ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಬರಿಗೆ – ಹಲಸಿನಕೊಪ್ಪ- ಕ್ಯಾಸನೂರು ಗ್ರಾಮಗಳ ರೈತರು ತಮ್ಮ ಊರಿನ ಕಾನು ಕಾವಲು ಮಾಡುತ್ತಿದ್ದರೂ ಬೇರೆ ಊರಿನ ಕೆಲ ಪಟ್ಟ ಭದ್ರರು ಬಂದು ಭೂಕಬಳಿಕೆಗೆ ಮುಂದಾಗಿದ್ದನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಭೂ ಕಬಳಿಕೆ ತೆರವು ಮಾಡಿ ಎಂದು ಗ್ರಾಮದ ರೈತರು ಒತ್ತಾಯಿಸುತ್ತಿದ್ದು, ಇನ್ನಷ್ಟು ಕಬಳಿಕೆ ಮಾಡುವ ಹುನ್ನಾರು ತಪ್ಪಿಸಿದ್ದಾರೆ. ನಾಶವಾದ ಕಾನು ಅರಣ್ಯ ಪ್ರದೇಶಕ್ಕೆ ಕಂದಾಯ ಅಧಿಕಾರಿಗಳು, ಹಿರಿಯ ಅರಣ್ಯ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ವೃಕ್ಷಲಕ್ಷ ಆಂದೋಲನದ ಮುಖಂಡರು ಭೇಟಿ ನೀಡಿ ಜಿಲ್ಲಾಧಿಕಾರಿಗಳಿಗೆ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇಷ್ಟೆಲ್ಲ ಇದ್ದೂ ಕಂದಾಯ, ಅರಣ್ಯ ಮತ್ತು ಪಂಚಾಯತ್ ಇಲಾಖೆಗಳು ಭೂ ಕಬಳಕೆ ತೆರವು ಮಾಡಲು ಮುಂದಾಗುತ್ತಿಲ್ಲ ಏಕೆ ? ಎಂಬ ಗಂಭೀರ ಪ್ರಶ್ನೆಗಳನ್ನು, ಸಂಶಯಗಳನ್ನು ಗ್ರಾಮ ಕಾನು, ಅರಣ್ಯ ಕಾವಲು ಸಮಿತಿ ಎತ್ತಿದೆ. ಕಂದಾಯ ಮತ್ತು ಅರಣ್ಯ ಕಾಯಿದೆಗಳ ಉಲ್ಲಂಘನೆ ನೋಡಿಯೂ ತಣ್ಣಗೆ ಕುಳತಿದ್ದೀರಿ, ಎಲ್ಲದಕ್ಕೂ ನ್ಯಾಯಾಲಯಕ್ಕೆ ಹೋಗಬೇಕೆ ? ಎಂದು ಪ್ರಶ್ನಿಸಿದೆ. ನೇರ ಅಹಿಂಸಾತ್ಮಕ ಕಾರ್ಯಾಚರಣೆಗೆ ರೈತರು ಮುಂದಾಗಲು ನಿರ್ಧರಿಸಿದ್ದಾರೆ. ಸೊರಬ ತಾಲೂಕಾ ಕಚೇರಿ ಎದುರು ಧರಣಿ ಪ್ರಾರಂಭಿಸುವ ನಿರ್ಣಯ ಕೈಗೊಳ್ಳಲಿದ್ದೇವೆ. ನಮ್ಮ ಗ್ರಾಮಗಳ ಗೋಮಾಳ, ಕಾನು ಸಾಮೂಹಿಕ ಭೂಮಿ ಉಳಿಸಿಕೊಳ್ಳಲು ನಮ್ಮ ಹೋರಾಟ ಮುಂದುವರೆಸುತ್ತೇವೆ” ಎಂದು ಹಲಸಿನಕೊಪ್ಪ ಗ್ರಾಮ ಅಭಿವೃದ್ಧಿ ಸಮಿತಿಯ ಹರಿಯಪ್ಪ, ರಮೇಶ, ರಾಜಾರಾಂ ತಿಳಿಸಿದ್ದಾರೆ.

ಭಾರತ ಸರ್ಕಾರದ ಅರಣ್ಯ ಮಂತ್ರಾಲಯದ ಗಮನ ಸೆಳೆಯಲ್ಲಿದ್ದೇವೆ. ಕ್ಯಾಸನೂರು ಜಂಗಲ್’ ಎಂದೇ ಖ್ಯಾತಿ ಪಡೆದ ಹಲಸಿನಕೊಪ್ಪ – ಬರಿಗೆ ಅರಣ್ಯವನ್ನು ದೇವರಕಾಡು ಎಂದು ಮಾನ್ಯ ಮಾಡಬೇಕು. ಪರಂಪರಾ ಔಷಧಿ ಮೂಲಿಕೆಗಳ ಸಂರಕ್ಷಿತ ಪ್ರದೇಶ ಎಂದು ಔಷಧಿ ಮೂಲಿಕಾ ಮಂಡಳ ಗುರುತಿಸಬೇಕು. ಡೀಮ್ಡ್ ಅರಣ್ಯ ಪಟ್ಟಿಯಲ್ಲಿ ಇರುವ ಪಶ್ಚಿಮ ಘಟ್ಟದ ವಿಶಿಷ್ಟ ಅರಣ್ಯ ಪ್ರದೇಶ ಇದಾಗಿದೆ ಎಂದು ಪಶ್ಚಿಮ ಘಟ್ಟ ಉಳಿಸಿ ಆಂದೋಲನದ ಪ್ರೊ ಬಿ.ಎಮ್. ಕುಮಾರಸ್ವಾಮಿ, ಗಜೇಂದ್ರ, ಕೆ. ವೆಂಕಟೇಶ ಅವರು ಅರಣ್ಯ ಸಚಿವರೂ ಆಗಿರುವ ಮುಖ್ಯಮಂತ್ರಿಗಳ ಗಮನ ಸೆಳೆದು ಮನವಿ ಸಲ್ಲಿಸಿದ್ದಾರೆ.












Discussion about this post