ಕಲ್ಪ ಮೀಡಿಯಾ ಹೌಸ್ | ಸೊರಬ |
ಸಾಹಿತ್ಯ ಕ್ಷೇತ್ರದಲ್ಲೂ ರಾಜಕೀಯ ತೂರದೆ ಇದ್ದಲ್ಲಿ ನಮ್ಮಭಾಷೆ, ನಮ್ಮ ಸಾಹಿತ್ಯ ಸಮುದಾಯಕ್ಕೆ ಪೂರಕವಾಗಿ ಬೆಳೆಯಲು ಸಾಧ್ಯ ಎಂದು ಕವಿ ಮಂಜಪ್ಪ ಹುಲ್ತಿಕೊಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಸಂಜೆ ನಡೆದ ನೂತನ ಸಾಂಸ್ಕೃತಿಕ ಜಗುಲಿ ವೇದಿಕೆಯ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಗೊಂಡು ಮಾತನಾಡಿದರು.
ಸಾಹಿತ್ಯ ಮನೆನೆಗೂ ತಲುಪಬೇಕು ಬಡವ ಬಲ್ಲಿದ ಇತ್ಯಾದಿ ಬೇಧವಿಲ್ಲದೆ ಎಲ್ಲ ಸ್ತರದ ಮನೆಗಳ ಜಗುಲಿಯಲ್ಲೂ ಸಾಹಿತ್ಯ ಅನಾವರಣಗೊಳ್ಳಬೇಕು. ನಮ್ಮ ವೃತ್ತಿಯ ಹತ್ತು ಹಲವು ಜಂಜಾಟದ ನಡುವೆಯೂ ಸಾಮಾಜಿಕ ಮೌಲ್ಯವನ್ನು ವೃದ್ಧಿಸುವ ಸಾಹಿತ್ಯ ಸಂಸ್ಕೃತಿಯತ್ತ ನಮ್ಮ ಕೆಲ ಸಮಯವನ್ನು ಮೀಸಲಿಡಬೇಕು. ಇಂತಹ ಒಂದು ಸಂಘಟನೆಯಲ್ಲಿ ಕೌಟುಂಬಿಕ ಮನೋಭಾವ ಬೆಳೆಯಬೇಕು ಎಂದರು.
ಗೌರವಾಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀಪಾದ ಬಿಚ್ಚುಗತ್ತಿ, ಸಂಘಟನೆಯಲ್ಲಿ ಸ್ವಂತಿಕೆ ಇರಲಿ, ನಮ್ಮೊಳಗಿನ ಅವ್ಯಕ್ತ ಜ್ಞಾನ ಅನಾವರಣಗೊಳ್ಳಲಿ, ಸಾಂಸ್ಕೃತಿಕ ಮೌಲ್ಯಗಳಿಗೆ ಬದ್ಧತೆಯಿರಲಿ, ವ್ಯಕ್ತಿ ಆಧರಿತಕ್ಕಿಂತಲೂ ವಿಷಯಾಧರಿತಕ್ಕೆ ಮನ್ನಣೆ ನೀಡಿ ಸಂಘಟನೆ ಬೆಳೆಯಬೇಕು. ಪೈಪೋಟಿ ಆರೋಗ್ಯಕರವಾಗಿರಬೇಕು, ಎಲ್ಲ ಭಾಷೆ, ಸಂಸ್ಕೃತಿಗೂ ಗೌರವ ನೀಡುವ ಮೂಲಕ ವೇದಿಕೆ ಚಿಕ್ಕದಿದ್ದು ತಲುಪುವ ಹೆಜ್ಜೆ ಸ್ಪಷ್ಟ ಮತ್ತು ಧಿಟ್ಟವಾಗಿರಲಿ ಎಂದು ಆಶಿಸಿದರು.
ಸಂಚಾಲಕ ಷಣ್ಮುಖಾಚಾರ್, ಈ ವೇದಿಕೆ ಪ್ರತಿ ವರ್ಷ ಸಂಕ್ರಾಂತಿಯಂದು ನವೀಕೃತಗೊಳ್ಳಲಿದ್ದು, ಎಲ್ಲ ಸಮಾನ ಮನಸ್ಕರ ಜ್ಞಾನಕ್ಕೂ ಗೌರವಿಸಲಾಗುತ್ತದೆ. ಪದಾಧಿಕಾರಿಗಳು ಬದಲಾಗುತ್ತಾರೆ. ಅವರವರ ಜವಾಬ್ಧಾರಿಗನುಗುಣವಾಗಿ ತುಂಬು ಹೃದಯದ ಸೇವೆ ನಿರಂತರವಾಗಿದ್ದಲ್ಲಿ ವೇದಿಕೆಯ ಸ್ಥಾಪನೆಗೆ ಮನ್ನಣೆ ದೊರಕಿದಂತಾಗುತ್ತದೆ. ಮುಕ್ತ ಚರ್ಚೆ, ಹೊಂದಾಣಿಕೆ ಮೂಲಕ ಸಾಮರಸ್ಯವನ್ನು ಗಟ್ಟಿಗೊಳಿಸಲು ಎಲ್ಲರ ಸಹಕಾರವಿರಲಿ ಎಂದರು.
ಜಗುಲಿಯ ಪ್ರಧಾನ ಕಾರ್ಯದರ್ಶಿಯಾಗಿ ಸಾಹಿತಿ ರೇವಣಪ್ಪ ಬಿದರಗೆರೆ, ಕಾರ್ಯದರ್ಶಿಗಳಾಗಿ ರಮೇಶ್ ಎನ್.ಮಂಚಿ, ಮಹೇಶ್ ಖಾರ್ವಿ, ಖಜಾಂಚಿಯಾಗಿ ಕವಿ ಮೋಹನಸುರಭಿ, ಮಂಜಪ್ಪ ಪಿ.ಬನದಕೊಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಮಂಜುನಾಥ್, ಉಪಾಧ್ಯಕ್ಷರಾಗಿ ಕಲಾವಿದ ಎಚ್.ಗುರುಮೂರ್ತಿ, ಸುಬ್ರಹ್ಮಣ್ಯ ಗುಡಿಗಾರ್, ಡಿ.ದೀಪಕ್, ಲಿಂಗರಾಜಗೌಡ ಕೋಣನಮನೆ, ಸತೀಶ್ ಬೈಂದೂರು, ಸಾಂಸ್ಕೃತಿಕ ಜಗುಲಿ ಮಹಿಳಾ ಘಟಕಕ್ಕೆ ಸುಜಾತ ಜೋತಾಡಿ ಅಧ್ಯಕ್ಷರಾಗಿ, ಸವಿತಾ ಎಂ.ಕೆ.ಭಟ್ ಗೌರವಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ವೀಣಾಶ್ರೀಧರ್, ರೂಪ ಮಧುಕೇಶ್ವರ್, ಆರ್.ಶ್ವೇತಾ, ಖಜಾಂಚಿಯಾಗಿ ಶೈಲಾ ಹೆಬ್ಬಾರ್, ವೀಣಾಶಂಕರ್, ಉಪಾಧ್ಯಕ್ಷರಾಗಿ ಸರಸ್ವತಿ ನಾವುಡಾ, ರೇಣುಕಮ್ಮಗೌಳಿ, ಗೌರಮ್ಮಭಂಡಾರಿ, ಎಸ್.ರತ್ನಾ, ಶಾರದ ಡಿ.ಭಾವೆ ಒಂದು ವರ್ಷದ ಅವಧಿಗೆ ಆಯ್ಕೆಗೊಂಡರು. ಕಸಾಪ ಮಾಜಿ ಅಧ್ಯಕ್ಷ ಹಾಲೇಶ್ ನವುಲೆ, ಉಧ್ಯಮಿ ಗುರುಮೂರ್ತಿ ಗುಡಿಗಾರ್, ಕಾರ್ಯಕಾರಿ ಸದಸ್ಯರು ಮತ್ತಿತರರು ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post