ಕಲ್ಪ ಮೀಡಿಯಾ ಹೌಸ್
ಸೊರಬ: ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಚಿನ್ನಾಭರಣವನ್ನು ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸೊರಬ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರವಾಡ ಗ್ರಾಮದ ಮರಿಯಪ್ಪ ಗೋಪಿನಾಯ್ಕ್ ಹಾಗೂ ಕಮಲಮ್ಮ ನಿಂಗಬಸಪ್ಪ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 37 ಗ್ರಾಂ ಬಂಗಾರ ಮತ್ತು 200 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ.
ಘಟನೆ ಹಿನ್ನೆಲೆ:
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಸಮೀಪದಲ್ಲಿ ಅನುಮಾನಸ್ಪದವಾಗಿ ತಿರುಗುತ್ತಿದ್ದ ಮರಿಯಪ್ಪನನ್ನು ಗಸ್ತು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಇಲ್ಲಿನ ರಾಘವೇಂದ್ರ ಬಡಾವಣೆಯಲ್ಲಿ ಜ. 31ರಂದು ಪ್ರೇಮಾ ನಾಗರಾಜ ಎಂಬುವವರ ಮನೆಯಲ್ಲಿ ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಜೊತೆಗೆ ಆರೋಪಿಯು ಪುನಃ, ಪಟ್ಟಣಕ್ಕೆ ಕಳವು ಮಾಡಲೆಂದು ಹೊಂಚು ಹಾಕಿ ಬಂದಿರುವುದು ತಿಳಿದಿದೆ.
ಬಂಧಿತರು ಅತ್ತೆ-ಅಳಿಯ:
ಕಾರವಾರದ ಶಿರವಾಡ ಗ್ರಾಮದವರದಾದ ಬಂಧಿತರಿಬ್ಬರು ಅತ್ತೆ-ಅಳಿಯ ಎಂಬುದು ವಿಶೇಷ. 10 ಗ್ರಾಂ ಬಂಗಾರವನ್ನು ಒಂದು ಕಡೆ ಒತ್ತೆ ಇಟ್ಟಿದ್ದ ಆರೋಪಿ ಮರಿಯಪ್ಪ, ಉಳಿದ 27 ಗ್ರಾಂ ಬಂಗಾರವನ್ನು ಅತ್ತೆಗೆ ನೀಡಿದ್ದು, ಆಕೆಯ ಹೆಸರಿನಲ್ಲಿ ಅಲ್ಲಿನ ಖಾಸಗಿ ಬ್ಯಾಂಕ್‌ವೊಂದರಲ್ಲಿ ಒತ್ತೆ ಇಟ್ಟಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀ ಪ್ರಸಾದ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್, ಡಿವೈಎಸ್‌ಪಿ ಶಿವಾನಂದ ಮರಕಂಡಿ ಹಾಗೂ ಸಿಪಿಐ ಆರ್.ಡಿ. ಮರುಳಸಿದ್ದಪ್ಪ ಮಾರ್ಗದರ್ಶನಲ್ಲಿ ಪಿಎಸ್‌ಐ ಟಿ.ಬಿ. ಪ್ರಶಾಂತ್ ಕುಮಾರ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕಾರ್ಯಾಚರಣೆಯಲ್ಲಿ ಎಎಸ್‌ಐ ಶಬ್ಬೀರ್‌ಖಾನ್, ಹೆಡ್‌ಕಾನ್ಸ್‌ಟೇಬಲ್ ಪರಮೇಶ್ವರ ನಾಯ್ಕ್, ಎಂ.ಬಿ. ನಾಗರಾಜ, ಸಲ್ಮಾನ್‌ಖಾನ್ ಹಾಜಿ, ಸಂದೀಪ್‌ಕುಮಾರ್, ಯು. ಶಿವಾನಂದ, ಕೆ.ಎನ್. ಶಶಿಧರ, ಸಿದ್ದನಗೌಡ ಬಣಕಾರ, ಹೇಮಲತಾ ಪಾಲ್ಗೊಂಡಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post