ಕಲ್ಪ ಮೀಡಿಯಾ ಹೌಸ್ | ಸೊರಬ |
ಮಕ್ಕಳಲ್ಲಿನ ಪ್ರತಿಭೆಯನ್ನು ಹೊರಹಾಕಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು, ತೀರ್ಪುಗಾರರು ನಿಸ್ಪಕ್ಷಪಾತವಾಗಿ ಪ್ರತಿಭೆಗಳನ್ನು ಗುರುತಿಸಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಕೆ. ಜಯಶೀಲಗೌಡ ಹೇಳಿದರು.
ಶನಿವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ತಾಲೂಕು ಆಡಳಿತ, ತಾಪಂ ಹಾಗೂ ತಾಲೂಕು ಶಿಕ್ಷಣಾ ಇಲಾಖೆ ವತಿಯಿಂದ ಹಮ್ಮಿಕೊಂಡ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗೆ ತಕ್ಕ ಪ್ರೋತ್ಸಾಹ ನೀಡುವ ಅವಶ್ಯಕತೆ ಇದೆ. ಮಕ್ಕಳಿಗೆ ಇಂತಹಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಸ್ಪರ್ಧಾತ್ಮಕ ಮನೋಭಾವ ವೃದ್ಧಿಯಾಗುತ್ತದೆ. ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಯಾದ ಸಾಂಸ್ಕೃತಿಕ ಕಲೆಗಳ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ತಾಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೆ ಪ್ರತಿನಿಧಿಸಲಿ ಎಂದು ಆಶಿಸಿದರು.
ತಾಪಂ ಮಾಜಿ ಅಧ್ಯಕ್ಷ ಎಚ್. ಗಣಪತಿ ಹುಲ್ತಿಕೊಪ್ಪ ಮಾತನಾಡಿ, ಮಕ್ಕಳನ್ನು ಸುಸಂಸ್ಕೃತ ನಾಗರೀಕರನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಣದೊಂದಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಬುದ್ದಿಮಟ್ಟವು ಹೆಚ್ಚಾಗುತ್ತದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ತಾಲೂಕು ಜಿಲ್ಲೆಯಲ್ಲಿಯೇ ಉತ್ತಮ ಸ್ಥಾನ ಗಳಿಸಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನಗಳಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಶ್ರಮವಹಿಸಬೇಕು ಎಂದರು.
ಕ್ಷೇತ್ರದ ಶಾಸಕರಾದ ಎಸ್. ಮಧುಬಂಗಾರಪ್ಪ ಅವರು ಶಿಕ್ಷಣ ಸಚಿವರಾದ ತರುವಾಯ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಮತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸಚಿವರ ಕಾರ್ಯವೈಖರಿಯು ಶಿಕ್ಷಕರ ಮತ್ತು ನೌಕರ ವೃಂದದಲ್ಲಿ ಅತ್ಯಂತ ಸಂತಸ ಮೂಡಿಸಿದ್ದು, ಆಸಕ್ತಿಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಮಟ್ಟದ ಮಕ್ಕಳ ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ಕೆ.ಬಿ. ಪ್ರೇಮ್ ಕುಮಾರ್ ಮಾತನಾಡಿ, ತಾಲೂಕು ಮಟ್ಟದಲ್ಲಿ ೨೫ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಯ ಮತ್ತು ೬ ವಲಯ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುವ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿದ್ದಾರೆ ಎಂಬುದನ್ನು ತೀರ್ಪುಗಾರರು ಮರೆಯಬಾರದು. ಮಕ್ಕಳಿಗೆ ಪಾರದರ್ಶಕವಾಗಿ ತೀರ್ಪು ದೊರೆಯಬೇಕು ಎನ್ನುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಲಾಟ್ ಸಿಸ್ಟಮ್ ಜಾರಿಗೆ ತರಲಾಗಿದೆ. ಇಲ್ಲಿ ಮಕ್ಕಳ ಶಾಲೆ ಮತ್ತು ಹೆಸರನ್ನು ಸ್ಪರ್ಧಾ ಸಮಯದಲ್ಲಿ ಘೋಷಿಸುವುದಿಲ್ಲ. ಇದರಿಂದ ಸೂಕ್ತ ಪ್ರತಿಭೆಯ ಆಯ್ಕೆಗೆ ಅನುಕೂಲವಾಗಲಿದೆ ಎಂದರು.
ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಪ್ರಕಾಶ್ ಮಡ್ಲೂರ್ ಮಾತನಾಡಿ, ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಲ್ಲಿ ಮೊಟ್ಟೆ ವಿತರಣೆಗೆ ವರುವ ಅನುದಾನದಲ್ಲಿ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದ್ದು, ಅದರ ಅನುದಾನವನ್ನು ಹೆಚ್ಚಿಸಬೇಕಿದೆ. ಇಲ್ಲವೇ ಜವಾಬ್ದಾರಿಯನ್ನು ಸ್ಥಳೀಯ ಸಂಘ-ಸAಸ್ಥೆಗಳಿಗೆ ನೀಡುವ ಕುರಿತು ಸಚಿವರು ಮತ್ತು ಅಧಿಕಾರಿಗಳು, ಸಂಘದ ಪದಾಧಿಕಾರಿಗಳ ಸಭೆ ನಡೆಸಬೇಕು ಎಂದು ಮನವಿ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಪುಷ್ಪಾ, ಕ್ಷೇತ್ರ ಸಮಯನ್ವಯಾಧಿಕಾರಿ ದಯಾನಂದ ಕಲ್ಲೇರ್, ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ, ಕಾಲೇಜಿನ ಉಪ ಪ್ರಾಂಶುಪಾಲ ಡಿ. ಫಕೀರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್. ಗಣಪತಿ, ಶಿಕ್ಷಕರ ಸಂಘಟನೆಯ ಪ್ರಕಾಶ್ ಮಡ್ಲೂರ್, ಕುಮಾರ್, ಪಿಎಂ ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕ ಕೆ.ಸಿ. ಶ್ರೀಕಾಂತ್, ಹಾಲೇಶ್ ನವುಲೆ, ಶಶಿಕಲಾ, ಎಲ್. ಸತ್ಯನಾರಾಯಣ, ಶಫಿ ಆಹ್ಮದ್, ಎಚ್. ಹಾಲೇಶ್, ಸೇರಿದಂತೆ ಮತ್ತಿತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post