ಕಲ್ಪ ಮೀಡಿಯಾ ಹೌಸ್ | ಸೊರಬ |
ಜನಾನಾಂ ಪದಂ ಜನಪದಂ….ತಾಳಿಕೆ ಬಾಳಿಕೆಗೆ ಒತ್ತು ನೀಡದೆ ಆ ಹೊತ್ತಿಗೆ ಲಭ್ಯವಿರುವ ಪರಿಕರಗಳಿಂದಲೇ ಸಿದ್ಧಗೊಳ್ಳುವ ಕಲೆ, ಬಾಯಿಂದ ಬಾಯಿಗೆ ಉಳಿದುಕೊಳ್ಳುವ ಪದಗಳೆ ಜೀವಾಳವಾಗಿ ಜೀವನದ ನೈಜ ಶ್ರೀಮಂತಿಕೆಯನ್ನು ಬಿಂಬಿಸುವ ಜನಪದರ ಬಲೀಂದ್ರನ ಆರಾಧನೆ ಅನನ್ಯ. ಬಲ್ಲಾಳ ಬಲವೀಂದ್ರ ರಾಯ ಬಂದಾನೂ ನಮ್ಮ ರಾಜ್ಯಕ್ಕೆ….ಎಂಬ ಜನಪದ ಕಥಾನಕವನ್ನು ಶ್ರಾವ್ಯವಾಗಿ ಹಾಡುತ್ತ ಮನೆಮನೆಗೆ ದೀಪ ಬೆಳಗುವ ಹಬ್ಬಾಡುವ ಪದ್ಧತಿ ಸೊರಬ ತಾಲ್ಲೂಕಿನ ಕೆಲವೆಡೆ ಇನ್ನೂ ಜೀವಂತವಿದ್ದು, ಭಿನ್ನ ಆಚರಣೆಯ ಮೂಲಕ ಗಮನ ಸೆಳೆಯುತ್ತದೆ.
ತಾಲ್ಲೂಕಿನ ಯಲಸಿ ಗ್ರಾಮದಲ್ಲಿ ತಲತಲಾಂತರದಿಂದಲೂ ಗ್ರಾಮಸ್ಥರು ಆಚರಿಸಿಕೊಂಡು ಬರುತ್ತಿರುವ, ಮುಂಪೀಳಿಗೆಗೆ ಹಸ್ತಾಂತರಗೊಂಡು ಪದ್ಧತಿ ಮುಂದುವರೆದಿರುವ ಹಬ್ಬಾಡುವ ಆಚರಣೆ ಈ ವರ್ಷವೂ ಜರುಗಿತು.
ಬೂರೆ ನೀರು ತರುವುದರಿಂದ ದೀಪಾವಳಿ ಆರಂಭವಾಗಿ ಎಣ್ಣೆ ಅಭ್ಯಂಜನ, ಕೃಷಿಪರಿಕರಗಳ ಅಲಂಕಾರ, ಜಾನುವಾರುಗಳ ಅಲಂಕಾರ, ಬಣ್ಣದ ಕೋಲುಗಳ ಹಿಡಿದು ಜಾನುವಾರುಗಳ ಮೆರವಣಿಗೆ ನಡೆಸಿದ ರಾತ್ರಿ ಅಥವಾ ಮಾರನೇ ದಿನ ರಾತ್ರಿ ಹಬ್ಬಾಟ ನಡೆಸುತ್ತಾರೆ.
ಪೂರ್ವ ಕಾಲದಿಂದಲೂ ಇಂತಹ ಜನಪದ ಆಚರಣೆ ಗ್ರಾಮದಲ್ಲಿ ಬೆಳೆದುಕೊಂಡು ಬಂದಿದ್ದು ಕೃಷಿ ಬದುಕಿನ ಹಲವು ಜಂಜಾಟಗಳ ನಡುವೆಯೂ ಉತ್ಸಾಹ, ಸಂಭ್ರಮ ಇಂದಿಗೂ ಕುಗ್ಗದಿರುವುದು ಸಂತಸದ ಸಂಗತಿ. ಹಬ್ಬಾಟದಲ್ಲಿ ಇಡೀ ಗ್ರಾಮ ಒಂದಲ್ಲ ಒಂದು ರೀತಿಯಲ್ಲಿ ಕೈ ಜೋಡಿಸುತ್ತದೆ.
-ಬಿ.ಲೋಕೇಶ್, ಗ್ರಾಮಾಧ್ಯಕ್ಷ
ಹಬ್ಬಾಡುವ ಮೊದಲು ಮನೆಮನೆಗೆ ದೀಪ ಹಚ್ಚುವ ಹಾಗು ಎಣ್ಣೆ ಸಂಗ್ರಹಿಸುವ ಬೆನ್ನಲ್ಲೇ ಅಂಟಿಗೆ ಪಂಟಿಗೆ ಆಡುವ ತಂಡ ಬಲೀಂದ್ರನನ್ನು ನೆನಪಿಸುತ್ತ ದೀಪ್ದೀಪೋಳ್ಗಯೋ….ಕೂಗಿ ತೆರಳುತ್ತಾರೆ. ಇವರ ಜೊತೆಯಲ್ಲಿಯೆ ಕಾಯಿ ಗುದ್ದುವ ತಂಡವಿದ್ದು ಯುವಕರು ಉತ್ಸಾಹದಿಂದ ಬರಿಗೈಯಲ್ಲಿ ಕಾಯಿಗುದ್ದುವ, ಗುದ್ದಿದ ಪುಡಿಗಾಯನ್ನು ಸಂಗ್ರಹಿಸುವ ಕ್ರಿಯೆಯ ಹಿಂದೆಯೆ ಕರಡಿ ವೇಷದಾರಿಗಳು ಬಂದು ಮಕ್ಕಳನ್ನ ರಂಜಿಸುತ್ತಾರೆ. ಇತ್ತ ಮನೆಮನೆಯ ಚಿಣ್ಣರು, ಯುವಕರು ಪುಂಡಿಯ ದೊಂದಿಯೊಂದಿಗೆ ಓಡುತ್ತ ಸಂಭ್ರಮಿಸುತ್ತಾರೆ. ಹಬ್ಬಾಟದ ಬಳಿಕ ಊರಬಾಗಿಲಲ್ಲಿ ಮೊದಲೇ ನಿರ್ಮಿಸಿಕೊಂಡ ಗ್ವಾರಮ್ಮನ ಪುಟ್ಟ ಗುಡಿಸಲಿಗೆ ಆಡಿದ ದೊಂದಿ ಮೂಲಕ ಬೆಂಕಿ ಹಚ್ಚಿ ಕುಣಿದಾಡುತ್ತಾರೆ. ಹಬ್ಬಾಟದ ಜೊತೆಗೆ ಸಂಗ್ರಹವಾದ ಕಾಯಿ, ಹೋಳಿಗೆ ಮುಂತಾದ ಸಿಹಿಯನ್ನು ಮೆಲ್ಲುತ್ತ ಹಬ್ಬಾಟಕ್ಕೆ ವಿದಾಯ ಸಲ್ಲಿಸುತ್ತಾರೆ.
ವಿಶಿಷ್ಟ ದೀಪಾವಳಿ ಆಚರಣೆ ಮಲೆನಾಡು ತಾಲ್ಲೂಕಿನ ಕೆಲವೆಡೆ ಕಂಡುಬರುತ್ತಿದ್ದು ಆಚರಣೆಗೆ ಪ್ರಾಚೀನತೆಯೂ ಇದೆ. ಹಿಂದೊಮ್ಮೆ ದಟ್ಟ ಅರಣ್ಯ ಪ್ರದೇಶವಾಗಿದ್ದ ಈ ಮಲೆನಾಡಿನ ಬಹುತೇಕ ಗ್ರಾಮಗಳಿಗೆ ಯಾವುದೇ ಮೂಲ ಸೌಕರ್ಯವಿರಲಿಲ್ಲ, ವರ್ಷದ ಒಂಬತ್ತು ತಿಂಗಳು ಮಳೆ, ಚಳಿಯಿಂದ ರಕ್ಷಿಸಿಕೊಳ್ಳಬೇಕಾದ ಇಲ್ಲಿ ಬೆಂಕಿ, ಬೆಂಕಿಗೆ ಉರುವಲು ಅನಿವಾರ್ಯ. ಬಹುತೇಕ ಅಂತಹ ಅನಿವಾರ್ಯತೆಯೆ ಮುಂದೊಮ್ಮೆ ಬೆಂಕಿಯನ್ನು ವಿತರಿಸುವ ಅಥವಾ ಬೆಂಕಿಯನ್ನು ಮನೆಮನೆಗೆ ತಲುಪಿಸುವ ಕ್ರಿಯೆಯೆ ಅಂಟಿಗೆ ಪಂಟಿಗೆ ಹಬ್ಬಾಡುವುದಕ್ಕೆ ಕಾರಣವಾಗಿರಬೇಕು.
-ಶ್ರೀಪಾದ ಬಿಚ್ಚುಗತ್ತಿ, ಇತಿಹಾಸ ಅಧ್ಯಯನಕಾರರು
ಗ್ರಾಮದೇವರ ಗುಡಿಯಿಂದ ದೀಪ ಹಚ್ಚಿಕೊಂಡು ಗ್ರಾಮದ ಎಲ್ಲ ದೇವಾಲಯಗಳ ದೀಪ ಬೆಳಗಿಸುತ್ತ ಪ್ರತಿ ಮನೆಮನೆಗೂ ದೀಪ ಅಂಟಿಸುವ ಪ್ರಕ್ರಿಯೆ ಪ್ರಾಚೀನದಿಂದಲೂ ಇಲ್ಲಿ ನಡೆದುಕೊಂಡು ಬರುತ್ತಿದೆ. ಸಾಮೂಹಿಕ ಗೋವಿನ ಮೆರವಣಿಗೆ, ಹುಲುಸು ಬೀರುವುದು, ಪೂಜೆಗೆ ನಿರ್ದಿಷ್ಟ ಸಸ್ಯಗಳನ್ನು ಬಳಸುವುದು ಮುಂತಾದ ಧಾರ್ಮಿಕ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದ್ದು ಜಾತಿ ಬೇಧವಿಲ್ಲದೆ ಎಲ್ಲರೂ ಪಾಲ್ಗೊಳ್ಳುತ್ತಾರೆ. ಸಾಮಾಜಿಕ ಸಮತೋಲನಕ್ಕೆ ನೆರವಾಗಿ ನಿಲ್ಲುತ್ತಾರೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post