ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಸೊರಬದ ನಮ್ಮ ಅಣ್ಣ ತಮ್ಮಂದಿರಾದ ಅಲ್ಪಸಂಖ್ಯಾತರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ನಗರಾಧ್ಯಕ್ಷ ಹಾಗೂ ಮಾನವ ಹಕ್ಕು ಭ್ರಷ್ಟಾಚಾರಿ ವಿರೋಧಿ ಸಂಸ್ಥೆ ತಾಲೂಕು ಉಪಾಧ್ಯಕ್ಷ ರಜನಿ ನಾಯ್ಕ್ ಹೇಳಿದರು.
ಈ ಕುರಿತಂತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ನಮ್ಮ ಸೊರಬ ತಾಲೂಕಿನ ಅಣ್ಣ ತಮ್ಮಂದಿರಾದ ಅಲ್ಪಸಂಖ್ಯಾತ ಅಥವಾ ಮುಸಲ್ಮಾನ ಬಂಧುಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಿರುವುದಿಲ್ಲ, ಆಗುವುದೂ ಇಲ್ಲ ಎಂದರು.
ನಮ್ಮ ಕರ್ನಾಟಕ ಪಾಕಿಸ್ಥಾನ ಮತ್ತು ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿಲ್ಲ. ಹಾಗೂ ಅಲ್ಲಿನಂತೆ ಇಲ್ಲಿ ಸಮಸ್ಯೆಗಳು ಇಲ್ಲ. ನಮ್ಮ ಸಹೋದರ ಬಂಧುಗಳು ಯಾವುದೇ ರೀತಿಯ ಭಯ ಆತಂಕ ಪಡುವ ಅಗತ್ಯವಿಲ್ಲ ಎಂದರು.
ನಮ್ಮ ಸೊರಬ ತಾಲೂಕಿನಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ರೀತಿಯ ಬಾಂಗ್ಲಾ ಅಥವಾ ಪಾಕಿಸ್ಥಾನದ ನುಸುಳುಕೋರರು, ಅಕ್ರಮ ವಲಸಿಗರು ಇಲ್ಲವೆಂದು ಭಾವಿಸಿರುತ್ತೇವೆ. ಇಲ್ಲಿನ ಜನರು ಅಂತಹ ಜನರಿಗೆ, ದೇಶದ್ರೋಹಿಗಳಿಗೆ ಸ್ಥಳ ಮತ್ತು ಅವಕಾಶ ಕೊಡುವುದಿಲ್ಲ ಎಂದು ಭಾವಿಸಿರುತ್ತೇವೆ. ನಮ್ಮ ಸಹೋದರ ಬಂಧುಗಳಿಗೆ ತೊಂದರೆಯಾದಲ್ಲಿ ನಾವು ನಿಮ್ಮ ಬೆಂಬಲಕ್ಕೆ ಇರುತ್ತೇವೆ. ಪೌರತ್ವ ಕಾಯ್ದೆಯಿಂದ ಒಂದು ವೇಳೆ ಯಾರಿಗಾದರೂ ಭಾರತೀಯ ಮೂಲನಿವಾಸಿಗಳಿಗೆ ತೊಂದರೆಯಾಗಿದ್ದರೆ ಅವರು ಸಮೀಪದ ಪೊಲೀಸ್ ಠಾಣೆ ಅಥವಾ ತಹಶೀಲ್ದಾರರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಹಾಗೂ ನಿಮಗೆ ಅಕ್ರಮ ವಲಸಿಗರ ಬಗ್ಗೆ ತಿಳಿದಿರುವ ಮಾಹಿತಿಯನ್ನು ಮುಚ್ಚಿಡದೆ ದೇಶದ ಭದ್ರತೆಗಾಗಿ ಇಲ್ಲಿನ ನಿವಾಸಿಗಳ ಅನುಕೂಲಕ್ಕಾಗಿ ಸರ್ಕಾರಕ್ಕೆ ತಿಳಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ ಎಂದರು.
Get in Touch With Us info@kalpa.news Whatsapp: 9481252093
















