ಕಲ್ಪ ಮೀಡಿಯಾ ಹೌಸ್ | ಸೊರಬ |
ಹನ್ನೆರಡನೇ ಶತಮಾನದ ಅವಧಿಯಲ್ಲಿ ವಿಶ್ವಗುರು ಬಸವಣ್ಣನವರ ಸಮಕಾಲೀನರಾದ ನಿಜಶರಣ ಅಂಬಿಗರ ಚೌಡಯ್ಯ ಅವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಅಂಕು-ಡೊಂಕುಗಳನ್ನು ತಿದ್ದಲು ಹಾಗೂ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಪ್ರಮುಖ ಪಾತ್ರವಹಿಸಿದರು ಎಂದು ಆಯುಷ್ ವೈದ್ಯಾಧಿಕಾರಿ ಡಾ. ಎಂ.ಕೆ. ಮಹೇಶ್ ಹೇಳಿದರು.
ಶನಿವಾರ ತಾಲೂಕಿನ ಉದ್ರಿ ಗ್ರಾಮದಲ್ಲಿ ಶ್ರೀ ಗಂಗಾಪರಮೇಶ್ವರಿ ಬೆಸ್ತರ ಸಂಘದ ವತಿಯಿಂದ ಹಮ್ಮಿಕೊಂಡ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅವರ 903ನೇ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂದಿನ ಕಾಲಘಟ್ಟದಲ್ಲಿದ್ದ ಮೂಢ ನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯ ಅವರು ಕಠೋರವಾದ ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಯತ್ನಿಸಿದರು. ಜಾತಿ ವ್ಯವಸ್ಥೆ, ಕಂದಾಚಾರಗಳ ವಿರುದ್ಧ ಧ್ವನಿ ಎತ್ತಿದ್ದರು ಎಂದ ಅವರು, ಸಮಾಜದವರು ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಂಡು ಕಾರ್ಯಕ್ರಮಗಳ ಯಶಸ್ವಿಗೆ ಸಹಕಾರ ನೀಡಬೇಕು ಎಂದರು.
ಅಂಬಿಗರ ಚೌಡಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಪಿ. ರಮೇಶ್ ಉಪನ್ಯಾಸ ನೀಡಿ, ಶಿವಶರಣರ ಸಾಲಿನಲ್ಲಿ ಅಂಬಿಗರ ಚೌಡಯ್ಯನವರು ನಿಜಶರಣ ಎಂಬ ಬಿರುದನ್ನು ಪಡೆದಿದ್ದರು. 12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧವಾಗಿದ್ದರು ಎಂಬುದನ್ನು ಅವರ ವಚನಗಳ ಮೂಲಕವೇ ಕಾಣಬಹುದು. ಶಿವಶರಣರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಅವರ ಮಾರ್ಗದರ್ಶನದಲ್ಲಿ ಮುನ್ನೆಡೆದಾಗ ಸಮ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಗಂಗಾಪರಮೇಶ್ವರಿ ಬೆಸ್ತರ ಸಂಘದ ಅಧ್ಯಕ್ಷ ಮಂಜಪ್ಪ ಉಡುಗಣಿ ಮಾತನಾಡಿ, ಅಂಬಿಗರ ಚೌಡಯ್ಯನವರ ಜಯಂತಿಯನ್ನು ಇದೇ ಮೊದಲ ಬಾರಿಗೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮದ ಸರ್ವ ಸಮುದಾಯದವರ ಸಹಕಾರ ಮತ್ತು ಪಾಲ್ಗೊಳ್ಳುವಿಕೆಯೊಂದಿಗೆ ವಿಜೃಂಭಣೆಯಿAದ ಜಯಂತಿ ಆಚರಿಸಲಾಗುವುದು ಎಂದರು.
ಇದಕ್ಕೂ ಮೊದಲು ಶ್ರೀ ಗಂಗಾಪರಮೇಶ್ವರಿ ದೇವಿಗೆ ಮತ್ತು ಶ್ರೀ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಲಾಯಿತು.
ಸಂಘದ ಕಾರ್ಯದರ್ಶಿ ಮಾಲತೇಶ್ ಮಂಚಿ, ಡಿಎಸ್‌ಎಸ್ ಜಿಲ್ಲಾ ಉಪಾಧ್ಯಕ್ಷ ಶ್ಯಾಮಣ್ಣ ತುಡನೀರು, ಕಾರ್ಯದರ್ಶಿ ಪುರುಶೋತ್ತಮ ಗುಡ್ಡೆಕೊಪ್ಪ, ಪ್ರಮುಖರಾದ ಜಯಪ್ಪ, ಸುರೇಂದ್ರಗೌಡ, ಎನ್. ಶಿವಾನಂದ, ಮಾಳೂರು ಲೋಕಪ್ಪ, ಆರ್. ಸುರೇಶ್, ಮಾರುತಿ, ಗುಡ್ಡಪ್ಪ, ಗುರುಮೂರ್ತಿ, ಸಿ.ಎಂ. ನಾಗರಾಜ್, ಶ್ರೀಧರ್ ಮಾಸ್ತಿ, ಯಶವಂತ ಉದ್ರಿ, ಸಂತೋಷ್ ಮಾಸ್ತಿ, ಸುರೇಶ್ ಮಂಚಿ ಸೇರಿದಂತೆ ಮತ್ತಿತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post