ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲ್ಲೂಕಿನ ಆಹಾರ ಪ್ರಿಯರನ್ನು ಒಂದೇ ವೇದಿಕೆಯಲ್ಲಿ ಒಂದಾಗಿಸಿದ ಬೃಹತ್ ಆಹಾರ ಮೇಳ ಜನಮೆಚ್ಚುಗೆಯೊಂದಿಗೆ ಯಶಸ್ವಿಯಾಗಿ ನೆರವೇರಿತು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೊರಬ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹೊಸಪೇಟೆ ಬಡಾವಣೆಯ ಗಿರಿಜಾ ಶಂಕರ ಸಭಾಭವನದಲ್ಲಿ ಎರಡು ದಿನಗಳ ಕಾಲ ನಡೆದ ಮೇಳವನ್ನು ಅಕ್ಕ ಕೆಫೆಯ ಶಂಕರ್ ಶೆಟ್ಟಿ ಉದ್ಘಾಟಿಸಿದರು. ಮೇಳಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದರು.
ಮೇಳದಲ್ಲಿ ಸಾಂಪ್ರದಾಯಿಕ ಹಳ್ಳಿ ಸೊಗಡಿನ ತಿಂಡಿ–ತಿನಿಸುಗಳು ವಿಶೇಷ ಆಕರ್ಷಣೆಯಾಗಿದ್ದವು. ಹಲಸಿನ ಬೊಂಡ, ಹೋಳಿಗೆ, ಇಡ್ಲಿ, ಮಂಡಕ್ಕಿ, ಕಜ್ಜಾಯ, ತಂಬುಳಿ, ಗೋಲ್‌ಗುಪ್ಪ, ಪಾನಿಪೂರಿ, ಚಿಪ್ಸ್, ಐಸ್‌ಕ್ರೀಮ್ ಸೇರಿದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳು ಜನರ ಮೆಚ್ಚುಗೆಗೆ ಪಾತ್ರವಾದವು. ಜೊತೆಗೆ ಜೇನುತುಪ್ಪ, ಆರ್ಗ್ಯಾನಿಕ್ ಆಹಾರ ಪದಾರ್ಥಗಳು, ಮಸಾಲೆ ಪುಡಿ, ನೆಲ್ಲಿಕಾಯಿ ಪುಡಿ ಹಾಗೂ ಆಯುರ್ವೇದ ಉತ್ಪನ್ನಗಳ ಮಳಿಗೆಗಳಿಗೂ ಉತ್ತಮ ಸ್ಪಂದನೆ ದೊರೆಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳಕ್ಕೆ ಮತ್ತಷ್ಟು ಮೆರುಗು ತಂದವು. ಖ್ಯಾತ ಸ್ಯಾಕ್ಸೋಫೋನ್ ವಾದಕ ಶರದ್ ಹರ್ಡೇಕರ್ ಅವರ ವಾದನ ಹಾಗೂ ಗಾಯಕ ಹೆಚ್. ಗುರುಮೂರ್ತಿ ಮತ್ತು ತಂಡದವರಿಂದ ನಡೆದ ಸುಗಮ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಮನಗೆದ್ದಿತು.
Also read: ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಹೋರಾಟ ಬೆಂಬಲಿಸಿದ ಎಂಪಿ ರಾಘವೇಂದ್ರ ಹೇಳಿದ್ದೇನು?
ಇದೇ ವೇಳೆ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಗಳಿಸಿ ತಾಲ್ಲೂಕಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು “ಪ್ರತಿಭಾ ಪುರಸ್ಕಾರ” ನೀಡಿ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜನಸಾಗರದ ನಡುವೆ ನಡೆದ ಮೇಳವು ಆಹಾರ ಪ್ರಿಯರಿಗೆ ವಿಶಿಷ್ಟ ಅನುಭವ ನೀಡಿದ್ದು, ಮುಂದಿನ ವರ್ಷ ಇನ್ನಷ್ಟು ಅದ್ದೂರಿಯಾಗಿ ಮೇಳ ಆಯೋಜಿಸಬೇಕೆಂಬ ಬೇಡಿಕೆ ಸಾರ್ವಜನಿಕರಿಂದ ಕೇಳಿಬಂದಿತು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Comments 1