ಕಲ್ಪ ಮೀಡಿಯಾ ಹೌಸ್
ಸೊರಬ: ರಾಜ್ಯ ಸರ್ಕಾರ ವೀರಶೈವ ಸಮಾಜದ ಒಳಪಂಗಡಗಳಿಗೆ 2ಎ ಮೀಸಲಾತಿ ನೀಡಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಸೆ. 15ರವರೆಗೆ ಕಾಲಾವಕಾಶ ತಗೆದುಕೊಂಡಿದ್ದು, ರಾಜ್ಯ ಸರ್ಕಾರ ಮೀಸಲಾತಿ ನೀಡದಿದ್ದರೆ ಅ.1ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಆನವಟ್ಟಿ ಸಮೀಪದ ಸಮನವಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಪ್ರತಿಜ್ಞಾ ಪಂಚಾಯತ್ ಅಭಿಯಾನದ ಸರ್ಕಾರ ಕೊಟ್ಟ ಮಾತನ್ನು ನೆನಪಿಸೋಣ, ಮೀಸಲಾತಿ ಹಕ್ಕು ಪಡೆಯೋಣ ಎಂಬ ಘೋಷಣೆಯಡಿ ನಡೆದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವೀರಶೈವ ಲಿಂಗಾಯತ ಸಮುದಾಯದಲ್ಲಿ 110 ಪಂಗಡಗಳಿದ್ದು ಹಲವು ಪಂಗಡಗಳು ಸೇರಿ ಪಂಚಮಸಾಲಿ ಸಮಾಜ ನಿರ್ಮಾಣಗೊಂಡಿದೆ. ಸಮಾಜದಲ್ಲಿ ಬಹಳಷ್ಟು ಜನರು ಬಡವರು, ಅಲ್ಪಸಂಖ್ಯಾತರಾಗಿದ್ದು ಆರ್ಥಿಕವಾಗಿ ತೊಂದರೆಂಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಉದ್ಯೋಗ ಅನುಕೂಲಕ್ಕಾಗಿ ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿ ಹಾಗೂ ಎಲ್ಲಾ ಲಿಂಗಾಯತ ಸಮಾಜವನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಬೇಕೆಂದು ಹಕ್ಕೊತ್ತಾಯಿಸಿದರು.
ತ್ರಿವಿಧ ದಾಸೋಹದ ಮೂಲಕ ಸಮಾಜದ ಸೇವೆಗೆ ನಿಂತಿರುವ ಪಂಚಮಸಾಲಿ ಸಮಾಜವರು ನಿಂತಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಹಲವಾರು ಸಮುದಾಯಗಳಿಗೆ 2ಎ ಮೀಸಲಾತಿಯನ್ನು ನೀಡಲಾಗಿದ್ದು ಸರ್ಕಾರದ ಯಾವುದೇ ಸೌಲಭ್ಯ ಮತ್ತು ಸೌಲತ್ತುಗಳು ಪಡೆಯದೇ ಪಂಚಮಸಾಲಿ ಸಮಾಜ ಸಮುದಾಯ ವಂಚಿತಗೊಂಡಿದೆ. ಮೀಸಲಾತಿ ನೀಡಲು ಸರ್ಕಾರ ಪಡೆದಿದ್ದ 6 ತಿಂಗಳ ಕಾಲಾವಕಾಶ ಮುಗಿಯುತ್ತಾ ಬಂದಿದ್ದು ಸರ್ಕಾರಕ್ಕೆ ಜ್ಞಾಪಿಸಲು ಆ.26 ರಿಂದ ಚಾಮರಾಜ ನಗರ ಜಿಲ್ಲೆಯ ಮಲೇಮಹದೇಶ್ವರ ಬೆಟ್ಟದಿಂದ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಬೆಂಗಳೂರಿನ ವಿಧಾನಸೌಧದವರೆಗೆ ಜಾಗೃತಿ ಮೂಡಿಸಲು ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮೇಘರಾಜಗೌಡ ಮಾವಲಿ, ವಿಜಯಕುಮಾರ, ರುದ್ರಗೌಡ್ರು, ಲಿಂಗರಾಜ ಗೌಡ, ಗ್ರಾಪಂ ಉಪಾಧ್ಯಕ್ಷೆ ಪ್ರಭಾವತಿ, ರವಿಗೌಡ, ಸಮನವಳ್ಳಿ ಗ್ರಾಪಂ ವ್ಯಾಕ್ತಿಯ ಪಂಚಮಸಾಲಿ ಸಮಾಜದ ಅಧ್ಯಕ್ಷ ಚಂದ್ರಪ್ಪಗೌಡ, ಉಮೇಶ, ಆರ್. ಸೋಮಶೇಖರ, ಚಂದ್ರಪ್ಪ, ಬಸವರಾಜ, ರಾಜು ಹೊಳಲು, ಅರವಿಂದ್, ಸುನೀಲ್ ಸೇರಿದಂತೆ ಇತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post