ಕಲ್ಪ ಮೀಡಿಯಾ ಹೌಸ್ | ಸೊರಬ |
ಮಲೆನಾಡ ಸುಸ್ಥಿರ ಕೃಷಿ ಅಭಿವೃದ್ಧಿಗೆ ಸರ್ಕಾರ ಬದ್ಧವಿದ್ದು ಈಗಾಗಲೇ ಹಲವಾರು ಕೃಷಿ ಪೂರಕ ಸವಲತ್ತುಗಳನ್ನು ಒದಗಿಸುತ್ತ ಬರಲಾಗಿದೆ. ಈ ನಿಟ್ಟಿನಲ್ಲಿ ಕೃಷಿಕರೆ ಒಂದಾಗಿ ಕೃಷಿ ಸಮಸ್ಯೆಗಳನ್ನು ಹೀಗೆ ಸಮಗ್ರವಾಗಿ ಚಿಂತಿಸಿ ಸರ್ಕಾರದ ಗಮನ ಸೆಳೆಯುಲು ಮುಂದಾಗಿರುವುದು ಅತ್ಯುತ್ತಮ ಬೆಳವಣಿಗೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ Vishweshwara Hegade Kageri ಹರ್ಷ ವ್ಯಕ್ತಪಡಿಸಿದರು.
ಶಿರಸಿಯ ಕದಂಬ ಮಾರ್ಕೇಟ್ ಸಭಾಂಗಣದಲ್ಲಿ ಮಲೆನಾಡು ಶಿರಸಿ, ಸಾಗರ, ಸೊರಬ ಭಾಗದ ಕೃಷಿಕರು ಹಮ್ಮಿಕೊಂಡಿದ್ದ ಮಲೆನಾಡು ಸುಸ್ಥಿರ ಅಭಿವೃದ್ಧಿಯ ಕಾರ್ಯಸೂಚಿ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತಹೆಗಡೆ ಅಶಿಸರ ಮಾತನಾಡಿ, ಕರ್ನಾಟಕ ಸರಕಾರದ 2023-24ನೇ ಸಾಲಿನ ಮುಂಗಡಪತ್ರದಲ್ಲಿ ನಮ್ಮ ಮಲೆನಾಡು ಪ್ರಾಂತ್ಯದ ಸುಸ್ಥಿರ ಅಭಿವೃದ್ಧಿಗೆ ಅಗತ್ಯವಾದ ಚಟುವಟಿಕೆಗಳಿಗೆ ಆರ್ಥಿಕ ಸಂಪನ್ಮೂಲವನ್ನು ಕೋರಲು ಸಮಾಲೋಚನೆಗಾಗಿ ವಿಶೇಷ ಸಭೆಯನ್ನು ಆಯೋಜಿಸಲಾಗಿದೆ. ವಿವಿಧ ಸಂಘಟನೆಗಳ ಪ್ರತಿನಿಧಿಗಳು, ತಜ್ಞರು, ಪ್ರಾಧ್ಯಾಪಕರು, ಸಹಕಾರಿ ನೇತಾರರು, ಮುಂತಾದವರು ಮಲೆನಾಡು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹಾಗೂ ಅವುಗಳ ನಿರ್ವಹಣೆಗೆ ಅಗತ್ಯವಾದ ಕ್ರಮಗಳ ಬಗ್ಗೆ, ವಿಶೇಷವಾಗಿ ಬಜೆಟ್‌ನಲ್ಲಿ ಸೇರ್ಪಡೆ ಆಗಬೇಕಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಸಾರ್ವಜನಿಕರಿಂದಲೂ ಈ ವಿಷಯಗಳ ಬಗ್ಗೆ ಹಲವು ಸಲಹೆಗಳನ್ನು ಮತ್ತು ಅಭಿಪ್ರಾಯಗಳನ್ನು ಕ್ರೋಢೀಕರಿಸಿ ನಂತರ ಸಭಾಧ್ಯಕ್ಷರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪರಿಷ್ಕೃತ ವರದಿಯನ್ನು ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.
ವಿವಿಧ ಕೃಷಿ ವಲಯದ ಅಧಿಕಾರಿಗಳು, ತಜ್ಞರು, ಪ್ರಗತಿ ಪರ ಕೃಷಿಕರು ಪಾಲ್ಗೊಂಡು ತಮ್ಮ ವಿದ್ವತ್‌ಪೂರ್ಣ ಅಭಿಪ್ರಾಯಗಳನ್ನು ಹಂಚಿಕೊಂಡರು.

ರೈತರು ಜೇನು ಕುಟುಂಬ ಸಾಕುವಂತೆ ಜೇನು ಅಭಿವೃದ್ಧಿ ಯೋಜನೆ ಜಾರಿ ಮಾಡಲು ತೋಟಗಾರಿಕಾ ಇಲಾಖೆ ವಿಶೇಷ ತರಬೇತಿ, ನಿರ್ವಹಣೆ, ಶುದ್ಧೀಕರಣ ಘಟಕ, ಮಾರುಕಟ್ಟೆ, ಇತ್ಯಾದಿ ಸಮಗ್ರ ಯೋಜನೆ ರೂಪಿಸಿ ಜಾರಿ ಮಾಡಬೇಕು. ಬಿದಿರು ಬೆಳೆಸಲು ರಾಷ್ಟ್ರೀಯ ಯೋಜನೆ ಜಾರಿ ಆಗುತ್ತಿದೆ. ಈ ಯೋಜನೆ ಅಡಿಯಲ್ಲಿ ರೈತರು ಬಿದಿರು ಅಭಿವೃದ್ಧಿ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಯೋಜನೆ ರೂಪಿಸಬೇಕು ಎಂದರು.

ರೈತರಿಗೆ ಹಾಲು ಉತ್ಪಾದಕ ಸಂಘಗಳ ಸಹಕಾರದಲ್ಲಿ ಸ್ಥಳೀಯ ಜಾನುವಾರು ತಳಿ ಅಭಿವೃದ್ಧಿ ಯೋಜನೆ ರೂಪಿಸಿ ಹೈನೋದ್ಯಮ ವಿಕಾಸ ಯೋಜನೆ ರೂಪಿಸಬೇಕು. ಶೇ.50ರಷ್ಟು ಸಬ್ಸಿಡಿ ನೀಡಿ ಸ್ಥಳೀಯ ಜಾನುವಾರು ಅಭಿವೃದ್ಧಿ ಪಡಿಸಿರುವ ತಳಿ ಆಕಳು ನೀಡುವ ಯೋಜನೆ ರೂಪಿಸಬೇಕು. ರೈತರು ಹನಿ ನೀರಾವರಿ ಯೋಜನೆ ಅಳವಡಿಸಲು ಶೇ.90ರಷ್ಟು ಸಬ್ಸಿಡಿ ನೀಡುವ ವಿಶೇಷ ಯೋಜನೆಯನ್ನು ಕೃಷಿ ಇಲಾಖೆ ಜಾರಿ ಮಾಡಬೇಕು. ರೈತರು ಕೃಷಿ ಹೊಂಡ ನಿರ್ಮಿಸಲು ಶೇ.90ರಷ್ಟು ಸಬ್ಸಿಡಿ ನೀಡಬೇಕು. ಕೃಷಿ ವಿಶ್ವವಿದ್ಯಾಲಯ ಗ್ರಾಮಗಳಲ್ಲಿ ಈ ಮೇಲಿನ ಮಾದರಿ ಯೋಜನೆ ಪ್ರಾತ್ಯಕ್ಷಿಕೆ ಮಾಡಬೇಕು. ಕೃಷಿ ವಿಶ್ವವಿದ್ಯಾಲಯ ಮಲೆನಾಡು ಮಾದರಿ ಸಮಗ್ರ ಯೋಜನೆಗೆ ತಾಂತ್ರಿಕ ಬೆಂಬಲ ನೀಡಬೇಕು ಮುಂತಾದ ಬೇಡಿಕೆಗಳನ್ನು ಮುಂದಿನ ಬಜೆಟ್ ಸಮಯದಲ್ಲಿ ಅಂಗೀಕರಿಸುವಂತೆ ಸಭಾಧ್ಯಕ್ಷರಿಗೆ ಮನವಿ ಪತ್ರ ನೀಡಲಾಯಿತು.

ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post