ಕಲ್ಪ ಮೀಡಿಯಾ ಹೌಸ್ | |
ಏನಾದ್ರೂ ಹೇಳೋಣ ಅಂದ್ಕೊಂಡ್ ಸುಮಾರ್ ದಿನ ಆಗಿದ್ವು. ಬರೆಯೋದೆ ಬಿಟ್ರಾ ಅಂತ ಬೈಯ್ಯೋರಿಗೆ ಏನೂ ಕಡಿಮೆ ಇರಲಿಲ್ಲ. ಅಂತೂ ಇವತ್ತು ಮನಸು ಮಾಡಿ ಒಂದು ಫಿಲಂ ಬಗ್ಗೆ ಹೇಳೋಣ ಅಂದ್ಕೊಂಡ್ ಕೂತೆ. 2009 ಅಲ್ಲಿ ಬಂದ A Dog Year ಅನ್ನೋದು ಫಿಲಂ ಹೆಸರು. ಅರವತ್ತರ ಅಸುಪಾಸಿನ ಒಬ್ಬ ವ್ಯಕ್ತಿ ಕುರಿತ ಕಥೆ. ಆತ ಒಬ್ಬ ನಾಯಿ ಪ್ರೇಮಿ. ಅದಾಗಲೇ ಕುಟುಂಬದಿಂದ ದೂರ ಉಳಿದು ತನ್ನದೇ ಪುಸ್ತಕ ಪ್ರಪಂಚದಲ್ಲಿ ಬದುಕುತ್ತಿದ್ದ ಒಬ್ಬ ಪ್ರಸಿದ್ಧ ಬರಹಗಾರ ಕೂಡ.
ಜಾನ್ ಪತ್ನಿ ಮತ್ತು ಮಗಳು ಎಲ್ಲೋ ದೂರದಲ್ಲಿ ಇರುತ್ತಿದ್ದು, ಆತನ ಬದುಕು ಇದ್ದ ಎರಡು ನಾಯಿಗಳು ಮತ್ತು ಪುಸ್ತಕದ ಜೊತೆ ಸಾಗುತ್ತಿತ್ತು. ಸ್ಟಾಂನ್ಲಿ ಮತ್ತು ಜೂಲಿಯಸ್ ಅವೆರಡು ನಾಯಿಗಳ ಹೆಸರು. ಹೀಗಿದ್ದಾಗ ಅವನ ಜೀವನದಲ್ಲಿ ಮತ್ತೊಂದು ನಾಯಿಯ ಪ್ರವೇಶ ಆಗುತ್ತದೆ. ಅವನು ಡಿವೋನ್. ಅದೆಷ್ಟು ನಿಷ್ಕಲ್ಮಶ, ಮುಗ್ಧ ಮತ್ತು ಅತ್ಯುತ್ಸಾಹಿತ ಅಂದರೆ ಜಾನ್ (ಜೇಫ್ ಬ್ರಿಜ್ಸ್ ) ಬದುಕು ಸಂಪೂರ್ಣವಾಗಿ ಬದಲಾಗಿ ಬಿಡುತ್ತದೆ. ಒಂದೂ ಕಾಲು ತಾಸಿನ ಚಿತ್ರ ನೀವು ನಿಜವಾಗಿ ನಾಯಿ ಪ್ರೇಮಿ ಆಗಿದ್ದರೆ ಖಂಡಿತ ರುಚಿಸುತ್ತದೆ.
ಎಷ್ಟು ಸರಳವಾಗಿ ನಾಯಿ ಮತ್ತು ಜಾನ್ ಬದುಕನ್ನು ಎರಡು ಸಮಾನಾಂತರ ರೇಖೆಗಳಲ್ಲಿ ಚಿತ್ರ ಕೊಂಡೊಯ್ಯುತ್ತದೆ ಎಂದರೆ ಅದರ ಆನಂದವೇ ಬೇರೆ. ಮನುಷ್ಯನ ಬದುಕನ್ನು ಅವನ ಅತಿ ನೆಚ್ಚಿನ ಜೀವದ ಕಣ್ಣುಗಳಲ್ಲಿ ನೋಡುವ ಪ್ರಯತ್ನ ಎಂದೇ ಹೇಳಬಹುದು. 2009 ರಲ್ಲಿ ತೆರೆ ಕಂಡ ಈ ಚಿತ್ರದಲ್ಲಿ ಬೆರಳೆಣಿಕೆಯ ಕಲಾವಿದರು ಇದ್ದು ಎಂದಿನಂತೆ ಜೇಫ್ ನೀರು ಕುಡಿದಷ್ಟೇ ಸರಳವಾಗಿ ಅಭಿನಯಿಸಿದ್ದು, ನಿಜವಾಗಿ ಆತನೊಂದಿಗೆ ಪೈಪೋಟಿಗೆ ಬಿದ್ದಂತೆ ಡಿವೋನ್ ನಾಯಿ ಅಭಿನಯಿಸಿದೆ. ಸ್ಟಾಂನ್ಲಿಯ ಸಾವು ಸೇರಿದಂತೆ ಡಿವೋನ್ ಇರುವ ಹಲವು ದೃಶ್ಯಗಳು ಕಣ್ಣಾಲಿಗಳಲ್ಲಿ ನೀರು ತುಂಬಿಸಿದರೆ ಅಚ್ಚರಿ ಏನಲ್ಲ. ಈಗಲೂ ಈ ಚಿತ್ರ Hotstar ನಲ್ಲಿ ಲಭ್ಯ.
ಈ ಚಿತ್ರ ನೋಡುವಾಗ, ರೋಹಿತ್ ಚಕ್ರತೀರ್ಥ ಅವರ ಗಂಧದಮಾಲೆ ಪುಸ್ತಕದಲ್ಲಿ ಬರುವ ಒಂದು ಘಟನೆ ನೆನಪಿಗೆ ಬಾರದೆ ಇರದು. ಕ್ಯಾನ್ಸರ್ ಪೀಡಿತ ಕೊನೆಯ ಹಂತದಲ್ಲಿದ್ದ ಸಾಕು ನಾಯಿ ಬೇಲ್ಕರ್‌ಗೆ ದಯಾಮರಣದ ಚುಚ್ಚುಮದ್ದು ಕೊಟ್ಟ ಡಾಕ್ಟರ್ ಮೈಕ್ ಶಿಷ್ಟಾಚಾರ ಪಾಲಿಸಿ, ರಾನ್ ಕುಟುಂಬದೊಂದಿಗೆ ಕೆಲವು ನಿಮಿಷಗಳನ್ನು ಕಳೆದರು. ಬೆಕ್ಕು ನಾಯಿಗಳಿಗೆಲ್ಲ ಹೆಚ್ಚೆಂದರೆ 12 ವರ್ಷ ಬದುಕುತ್ತವೆ. ಪಾಪ ಅಷ್ಟು ಚಿಕ್ಕ ಆಯುಸ್ಸನ್ನು ದೇವರು ಯಾಕೆ ಕೊಟ್ಟನೋ ಏನೋ – ಎಂಬ ಮಾತು ಬಂತು. ಅದುವರೆಗೆ ಆ ಎಲ್ಲ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ರಾನ್ ಮಗ ಶೇನ್ ಥಟ್ಟನೆ “ಯಾಕೆ ಅನ್ನೋದು ನನಗೆ ಗೊತ್ತು ಡಾಕ್ಟರ್” ಎಂದ.
“ಹೌದ?”
“ಹೌದು” ಎನ್ನುತ್ತಾ ಎಲ್ಲರ ಮಧ್ಯೆ ಜಿಗಿದು ಡಾಕ್ಟರ್ ಮೈಕ್ ರನ್ನು ನೋಡುತ್ತ ಹೇಳಿದ “ನೋಡಿ ಡಾಕ್ಟರ್, ಈಗ ಮನುಷ್ಯ 100 ವರ್ಷ ಬದುಕ್ತಾನೆ. ಯಾಕೆ ಅಷ್ಟು ದೊಡ್ಡ ಲೈಫ್ ಕೊಟ್ಟಿದ್ದಾನೆ ದೇವರು ಹೇಳಿ. ಯಾಕೇ ಅಂದ್ರೆ ಮನುಷ್ಯ ಹುಟ್ಟಿದ ಮೇಲೆ ಬೇರೆಯವರ ಜೊತೆ ಹೊಂದಿಕೊಂಡು ಹೋಗೋದನ್ನು ಕಲೀಬೇಕು. ಎಲ್ಲರನ್ನೂ ಪ್ರೀತಿಯಿಂದ ನೋಡೋದನ್ನು ಕಲೀಬೇಕು. ಮನೆಯವರ ಜೊತೆ ಯಾವತ್ತೂ ಖುಷಿಯಾಗಿರೋದು ಹೇಗೆ ಅನ್ನೋದನ್ನು ಕಲೀಬೇಕು. ಪ್ರಾಮಾಣಿಕನಾಗಿರುವುದನ್ನು ಕಲೀಬೇಕು. ಇಷ್ಟೆಲ್ಲಾ ವಿಷಯ ಕಲಿತು ಅಳವಡಿಸಿಕೊಂಡು ಬದುಕಬೇಕು ಅಂದ್ರೆ ನೂರು ವರ್ಷ ಬೇಕು. ಆದ್ರೆ ನಾಯಿಗೆ ಅದೆಲ್ಲ ವಿಷಯ ಕಲೀಬೇಕಾದ ಅಗತ್ಯವೇ ಇರೋದಿಲ್ಲ. ಯಾಕೇಂದ್ರೆ ಹೊಂದಿಕೊಂಡು ಹೋಗೋದು, ಪ್ರೀತಿ ಮಾಡೋದು, ಪ್ರಾಮಾಣಿಕನಾಗಿರೋದು ಇವನ್ನೆಲ್ಲ ಅದು ಹುಟ್ತಾನೇ ಕಲ್ತೇ ಬಂದಿರೋದ್ರಿಂದ, ಇಲ್ಲಿ ಈ ಜಗತ್ತಲ್ಲಿ ಕೇವಲ ಬದುಕಿಹೋದ್ರೆ ಆಯ್ತು ನೋಡಿ! ಅದಕ್ಕೆ ದೇವರು ನಾಯಿಗೆ 12 ವರ್ಷ ಬದುಕೋದಕ್ಕೆ ಅಂತ ಮಾತ್ರ ಕೊಟ್ಟಿದ್ದಾನೆ.”
ಅಬ್ಬಾ ಅದೆಂಥಹ ಅನ್ಯೋನ್ಯತೆ! ಪ್ರತಿಯೊಬ್ಬರ ಬದುಕಿನಲ್ಲಿ ತಂದೆ, ತಾಯಿ, ಪತ್ನಿ, ಮಕ್ಕಳು, ರಕ್ತ ಸಂಬಂಧಿಗಳು, ಗೆಳೆಯರು ಹೀಗೆ ಹಲವಾರು ಸಂಬಂಧಗಳು ಬಂದು ಹೋಗುತ್ತವೆ. ಆದರೆ ಬರಿ ನಿಮ್ಮನ್ನು ಅಷ್ಟೇ, ಅದು ನೀವು ಹೇಗಿದ್ದಿರೋ ಹಾಗೆಯೇ ಪ್ರೀತಿಸಲು ನಿಮ್ಮ ಸಾಕು ಪ್ರಾಣಿಗೆ ಮಾತ್ರ ಸಾಧ್ಯ. ಅದರಲ್ಲೂ ಅದು ನಾಯಿ ಆಗಿದ್ದರೆ ಖಂಡಿತಾ ಆ ಒಡಹುಟ್ಟಿದಂತಹ ಭಾವನೆ ಅಂತೂ ಎಂದಿಗೂ ಸಾಯುವುದಿಲ್ಲ.
ಜೀವವೊಂದು ಬೇಕಾಗಿದೆ
ಅಹುದು, ಬೇಗೆಯ ಬದುಕಿನಲಿ
ನಗುವ ತರುವ ಉಸಿರೊಂದು ಬೇಕಾಗಿದೆ
ನಾಳೆಗಳ ಕನಸಿಗೆ ಕಸುವು ತುಂಬುವ
ಜೊತೆಯೊಂದು ಬೇಕಾಗಿದೆ
ಅಗತ್ಯತೆಗಷ್ಟೇ ಊಳಿಡುವ ಅನಾದರದ
ಊರಿನಲ್ಲಿ ಕಣ್ಮುಚ್ಚದೇ ಕಾಯುವ
ಛಲವೊಂದು ಬೇಕಾಗಿದೆ
ಕಷ್ಟ ನಷ್ಟ ಅನಿಷ್ಟಗಳ ಎದುರಿಸಿ ಬೆದರಿಸಲು
ಕಾವಲೊಂದು ಬೇಕಾಗಿದೆ
ನನ್ನ ಎರಡು ಹೆಜ್ಜೆಗಳಿಗೆ ತನ್ನ
ನಾಲ್ಕು ಹೆಜ್ಜೆಗಳ ಕೊಡುವ
ಬಲವೊಂದು ಬೇಕಾಗಿದೆ
ಎದೆಯ ಮೇಲೆ ಪಾದಗಳಿಟ್ಟು
ಒಡಯೊಳಗೆ ಜೀವವನು ಊಡುವ
ದೈವವೊಂದು ಬೇಕಾಗಿದೆ
ಪ್ರೀತಿಯ ಪಿಂಟುವಿಗೆ ಇದು ಅರ್ಪಣೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post