ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣ ಸೇರಿ ತಾಲೂಕಿನಾದ್ಯಂತ ಬುಧವಾರ ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಏಸುಕ್ರಿಸ್ತನ ಜನ್ಮದಿನ ಕ್ರಿಸ್‍ಮಸ್ ಹಬ್ಬವನ್ನು #Christmas Festival ಕ್ರೈಸ್ತರು ಸಡಗರ-ಸಂಭ್ರಮದಿಂದ ಆಚರಿಸಿದರು.
ಬೆಳಗ್ಗೆಯಿಂದಲೇ ಮಕ್ಕಳು ಹೊಸಬಟ್ಟೆ ತೊಟ್ಟು ಸಂಭ್ರಮಿಸಿದರೆ, ಮನೆಗಳಲ್ಲಿ ಕ್ರಿಸ್‍ಮಸ್ ಟ್ರೀ ರಚಿಸಿ ವಿದ್ಯುತ್ ದೀಪ ಮತ್ತು ವಿವಿಧ ಬಣ್ಣಗಳ ಹಾಳೆಗಳಿಂದ ಶೃಂಗರಿಸಿದ ದೃಶ್ಯ ಕಂಡುಬಂದಿತು.
ಪಟ್ಟಣದ ಹೊಸಪೇಟೆ ಬಡಾವಣೆಯ ಸಂತ ಸೆಬಾಸ್ಟಿಯನ್ ಚರ್ಚ್ ನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಿ, ಚರ್ಚ್ ನ ಮುಂಭಾಗದಲ್ಲಿ ನಿರ್ಮಿಸಿದ ಏಸುವಿನ ಜನ್ಮವೃಂತ್ತಾಂತ ಸಾರುವ ಗೋದಲಿ ಎಲ್ಲರ ಗಮನ ಸೆಳೆಯಿತು. ಕ್ರೈಸ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿ, ಕೇಕ್ ಮತ್ತು ಸಿಹಿ ಹಂಚುವ ಮೂಲಕ ಸಂತಸ ಹಂಚಿಕೊಂಡರು.
Also read: ಚಿಕ್ಕಮಗಳೂರು ಪೊಲೀಸರ ಕಾರ್ಯಾಚರಣೆ | ಬೃಹತ್ ಪ್ರಮಾಣದ ಕಾಪರ್ ಸ್ಕ್ರಾಪ್ ಕಳ್ಳರ ಬಂಧನ
ಸಂತ ಸೆಬಾಸ್ಟಿಯನ್ ಚರ್ಚ್ ನ ಧರ್ಮಗುರು ಫಾದರ್ ರಾಬರ್ಟ್ ಡಿ’ಮೆಲ್ಲೊ ಧರ್ಮ ಸಂದೇಶ ನೀಡಿ, ಕ್ರಿಸ್‍ಮಸ್ ಹಬ್ಬ ಪ್ರೀತಿಯ ಸಂಕೇತವಾಗಿದೆ. ಜಾತಿ-ಮತ ತಾರತಮ್ಯವಿಲ್ಲದೇ ಸುಖ ಶಾಂತಿಯಿಂದ ದೇಶೀಯ ಸಂಸ್ಕೃತಿ ಯಲ್ಲಿ ಬೆರೆತು ರಾಷ್ಟ್ರೀಯ ಏಕತೆಯನ್ನು ಉಂಟು ಮಾಡುತ್ತದೆ. ಅಂಧರಿಗೆ ದೃಷ್ಟಿದಾನ, ಶೋಷಿತರಿಗೆ ಸ್ವಾತಂತ್ರ್ಯ ನೀಡಲು ಏಸು ಕ್ರಿಸ್ತರು ನೀಡಿರುವ ಸಂದೇಶ ಪಾಲಿಸೋಣ, ಎಂದು ಪ್ರಾರ್ಥಿಸೋಣ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಸ್ಟರ್ ಸಿಲ್ವಿಯಾ ಸಿಕ್ವೇರಾ ಅವರು, ಶಾಂತಿ, ಅಹಿಂಸೆ, ಕರುಣೆಯಂತಹ ಮಾನವೀಯತೆ ಗುಣಗಳನ್ನು ಜಗತ್ತಿಗೆ ಸಾರಿದ ಮಹಾನ್ ಮಾನವತಾವಾದಿ ಏಸುಕ್ರಿಸ್ತನು ಹುಟ್ಟಿದ ದಿನವಾದ ಇಂದು ನಾಡಿನ ಎಲ್ಲಾ ಸಮುದಾಯದ ಬಂಧುಗಳಿಗೆ ಹಬ್ಬದ ಶುಭಾಶಯ ಕೋರಿದರು. ಡಿಸೆಂಬರ್ ತಿಂಗಳಲ್ಲಿ ಕ್ರಿಸ್‌ಮಸ್ ನಂತರ 2025ನೇ ನೂತನ ವರ್ಷವು ಬರಲಿದ್ದು ನಾಡಿನ ಜನತೆಗೆ ಬರುವ ಹೊಸ ವರ್ಷ ಒಳಿತನ್ನುಂಟು ಮಾಡಿ ಉತ್ತಮ ಮಳೆ-ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಆನವಟ್ಟಿಯ ಕ್ರಿಸ್ತುರಾಜ ಆಶ್ರಮ, ಇಂಡುವಳ್ಳಿಯ ಚರ್ಚ್ ಸೇರಿದಂತೆ ತಾಲೂಕಿನ ಎಲ್ಲಾ ಚರ್ಚ್ ಗಳಲ್ಲೂ ವಿಶೇಷ ಪ್ರಾರ್ಥನೆಗಳು ಜರುಗಿದವು. ಕ್ರೈಸ್ತರ ಮನೆ ಮುಂಭಾಗದಲ್ಲಿ ಏಸುವಿನ ಜನ್ಮ ವೃತ್ತಾಂತ ಸಾರುವ ಗೋದಲಿಗಳನ್ನು ನಿರ್ಮಿಸಲಾಗಿತ್ತು. ಕ್ರೈಸ್ತರು ಮಾತ್ರವಲ್ಲದೇ ಸರ್ವ ಧರ್ಮಿಯರು ಕ್ರಿಸ್‍ಮಸ್ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post