ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಹತ್ವದ ನಿರ್ಧಾರವೊಂದರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್’ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಮೊಬೈಲ್’ನಲ್ಲಿ ಜೋರಾಗಿ ಹಾಡುಗಳನ್ನು ಪ್ಲೇ ಮಾಡುವುದನ್ನು ನಿಷೇಧಿಸಲಾಗಿದೆ.
ಈ ಕುರಿತಂತೆ ರಾಜ್ಯ ಹೈಕೋರ್ಟ್ ಆದೇಶದ ಮೇರೆಗೆ ಸಾರಿಗೆ ಇಲಾಖೆ ತನ್ನ ಸಂಸ್ಥೆಯ ಬಸ್’ಗಳಲ್ಲಿ ಮೊಬೈಲ್’ನಿಂದ ಪ್ರಯಾಣಿಕರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಲು ಈ ಕ್ರಮ ಕೈಗೊಂಡಿದೆ.
ಈ ವಿಚಾರ ಕುರಿತಂತೆ ತುಮಕೂರಿನ ವಕೀಲ ರಮೇಶ್ ನಾಯಕ್ ಎನ್ನುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಬಸ್’ಗಳಲ್ಲಿ ಕೆಲವು ಪ್ರಯಾಣಿಕರು ಸಹ ಪ್ರಯಾಣಿಕರ ಹಿತವನ್ನು ಗಮನಿಸದೇ ಮನಸ್ಸಿಗೆ ಬಂದಂತೆ ಜೋರಾಗಿ ಹಾಡು, ಸಿನಿಮಾ ಸೇರಿದಂತೆ ಆಡಿಯೋ ಹಾಗೂ ವೀಡಿಯೋಗಳನ್ನು ಹಾಕುತ್ತಾರೆ. ಇದರಿಂದ ಇತರರಿಗೆ ಕಿರಿಕಿರಿಯಾಗುತ್ತದೆ. ಹೀಗಾಗಿ, ಇದನ್ನು ತಡೆಯುವ ನಿಟ್ಟಿನಲ್ಲಿ ಆದೇಶ ನೀಡಬೇಕು ಎಂದು ವಿನಂತಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989, ನಿಯಮ 94 (1)(ವಿ) ಅನ್ನು ಉಲ್ಲಂಘಿಸಿ ನಿಗಮದ ಬಸ್ಸುಗಳಲ್ಲಿ ಮೊಬೈಲ್ ಮೂಲಕ ಜೋರು ಶಬ್ದ ಮಾಡುವುದನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಪ್ರಯಾಣಿಕರಿಗೆ ಕರ್ತವ್ಯ ನಿರತ ಸಿಬ್ಬಂದಿ ಸೂಕ್ತ ತಿಳುವಳಿಕೆ ನೀಡಬೇಕು. ಹೆಚ್ಚಾಗಿ ಶಬ್ದ ಬರುವಂತೆ, ಪ್ರಯಾಣಿಕರಿಗೆ ತೊಂದರೆಯಾಗುವಂತೆ ಮೊಬೈಲ್ ಬಳಸುತ್ತಿದ್ದರೆ, ಬಳಸದಂತೆ ವಿನಂತಿಸಿಕೊಳ್ಳಬೇಕು. ಮನವಿಗೆ ಸ್ಪಂದಿಸದಿದ್ದರೆ ನಿಯಮಾನುಸಾರ ಚಾಲಕ ಅಥವಾ ನಿರ್ವಾಹಕ ಬಸ್’ನಿಂದ ಆ ಪ್ರಯಾಣಿಕನನ್ನು ಇಳಿಸಬೇಕು. ಆತ ಕೆಳಕ್ಕೆ ಇಳಿಯುವವರೆಗೂ ಬಸ್ಸನ್ನು ಅಲ್ಲಿಯೇ ನಿಲ್ಲಿಸುವುದು ಹಾಗೂ ಕೆಳಕ್ಕಿಳಿಸಲ್ಪಡುವ ಪ್ರಯಾಣಿಕಗೆ ಬಸ್ ದರವನ್ನು ಹಿಂತಿರುಗಿಸಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post