ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಹುಸೇನ್ ಸರಕಾವಸ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವವಹಿಸಿದ್ದ ರೈತ ಸಂಘದ ರಾಜ್ಯ ಸಂಚಾಲಕ ಉಮೇಶ್ ಪಾಟೀಲ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮಳೆ ಇಲ್ಲದೇ ರೈತರು ಬಿತ್ತನೆ ಮಾಡಿದ ಮೆಕ್ಕೆಜೋಳ, ನಾಟಿ ಮಾಡಿದ ಭತ್ತದ ಬೆಳೆಗಳು ಒಣಗಿ ಹಾಳಾಗುತ್ತಿವೆ. ಮೆಕ್ಕೆಜೋಳ ಬೆಳೆದ ರೈತರಿಗೆ ಪ್ರತೀ ಎಕರೆಗೆ 25 ಸಾವಿರ ರೂ., ಹಾಗೂ ಭತ್ತದ ಭೂಮಿಗೆ ಪ್ರತಿ ಎಕರೆಗೆ 30 ಸಾವಿರ ರೂ., ಬೆಳೆ ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕು. ರೈತರ ಪಂಪ್‍ಸೆಟ್‍ಗೆ ಮೆಸ್ಕಾಂ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು. ರೈತರೊಂದಿಗೆ ಕಣ್ಣಾಮುಚ್ಚಾಲೆ ಆಡುವುದು ಬಿಟ್ಟು ಹಗಲು ವೇಳೆಯಲ್ಲಿ 3 ಫೇಸ್ ವಿದ್ಯುತ್‍ನ್ನು 7 ತಾಸು ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕಿನಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ಹಾನಿಗೀಡಾಗಿದ್ದು, ರೈತರ ಬದುಕು ದುಸ್ತರವಾಗಿದೆ. ದೇಶಕ್ಕೆ ಅನ್ನ ನೀಡುವ ರೈತರನ್ನು ಸರ್ಕಾರಗಳು ಕೈ ಹಿಡಿಯಬೇಕು. ರಾಜ್ಯ ಸರ್ಕಾರ ತಾಲೂಕು ಸೇರಿದಂತೆ ಜಿಲ್ಲೆಯ ಎಲ್ಲಾ ಏಳು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಹಾಗೂ ರೈತರ ಎಲ್ಲಾ ಸಾಲಗಳನ್ನು ಈ ವರ್ಷ ಕೈ ಬಿಟ್ಟು ರೈತರನ್ನು ಋಣಮುಕ್ತರನ್ನಾಗಿ ಮಾಡಬೇಕು. ಬ್ಯಾಂಕ್‍ಗಳು ಅಥವಾ ಹಣಕಾಸು ಸಂಸ್ಥೆಗಳು ಯಾವುದೇ ಕಾರಣದಿಂದಲೂ ರೈತರನ್ನು ಸಾಲ ಕಟ್ಟಲು ಒತ್ತಾಯಿಸದಂತೆ ಸುತ್ತೋಲೆ ಹೊರಡಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಜೊತೆಗೆ 2022 ನೇ ಸಾಲಿನಲ್ಲಿ ತೋಟಗಾರಿಕೆ ಹಾಗೂ ಇತರೆ ಬೆಳೆಗಳಿಗೆ ವಿಮೆ ಕಟ್ಟಿದ ರೈತರ ಖಾತೆಗೆ ಕೂಡಲೇ ಬೆಳೆವಿಮೆ ಹಣ ಜಮಾ ಮಾಡಬೇಕು. ರೈತರ ಬಗ್ಗೆ ಅರಿವನ್ನು ಹೊಂದಿರುವ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿದರು.
Also read: ಗುಡ್ ನ್ಯೂಸ್ | ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಉಪಾಧ್ಯಕ್ಷ ನಾಗರಾಜ ಬೆಣ್ಣಿಗೇರಿ, ಪ್ರಧಾನ ಕಾರ್ಯದರ್ಶಿ ಮೇಘರಾಜ ಬೆಟ್ಟದಕೂರ್ಲಿ, ರೈತ ಮುಖಂಡರಾದ ಸುರೇಶ್ ನಾಯ್ಕ್, ಹನುಮಂತಪ್ಪ ಬಾವಿಕಟ್ಟಿ, ಶಿವಪ್ಪ ಹುಣಸವಳ್ಳಿ, ಬಾಷಾಸಾಬ್ ಆರೇಕೊಪ್ಪ, ವೀರನಗೌಡ ಗಿಣಿವಾಲ, ಈರಮ್ಮ ಆನವಟ್ಟಿ, ನಾಗಮ್ಮ ಆನವಟ್ಟಿ, ಡಿಎಸ್‍ಎಸ್ ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ್, ತಾಲೂಕು ಸಂಚಾಲಕ ಮಹೇಶ್ ಶಕುನವಳ್ಳಿ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post