ಕಲ್ಪ ಮೀಡಿಯಾ ಹೌಸ್ | ಮೈಸೂರು |
ಭಾರತೀಯ ಚಿತ್ರರಂಗ ಕಂಡ ಅದ್ಭುತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು 20ಕ್ಕೂ ಹೆಚ್ಚು ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸಂಸ್ಕೃತಿ ಚಿಂತಕ ಸುರೇಶ್ ಎನ್. ಋಗ್ವೇದಿ ಹೇಳಿದರು.
ನಗರದ ಗಾನಚಂದನ ಕಲಾ ಬಳಗದ ವತಿಯಿಂದ ನಾದಬ್ರಹ್ಮ ಸಭಾಂಗಣದಲ್ಲಿ ಆಯೋಜಿಸಿದ್ದ ‘ಜಗದ ಗಾಯಕಿ ನಮ್ಮ ಜಾನಕಿ‘ ಗೀತಗಾಯನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಜಾನಕಿ ಅವರು ಭಾಷೆ, ಗಡಿ, ಧರ್ಮದ ಎಲ್ಲೆಗಳನ್ನು ಮೀರಿ ತಮ್ಮ ಸುಮಧುರ ಧ್ವನಿಯ ಮೂಲಕ ಜಗತ್ತಿನಾದ್ಯಂತ ಸಂಗೀತಾಭಿಮಾನಿಗಳಿಗೆ ನೆಮ್ಮದಿ ಮತ್ತು ಸಂತಸ ನೀಡಿದ್ದಾರೆ. ಸರಳತೆ, ಸೌಜನ್ಯ ಹಾಗೂ ಮೇರು ವ್ಯಕ್ತಿತ್ವದ ಮೂಲಕ ಲಕ್ಷಾಂತರ ಗಾಯಕರಿಗೆ ಆದರ್ಶವಾಗಿರುವ ಅವರು, ಎಲ್ಲ ಕಲಾವಿದರ ಗಾಯನವನ್ನು ಆಲಿಸುವ ವಿನಯವನ್ನು ಬೆಳೆಸಿಕೊಂಡ ಮಹಾನ್ ಕಲಾವಿದೆ ಎಂದರು.
1957ರಲ್ಲಿ ಆರಂಭವಾದ ಜಾನಕಿ ಅವರ ಗಾಯನ ಪಯಣಕ್ಕೆ 2027ರಲ್ಲಿ 70 ವರ್ಷಗಳು ಪೂರ್ಣಗೊಳ್ಳಲಿದ್ದು, ಆ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುವ ಸಂಕಲ್ಪ ಮಾಡೋಣ ಎಂದು ಅವರು ಕರೆ ನೀಡಿದರು.
Also read: ಕೊಯಮತ್ತೂರು–ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ಯಲಹಂಕ ರೈಲು ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆ
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ರಾಜೀವ್ ಮಾತನಾಡಿ, ಗಾನಚಂದನ ಕಲಾ ಬಳಗವು ಮೈಸೂರಿನಲ್ಲಿ ಅರ್ಥಪೂರ್ಣ ಸಂಗೀತ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿರುವುದು ಶ್ಲಾಘನೀಯ. ಜಾನಕಿ ಅವರ ಅಪರೂಪದ ಧ್ವನಿ ವೈವಿಧ್ಯತೆ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದು, ಅವರು ಕನ್ನಡಿಗರ ಮನಸ್ಸಿನಲ್ಲಿ ‘ನಮ್ಮ ಜಾನಕಿ’ಯಾಗಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ಹೇಳಿದರು.
ಗಾನಚಂದನ ಕಲಾ ಬಳಗದ ಸಂಘಟಕ ಆರ್. ಸುಧೀಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಪ್ರತಿವರ್ಷ ಮೂರು ವಿಶೇಷ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ಗೀತೆಗಳ ಸೊಗಡನ್ನು ಸಂಗೀತಾಸಕ್ತರಿಗೆ ಪರಿಚಯಿಸುತ್ತಿದೆ. ಶ್ರೇಷ್ಠ ಹಿನ್ನೆಲೆ ಗಾಯಕಿ, ಸಂಗೀತ ನಿರ್ದೇಶಕಿ ಹಾಗೂ ಸರಳ ವ್ಯಕ್ತಿತ್ವದ ಮೂಲಕ ಸಾವಿರಾರು ಕಲಾವಿದರಿಗೆ ಜಾನಕಿ ಅವರು ಮಾನಸಗುರುವಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ನಾಗರಾಜ ಭೈರಿ, ಶಿವ ಡೆವಲಪರ್ಸ್‌ನ ಸೋಮಸುಂದರ್, ವೈದ್ಯ ಹಾಗೂ ಗಾಯಕ ಡಾ. ನಟಶೇಖರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವಿಶ್ವನಾಥ್ ಶಾಸ್ತ್ರಿ, ಆರ್. ನಟರಾಜು, ಶ್ರೀನಿವಾಸ್, ಹೆಚ್.ಎಸ್. ಗೋಪಾಲಕೃಷ್ಣ, ಶಶಿಕಲಾ, ನಾಗಲಕ್ಷ್ಮಿ, ಅಶ್ವಿನಿ ಪ್ರಶಾಂತ್ ಹಾಗೂ ಗಿರಿಜಾ ಸೇರಿದಂತೆ ಹಲವು ಗಾಯಕರ ತಂಡ ಸುಮಾರು ಐದು ಗಂಟೆಗಳ ಕಾಲ ಎಸ್. ಜಾನಕಿ ಅವರ ಜನಪ್ರಿಯ ಗೀತೆಗಳನ್ನು ಪ್ರಸ್ತುತಪಡಿಸಿ ಸಂಗೀತಾಸಕ್ತರನ್ನು ರಂಜಿಸಿತು. ಪ್ರತಿ ಹಾಡಿಗೂ ಪ್ರೇಕ್ಷಕರು ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಭಾಂಗಣ ತುಂಬಿ ತುಳುಕುವಂತೆ ಜನರು ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








