ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲ್ಲೂಕಿನ ಚಂದ್ರಗುತ್ತಿ ಸಮೀಪದ ಬಸ್ತಿಕೊಪ್ಪಗ್ರಾಮದಲ್ಲಿ ಗಣಿಗಾರಿಕೆ ಬ್ಲಾಸ್ಟಿಂಗ್ ತೀವ್ರತೆಯಿಂದ ಗ್ರಾಮದ ಅನೇಕ ಮನೆಗಳು ಬಿರುಕುಬಿಟ್ಟಿದ್ದು ಯಾವುದಾದರೂ ವಿಶೇಷ ಅನುದಾನದಡಿ ಸಂತ್ರಸ್ತರಿಗೆ ಪರಿಹಾರ ದೊರಕಬೇಕು. ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲ್ಲೂಕು ಜೀವವೈವಿಧ್ಯ ಸಮಿತಿಯ ಕ್ರಿಯಾತ್ಮಕ ಚಟುವಟಿಕೆಗಳ ಕುರಿತಂತೆ ಕರೆದಿದ್ದ ಸಭೆ ಉದ್ಧೇಶಿಸಿ ಮಾತನಾಡಿದರು.
ಬಸ್ತಿಕೊಪ್ಪ ಗ್ರಾಮದ ಮಣ್ಣು ಮತ್ತು ನೀರು ಪರೀಕ್ಷೆ ಮಳೆಗಾಲ ನಂತರ ನಡೆಸಲಾಗುವುದು. ಇಲ್ಲಿನ ಶಾಲಾ ವನನಿರ್ಮಾಣದ ಕಾರ್ಯ ಪ್ರಗತಿಯಲ್ಲಿದ್ದು ಸಾಮಾಜಿಕ ಅರಣ್ಯ ಮತ್ತು ಅರಣ್ಯ ಇಲಾಖೆ ಸಹಕರಿಸುತ್ತಿದೆ. ಅದೇ ರೀತಿ ಇಲ್ಲಿ ವನ್ಯಜೀವಿಗಳ ಹಾಗೂ ಗ್ರಾಮಸ್ಥರ ಕೃಷಿಕಾರ್ಯಕ್ಕೆ ನೆರವಾಗುವಂತೆ ಚೆಕ್ ಡ್ಯಾಂ ಯೋಜಿಸಲಾಗಿದ್ದು ಅರಣ್ಯ ಇಲಾಖೆ ಪರಿಶೀಲಿಸಿ ಕಾರ್ಯ ನಡೆಸಲಿದೆ. ರಸ್ತೆ ದುರಸ್ತಿಗೆ ಸಮರ್ಪಕ ಯೋಜನೆಯ ಕೊರತೆಯಿದ್ದು ಶಾಸಕರನ್ನು ಸಂಪರ್ಕಿಸಿ ರಸ್ತೆ ಮಂಜೂರಾತಿಗೆ ಕೋರಲಾಗುವುದು ಎಂದರು.
ಈಗಾಗಲೇ ಇಲ್ಲಿನ ಜೀವವೈವಿಧ್ಯ ಸಮಿತಿಗೆ ರಾಜ್ಯ ಜೀವವೈವಿಧ್ಯ ಮಂಡಳಿಯೂ ಸೇರಿದಂತೆ ವೃಕ್ಷ ಲಕ್ಷ ಆಂದೋಲನವೂ ಕೈ ಜೋಡಿಸಿದ್ದು ಉತ್ತಮ ಕಾರ್ಯವಾಗಿದೆ. ಮುಂದುವರೆದಂತೆ ತಾಲ್ಲೂಕಿನಲ್ಲಿ ವಿಶೇಷವಾಗಿ ಕೊಡಸೆ ವನ, ಗೊಗ್ಗಯ್ಯವನಕ್ಕೆ ಮುಂದಾಗಲು ಸಿದ್ಧತೆ ನಡೆಸಿದ್ದು, ಮುಂದಿನ ತಿಂಗಳು ವಿವಿಧ ಪರಿಸರ ರಕ್ಷಣೆ ಕುರಿತ ಕಾರ್ಯಗಾರ ನಡೆಯಲಿದೆ ಎಂದರು.
ಹಳೇಸೊರಬ ದೇವರಕಾಡನ್ನು ಈಗಾಗಲೇ ಜೀವವೈವಿಧ್ಯ ತಾಣ ಎಂದು ಗುರುತಿಸಿದ್ದು ರಾಜ್ಯ ಜೀವವೈವಿಧ್ಯ ಮಂಡಳಿಯ ಮುಂದಿನ ಸಭೆಯಲ್ಲಿ ಹೆಚ್ಚೂವರಿ ಪ್ರಗತಿಗೆ ವರ್ಗಾಯಿಸಲಾಗುತ್ತದೆ ಎಂದು ತಿಳಿಸಿದರು.
ಇಒ ಕುಮಾರ್, ಜೀವವೈವಿಧ್ಯ ನಿರ್ವಹಣಾ ಸಮಿತಿಯ ಶ್ರೀಪಾದ ಬಿಚ್ಚುಗತ್ತಿ, ಬಸ್ತಿಕೊಪ್ಪ ಗ್ರಾಮಸ್ಥರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post