ಕಲ್ಪ ಮೀಡಿಯಾ ಹೌಸ್ | ಸೊರಬ |
ವೃತ್ತಿಯಲ್ಲಿಯೇ ಅತ್ಯಂತ ಗೌರವಾನ್ವಿತ ಹಾಗೂ ಸಮಾಜದವನ್ನು ಬದಲಾವಣೆ ಮಾಡಬಹುದಾದ ಶಕ್ತಿ ಇರುವುದು ಶಿಕ್ಷಕ ವೃತ್ತಿಯಲ್ಲಿ ಮಾತ್ರವಾಗಿದ್ದು, ತಮ್ಮ ಸೇವಾ ಅವಧಿಯಲ್ಲಿ ಸಾವಿರಾರು ಮಕ್ಕಳಿಗೆ ಬೋಧನೆ ಮಾಡಿದ ಆತ್ಮತೃಪ್ತಿ ಇದೆ ಎಂದು ನಿವೃತ್ತ ಶಿಕ್ಷಕ ಎಚ್. ಮಂಜುನಾಥ ಮಾಸ್ತರ್ ಹೇಳಿದರು.
ತಾಲೂಕಿನ ತವನಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಚ್. ಮಂಜುನಾಥ ಮಾಸ್ತರ್ ಜನ್ಮದಿನದ ಅಂಗವಾಗಿ ಅವರ ಶಿಷ್ಯಂದಿರು ಹಾಗೂ ಗೆಳೆಯರ ಬಳಗದಿಂದ ಶುಕ್ರವಾರ ಹಮ್ಮಿಕೊಂಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಪೆನ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ಶಿಕ್ಷಕ ವೃತ್ತಿ ಅತ್ಯಂತ ಪ್ರವಿತ್ರವಾದದ್ದು, ಮಕ್ಕಳು ಇಂಜಿನಿಯರ್ ಹಾಗೂ ವೈದ್ಯರಾದರೆ ಮಾತ್ರ ಸಮಾಜದಲ್ಲಿ ಘನತೆ ಎಂದು ಪೋಷಕರು ಭಾವಿಸಿದ್ದಾರೆ. ಆದರೆ, ಅಂತಹ ವೈದ್ಯರು, ಇಂಜಿನಿಯರ್‌ಗಳನ್ನು ತಯಾರಿಸುವವರು ಶಿಕ್ಷಕರು ಎಂಬುದನ್ನು ಸಮಾಜ ಅರಿಯಬೇಕು. ಶಿಕ್ಷಕರಾದವರು ಸಹ ತಮ್ಮ ಮಕ್ಕಳನ್ನು ಪ್ರೀತಿಸುವಂತೆ ವಿದ್ಯಾರ್ಥಿಗಳನ್ನು ಸಹ ಪ್ರೀತಿಯಿಂದ ಕಾಣಬೇಕು. ಗ್ರಾಮಿಣ ಭಾಗದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ ಎಂದ ಅವರು, ತಮ್ಮ ಜನ್ಮ ದಿನವನ್ನು ಮಕ್ಕಳೊಂದಿಗೆ ಆಚರಿಸುವ ಜೊತೆಗೆ ನೋಟ್‌ಬುಕ್ ಹಾಗೂ ಪೆನ್‌ಗಳನ್ನು ನೀಡುತ್ತಿರುವುದು ಸಂತಸ ತಂದಿದೆ ಎಂದರು.
ನಿವೃತ್ತ ಪೋಸ್ಟ್ ಮಾಸ್ಟರ್ ಟಿ.ಜಿ. ಪರಶುರಾಮಪ್ಪ ಮಾತನಾಡಿ, ಎಚ್. ಮಂಜುನಾಥ ಮಾಸ್ತರ್ ತಮ್ಮ ಸೇವಾವಧಿಯಲ್ಲಿ ಮತ್ತು ನಿವೃತ್ತರಾದ ನಂತರವೂ ಸಹ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿರುವುದು ಶ್ಲಾಘನೀಯ. ತಮ್ಮ 71ನೆಯ ವಯಸ್ಸಿನಲ್ಲಿಯೂ ಯುವಕರಿಗೆ ಮಾದರಿಯಾಗುವಂತೆ ಕ್ರಿಯಾಶೀಲರಾಗಿದ್ದಾರೆ. ಸುಮಾರು ನಾಲ್ಕು ದಶಕಗಳ ಕಾಲ ಶಿಕ್ಷಕರಾಗಿ ಅನೇಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ್ದಾರೆ. ಹಲವರು ಸಮಾಜದ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ವಿನೋದ್ ಕುಮಾರ್, ಮುಖ್ಯಶಿಕ್ಷಕ ಬಿ.ಎಚ್. ಆನಂದಪ್ಪ, ಸಹ ಶಿಕ್ಷಕರಾದ ಎಸ್. ಕೃಷ್ಣಪ್ಪ, ವಿದ್ಯಾ ಡಿ. ರೇವಣಕರ್, ಎನ್. ಸುಮಾ, ಸಿ.ಆರ್. ಸವಿತಾ, ದೈಹಿಕ ಶಿಕ್ಷಕ ರಾಯಪ್ಪ ಕೊಪ್ಪಳ, ಪ್ರಮುಖರಾದ ಹನುಮಂತಪ್ಪ, ಸುಖಾನಂದ, ಮಲ್ಲಿಕಾರ್ಜುನ, ಕೃಷ್ಣಪ್ಪ, ಶಿವಪ್ಪ ಗುಡ್ಡೆಕೊಪ್ಪ, ಸೇರಿದಂತೆ ಇತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















