ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಭಕ್ತಾನಾಂ ಮಾನಸಾಂಭೋಜ ಭಾನವೇ ಕಾಮಧೇನವೇ ನಮತಾಂ ಕಲ್ಪತರುವೆ ವಿಜಯೀಂದ್ರ ಗುರುವೇ ನಮಃ
ಶ್ರೀ ವಿಜಯೀಂದ್ರ ಶ್ರೀಪಾದಂಗಳವರು Shri Vijayeendra Thirtharu ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದು ಪ್ರಸಿದ್ಧರಾದವರು. ಮಾತ್ರವಲ್ಲ 64 ವಿದ್ಯೆಗಳಲ್ಲಿ ಮಹಾ ಮೇಧಾವಿಯಾಗಿದ್ದ ಗುರುಗಳು ಇವರು ಮಧ್ವ ಸಿದ್ಧಾಂತದ ಪ್ರಮುಖ ಪ್ರಚಾರಕರಲ್ಲಿ ಅಗ್ರಗಣ್ಯರೂ ಹೌದು…
1575-1614ರ ಕಾಲಘಟ್ಟದಲ್ಲಿ ಅವತರಿಸಿದ ಇವರ ಪೂರ್ವನಾಮ ವಿಷ್ಣುತೀರ್ಥ. ಶ್ರೀ ವ್ಯಾಸರಾಜರಲ್ಲಿ ಅಭ್ಯಾಸ ಮಾಡಿ ಮಹಾ ಪಾಂಡಿತ್ಯವನ್ನು ಇವರು ಗಳಿಸಿದ್ದರು. 9 ಸಲ ಶ್ರೀ ವ್ಯಾಸರಾಜ ಸ್ವಾಮಿಗಳಲ್ಲಿ ಶ್ರೀಮನ್ಯಾಯಸುಧಾವನ್ನು ಅಧ್ಯಯನ ಮಾಡಿ ಅದರ ಮರ್ಮವನ್ನು ತಿಳಿಯಬೇಕೆಂದು ಅದಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಣೆ ಮಾಡಿದವರು.
ಮುಂದೆ ಇವರಿಗೆ ಭಾಗವತಾಗ್ರಣಿಯಾದ ಮಂತ್ರಾಲಯ ಪೀಠಸ್ಥರಾಗಿದ್ದ ಶ್ರೀ ಸುರೇಂದ್ರ ಶ್ರೀಪಾದಂಗಳವರು ವಿಜಯೀಂದ್ರ ತೀರ್ಥ ಎಂದು ಆಶ್ರಮ ನಾಮಕರಣ ಮಾಡಿ ತಮ್ಮ ಉತ್ತರಾಧಿಕಾರಿಯನ್ನಾಗಿ ಅನುಗ್ರಹಿಸಿದ್ದರು. ಪೀಠವನ್ನು ಅವರಿಗೆ ವಹಿಸಿಕೊಟ್ಟರು. ಈಗ ವಿಜಯೀಂದ್ರ ಸ್ವಾಮಿಗಳ ಸಿದ್ದಿ ಹೇಗಿತ್ತು ಅವರ ಕಲಾ ಕೌಶಲ್ಯ ಹೇಗಿತ್ತೆಂದು ತಿಳಿಯೋಣ…
ಒಮ್ಮೆ ವಿಜಯೀಂದ್ರ ಸ್ವಾಮಿಗಳು ಕುಂಭಕೋಣಕ್ಕೆ ದಿಗ್ವಿಜಯಕ್ಕಾಗಿ ಬಂದಾಗ ಗುರುಗಳು ಹೇಳಿದ ಮಾತು ಹೀಗಿದೆ… ಯಾವ ಆಧಾರವೂ ಇಲ್ಲದೆ ಭಗವಂತನಿದ್ದಾನೆ ಎಂದು ಧೈರ್ಯದಿಂದ ಹೇಳಿ ಬ್ರಹ್ಮವಿದ್ಯೆಯ ಮುಂದೆ ಮಾಂತ್ರಿಕ ವಿದ್ಯೆಯು ಕ್ಷುಲ್ಲಕವೆಂದು ತಿಳಿಸಿ ತಮಗೆ ಸ್ಪರ್ಧಿಗಳಾಗಿ ಬಂದಂತ ಅವರೊಡನೆ ಸ್ಪರ್ಧೆಗೆ ನಿಂತು ಗೆಲುವನ್ನು ಸಾಧಿಸಿದರು.
ಇವರು ಕುಂಭಕೋಣದಲ್ಲಿ ಇರುವಾಗ ಮತ್ತೊಂದು ಸ್ಪರ್ಧೆ ನಡೆಯಿತು. ಅಲ್ಲಿಯ ವಾಸಿಯಾದ ಒಬ್ಬ ವ್ಯಕ್ತಿಯು ನನ್ನನ್ನು ಎದುರಿಸುವವರು ಯಾರೂ ಇಲ್ಲವೆಂದು ಪೂರ್ಣ ನಂಬಿಕೆಯನ್ನು ಇಟ್ಟುಕೊಂಡಿದ್ದನು. ಇಡೀ ದಕ್ಷಿಣ ಭಾರತವನ್ನು ಸೋಲಿಸುವವರು ಯಾರೂ ಇರಲಿಲ್ಲ. ಆ ಊರಿನ ಶ್ರೀರಂಗಪಾಣಿ ದೇವಸ್ಥಾನ ಇವನ ಅಧೀನದಲ್ಲಿತ್ತು. ಇವನು ವಿಜಯೀದ್ರರ ಬಳಿಗೆ ಬಂದು ಅವರನ್ನು ಸ್ಪರ್ಧೆಗೆ ಕರೆದು ಕರಾರು ಹಾಕುತ್ತಾನೆ. ಸ್ಪರ್ಧೆಯಲ್ಲಿ ನೀವು ಸೋತರೆ, ನಮಗೆ ನೀವು ದಾಸರಾಗಿ ನಮ್ಮ ಮಠವನ್ನು ಸೇರಬೇಕು. ಇಲ್ಲವೇ ನಾನು ಸೋತರೆ ಇಲ್ಲಿಯ ದೇವಸ್ಥಾನವನ್ನು ನಿಮಗೆ ಕೊಟ್ಟು ಅಧಿಪತಿಯನ್ನಾಗಿ ಮಾಡುತ್ತೇನೆ. ಅಷ್ಟಲ್ಲದೆ ನನ್ನದೊಂದು ಮಠ ಇದೆ. ಅದನ್ನು ನಿಮಗೆ ಬಿಟ್ಟುಕೊಡುತ್ತೇನೆ ಎಂದು ಹೇಳುತ್ತಾನೆ. ಅದರಂತೆ ವಿಜಯೀಂದ್ರ ತೀರ್ಥರು ಅವನ ಮಾತಿನಂತೆ ಸ್ಪರ್ಧೆಗೆ ನಿಂತರು. ಗುರುಗಳಿಂದ ಸಿದ್ಧಿ ಪಡೆದಿದ್ದ ವಿಜಯೀಂದ್ರರು ಅವನನ್ನು ವಾದದಲ್ಲಿ ಸೋಲಿಸಿ ಅವನ ಮಾತಿನಂತೆ ಅವನ ಮಠವನ್ನು ಪಡೆದರು. ಅದೇ ಮಠವೇ ಇಂದು ಕುಂಭಕೋಣದಲ್ಲಿ ಇರುವಂತಹ ವಿಜಯೀಂದ್ರ ಮಠ.
ಹೀಗೆ ಗುರುಗಳು ಸಿದ್ಧಾಂತದ ಬಗ್ಗೆ ವಾದ ಮಾಡಿ ಸ್ಪರ್ಧಿಗಳನ್ನು ಸೋಲಿಸಿದರೆ, ಇನ್ನು ಹಲವು ಕಲೆಗಳ ಮೂಲಕವೂ ಗೆಲುವನ್ನು ಪಡೆದ ಇವರು, ಒಂದು ಸಾರಿ ಕುಂಭೇಶ್ವರ ದೇವಸ್ಥಾನದಲ್ಲಿ ಒಂದು ಘೋಷಣೆಯನ್ನು ಹೊರಡಿಸಿದರು. ಯಾರಿಗೆ ಯಾವ ಕಲೆಯಲ್ಲಿ ಅಭಿರುಚಿ ಇರುವುದು ಅವರೆಲ್ಲರೂ ನಮ್ಮಲ್ಲಿ ಸ್ಪರ್ಧಿಸಲು ಬನ್ನಿ. ನಮ್ಮ ಗುರುಗಳ ಅನುಗ್ರಹದಿಂದ ನಾನು ನಿಮ್ಮನ್ನು ಪರಾಭವಗೊಳಿಸುತ್ತೇನೆ ಎಂದು ತಮ್ಮ ಗುರುಗಳ ಮೇಲೆ ವಿಶ್ವಾಸವನ್ನಿಟ್ಟು ಹೇಳಿದರು. ಇದು ದೇಶದಲ್ಲಿ ಪ್ರಚಾರವಾಯಿತು. ಎಲ್ಲೆಡೆಯಿಂದಲೂ ಒಬ್ಬೊಬ್ಬರೇ ಆಗಮಿಸಲು ಪ್ರಾರಂಭ ಮಾಡಿದರು. ಅದರಲ್ಲಿ ಒಬ್ಬ ದೊಂಬರಾಟವನ್ನು ಗುರುಗಳ ಬಳಿ ಬಂದು ತಾನು ಸ್ಪರ್ಧಿಸುತ್ತೇನೆ ಎಂದು ಹೇಳಿ ಎರಡು ಕೋಲುಗಳನ್ನು ಎರಡಕ್ಕೂ ಹಗ್ಗ ಕಟ್ಟಿ ಅದರ ಮೇಲೆ ನಡೆದ. ಆಗ ವಿಜಯೀಂದ್ರ ಸ್ವಾಮಿಗಳು ಏನಪ್ಪಾ ಇಂತಹ ದೊಡ್ಡ ಹಗ್ಗದ ಮೇಲೆ ನಡೆದೆ, ಸ್ವಲ್ಪ ನೋಡು ನಾನು ತೋರಿಸುತ್ತೇನೆ ಎಂದು ಶ್ರೀರಂಗ ಪಾಣಿ ದೇವಸ್ಥಾನ ಹಾಗೂ ಕುಂಬೇಶ್ವರ ದೇವಸ್ಥಾನಕ್ಕೆ ಬಂದು ಸಪೂರವಾಗಿರುವ ಬಾಳೆ ನಾರನ್ನು ಕಟ್ಟಿ ಆ ದೇವಸ್ಥಾನದಿಂದ ಈ ದೇವಸ್ಥಾನದವರೆಗೂ ಅದರ ಮೇಲೆ ನಡೆದು ಬಂದರು. ಆಗ ದೊಂಬರಾಟದವನು ಆಶ್ಚರ್ಯ ಭರಿತನಾಗಿ ಗುರುಗಳಿಗೆ ವಂದಿಸಿ ಶರಣಾಗತನಾದನು.
Also read: ಸೊರಬ: ಜೂ.30ರಂದು ಬಸ್ತಿಕೊಪ್ಪದಲ್ಲಿ ಗ್ರಾಮಾಭಿವೃದ್ಧಿ ಶಿಬಿರ
ಇದೇ ರೀತಿ ಬಟ್ಟೆಯನ್ನು ನೈಗೆ ಮಾಡುವ ಒಬ್ಬ ವ್ಯಕ್ತಿಯು ಇವರ ಮುಂದೆ ಬಂದು, ಸ್ವಾಮಿ ನಾನು ಕ್ಷಣದಲ್ಲಿ ಒಳ್ಳೆಯ ಪೀತಾಂಬರವನ್ನು ನೈದು ಕೊಡುವೆ. ನೀವು ಮಾಡಬಲ್ಲಿರಾ? ಎಂದು ಹೇಳಿ ಉತ್ತಮವಾದ ಪೀತಾಂಬರವನ್ನು ಮಾಡಿಕೊಡುತ್ತಾನೆ. ಅವನು ಮಾಡಿದ ಕ್ಷಣದಲ್ಲಿ ವಿಜಯೇಂದ್ರ ಸ್ವಾಮಿಗಳು ತಾವು ಒಂದು ವಸ್ತುವನ್ನು ತಯಾರು ಮಾಡಿಕೊಡುತ್ತಾರೆ. ಯಾವ ರೀತಿ ಇತ್ತು ಎಂದರೆ ನರಸಿಂಹದೇವರು ಪ್ರಹ್ಲಾದ ರಾಜರನ್ನು ಅನುಗ್ರಹ ಮಾಡುವಂತೆ, ಹಿರಣ್ಯಕಶಿಪುವನ್ನು ಸಂಹಾರ ಮಾಡುವಂತೆ, ಉತ್ತಮವಾದ ನರಸಿಂಹದೇವರ ಚಿತ್ರದಿಂದ ಕೂಡಿದ ರೇಷ್ಮೆ ಪೀತಾಂಬರ ಅವನ ವಸ್ತುವಿನಿಂದಲೇ ತಯಾರು ಮಾಡಿಕೊಡುತ್ತಾರೆ. ನೇಕಾರ ಇವರ ಕಲೆಗೆ ಮೆಚ್ಚಿ ಆಶ್ಚರ್ಯಚಕಿತನಾಗಿ ನಮಸ್ಕರಿಸಿ ಕೊಂಡಾಡಿದ.
ಹೀಗೆ ಶಿಲ್ಪಕಲೆಯಲ್ಲಿ, ಸಂಗೀತ ಕಲೆಯಲ್ಲಿ ಇನ್ನೂ ಮುಂತಾದ ಕಲೆಗಳಲ್ಲಿ ಅತ್ಯದ್ಭುತವಾದ ನೈಪುಣ್ಯತೆಯನ್ನು ತೋರಿದವರು ಶ್ರೀ ವಿಜಯೀಂದ್ರ ಶ್ರೀಪಾದಂಗಳವರು. ಇವರು ತಮ್ಮ ಶಕ್ತಿಯನ್ನು ತೋರಿಸಲೆಂದು ಮಾಡಿದ ಪವಾಡವಲ್ಲ ದೇವರಲ್ಲಿ, ಗುರುಗಳಲ್ಲಿ ನಾವು ವಿಶ್ವಾಸವನ್ನು, ನಂಬಿಕೆಯನ್ನು, ವೇದಗಳು ಹೇಳಿದ ಮಾತನ್ನು ಪರಿಪಾಲನೆ ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂದು ಸಮಾಜಕ್ಕೆ ತಿಳಿಸಿಕೊಟ್ಟ ಕೊಡುಗೆ ಎಂದರೆ ತಪ್ಪಾಗಲಾರದು.ಭಾರಿಸುತ್ತಾ ಸಾಗಿದ ಗುರುಗಳು ಆಚಾರ್ಯ ಮಧ್ವರ ಸಿದ್ಧಾಂತವನ್ನು ದೇಶದಾದ್ಯಂತ ಪ್ರಚಾರ ಮಾಡಿ, ಕುಂಭಕೋಣದಲ್ಲಿಯೇ ಬೃಂದಾವನಸ್ಥರಾಗಿ ಇಂದಿಗೂ ವಿರಾಜಮಾನರಾಗಿದ್ದಾರೆ.
ಲೇಖಕರು: ಜಯಶ್ರೀ ಧೃವಾಚಾರ್, ಭದ್ರಾವತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post