ಕಲ್ಪ ಮೀಡಿಯಾ ಹೌಸ್ | ಸೊರಬ |
ಹಕ್ಕು ಚಲಾಯಿಸುವುದಷ್ಟೆ ಅಲ್ಲ, ಹಕ್ಕಿನಷ್ಟೆ ನಮ್ಮ ಕರ್ತವ್ಯಗಳೇನು ಎಂಬುದನ್ನು ಅರಿತರೆ ಹಕ್ಕಿಗೆ ಮೌಲ್ಯವಿರುತ್ತದೆ. ಸಮಯಕ್ಕೆ ಸರಿಯಾಗಿ ಗ್ರಾಮಪಂಚಾಯತಿ ಆಡಳಿತಕ್ಕೆ ನಮ್ಮ ಕಂದಾಯ ಇತ್ಯಾದಿಯನ್ನು ಐಚ್ಛಿಕವಾಗಿ ಸಲ್ಲಿಸುವ ಮೂಲಕ ಗ್ರಾಮಾಡಳಿತವನ್ನು ಬಲಪಡಿಸಬೇಕಾದುದು ನಮ್ಮ ಕರ್ತವ್ಯ ಎಂದು ಅಕ್ಷರ ದಾಸೋಹದ ಅಧಿಕಾರಿ ಡಾ. ಶ್ರೀಕಾಂತ್ ಅಭಿಪ್ರಾಯ ಪಟ್ಟರು.
ತಾಲ್ಲೂಕು ಮುಟಗುಪ್ಪೆ ಗ್ರಾಮಪಂಚಾಯತಿ ಗ್ರಾಮಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಪಾಲ್ಗೊಂಡು ಮಾತನಾಡಿದರು.
ಪ್ರಸ್ತುತದ ದಿನಮಾನಗಳಲ್ಲಿನ ಪರಿಸರ ವೈಪರೀತ್ಯಗಳನ್ನು ಗಮನಿಸಿ ಪರಿಸರ ಸಮತೋಲನದತ್ತ ಮುಂದಾಗಬೇಕು. ಬಹುತೇಕ ಕೃಷಿಕರೆ ಹೆಚ್ಚಾಗಿರುವ ಗ್ರಾಮಾಂತರ ಪ್ರದೇಶದವರಿಗೆ ಪ್ರತಿಯೊಂದು ಸಸ್ಯ, ಜೀವಿಗಳು ನೆರವಿಗಿರುತ್ತದೆಯೆ ವಿನಃ ನಮ್ಮ ಉಪಭೋಗಕ್ಕಲ್ಲ. ಅವೆಲ್ಲದರ ಜೊತೆ ಅವಿನಾಭಾವ ಸಂಬಂಧ ಇರಿಸಿಕೊಂಡು ಬದುಕುವ ಮೂಲಕ ಸುಸ್ಥಿರ ಅಭಿವೃದ್ಧಿ ಕಾಣಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜೀವವೈವಿಧ್ಯ ಮಂಡಳಿ ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ಜೀವವೈವಿಧ್ಯದ ಪರಿಕಲ್ಪನೆಯಲ್ಲಿ ನಮ್ಮ ಭವಿಷ್ಯ ಅಡಗಿದೆ. ಮಲೆನಾಡು ಕೃಷಿಕರಿಗೆ ನೀರೇ ಜೀವಾಳ, ನೀರಿಗೆ ಅರಣ್ಯ ಅನಿವಾರ್ಯ, ಅರಣ್ಯ ಕಡಿದ ಕೃಷಿಗೆ ಖಂಡಿತ ಭವಿಷ್ಯವಿಲ್ಲ. ಅರಣ್ಯ ನಾಶದಿಂದ ಮುಂಪೀಳಿಗೆಯ ಮೂಲಭೂತ ಅವಶ್ಯಕತೆಗಳಾದ ಸ್ವಚ್ಛ ನೀರು, ಗಾಳಿ, ಆಹಾರದ ಕೊರತೆ ಎದುರಿಸುವಂತಾಗಬಹುದು, ಅದನ್ನು ಮನಗಂಡು ಪ್ರಸ್ತುತ ಉಳಿದಿರುವಷ್ಟನ್ನಾದರೂ ಕಾಪಾಡಿಕೊಳ್ಳಬೇಕಾದುದು ನಮ್ಮ ಆದ್ಯ ಕರ್ತವ್ಯ. ಈ ದಿಸೆಯಲ್ಲಿ ಮುಟಗುಪ್ಪೆ ಗ್ರಾಮಪಂಚಾಯತಿ ವ್ಯಾಪ್ತಿಯ ಕಡಸೂರು, ಅಬಸಿ ನೈಸರ್ಗಿಕ ಅರಣ್ಯವನ್ನು ಪಾರಂಪರಿಕ ಕೊಡಸೆ ವನವೆಂದು, ಗೊಗ್ಗೆಹಳ್ಳಿ ಅರಣ್ಯವನ್ನು ಪಾರಂಪರಿಕ ಗೊಗ್ಗಯ್ಯ ವನವೆಂದು ಘೋಷಿಸಿ ಸಂರಕ್ಷಿಸಿಕೊಳ್ಳಬೇಕು ಎಂದು ವಿನಂತಿಸಿದರು.
Also read: ಬೆಂಗಳೂರು | ಮಂತ್ರಾಲಯ ಸುಬುಧೇಂದ್ರತೀರ್ಥ ಶ್ರೀಗಳಿಂದ ಗುರು ರಾಯರ ಪ್ರತೀಕ ಲೋಕಾರ್ಪಣೆ
ಆಡಳಿತಾಧಿಕಾರಿ ತೋಟಗಾರಿಕೆ ಇಲಾಖೆಯ ಡಾ.ದೊರೆರಾಜ್ ಅಧ್ಯಕ್ಷತೆ ವಹಿಸಿ ತೋಟಗಾರಿಕೆ ಇಲಾಖೆಯ ಸೌಲಭ್ಯ ಹಾಗೂ ಗ್ರಾಮ ಪಂಚಾಯತಿ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಪಿಡಿಒ ಭಾರತಿ ಪ್ರಸಕ್ತ ಸಾಲಿನಲ್ಲಿ ಕೈಗೊಂಡ ವಿವಿಧ ಕಾಮಗಾರಿ, ಯೋಜನೆಯ ಅನುಷ್ಠಾನ ಕುರಿತಂತೆ ವಿವರಿಸಿದರು. ಕಾರ್ಯದರ್ಶಿ ಸುಧಾಕರ್ ಜನತೆಯ ಅಹವಾಲು ಸ್ವೀಕರಿಸಿದರು. ಆರೋಗ್ಯ ಇಲಾಖೆ ವತಿಯಿಂದ ಮಂಗನ ಕಾಯಿಲೆಗೆ ಪೂರ್ವಭಾವಿ ಅನುಸರಿಸಬೇಕಾದ ಮಾಹಿತಿ ನೀಡಲಾಯಿತು.
ಗ್ರಾಪಂ ಆಡಳಿತದ ವಿವಿಧ ಸ್ತರದ ಅಧಿಕಾರಿ, ನೌಕರ ವೃಂದ, ಕಂದಾಯ ಇಲಾಖೆಯ ಲೋಹಿತ್, ಜಿಪಂ ಕಿರಿಯ ಅಭಿಯಂತರ ರಮೇಶ್, ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಗ್ರಾಮಸ್ಥರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post