ಕಲ್ಪ ಮೀಡಿಯಾ ಹೌಸ್ | ಸೊರಬ |
ಮಲೆನಾಡಿನ ಕೆರೆಗಳು, ಜಲಮೂಲಗಳು, ಹಳ್ಳ-ನದಿಗಳ ಸಂರಕ್ಷಣೆಗೆ ಸುಸ್ಥಿರ ಅಭಿವೃದ್ಧಿ ಯೋಜನೆಯನ್ನು
ಪ್ರಕಟಿಸಬೇಕು ಎಂದು ಅನಂತ ಹೆಗಡೆ ಅಶೀಸರ ಪ್ರತಿಪಾದಿಸಿದರು.
ಮೂಡಬಿದ್ರೆಯಲ್ಲಿ ನಡೆದ 14ನೇ ಅಂತರ ರಾಷ್ಟ್ರೀಯ ಕೆರೆ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ವಿಧಾನ ಸಭೆಯ ಅಧಿವೇಶನದಲ್ಲಿ ಮಲೆನಾಡು ಪರಿಸ್ಥಿತಿ ಬಗ್ಗೆ ವಿಶೇಷ ಚರ್ಚೆ ನಡೆಸಬೇಕು, ಪಶ್ಚಿಮಘಟ್ಟದ 6 ಜಿಲ್ಲೆಗಳ 210ಸ್ಥಳಗಳಲ್ಲಿ ಮಿರಿಸ್ಟಿಕಾ ಸ್ಟಾಂಪ್ (ರಾಮ ಪತ್ರ ಜಡ್ಡಿ) ಗಳಿವೆ. ಇವುಗಳ ಸಂರಕ್ಷಣೆಗೆ ವಿಶೆಷ ಯೋಜನೆ ಪ್ರಕಟಿಸಬೇಕು. ಬೆಟ್ಟ-ಕಾನು-ಗೋಮಾಳ ರಕ್ಷಣಾ ಯೋಜನೆ ಜಾರಿಗೆ ತರಬೇಕು. ಈ ವರ್ಷದಲ್ಲಿ ರಾಜ್ಯದಲ್ಲಿ ನಡೆಸುವ ಎನ್.ಎಸ್.ಎಸ್. ವಿದ್ಯಾರ್ಥಿ ಶಿಬಿರಗಳಲ್ಲಿ ಸಮೀಕ್ಷೆ-ಭೇಟಿ ಕಾರ್ಯಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಪಶ್ಚಿಮಘಟ್ಟ ಕಾರ್ಯಪಡೆಯ 2013ರ ವರದಿ-ಶಿಫಾರಸ್ಸು, 2021ರ ಭೂಕುಸಿತ ತಡೆ ವರದಿ ಶಿಫಾರಸ್ಸು ಜಾರಿಗೆ ತರಬೇಕು. ಕೆರೆ ಅಭಿವೃದ್ಧಿ ಸಂಘಗಳಿಗೆ ಬಲ ನೀಡಬೇಕು. ಜೌಗು ಭೂಮಿ ಸಂರಕ್ಷಣಾ ಪ್ರಾಧಿಕಾರಕ್ಕೆ ಜೀವ ತುಂಬಿ ಎಂದ ಅವರು ನಾಡಿನಲ್ಲಿ ನಡೆದ ಕೆರೆ ಪುನಶ್ಚೇತನ ಪ್ರಯೋಗಗಳನ್ನು ಪ್ರಸ್ತಾಪಿಸಿದರು. ರಾಜ್ಯದ ಕೆರೆ ನದಿಗಳ ಪರಿಸ್ಥಿತಿಯನ್ನು ವಿಶ್ಲೇಷಿಸಿದ ಸರ್ಕಾರ ಈ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಅವರು ಪ್ರತಿ 2 ವರ್ಷಗಳಿಗೆ ಒಮ್ಮೆ ಕೆರೆ ಸಮೇಳನ ನಡೆಸುತ್ತಿದ್ದೇವೆ. ಆಳ್ವಾಸ್ ಸಂಸ್ಥೆಯಲ್ಲಿ 3ನೇ ಬಾರಿ ಈ ಸಮ್ಮೇಳನ ನಡೆಯುತ್ತಿದೆ. ಯುವ ವಿದ್ಯಾರ್ಥಿ ಸಂಶೋಧಕರು ಕೆರೆ ಜೌಗು ಭೂಮಿ, ಬಗ್ಗೆ ಅಧ್ಯಯನ ನಡೆಸಿ ಇಲ್ಲಿ ವರದಿ ಮಂಡಿಸುತ್ತಾರೆ. ಸರ್ಕಾರ ನಮ್ಮ ವೈಜ್ಞಾನಿಕ ವರದಿ ಸಲಹೆ ಪುರಸ್ಕರಿಸಿ ನೀತಿ ರೂಪಿಸಬೇಕು ಎಂದರು.
ಪರಿಸರ ವಿಜ್ಞಾನಿ ಪ್ರೊ. ಸುಭಾಷ್ ಚಂದ್ರನ್ ಕುಮಟಾ ಇವರು ಕರಾವಳಿಯ ಅಳಿವೆಗಳ ನಾಶತಡೆಯಬೇಕು ಎಂದು ಮನವಿ ಮಾಡಿದರು.
ಹಿರಿಯ ಅರಣ್ಯ ಅಧಿಕಾರಿ ಆಂಥೋನಿ ಮರಿಯಪ್ಪ, ಕರಾವಳಿಯ ಅಘನಾಶಿನಿ ರಾಮ್‌ಸಾರ್ ಸೈಟ್, ಆಮೆಗಳ ರಕ್ಷಣಾ ಯೋಜನೆಗಳ ಪರಿಚಯ ಮಾಡಿದರು.
ಆಳ್ವಾ ಶಿಕ್ಷಣ ಸಂಸ್ಥೆ ಮುಖ್ಯಸ್ಥ ವಿವೇಕ್ ಆಳ್ವಾ ಹಸಿರು ವಿದ್ಯಾರ್ಥಿ ಸಂಸತ್ ಏರ್ಪಡಿಸುವ ಕನಸು ಬಿಚ್ಚಿಟ್ಟರು. ಪರಿಸರ ಅರ್ಥಶಾಸ್ತ್ರಜ್ಞ ಪ್ರೊ. ಬಿ.ಎಂ. ಕುಮಾರಸ್ವಾಮಿ ಶಿವಮೊಗ್ಗಾ ಅವರು ಶರಾವತಿ ಕಣಿವೆಯಲ್ಲಿ ಭೂಗತ ಜಲವಿದ್ಯುತ್ ಯೋಜನೆ ಪುನರ್ ವಿಮರ್ಶಿಸಿ, ಇದು ಆಘಾತಕಾರಿ ಎಂದು ಎಚ್ಚರಿಸಿದರು.
ಮಾನವ ಕಲ್ಯಾಣಕ್ಕಾಗಿ ಜೌಗು ಭೂಮಿ ಸಂರಕ್ಷಣೆಯ ಸಂದೇಶವುಳ್ಳ ಸಮ್ಮೇಳನ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ಅಧ್ಯಯನ ಕೇಂದ್ರದ ಜೌಗು ಭೂಮಿ ಸಂಶೊಧನಾ ವಿಭಾಗ ಹಾಗೂ ಆಳ್ವಾಸ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಸಮ್ಮೇಳನ ಆಯೋಜನೆ ಆಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post