ಪಟ್ಟಭದ್ರ ಹಿತಾಸಕ್ತಿಗಳು ಆರೋಪಿಸಿದಂತೆ ಪೇಜಾವರ ಶ್ರೀಗಳು ಅಂತಹ ಕೃತ್ಯವನ್ನೇ ಮಾಡಿದ್ದರೆ ತಮ್ಮ ಈ ಇಳಿ ವಯಸ್ಸಿನಲ್ಲಿಯೂ ಸಹ ಅವರು ಇಂತಹ ಸ್ಥಾನದಲ್ಲಿ ಕುಳಿತಿರಲು ಸಾಧ್ಯವಿತ್ತೇ?
ಹೌದು… ಅವರು ವಾಮನ ರೂಪಿ, ತ್ರಿವಿಕ್ರಮ ಶಕ್ತಿ… ಇಡಿಯ ದೇಶದ ಕಂಡ ಹಾಗೂ ಕಾಣುತ್ತಿರುವ ಕೆಲವೇ ಕೆಲವು ಶ್ರೇಷ್ಠ ಹಾಗೂ ನಿಷ್ಠಾವಂತ ಸಂತರಲ್ಲಿ ಅಗ್ರಗಣ್ಯರು ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದಂಗಳವರು.
ಎಂಟನೆಯ ವಯಸ್ಸಿಗೆ ಸನ್ಯಾಸತ್ವ ಸ್ವೀಕರಿಸಿ, ಅಂದಿನಿಂದ ಇಂದಿನವರೆಗೂ ಇಡಿಯ ಸನ್ಯಾಸ ಧರ್ಮವೇ ಮೇಳೈಸುವಂತೆ ಶ್ರೀಕೃಷ್ಣನ ಸೇವಿಸುತ್ತಾ, ಸಮಾಜೋದ್ದಾರ ಮಾಡುತ್ತಾ, ನಿಜವಾದ ಸನ್ಯಾಸಿ ಎಂದರೆ ಹೀಗಿರಬೇಕು ಎಂಬ ರೀತಿಯಲ್ಲಿರುವ ಮಹಾನ್ ಸಂತ ಪೇಜಾವರಶ್ರೀಗಳು.
ಇದನ್ನು ಬರೆಯಲು ಕಾರಣವಿದೆ.
ಇತ್ತೀಚೆಗೆ ಬೃಂದಾವಸ್ಥರಾದ ಶೀರೂರು ಸ್ವಾಮಿಗಳು ಹಿಂದೆ ಹೇಳಿಕೆ ನೀಡಿ, ಎಲ್ಲ ಸ್ವಾಮಿಗಳಿಗೂ ಸಂಸಾರವಿದೆ, ಹೆಂಡತಿ ಮಕ್ಕಳಿದ್ದಾರೆ ಎಂದಿದ್ದರು. ಅಲ್ಲದೇ ಪೇಜಾವರ ಶ್ರೀಗಳಿಗೆ ಮಗಳಿದ್ದಾಳೆ. ಆಕೆ ಚೆನ್ನೈನಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದಾಳೆ ಎಂದೆಲ್ಲಾ ಆರೋಪ ಮಾಡಿದ್ದರು.. ಇದಕ್ಕೆ ಸ್ವಾಮಿಗಳು ಪತ್ರಿಕಾಗೋಷ್ಠಿ ನಡೆಸಿ, ನನಗೆ ಮಗಳಿರುವುದು ಸಾಬೀತಾದರೆ ಪೀಠತ್ಯಾಗ ಮಾಡುತ್ತೇನೆ ಎಂದು ಬಹಿರಂಗ ಸವಾಲು ಹಾಕಿದ್ದರು.
ವಾಸ್ತವವಾಗಿ ನೋಡುವುದಾರೆ ನನ್ನ ಅಭಿಪ್ರಾಯದ ಪ್ರಕಾರ ಶ್ರೀಗಳಿಗೆ ಮಗಳಿಲ್ಲವೆಂದ ಮೇಲೆ ಅವರು ಪೀಠತ್ಯಾಗ ಮಾಡುವ ವಿಚಾರವೇ ಅಪ್ರಸ್ತುತ. ಆದರೆ, ತಮ್ಮ ಮೇಲಿನ ಇಂತಹ ಆರೋಪಕ್ಕೆ ಅವರ ಪ್ರತಿಕ್ರಿಯೆಯೂ ಸಹ ಸಾಂದರ್ಭಿಕವೇ ಆಗಿದೆ.
ಇನ್ನು, ಪೇಜಾವರ ಶ್ರೀಗಳ ಮೇಲಿನ ಆರೋಪ.. ಆರೋಪ ಮಾಡಿದವರು ಯಾರು ಎಂಬ ವಿಚಾರ ನೋಡಬೇಕು.
ಜಗದ್ಗುರು ಮಧ್ವಾಚಾರ್ಯರ ಅಂಶದಂತೇ ಇರುವ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಪೀಠದಲ್ಲಿದ್ದು, ಇತ್ತೀಚೆಗೆ ಇಹಲೋಕ ತ್ಯಜಿಸಿದ ಲಕ್ಷ್ಮೀವರ ಶ್ರೀಗಳು.
ತೀರಾ ನೋಡುವುದಾದರೆ, ಯತಿಗಳು ವೃಂದಾವನಸ್ಥರಾದ ವೇಳೆ, ಅವರ ವೃಂದಾವನ ನಿರ್ಮಾಣ, ಧಾರ್ಮಿಕ ಕೈಂಕರ್ಯಗಳು ಇಂತಹುದಕ್ಕೇ ಆದ್ಯತೆ ಹಾಗೂ ವಾತಾವರಣ. ಆದರೆ, ಶೀರೂರು ಸ್ವಾಮಿಗಳ ವಿಚಾರದಲ್ಲಿ ಅವರದ್ದು ವೃಂದಾವನ ಪ್ರವೇಶ ಎನಿಸಿಕೊಳ್ಳದೇ ಅನುಮಾನಸ್ಪದ ಸಾವು ಎನಿಸಿಕೊಂಡಿದ್ದೇ ಸಾಕು ಎಲ್ಲವನ್ನೂ ತಿಳಿಯಲು…
ಯತಿ ಸ್ಥಾನಕ್ಕೆ ಪೂರ್ಣ ನ್ಯಾಯವೊದಗಿಸದ ಆರೋಪ ಹೊತ್ತಿದ್ದ, ಸ್ತ್ರೀಯರ ಸಹವಾಸ, ಕುಡಿತ, ವಿಪರೀತ ಹಣಕಾಸಿನ ವ್ಯವಹಾರಗಳು ಸೇರಿದಂತೆ ಹಲವಾರು ಆರೋಪಗಳನ್ನು ಹೊತ್ತಿದ್ದ ಶೀರೂರು ಶ್ರೀಗಳು ಪೇಜಾವರ ಶ್ರೀಗಳ ವಿರುದ್ಧ ಮಾಡಿದ್ದ ಆರೋಪ.. ತಮ್ಮ ವಿರುದ್ದವೇ ಇಂತಹ ನೀಚ ಆರೋಪಗಳನ್ನು ಹೊತ್ತಿದ್ದವರು, ಮತ್ತೊಬ್ಬರ ವಿರುದ್ಧ ಮಾಡಿದ್ದ ಆರೋಪಗಳಿಗೆ ಬೆಲೆ ನೀಡಬೇಕೆ ಎಂಬುದೂ ಸಹ ಪ್ರಶ್ನೆ.
ಇನ್ನು, ಖಾಸಗಿ ಟಿವಿ ವಾಹಿನಿಯೊಂದು ವರದಿ ಪ್ರಕಟಿಸಿದ್ದು, ಅಷ್ಟಮಠಗಳ ಸ್ವಾಮಿಗಳ ಇಂಚಿಂಚೂ ಮಾಹಿತಿ ನೀಡುತ್ತೇವೆ, ಒಂದನೆಯ ಸ್ವಾಮೀಜಿಗೆ ನಾರಿ ಸಹವಾಸ, ಅಷ್ಟ ಮಠಗಳ ಲೀಲೆ ಬಯಲು ಎಂದೆಲ್ಲಾ ವಾಂತಿ ಮಾಡಿಕೊಂಡಿದೆ.
ಅಲ್ಲದೇ, ಪ್ರಥಮ ಏಕಾದಶಿಯಂದು ಹರಿ ನಿರ್ಮಾಲ್ಯವನ್ನು ತಮ್ಮ ತಲೆಯ ಮೇಲಿಟ್ಟುಕೊಂಡು ಹೊತ್ತುಕೊಂಡು ಸಲ್ಲಿಸಿದ ಪೇಜಾವರ ಶ್ರೀಗಳ ಈ ಕಾರ್ಯವನ್ನು ಇದೇ ಖಾಸಗೀ ಚಾನೆಲ್ ಶೀರೂರು ಸ್ವಾಮಿಗಳ ಸಾವಿನ ಹಿನ್ನೆಲೆಯಲ್ಲಿ ನಡೆಸಿದ ವಿಶೇಷ ಪೂಜೆ ಎಂದು ಬೊಗಳಿತು.
ಅಲ್ಲರೀ, ಸ್ವಾಮಿ ವರದಿ ಪ್ರಕಟಿಸುವ ಮುನ್ನ ಕೂಲಂಕಶವಾಗಿ ತಿಳಿದುಕೊಳ್ಳಬೇಕು, ಪೂರ್ವಾಪರ ಅರಿಯಬೇಕು ಎಂಬ ಕನಿಷ್ಠ ಪರಿಜ್ಞಾನ ಬೇಡವೇ? ನೀವೇನು ನಿಜಕ್ಕೂ ನೀವು ಪತ್ರಿಕೋದ್ಯಮ ನಡೆಸುತ್ತೀರೋ ಅಥವಾ ದಂಧೆ ನಡೆಸುತ್ತೀರೋ?
ಇನ್ನು, ಪೇಜಾವರ ಶ್ರೀಗಳು ವಿಚಾರದಲ್ಲಿ ನೋಡಿ:
ಏಳನೆಯ ವಯಸ್ಸಿನಲ್ಲೇ ಬ್ರಹ್ಮೋಪದೇಶ ಪಡೆದುಕೊಂಡ ವೆಂಕಟರಾಮು, 1938ರ ಡಿಸೆಂಬರ್ 3ರಂದು ಅಂದರೆ ತನ್ನ 8ನೆಯ ವಯಸ್ಸಿನಲ್ಲೇ ಸನ್ಯಾಸ ಸ್ವೀಕಾರ ಮಾಡಿ ವಿಶ್ವೇಶ ತೀರ್ಥ ಶ್ರೀಪಾದರಾದರು.
ಅಲ್ಲಿಂದ ಆರಂಭವಾದ ಶ್ರೀಗಳ ಕೃಷ್ಣ ಸೇವೆ ಹಾಗೂ ಸಮಾಜ ಸೇವೆ ಇಂದಿಗೂ ತಮ್ಮ 88ನೆಯ ವಯಸ್ಸಿನಲ್ಲಿಯೂ ಸಹ ಅವಿರತವಾಗಿ ಸಾಗುತ್ತಲೇ ಬಂದಿದೆ.
ಇಡಿಯ ದೇಶ ಮಾತ್ರವಲ್ಲ, ವಿಶ್ವದಲ್ಲೇ ಖ್ಯಾತರಾದ ಶ್ರೀಗಳು ತಮ್ಮ ಅವಧಿಯಲ್ಲಿ ಕೈಗೊಳ್ಳುತ್ತಾ ಬಂದಿರುವ ಕಾರ್ಯಗಳ ಕುರಿತಾಗಿ ಬರೆಯುವುದಾದರೆ ಪದಗಳು ಸಾಲುವುದಿಲ್ಲ.. ತೀರಾ ಸಾಮಾನ್ಯವಾಗಿ ಯೋಚಿಸುವುದಾದರೆ ಯಾವುದೇ ಓರ್ವ ವ್ಯಕ್ತಿ ಒಂದು ಕಡೆ ಅನ್ಯಾಯ ಮಾಡಿಕೊಂಡು, ತನ್ನ ಧರ್ಮಕ್ಕೆ, ಕರ್ತವ್ಯಕ್ಕೆ ದ್ರೋಹ ಎಸಗಿದರೆ, ಆ ಜಾಗದಲ್ಲಿ ಬಹಳಕಾಲ ಉಳಿಯಲು ಸಾಧ್ಯವೇ ಇಲ್ಲ. ಇದು ಪ್ರಕೃತಿ ಧರ್ಮ.
ಆದರೆ, ಪೇಜಾವರ ಶ್ರೀಗಳ ವಿಚಾರದಲ್ಲಿ ನೋಡಿ.. ಪಟ್ಟಭದ್ರ ಹಿತಾಸಕ್ತಿಗಳು ಆರೋಪಿಸಿದಂತೆ ಶ್ರೀಗಳು ಅಂತಹ ಕೃತ್ಯವನ್ನೇ ಮಾಡಿದ್ದರೆ ತಮ್ಮ ಈ ಇಳಿ ವಯಸ್ಸಿನಲ್ಲಿಯೂ ಸಹ ಅವರು ಇಂತಹ ಸ್ಥಾನದಲ್ಲಿ ಕುಳಿತಿರಲು ಸಾಧ್ಯವಿತ್ತೇ?
ಸೈದ್ದಾಂತಿಕ ವಿರೋಧದ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳನ್ನು ತೆಗಳಿದವರು ಹೆಚ್ಚಾಗಿದ್ದಾರೆ ಎನ್ನುವುದನ್ನು ಹೊರತುಪಡಿಸಿದರೆ, ತಮ್ಮ ಸನ್ಯಾಸಾಶ್ರಮಕ್ಕೆ ಎಂದಿಗೂ ಕಳಂಕ ಬಾರದಂತೆ ಸೇವೆ ಸಲ್ಲಿಸುತ್ತಾ ಬಂದವರು ಶ್ರೀಗಳು. ಎಂತಹ ಸಂದರ್ಭದಲ್ಲೂ ಸಹ ಶ್ರೀಗಳು ತಮ್ಮ ಪೂಜಾ ಕೈಂಕರ್ಯಗಳನ್ನು ಬಿಟ್ಟವರಲ್ಲ.
ತಮ್ಮ ಐದನೆಯ ಪರ್ಯಾಯ ಸಂಪನ್ನಗೊಳಿಸಿ ದಣಿದಿದ್ದ ಶ್ರೀಗಳು ವಿಶ್ರಾಂತಿಗೆ ಮೊರೆ ಹೋಗದೇ ಸೋಂದಾಗೆ ತೆರಳಿ ತಮ್ಮ ಗುರುಗಳಿಗೆ ಸೇವೆಯನ್ನು ಅರ್ಪಣೆ ಮಾಡಿ, ಅಲ್ಲಿಂದ ಮಂತ್ರಾಲಯಕ್ಕೆ ತೆರಳಿ ಗುರು ರಾಯರ ಸೇವೆ ಮಾಡಿದವರು. ಈ ವೇಳೆ ಕಾರು ಸಣ್ಣ ಅಪಘಾತಕ್ಕೀಡಾಗಿ ಶ್ರೀಗಳ ಬೆನ್ನು ಹಾಗೂ ಸೊಂಟಕ್ಕೆ ಪೆಟ್ಟಾದರೂ ಸಹ ತಮ್ಮೆಲ್ಲಾ ಕರ್ತವ್ಯವನ್ನು ಪಾಲಿಸಿಕೊಂಡು ಬಂದವರು.
ಇಷ್ಟು ಮಾತ್ರವಲ್ಲ ಈ ಇಳಿವಯಸ್ಸಿನಲ್ಲಿ ಹರಿದ್ವಾರ ಸೇರಿದಂತೆ ಉತ್ತರದ ಪ್ರಮುಖ ತೀರ್ಥ ಕ್ಷೇತ್ರಗಳಿಗೆ ತೆರಳಿ ಪೂಜೆ ಸಲ್ಲಿಸಿ ಬಂದ ಪುಣ್ಯಾತ್ಮರು ಇವರು.
ಇಂತಹ ಶ್ರೀಗಳ ವಿಚಾರದಲ್ಲಿ ಇಲ್ಲ ಸಲ್ಲದ ಮಾತಗಳನ್ನು ಆಡುವುದು, ಸುಳ್ಳು ವರದಿ ಪ್ರಕಟಿಸುವುದು ಮಾಡಿದರೆ ನಿಜಕ್ಕೂ ಹೇಳುತ್ತೇನೆ ಅವರ ನಾಲಿಗೆಯಲ್ಲಿ ಹುಳ ಬಿದ್ದು ಸಾಯುತ್ತಾರೆ.
ನೀವು ಕೇವಲ ಪತ್ರವೊಂದರ ಆಧಾರದಲ್ಲಿ ಇಷ್ಟು ತುರಾತುರಿಯಲ್ಲಿ ಅಪಪ್ರಚಾರದಲ್ಲಿ ತೊಡಗಿರುವುದನ್ನು ನೋಡಿದರೆ ವೀಕ್ಷಕರು ನಿಮ್ಮ ಮೇಲೆ ಸಂಶಯದಿಂದ ನೋಡಬಾರದೇಕೆ?
ಅಂತಿಮವಾಗಿ ನೀವೆಷ್ಟೇ ಹೇಳಿದರೂ ಪೇಜಾವರ ಶ್ರೀಗಳ ಭಕ್ತರು ಹಾಗೂ ಅಷ್ಟ ಮಠಗಳ ಪೈಕಿ ಸನ್ಯಾಸ ಧರ್ಮವನ್ನು ಎತ್ತಿ ಹಿಡಿಯುತ್ತಿರುವ ಎಲ್ಲ ಶ್ರೀಗಳ ಜೊತೆಯಲ್ಲಿ ಅವರ ಭಕ್ತವರ್ಗವಿದೆ. ನೀವೇಷ್ಟೇ ಪ್ರಯತ್ನ ಮಾಡಿದರೂ ಅವರ ಭಾವನೆಗಳನ್ನು ಒಂದಿಂಚೂ ಸಹ ಅಲುಗಾಡಿಸಲು ಸಾಧ್ಯವಿಲ್ಲ..
-ಎಸ್.ಆರ್. ಅನಿರುದ್ಧ ವಸಿಷ್ಠ
Discussion about this post