ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲ್ಲೂಕಿನ ಕಸಬಾ ಹೋಬಳಿ, ಗುಡವಿ ಗ್ರಾಪಂ ವ್ಯಾಪ್ತಿಯ ಕಂತನಹಳ್ಳಿ ಗ್ರಾಮದ ಪಾರಂಪರಿಕ ಕಾಡಿಗೆ ದುಷ್ಕರ್ಮಿಗಳು ಲಗ್ಗೆ ಹಾಕಿದ್ದು ಅಪಾರ ಪ್ರಮಾಣದ ಮರಮಟ್ಟುಗಳ ಮಾರಣ ಹೋಮವಾಗಿದೆ.
ಕಂತನಹಳ್ಳಿ ಸನಂ 8ರಲ್ಲಿ ಒಟ್ಟು 533 ಎಕರೆ ಅರಣ್ಯವಿದೆ. ಇದಕ್ಕೆ ತಾಗಿಕೊಂಡು ಸಾರೆಮರೂರು ಗ್ರಾಮದ ಸನಂ 27ರಲ್ಲಿ 352 ಎಕರೆ ಅರಣ್ಯವಿದೆ. ಪ್ರಸ್ತುತ ಈ ಸನಂ ಗೆ ತಾಗಿಕೊಂಡು ಕೆಲ ಖಾಸಗಿ ಅಸ್ತಿಯೂ ಇದೆ. ಇದೇ ಸನಂ ನಲ್ಲಿ ಸುಮಾರು 15 ಎಕರೆ ಅತಿಕ್ರಮಣವೂ ಆಗಿದೆ.
ಇಲ್ಲಿ ಒತ್ತೂವರಿ ಅಥವಾ ಅತಿಕ್ರಮಣಕ್ಕಾಗಿ ನಾಶಪಡಿಸಲು ಸಜ್ಜು ನಡೆಯುತ್ತಿದ್ದಂತೆ ಗೋಚರಿಸುತ್ತಿದ್ದು ಬೆಲೆ ಬಾಳುವ ಮರಗಳನ್ನು ಕಟ್ಟಿಗೆ ಮಾಡಲು ಕತ್ತರಿಸಲಾಗಿದೆ. ಬೃಹತ್ ಪೈಕಸ್ ಮರವನ್ನು ಧರೆಗುರುಳಿಸಿದ್ದು ಸಾವಿರಾರು ಪಕ್ಷಿಗಳ ಆವಾಸ, ಆಹಾರಕ್ಕೆ ಕುತ್ತು ತರಲಾಗಿದೆ. ನೂರಾರು ಪಕ್ಷಿಗಳ ಮೊಟ್ಟೆ, ಮರಿಗಳು ಅಸು ನೀಗಿವೆ.
ಗುಂಜನೂರು ಗ್ರಾಮದ ಪುಟ್ಟರಾಜು ಬಿನ್ ಬಾಲಚಂದ್ರ, ಕೃಷ್ಣಮೂರ್ತಿ ಬಿನ್ ಶ್ರೀಕಾಂತ್, ಅನಿಲ್ ಕುಮಾರ್ ಬಿನ್ ಚಂದ್ರಪ್ಪ ಇವರ ವಿರುದ್ಧ ದೂರು ದಾಖಲಾಗಿದೆ. ಕಡಿಯಲು ಬಳಸಿದ ಮೆಷಿನ್ ಇತ್ಯಾದಿ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡು, ಇದರ ಹಿಂದೆ ಯಾರಿದ್ದಾರೆ ತನಿಖೆ ನಡೆಸಲಾಗುತ್ತಿದೆ.
ಜಾವೀದ್, ಆರ್ ಎಫ್ ಒ ಅರಣ್ಯ ಇಲಾಖೆ ಸೊರಬ ವಲಯ
ಬ್ರಿಟಿಷ್ ಅಧಿಕಾರಿಗಳಿಂದ ಪ್ರಶಂಸೆ ಪಡೆದ ಸೊರಬ ತಾಲ್ಲೂಕಿನ ೧೧೪ ಕಾನುಗಳಲ್ಲಿ ಪ್ರಸ್ತುತ ೧೪ ಕಾನುಗಳೂ ಪೂರ್ಣಪ್ರಮಾಣದಲ್ಲಿ ಉಳಿದಿಲ್ಲ. ಹಾಲಿ ಉಸ್ತುವಾರಿ ಸಚಿವರು ಹೊಸದಾಗಿ ಅರಣ್ಯ ಒತ್ತೂವರಿ, ನಾಶ ಮಾಡಬೇಡಿ ಎಂದು ಸೂಚಿಸುತ್ತಿದ್ದರೂ ಈಚೆಗೆ ಅವ್ಯಾಹತ ಕಾಡು ನಾಶವಾಗುತ್ತಿರುವುದು ಆತಂಕಕಾರಿ ಸಂಗತಿ.
ಶ್ರೀಪಾದ ಬಿಚ್ಚುಗತ್ತಿ, ವೃಕ್ಷಲಕ್ಷ ಆಂದೋಲನದ ಕಾರ್ಯಕರ್ತ
ಭಾರತದಲ್ಲಿ ಇದ್ದಷ್ಟು ಅರಣ್ಯ ಕಾಯ್ದೆ ಇನ್ಯಾವ ದೇಶದಲ್ಲೂ ಇಲ್ಲ. ಆದರೆ, ಕಾನೂನು ಅರಿಯದೆ ಪಾಲನೆಯಾಗುತ್ತಿಲ್ಲ. ಜೀವವೈವಿಧ್ಯ ಕಾಯ್ದೆಯ ಪ್ರಕಾರ ಅರಣ್ಯ ಒತ್ತೂವರಿ, ಮರಕಡಿತಲೆಗೆ, ವನ್ಯಜೀವಿಗಳ ಬೇಟೆ ಗೆ ಅವಕಾಶ ಇಲ್ಲ. ಈ ಬಗ್ಗೆ ಮೇಲಿಂದಮೇಲೆ ಸರ್ಕಾರ ಹೇಳುತ್ತಿದ್ದರೂ ನಾಶ ತಡೆಗಟ್ಟಲಾಗುತ್ತಿಲ್ಲ. ಅರಣ್ಯ ಇಲಾಖೆ ತೀವ್ರ ಗಮನಹರಿಸಬೇಕು. ಕಾನೂನು ಕ್ರಮದಲ್ಲಿ ಯಾವುದೇ ಲಾಬಿಗೂ ಮಣಿಯಬಾರದು.
ಎಂ.ಆರ್. ಪಾಟೀಲ್, ಹಿರಿಯ ವಕೀಲರು, ಅಧ್ಯಕ್ಷರು, ಪರಿಸರ ಜಾಗೃತಿ ಟ್ರಸ್ಟ್ ಸೊರಬ
ಈಗ ಕಡಿದುರುಳಿಸಿರುವ 80ಕ್ಕೂ ಹೆಚ್ಚು ಮರಗಳು ಐದಾರು ಎಕರೆ ವಿಸ್ತೀರ್ಣದಲ್ಲಿದ್ದು ಬೆಲೆಬಾಳುವ ಪಾರಂಪರಿಕ ಮರಗಳಾಗಿವೆ. ನಂದಿ, ಹೊನ್ನೆ, ಬಣಗಿ, ಮತ್ತಿ, ಹುಣಾಲು ಮುಂತಾದ ಜಾತಿಯವದ್ದಾಗಿದೆ. ಈ ಮರಗಳ ಕಡಿತಲೆ ವೇಳೆ ಸಾವಿರಾರು ಮುಂಪೀಳಿಗೆ ಸಸ್ಯಗಳು ನಾಶಗೊಂಡಿವೆ.
ಈ ಅತಿಕ್ರಮಣದ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದ್ದು ಅರಣ್ಯ ಇಲಾಖೆ ಬಾಯಿ ಮುಚ್ಚಿಸಿ ಪ್ರಕರಣವನ್ನು ತಿರುಚಲಾಗುತ್ತಿದೆ ಎಂಬ ಆರೋಪವೂ ಗ್ರಾಮಸ್ಥರಿಂದ ಕೇಳಿ ಬಂದಿದೆ. ಮುಖ್ಯವಾಗಿ ಇದು ನಿರ್ಜನ ಪ್ರದೇಶವೇನಲ್ಲ, ವಾಹನ ಓಡಾಡುವ ರಸ್ತೆ ವ್ಯವಸ್ಥೆ ಇರುವ ಇಲ್ಲಿ ಏನೆ ಚಟುವಟಿಕೆ ನಡೆದರೂ ಗಮನಕ್ಕೆ ಬರುವಂತಿದೆ. ಆದಾಗ್ಯೂ ಅರಣ್ಯ ಇಲಾಖೆ ಗಮನಕ್ಕೆ ಬಾರದಿರುವುದು ಪ್ರಶ್ನಾರ್ಹ ಎನ್ನುತ್ತಾರೆ ಸ್ಥಳೀಯರು.
ಒಂದುವರ್ಷದ ಈಚೆಗೆ ಸೊರಬದಲ್ಲಿ ಅವ್ಯಾಹತವಾಗಿ ಅರಣ್ಯ ನಾಶವಾಗಿದ್ದು ಚಂದ್ರಗುತ್ತಿ ಹೋಬಳಿಯಲ್ಲಿ ಅತಿ ಹೆಚ್ಚು, ಕಸಬಾ, ಉಳವಿ, ಕುಪ್ಪಗಡ್ಡೆ, ಜಡೆ ಭಾಗದಲ್ಲಿ ಒಂದಿಷ್ಟು ಕಾಡು ಅತಿಕ್ರಮಣ, ಮರಗಳ ನಾಶ ಪ್ರಕರಣ ಕಂಡುಬಂದಿದೆ. ಸಾಲದೆಂಬಂತೆ ಚಂದ್ರಗುತ್ತಿ ಭಾಗದಲ್ಲಿ ಅವ್ಯಾಹತ ಅನಧಿಕೃತ ಮರಳು ದಂದೆಯೂ ನಡೆಯುತ್ತಿದೆ.
ಚಂದ್ರಗುತ್ತಿ ಹೋಬಳಿಯ ಹೊಳೆಮರೂರು, ತೋರಣಗೊಂಡನಕೊಪ್ಪ, ಅಂದವಳ್ಳಿ, ಮುಟಗುಪ್ಪೆ, ಗೊಗ್ಗೆಹಳ್ಳಿ, ಹರಳಿಗೆ, ಕೋಡಂಬಿ ಇನ್ನೂ ಅನೇಕ ಕಡೆ ಅರಣ್ಯ ನಾಶವಾದ ಬಳಿಕ ಇದೀಗ ಕಂತನಹಳ್ಳಿ ಗ್ರಾಮದ ಸನಂ 8ರ ನಿತ್ಯ ಹರಿದ್ವರ್ಣದ ಸಮೃದ್ಧ ಕಾಡಿನಲ್ಲಿ ಅಪಾರ ಪ್ರಮಾಣದ ಬೆಲೆಬಾಳುವ ಪಾರಂಪರಿಕ ವೃಕ್ಷಗಳನ್ನು ಕಡಿದು ನಾಶಪಡಿಸಲಾಗಿದ್ದು ಪರಿಸರಕ್ಕೆ ತುಂಬಲಾರದ ನಷ್ಟವಾಗಿದೆ. ಅರಣ್ಯ ಘಾತುಕರು ಕಾನೂನಿನ ಕುಣಿಕೆಯಿಂದ ನುಣುಚಿಕೊಳ್ಳುವಲ್ಲಿ ಅರಣ್ಯ ಇಲಾಖೆಯೆ ಸಹಕರಿಸುತ್ತಿದೆಯಾ ಎಂಬ ಅನುಮಾನ ಕಾಣಿಸುತ್ತಿದೆ.
ಕೃಷಿ ಜಮೀನುಗಳು ಲೇಔಟ್ ಗಳಾಗಿ, ಅರಣ್ಯ ಭೂಮಿ ವಾಣಿಜ್ಯ ಬೆಳೆಗಾಗಿ ಪರಿವರ್ತನೆ ಹೊಂದುತ್ತಿರುವ ಸೊರಬದಲ್ಲಿ ಬಹುತೇಕ ಇನ್ನು ಮುಂದೆ ನೀರಿನ ಅಭಾವದ ಜೊತೆಗೆ ಆಹಾರ ಬೆಳೆಗಳು ಸಂಪೂರ್ಣ ಕಾಣೆಯಾಗಲಿದೆ ಎಂದು ಪರಿಸರಾಸಕ್ತ ಅನೇಕ ಅಧ್ಯಯನಕಾರರು ಆತಂಕ ವ್ಯಕ್ತಪಡಿಸಿದ್ದಾರೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post