ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ವಸತಿ ಸಹಿತ ಕೌಶಲ ಅಭಿವೃದ್ಧಿ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಕೌಶಲ ಕೇಂದ್ರ ಸ್ಥಾಪನೆ ಸಂಬಂಧ ಡಾ. ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗದ ಸಂಸದ ಬಿ.ವೈ ರಾಘವೇಂದ್ರ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ, ಶಿವಮೊಗ್ಗ ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್ ಭಾಗವಹಿಸಿದ್ದರು.
ಉದ್ದಿಮೆಗಳಿಗೆ ಎದುರಾಗಿರುವ ಮಾನವ ಸಂಪನ್ಮೂಲ ಸಮಸ್ಯೆ ನಿವಾರಣೆ ಹಾಗೂ ಯುವಜನರಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸುವುದು ಈ ಕೇಂದ್ರ ಸ್ಥಾಪನೆಯ ಉದ್ದೇಶವಾಗಿದ್ದು, ಶಿವಮೊಗ್ಗ ನಗರ ಅಥವಾ ಸಮೀಪದಲ್ಲೇ ಜಾಗ ಹುಡುಕಿ ಕೊಡುವುದಾಗಿ ಸಂಸದರು ಭರವಸೆ ನೀಡಿದರು. ಜಿಲ್ಲಾಧಿಕಾರಿ ಕೂಡ ಇದಕ್ಕೆ ಒಪ್ಪಿದರು.
“ಕೇಂದ್ರ ಸರ್ಕಾರ ಕೌಶಲ ಅಭಿವೃದ್ಧಿ ಮತ್ತು ಉದ್ಯಮ ಶೀಲತೆಗೆ ಹೆಚ್ಚಿನ ಒತ್ತು ನೀಡಿದ್ದು, ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವೂ ಕೌಶಲ ಕೇಂದ್ರಗಳ ಸ್ಥಾಪನೆಗೆ ಮುಂದಾಗಿದೆ. ದಾಂಡೇಲಿಯಲ್ಲಿ ವಿಟಿಯು ಕೌಶಲ ಕೇಂದ್ರ ಇದ್ದು, ಶಿವಮೊಗ್ಗದಲ್ಲಿ ಇನ್ನೋವೇಶನ್ ಹಬ್ ರೀತಿಯಲ್ಲಿ ಕೇಂದ್ರವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅಲ್ಲೇ ಯುವಜನರಿಗೆ ಕೌಶಲ ತರಬೇತಿ ನೀಡಲಾಗುವುದು,”ಎಂದು ಸಚಿವರು ಹೇಳಿದರು.
ಎಲ್ಲ ಪದವೀಧರರಿಗೂ ತರಬೇತಿ
ಎಂಜನಿಯರಿಂಗ್ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲದೇ, ಅರ್ಧದಲ್ಲೇ ಕಲಿಕೆ ಬಿಟ್ಟವರಿಗೂ ಕೌಶಲ ತರಬೇತಿ ನೀಡುವ ಚಿಂತನೆ ಇದೆ. ವಿಟಿಯು ಮೂಲಕ ಕೇಂದ್ರದಲ್ಲಿ 1-3 ವಾರಗಳಿಂದ 5 ತಿಂಗಳವರೆಗಿನ ತರಬೇತಿ ಕಾರ್ಯಕ್ರಮಗಳು ನಡೆಯಲಿವೆ. ತಾಂತ್ರಿಕ ಮತ್ತು ತಾಂತ್ರಿಕೇತರ ಕೌಶಲ ಕಲಿಕೆಗೆ ಅವಕಾಶ ಕಲ್ಪಿಸಲಾಗುವುದು. ಡಿಆರ್‌ಎಫ್ ಮತ್ತು ಸಿಎಸ್ಆರ್ ಹಣದಿಂದ ಈ ಕೇಂದ್ರ ನಡೆಸಲಾಗುವುದು, ಎಂದವರು ವಿವರಿಸಿದರು.
ಇನ್ನು, ಈ ಕುರಿತಂತೆ ಮಾತನಾಡಿರುವ ಸಂಸದ ಬಿ.ವೈ. ರಾಘವೇಂದ್ರ, ಶಿವಮೊಗ್ಗ ಮತ್ತು ಅಕ್ಕಪಕ್ಕದ ಜಿಲ್ಲೆಯ ತಾಂತ್ರಿಕ ಮತ್ತು ತಾಂತ್ರಿಕೇತರ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೌಶಾಲ್ಯಭಿವೃದ್ಧಿ ಸೌಲಭ್ಯ ಒದಗಿಸಲು ಈಗಾಗಲೇ ದಾಂಡೇಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕಾಡೆಮಿದಲ್ಲಿಯೂ ಸಹ ಸೃಜಿಸಲು ಯೋಜಿಸಲಾಗಿದೆ ಎಂದರು.
ಈ ಭಾಗದ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಕೌಶಾಲ್ಯಾಭಿವೃದ್ಧಿ ಕೇಂದ್ರವನ್ನು ಮಂಜೂರು ಮಾಡುವಂತೆ ಉಪಮುಖ್ಯಮಂತ್ರಿಗಳಲ್ಲಿ ಕೋರಲಾಗಿದೆ. ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿರುವ ಅವರು, ಶೀಘ್ರ ಕೌಶಾಲ್ಯಭಿವೃದ್ಧಿ ಕೇಂದ್ರ ಸ್ಥಾಪನೆ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093
Discussion about this post