ಕಲ್ಪ ಮೀಡಿಯಾ ಹೌಸ್ | ಸೊರಬ |
ಹಿರಿಯರಿಂದ ಪಾರಂಪರಿಕವಾಗಿ ಬೆಳೆದು ಬಂದ ನಮ್ಮ ಮೂಲ ಸಂಸ್ಕೃತಿ ಹಾಗೂ ಕೌಟುಂಬಿಕ ಸಾಮರಸ್ಯ ಮತ್ತು ಕುಟುಂಬದ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃಧ್ಧಿ ಸಂಘದ ಜಿಲ್ಲಾ ನಿರ್ದೇಶಕ ದಿನೇಶ್.ಎಂ. ಹೇಳಿದರು.
ತಾಲ್ಲೂಕಿನ ದೂಗೂರು ಗ್ರಾ.ಪಂ. ವ್ಯಾಪ್ತಿ ಬರಿಗೆ ಗ್ರಾಮದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ತಾಲ್ಲೂಕು ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಕ್ಕೆ ಕಟ್ಟಡ ಹಸ್ತಾಂತರಿಸಿ ಮಾತನಾಡಿದರು.
ಪ್ರಸ್ತುತ ವೃದ್ದಾಶ್ರಮದ ಸಂಖ್ಯೆ ಹೆಚ್ಚಾಗುತ್ತಿರುವುದು ಸಮಾಜದ ಅಸ್ತಿರತೆಯ ಸೂಚ್ಯ, ಸಾಮಾಜಿಕ ಅಭದ್ರತೆಯಿಂದ ಪರಸ್ಪರ ಸಂಬಂಧಗಳು ಕೂಡ ಕ್ಷೀಣಿಸುತ್ತವೆ ಎಂಬುದನ್ನು ಅರಿತು ನಮ್ಮನ್ನು ಸಾಕಿ ಸಲಹಿದ ಹಿರಿಯರನ್ನ ಗೌರವಿಸಿ ವೃದ್ಧಾಪ್ಯದ ಅವಧಿಯಲ್ಲಿ ಅವರನ್ನು ಪೋಷಿಸುವ ಕರ್ತವ್ಯ ಕೂಡ ನಮ್ಮದಾಗಿರುತ್ತದೆ ಎಂದರು.
ಈ ವೇಳೆ ಬರಿಗೆಯ ಕನ್ನಮ್ಮ ಕೋಂ. ಕೆರಿಯಪ್ಪ, ಮೈಸಾವಿ ಇವರಿಗೆ ಸಂಘದಿಂದ ಮಹಿಳಾ ಜ್ಞಾನ ವಿಕಾಸ ಯೋಜನೆಯಡಿ ನೂತನವಾಗಿ ಕಟ್ಟಿಸಿದ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ತಾಲ್ಲೂಕು ಸದಸ್ಯ ದಿನಕರ ಬಾವೆ ಮಾತನಾಡಿ, ವಾತ್ಸಲ್ಯ ಯೋಜನೆ ಒಂದು ಅತ್ಯುತ್ತಮವಾದ ಕಾರ್ಯಕ್ರಮ. ಬಡ ಕುಟುಂಬದವರು ಇದರ ಪ್ರಯೋಜನ ಪಡೆದು ಸದೃಢರಾಗಬೇಕು ಎಂದರು.
ಗ್ರಾ.ಪಂ.ನ ಮಾಜಿ ಅಧ್ಯಕ್ಷ ಭಾಸ್ಕರ.ಕೆ. ಬರಿಗೆ, ದೂಗೂರು ಗ್ರಾ.ಪಂ.ನ ಸದಸ್ಯ ಎಂ.ಬಿ.ಪುಟ್ಟಪ್ಪ ಮಾತನಾಡಿದರು. ಸ್ಥಳಿಯ ಗ್ರಾಮಾಭಿವೃಧ್ಧಿ ಸಮಿತಿ ಅಧ್ಯಕ್ಷ ಕೆ. ಶೇಷಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಜಯಂತಿ, ಬಿ.ಎನ್.ಸಿ.ರಾವ್ ಬರಿಗೆ, ತಾಲ್ಲೂಕು ಒಕ್ಕೂಟದ ಅಧ್ಯಕ್ಷ ಸಾದಿಕ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಪ್ರಭಾವತಿ, ಮೆಲ್ವಿಚಾರಕಿ ಶೋಭಾ, ಸಂಘದ ಮಹಿಳಾ ಸದಸ್ಯರು, ಪದಾಧಿಕಾರಿಗಳು, ಗ್ರಾಮಸ್ಥರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















