ಕಲ್ಪ ಮೀಡಿಯಾ ಹೌಸ್ | ಸೊರಬ |
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸಾಧ್ಯವಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ನಲ್ಲಿ ಹೇಳಿಕೆ ನೀಡಿ ಸಮುದಾಯದ ಬೇಡಿಕೆ ಕಡೆಗಣಿಸಿದ್ದಾರೆ ಎಂದು ಸಮಾಜದ ಅಧ್ಯಕ್ಷ ಗುಡ್ಡಪ್ಪ ಆರೋಪಿಸಿದರು.
ಅವರು ಇಂದು ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಡಿವಾಳ ಸಮಾಜ ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯವಾಗಿ, ಹಿಂದುಳಿದಿದೆ ಈ ಬಗ್ಗೆ 2011ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಸಮಾಜಕ್ಕೆ ನ್ಯಾಯ ಒದಗಿಸಲು ಡಾ. ಅನ್ನಪೂರ್ಣ ಆಯೋಗ ರಚಿಸಿ ವರದಿ ನೀಡಲು ತಿಳಿಸಿದ್ದರು. 10 ರ್ಷಗಳ ಹಿಂದೆಯೇ ವರದಿ ಸಲ್ಲಿಸಿದ್ದರೂ ಈವರೆಗೂ ಸದನ ಸಮಿತಿಗೆ ನೀಡಿಲ್ಲ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಈ ವರದಿ ಮಂಡನೆ ಮಾಡಿ, ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸ ಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡ ಬೇಕು ಎಂದು ಒತ್ತಾಯಿಸಿದರು.
Also read: ಗೊಂಬೆಗಳ ಸಾಮ್ರಾಜ್ಯ! ನವರಾತ್ರಿಯಲ್ಲಿ ಭದ್ರಾವತಿಯ ಈ ಮನೆಗೆ ಒಮ್ಮೆ ತಪ್ಪದೇ ಭೇಟಿ ನೀಡಿ
ಬೀದರ್, ಕಲಬುರಗಿ, ಶಿವಮೊಗ್ಗ ಭಾಗದಲ್ಲಿ ಮಡಿವಾಳ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಈ ಭಾಗದ ಜನಪ್ರತಿನಿಧಿಗಳು ಸಮಾಜದ ಪರವಾಗಿ ಧ್ವನಿ ಎತ್ತುತ್ತಿಲ್ಲ. ಪ್ರತಿ ತಾಲ್ಲೂಕಿನಲ್ಲೂ ನಮ್ಮ ಸಮಾಜದವರಿದ್ದು, 30 ಕ್ಷೇತ್ರಗಳಲ್ಲಿ ನಮ್ಮ ಸಮಾಜದವರೇ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಒಂದು ವೇಳೆ ಪರಿಶಿಷ್ಟ ಜಾತಿಗೆ ಸೇರಿಸದಿದ್ದಲ್ಲಿ ಚುನಾವಣೆ ಬಹಿಷ್ಕರಿಸಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಮಡಿವಾಳ ಸಮಾಜದ ಉಪಾಧ್ಯಕ್ಷ ರಾಜು ನಡಹಳ್ಳಿ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಸಂಘಟನಾ ಕಾರ್ಯದರ್ಶಿ ಸುರೇಶ್, ರಮೇಶ್ ಕಟ್ಟಿನಕೆರೆ, ರಾಮ ಮೂರ್ತಿ. ಪರಸಪ್ಪ, ಇನ್ನಿತರರು ಇದ್ದರು.


ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















