ಪೂಂಚ್: ಮಹತ್ವದ ಬೆಳವಣಿಗೆಯೊಂದರಲ್ಲಿ ಗಡಿ ಭಾಗದ ಹಲವೆಡೆ ಹೆಚ್ಚುವರಿಯಾಗಿ 400 ಬಂಕರ್’ಗಳನ್ನು ನಿಯೋಜನೆ ಮಾಡಿದ್ದು, ಗಡಿಯಲ್ಲಿ ಏನೋ ಬೆಳವಣಿಗೆಗಳು ನಡೆಯುತ್ತಿವೆಯಾ ಎಂಬ ಅನುಮಾನಗಳನ್ನು ಹುಟ್ಟು ಹಾಕಿದೆ.
ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಿ ಶಾಂತಿಯ ಮಾತನ್ನಾಡಿದ್ದ ಪಾಕಿಸ್ಥಾನ ಅದರ ಬೆನ್ನಲ್ಲೆ ಭಾರತದ ಗಡಿ ಭಾಗದಲ್ಲಿ ಭಾರೀ ಗುಂಡಿನ ದಾಳಿ ನಡೆಸಲು ಆರಂಭಿಸಿದೆ. ಶತ್ರುಗಳ ಗುಂಡಿನ ದಾಳಿಗೆ ಕೆಲವು ಭಾರತೀಯ ಯೋಧರೂ ಸಹ ವೀರಸ್ವರ್ಗ ಸೇರಿದ್ದು, ಹಲವು ಯೋಧರಿಗೆ ಹಾಗೂ ನಾಗರಿಕರಿಗೆ ಗಾಯಗಳಾಗಿವೆ.
ಈ ಬೆಳವಣಿಗೆಗಳ ಬೆನ್ನಲ್ಲೆ ಭಾರತೀಯ ಸೇನೆ ಗಡಿಯಲ್ಲಿ ಬರೋಬ್ಬರಿ 400 ಬಂಕರ್’ಗಳನ್ನು ನಿಯೋಜನೆ ಮಾಡಿದ್ದು, ಭದ್ರತೆಯನ್ನು ಹಂತ ಹಂತವಾಗಿ ಬಿಗಿಗೊಳಿಸುತ್ತಿದೆ.
ಕಣಿವೆ ರಾಜ್ಯದ ಪೂಂಚ್ ಹಾಗೂ ರಾಜೌರಿ ಜಿಲ್ಲೆಗಳಲ್ಲಿ ತಲಾ 200ರಂತೆ ಬಂಕರ್’ಗಳನ್ನು ನಿಯೋಜನೆ ಮಾಡಲಾಗಿದೆ. ಮೂಲಗಳ ಮಾಹಿತಿಯಂತೆ ಈಗ ನಿಯೋಜನೆಗೊಂಡಿರುವ ಬಂಕರ್’ಗಳು ಮುಂದಿನ ಒಂದು ತಿಂಗಳು ಅದೇ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಲಿವೆ.
ಇದರ ಬೆನ್ನಲ್ಲೆ ಗಡಿ ಭಾಗದಿಂದ ಸುಮಾರು 5 ಕಿಲೋ ಮೀಟರ್’ಗಳಷ್ಟು ದೂರದ ಎಲ್ಲ ಶಾಲಾ ಕಾಲೇಜುಗಳನ್ನು ಮುಂದಿನ ಆದೇಶದವರೆಗೂ ಮುಚ್ಚುವಂತೆ ಆದೇಶಿಸಲಾಗಿದೆ. ನಿನ್ನೆಯಿಂದಲೂ ಭಾರತದ ಗಡಿ ಭಾಗದಲ್ಲಿ ವಾಸವಾಗಿರುವ ನಮ್ಮ ನಾಗರಿಕರನ್ನು ಪಾಕ್ ಸೇನೆ ಟಾರ್ಗೆಟ್ ಮಾಡುತ್ತಿದ್ದು, ಇದನ್ನು ಸಮರ್ಥವಾಗಿ ಎದುರಿಸಲು ಬಂಕರ್’ಗಳು ಕರ್ತವ್ಯ ನಿರ್ವಹಿಸಲಿದೆ.
ಪೂಂಚ್, ರಾಜೌರಿ, ಜಮ್ಮು ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿನ ಪ್ರದೇಶಗಳನ್ನು ಗುರಿಪಡಿಸುವ ಮೂಲಕ ಪಾಕಿಸ್ಥಾನ ಸೇನೆಯು ಕಳೆದ ಒಂದು ವಾರದ ಅವಧಿಯಲ್ಲಿ 60 ಕ್ಕೂ ಹೆಚ್ಚು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ.
Discussion about this post