ಕಲ್ಪ ಮೀಡಿಯಾ ಹೌಸ್ | ಸೊರಬ |
ಜಗತ್ತಿನಲ್ಲಿ ಅತ್ಯಂತ ಶಕ್ತಿಶಾಲಿಯಾದ ಆಯುಧವೆಂದರೆ ಅದು ಶಿಕ್ಷಣ ಮಾತ್ರ. ಪೋಷಕರು ತಮ್ಮ ವೈಯುಕ್ತಿಕ ಸಮಸ್ಯೆಗಳಿದ್ದರೆ ಅವುಗಳನ್ನು ಬದಿಗೊತ್ತಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ತಹಶೀಲ್ದಾರ್ ಹುಸೇನ್ ಸರಕಾವಸ್ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡ 2023-24ನೇ ಸಾಲಿನ ಶೈಕ್ಷಣಿಕ ಪ್ರಾರಂಭೋತ್ಸವ ಮತ್ತು ಉಚಿತ ಪುಸ್ತಕ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದಿಂದ ಮಕ್ಕಳಿಗೆ ಉಚಿತ ಶಿಕ್ಷಣಕ್ಕಾಗಿ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದು, ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿದ್ದಾರೆ. ಇದರ ಪ್ರಯೋಜನ ಪಡೆದು ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ರೂಪಿಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.
ಕುವೆಂಪು ಅವರು ನುಡಿದಂತೆ ಪ್ರತಿಯೊಬ್ಬ ಮಗುವು ಜನಿಸುವಾಗ ವಿಶ್ವ ಮಾನವನಾಗಿ ಜನಿಸುತ್ತದೆ. ಆದರೆ, ಸಮಾಜ ಆ ಮಗುವನ್ನು ಅಲ್ಪ ಮಾನವನ್ನಾಗಿ ಮಾಡುತ್ತದೆ. ಆದರೆ, ಶಿಕ್ಷಣದಿಂದ ಮಾತ್ರ ಪುನಃ ವಿಶ್ವ ಮಾನವನಾಗಲು ಸಾಧ್ಯವಿದೆ. ದೇಶ ಸದೃಢವಾಗಲು ಪ್ರತಿಯೊಂದು ಮಗುವು ಶಿಕ್ಷಣ ಪಡೆಯಬೇಕು. ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದೆ ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ಮತ್ತು ಲೇಖನಿ ವಿತರಿಸಿದ ಸಮಾಜ ಸೇವಕ ಡಾ. ಎಚ್.ಇ. ಜ್ಞಾನೇಶ್ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಪುಸ್ತಕಗಳ ಜೊತೆಗೆ ಅಂತರ್ಜಾಲ, ಕಂಪ್ಯೂಟರ್ ಬಳಕೆ ಸೇರಿದಂತೆ ಸಾಮಾನ್ಯ ಜ್ಞಾನವನ್ನು ಸಮಗ್ರವಾಗಿ ತಿಳಿದುಕೊಂಡಾಗ ಮಾತ್ರ ಪರಿಪೂರ್ಣ ಶಿಕ್ಷಿತರಾಗಬಹುದು ಎಂದರು.
ಜಗತ್ತಿನಲ್ಲಿ ವ್ಯಕ್ತಿಯ ಏಳಿಗೆ ಶಿಕ್ಷಣ ಮತ್ತು ಕಲಿಕೆಯಿಂದ ಮಾತ್ರ ಸಾಧ್ಯವಿದೆ. ಭವಿಷ್ಯದ ಪ್ರಜೆಗಳ ರೂಪಿಸುವಲ್ಲಿ ಪ್ರಾಥಮಿಕ ಶಿಕ್ಷಣ ಅತ್ಯಂತ ಮಹತ್ವಪೂರ್ಣವಾಗಿದೆ. ಆರಂಭದ ಶಿಕ್ಷಣ ನೀಡುವ ಶಿಕ್ಷಕರ ಪಾತ್ರ ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಬಿಇಒ ದಯಾನಂದ ಕಲ್ಲೇರ್ ಮಾತನಾಡಿ, ಕ್ಷೇತ್ರದ ಶಾಸಕರಾದ ಎಸ್. ಮಧು ಬಂಗಾರಪ್ಪ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ರಾಜ್ಯವೇ ಸೊರಬದತ್ತ ನೋಡುವಂತೆ ಫಲಿತಾಂಶವನ್ನು ನೀಡಬೇಕಿದೆ. ಶಿಕ್ಷಕ ವರ್ಗವು ಸಹ ಕಠಿಣ ಶ್ರಮ ವಹಿಸಬೇಕು ಎಂದು ತಿಳಿಸಿದರು.
ತಾಲೂಕಿನಾದ್ಯಂತ ಎಲ್ಲಾ ಶಾಲೆಗಳಲ್ಲೂ ಶೈಕ್ಷಣಿಕ ವರ್ಷಾರಂಭವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಗುಣಾತ್ಮಕ ಶೈಕ್ಷಣಿಕ ಕಲಿಕಾ ವರ್ಷವೆಂದು ಇಲಾಖೆ ಘೋಷಣೆ ಮಾಡಿದೆ. ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಮಕ್ಕಳಿಗೆ ಶಿಕ್ಷಣಕ್ಕೆ ತೊಡಕಾಗದಂತೆ ಕ್ರಮ ವಹಿಸಲಾಗಿದೆ. ಹಾಗೂ ಪೋಷಕರ ನಿರೀಕ್ಷೆಯಂತೆ ಕಳೆದ ಬಾರಿಯ ಲೋಪದೋಷಗಳನ್ನು ಸರಿ ಪಡಿಸಿಕೊಂಡು ತರಗತಿ ಆರಂಭದಂದೆ ಮಕ್ಕಳಿಗೆ ಶಿಕ್ಷಣ ನೀಡುವ ಗುರಿ ಹೊಂದಿರುವ ಜೊತೆಗೆ ಗುರುವಾರದಿಂದ ವೇಳಾಪಟ್ಟಿಗೆ ಅನುಗುಣವಾಗಿ ವಿಷಯವಾರು ಬೋಧನೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಇದಕ್ಕೂ ಮೊದಲು ಮಕ್ಕಳನ್ನು ಪೂರ್ಣಕುಂಭ, ವಾಧ್ಯ ಮೇಳದೊಂದಿಗೆ ಆರತಿ ಬೆಳಗಿಸಿ ಶಾಲೆಗೆ ಬರಮಾಡಿಕೊಳ್ಳಲಾಯಿತು. ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಎಸ್‍ಡಿಎಂಸಿ ಅಧ್ಯಕ್ಷ ರವಿ ಗುಡಿಗಾರ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ನಾಗರಾಜ ಅನ್ವೇಕರ್, ತಾಲೂಕು ಆರೋಗ್ಯಾಧಿಕಾರಿ ಪ್ರಭು ಸಾಹುಕಾರ್, ಪುರಸಭೆ ಸದಸ್ಯೆ ಪ್ರೇಮಾ, ಇಸಿಒ ಸಂಜೀವ ಕುಮಾರ್, ಅರುಣ್ ಕುಮಾರ್, ಸಿಆರ್‍ಪಿ ಸುಧಾ, ಬಿಆರ್‍ಪಿ ಡಿ.ಸಿ. ರಾಘವೇಂದ್ರ, ಎಸ್‍ಡಿಎಂಸಿ ಸದಸ್ಯರಾದ ವಿಜಯಗೌಳಿ, ರವಿ ಕುಮಾರ್, ತ್ಯಾಗರಾಜ್, ಅನೋಕ, ಕಾವ್ಯಾ, ಗೌರಿ, ಆಶಾ, ಸುಜಾತಾ, ಶಿಕ್ಷಕರಾದ ಎಸ್.ಎಲ್. ಮುದಿಗೌಡ್ರು, ತುಳಸಾ ವಿ. ನಾಯಕ, ವಿದ್ಯಾ ರೇವಣಕರ, ಕವಿತಾ ಹಿರೇಕೇರಿ, ಎಂ. ಜ್ಯೋತಿ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post