ಕಲ್ಪ ಮೀಡಿಯಾ ಹೌಸ್ | ಸೊರಬ |
ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ತಿಯನ್ನು ಉಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತಿರುವ ಶಾಸಕ ಕುಮಾರ್ ಬಂಗಾರಪ್ಪ, ಮತ್ತೊಂದಡೆ, ಖಾಸಗಿ ಶಾಲೆಗೆ ಪುರಸಭೆ ಆಸ್ತಿಯನ್ನು ಉಳಿಸಿಕೊಡಲು ಮುಂದಾಗಿದ್ದಾರೆ ಎಂದು ಡಿಎಸ್’ಎಸ್ ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ್ ಆರೋಪಿಸಿದರು.
ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸೊರಬ ಶಾಖೆಯ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಪುರಸಭೆ ವ್ಯಾಪ್ತಿಯ ವಾರ್ಡ್ 5ರಲ್ಲಿನ ಸಾರ್ವಜನಿಕು ಓಡಾಡುವ 30ಗಿ192 ಅಡಿ ವಿಸ್ತೀರ್ಣದ ಕರ್ನ್ಸ’ವೆನ್ಸಿ ರಸ್ತೆಯನ್ನು ಸ್ವಾಮಿ ವಿವೇಕಾನಂದ ಶಾಲೆಯವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಬಿಜೆಪಿಯ ಮುಖಂಡರಿದ್ದಾರೆ ಎನ್ನುವ ಕಾರಣಕ್ಕಾಗಿ ಪಪಂನಲ್ಲಿ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ಹಾಗೂ ಶಾಸಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿ, ಸಾರ್ವಜನಿಕರು ಓಡಾಡುವ ರಸ್ತೆಯನ್ನು ಶಾಲೆಗೆ ಉಪಯೋಗಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅನುಮೋದನೆ ನೀಡಿರುವುದು ಖಂಡನೀಯ ಎಂದರು.
ಡಿಎಸ್’ಎಸ್ ತಾಲೂಕು ಸಂಚಾಲಕ ಮಹೇಶ ಶಕುನವಳ್ಳಿ ಮಾತನಾಡಿ, ಪುರಸಭೆ ವ್ಯಾಪ್ತಿಯ ಸರ್ವೆ ನಂ. 113, 111, 108 ರಲ್ಲಿನ ಬಡವರನ್ನು ಅಧಿಕಾರಿಗಳ ಮೂಲಕ ಒಕ್ಕಲೆಬ್ಬಿಸುವ ಶಾಸಕರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಆದರೆ, ಸಾರ್ವಜನಿಕರ ಅನುಕೂಲಕ್ಕಾಗಿ ಇರುವ ಕನ್ಸರ್ವೆನ್ಸಿ ರಸ್ತೆಯನ್ನು ಆಡಳಿತ ಮಂಡಳಿಯ ಕಾರ್ಯದರ್ಶಿ ಬಿಜೆಪಿ ಪಕ್ಷದ ಮುಖಂಡರು ಎನ್ನುವ ಕಾರಣಕ್ಕೆ ಮೀಸಲಿಟ್ಟಿರುವುದು ಕಾನೂನು ಬಾಹಿರವಾಗಿದೆ. ಶಾಲೆಯಲ್ಲಿಯೂ ಸಹ ಮೂಲ ಸೌಲಭ್ಯಗಳಲ್ಲಿದೇ ಇದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೌನವಹಿಸಿದ್ದಾರೆ. ಕನ್ಸರ್ವೆನ್ಸಿ ರಸ್ತೆ ತೆರವು ಮಾಡದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಎಸ್’ಎಸ್ ತಾಲೂಕು ಸಂಘಟನಾ ಸಂಚಾಲಕರಾದ ನಾಗರಾಜ ಹುರುಳಿಕೊಪ್ಪ, ಹರೀಶ್ ಚಿಟ್ಟೂರು ಉಪಸ್ಥಿತರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post