೇಗೌಡ, ಕೋಲಾರದಲ್ಲಿ ಮುನಿಯಪ್ಪ ಎದುರು ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂದು ಹೇಳಿದರು.
ಪುಲ್ವಾಮ ದಾಳಿ ಘಟನೆ ಬಗ್ಗೆ ಎರಡು ವರ್ಷ ಮುಂಚಿತವಾಗಿ ಗೊತ್ತಿತ್ತು ಎನ್ನುವ ಮಾತನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ದೇಶದ ಮೇಲಿನ ದಾಳಿ ಗೊತ್ತಿದ್ದರೂ ಸಂಬಂಧಿಸಿದವರಿಗೆ ಈ ಬಗ್ಗೆ ತಿಳಿಸಿದೆ ಕ್ರಿಮಿನಲ್ ಅಪರಾಧ ಮಾಡಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ಲೂಟಿ ಮಾಡಿ ಕಪ್ಪುಹಣ ಸಂಗ್ರಹಿಸಿದವರ ವಿರುದ್ಧ ಆದಾಯ ತೆರಿಗೆ ಅಧಿಕಾರಿ ದಾಳಿಯಂಥ ಗೌಪ್ಯ ಮಾಹಿತಿ ಮೊದಲೆ ಹೇಳುವ ಕೆಲಸ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದ್ದಾರೆ. ಸಾಲಮನ್ನಾ ಮಾಡುವ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಜೆಡಿಎಸ್ ರಾಜ್ಯದ ರೈತರ 46 ಸಾವಿರ ಕೋಟಿ ರೂ. ಸಾಲಮನ್ನಾ ಹಣದಲ್ಲಿ ಕೇವಲ 4500 ಕೋಟಿ ಮಾತ್ರ ಬಿಡುಗಡೆ ಮಾಡಿದ್ದಾರೆ ಎಂದರು.
ದೇಶದ ಆರ್ಥಿಕ ಸಂಕಷ್ಟದ ಸಮಯದಲ್ಲಿ ಪ್ರಧಾನಿ ಹುದ್ದೆ ಅಲಂಕರಿಸಿದ ನರೇಂದ್ರ ಮೋದಿ ಇಂದು ದೇಶದ ಆರ್ಥಿಕ ಪ್ರಗತಿ ಇಡೀ ಜಗತ್ತು ಬೆರಗಿನಿಂದ ನೋಡುವಂತೆ ಮಾಡಿದ್ದಾರೆ. ಸಬ್ ಕಾ ಸಾತ್, ಸಬ್ಕಾ ವಿಕಾಸ್ ಕೇವಲ ಘೋಷಣೆಗೆ ಸೀಮಿತವಾಗಿಲ್ಲ. ಕೇಂದ್ರದ ನಿವೃತ್ತಿ ವೇತನ ಯೋಜನೆ, ಉಜ್ವಲ, ಎಲ್ಲರಿಗೂ ವಿದ್ಯುತ್, ಬೇಟಿ ಪಡಾವೋ ಬೇಟಿ ಬಚಾವೋ ಹೀಗೆ ಯಾವುದೆ ಯೋಜನೆ ಒಂದು ಜಾತಿ ಜನಾಂಗಕ್ಕೆ ಮೀಸಲಾಗಿಲ್ಲ, ರಾಜ್ಯದಲ್ಲಿನ ಬಿಜೆಪಿ ಸರಕಾರ ನೀಡಿದ್ದ ಭಾಗ್ಯಲಕ್ಷ್ಮಿ ಯೋಜನೆಯ ಶೇ. 35ರಷ್ಟು ಮುಸ್ಲಿಂ ಫಲಾನುಭವಿಗಳಿದ್ದಾರೆ. ಅಂತಹ ಕಾರ್ಯಕ್ರಮಕ್ಕೆ ಹೆಚ್ಚಿನ ಹಣ ನೀಡುತ್ತಿಲ್ಲ. ಸುವರ್ಣ ಭೂಮಿ, ಸುವರ್ಣ ಗ್ರಾಮ ಇವೆಲ್ಲವೂ ಇಲ್ಲವಾಗಿದೆ ಎಂದು ಹೇಳಿದರು.
ಸಂಸತ್ ಚುನಾವಣೆ ನಂತರ ಸಮ್ಮಿಶ್ರ ಸರಕಾರ ಪತನವಾಗಲಿದೆ. ಈಗಾಗಲೇ ಮೈಸೂರಿನಲ್ಲಿ ಸಿದ್ಧರಾಮಯ್ಯ ತಮ್ಮ ಸೋಲಿನ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಅಸ್ಥಿತ್ವಕ್ಕೆ ಧಕ್ಕೆ ತರುವ ಕೆಲಸ ಜೆಡಿಎಸ್ ಮಾಡುತ್ತಿದೆ ಚುನಾವಣೆ ನಂತರ ಎಲ್ಲವೂ ಬೀದಿಗೆ ಬರಲಿದೆ. ಹಾಸನ ಜಿಲ್ಲೆಯಲ್ಲಿನ ಅಭಿವೃದ್ಧಿ ಕೆಲಸಕ್ಕೆ ಕಾಮಗಾರಿ ಆರಂಭಗೊಳ್ಳದೆ 1360 ಕೋಟಿ ರೂ. ಮುಂಗಡ ಹಣ ನೀಡಿರುವುದು ಗಮನಿಸಿದರೆ ರಾಜ್ಯದಲ್ಲಿರುವುದು ಶೇ. 20 ಕಮಿಷನ್ ಸರಕಾರ ಎನ್ನುವುದು ಖಚಿತವಾಗುತ್ತದೆ ಎಂದು ಆರೋಪಿಸಿದರು.
ರಾಜ್ಯದ ಭ್ರಷ್ಟ ಸರಕಾರ ಒಂದೆಡೆಯಾದರೆ ಮತ್ತೊಂದೆಡೆ ಯಾವುದೆ ಹಣ ದುರುಪಯೋಗ ಮಾಡಿಕೊಳ್ಳದೆ ಆಡಳಿತ ನೀಡುತ್ತಿರುವ ಬಿಜೆಪಿಯ ಸರಕಾರ ಜನರ ಕಣ್ಮುಂದೆ ಇದ್ದು ದೇಶದ ಎಲ್ಲೆಡೆ ಬಿಜೆಪಿ ಪರ ಅಲೆ ಜೋರಾಗಿದ್ದು ಪುನಃ ನರೇಂದ್ರ ಮೋದಿ ಪ್ರಧಾನಿ ಆಗುವುದು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಸ್. ಗುರುಮೂರ್ತಿ, ಬಿಜೆಪಿ ಮುಖಂಡ ಅಂಗಡಿ ರಾಮಣ್ಣ, ಕೆ. ಹಾಲಪ್ಪ, ಕೊಳಗಿ ರೇವಣಪ್ಪ, ಕಬಾಡಿ ರಾಜಣ್ಣ, ಚನ್ನವೀರಪ್ಪ, ವಸಂತಗೌಡ, ರಮಣಿ ಕೊಟ್ಟುರೇಶಪ್ಪ, ಜಯಲಿಂಗಪ್ಪ, ಬಿಜೆಪಿ ಪಕ್ಷದ ಎಲ್ಲ ಚುನಾಯಿತ ಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು, ಬೂತ್ ಸಮಿತಿ ಅಧ್ಯಕ್ಷ, ಸದಸ್ಯರು ಇದ್ದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Discussion about this post