ಕಲ್ಪ ಮೀಡಿಯಾ ಹೌಸ್
ಸೊರಬ: ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಅವರ ಒಡನಾಡಿಯಾಗಿದ್ದ ತಾಲ್ಲೂಕಿನ ಚಿಕ್ಕಮಾಕೊಪ್ಪ ಗ್ರಾಮದ ನಿವಾಸಿ, ತಾಪಂ ಮಾಜಿ ಅಧ್ಯಕ್ಷ ಫಕ್ಕೀರಪ್ಪ ಮಾಕೊಪ್ಪ (72) ಗುರುವಾರ ಬೆಳಗಿನ ಜಾವ ನಿಧನರಾದರು.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವಿದೆ.
ಗ್ರಾಮೀಣ ಪ್ರದೇಶವಾದ ಚಂದ್ರಗುತ್ತಿಯಲ್ಲಿ ಶ್ರೀ ರೇಣುಕಾಂಬ ಪ್ರೌಢ ಶಾಲೆಯ ಸ್ಥಾಪನೆಗೆ ಕಾರಣೀಕರ್ತರಾಗಿದ್ದ ಅವರು, ಸಂಸ್ಥಾಪಕ ಅಧ್ಯಕ್ಷರಾಗಿ ಹಾಗೂ ಹಾಲಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಚಂದ್ರಗುತ್ತಿಯ ಮಂಡಲ ಪ್ರಧಾನರಾಗಿದ್ದ ಅವರು, ಗೇಣಿದಾರರ ಪರವಾದ ಹೋರಾಟ, ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ನಿರಂತರ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಹಲವು ಭೂ ರಹಿತರಿಗೆ ಭೂಮಿ ಕೊಡಿಸುವಲ್ಲಿಯೂ ಅವಿರತವಾಗಿ ಶ್ರಮಿಸಿದ್ದರು.
ಸಂತಾಪ:
ಹಿರಿಯ ಮುತ್ಸದ್ಧಿ ಫಕ್ಕಿರಪ್ಪ ಮಾಕೊಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಶಾಸಕ ಎಸ್. ಕುಮಾರ್ ಬಂಗಾರಪ್ಪ, ಮಾಜಿ ಶಾಸಕ ಮಧು ಬಂಗಾರಪ್ಪ, ಸಾಗರ ಶಾಸಕ ಎಚ್. ಹಾಲಪ್ಪ, ಮುಖಂಡರಾದ ಜೆ. ಶಿವಾನಂದಪ್ಪ, ತಬಲಿ ಬಂಗಾರಪ್ಪ, ಹಿರಿಯಣ್ಣ ಕಲ್ಲಂಬಿ, ಶ್ರೀಧರ ಹುಲ್ತಿಕೊಪ್ಪ, ಆರ್.ಸಿ. ಪಾಟೀಲ್, ಅಣ್ಣಪ್ಪ ಹಾಲಘಟ್ಟ, ಗಣಪತಿ ಹುಲ್ತಿಕೊಪ್ಪ, ಕೆ.ಪಿ. ರುದ್ರಗೌಡ, ಕೆ. ಮಂಜುನಾಥ ಹಳೇಸೊರಬ, ಯೂಸೂಫ್ ಸಾಬ್ ಅಂಕರವಳ್ಳಿ ಸೇರಿದಂತೆ ವಿವಿಧ ಪಕ್ಷದ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post