ಕಲ್ಪ ಮೀಡಿಯಾ ಹೌಸ್ | ಲೇಖಕರು: ಭಾವಬೋಧ ಆಲೂರು, ಜಯತೀರ್ಥ ವಿದ್ಯಾಪೀಠ |
ಶ್ರೀ ಗುರುಭ್ಯೋ ನಮಃ
ಸಕಲಗುಣಪೂರ್ಣನಾದ ನಿರ್ದೋಷನಾದ ಜಗಜ್ಜನ್ಮಾದಿಕಾರಣನಾದ ಶ್ರೀಲಕ್ಷ್ಮೀಸಮೇತನಾದ ಪರಮಪುರುಷ ಶ್ರೀಮನ್ನಾರಾಯಣನ ಸರ್ವೋತ್ತಮತ್ವವನ್ನು ಎಲ್ಲಡೆಗೆ ಪ್ರಚಾರಮಾಡುವ ಸನಾತನ ಸತ್ಸಂಪ್ರದಾಯವನ್ನು ಬಹುನಿಷ್ಠೆಯಿಂದ ಅನುಷ್ಠಿಸುವ ಶ್ರೀಮದಾಚಾರ್ಯರಿಂದ ಪ್ರಾರಂಭವಾದ ಶ್ರೀಮದುತ್ತರಾದಿಮಠ ಮೂಲ ಮಹಾಸಂಸ್ಥಾನವೆಂಬ ಜ್ಞಾನಿ ಸಮುದ್ರದಲ್ಲಿ ದೊಡ್ಡ ದೊಡ್ಡ ತರಂಗಗಳಂತಿರುವ ಅನೇಕ ಯತಿಗಳು ಈ ಪೀಠವನ್ನಲಂಕರಿಸಿದ್ದಾರೆ.
ಅದರಲ್ಲಿಯೂ ಪದ್ಮನಾಭತೀರ್ಥರು, ನರಹರಿತೀರ್ಥರು, ಮಾಧವತೀರ್ಥರು, ಅಕ್ಷೋಭ್ಯತೀರ್ಥರು ನೇರವಾಗಿ ಶ್ರೀಮದಾಚಾರ್ಯರಿಂದ ಸನ್ಯಾಸಾಶ್ರಮವನ್ನು ಭಕ್ತಿವೈರಾಗ್ಯಗಳಿಂದ ಸ್ವೀಕರಿಸಿ ಶ್ರೀಮೂಲಸೀತಾಸಮೇತ ಶ್ರೀಮನ್ಮೂಲರಾಮಚಂದ್ರ ದೇವರವರು, ಶ್ರೀದಿಗ್ವಿಜಯ ರಾಮಚಂದ್ರ ದೇವರವರು, ಕೂರ್ಮರೂಪಿ ವ್ಯಾಸಮುಷ್ಟಿ ಸಹಿತವಾದ ಐದು ವ್ಯಾಸಮುಷ್ಟಿಗಳು, ಹೀಗೆ ಒಟ್ಟು ಇಪ್ಪತ್ತೆಂಟು ಸಂಸ್ಥಾನ ಪ್ರತಿಮೆಗಳನ್ನು ಶಾಸ್ತ್ರೀಯವಾಗಿ ಶಾಸ್ತ್ರೋಕ್ತ ಅನುಸಂಧಾನ ಪೂರ್ವಕವಾಗಿ ಅರ್ಚಿಸುವ ಸೌಭಾಗ್ಯವನ್ನು ಪಡೆದಿದ್ದಾರೆ.
ಹಾಗೆಯೇ ಇದೇ ಪೀಠವನ್ನಾಳಿದ ಟೀಕಾಕೃತ್ಪಾದರೆಂದೇ ಪ್ರಸಿದ್ಧರಾದ, ತಮ್ಮ ಮೂಲನೇಲೆಯಾದ ಮಳಖೇಡದಲ್ಲಿ ಇಂದಿಗೂ ಭಕ್ತರಿಗೆ ಅನುಗ್ರಹಿಸುವ, ಸರ್ವಜ್ಞಕಲ್ಪರಾದ ಶ್ರೀಮಜ್ಜಯತೀರ್ಥರು ಪದ್ಮನಾಭತೀರ್ಥಾದಿ ಗುರುಗಳನ್ನನುಸರಿಸಿ ಶ್ರೀಮದಾಚಾರ್ಯರ ಅತ್ಯುತ್ತಮವಾದ ಗ್ರಂಥಗಳಿಗೆ ಟೀಕೆಯನ್ನು ಬರೆದಿದ್ದಾರೆ. ಹೀಗೆಯೇ ಇದೇ ಪರಂಪರೆಯಲ್ಲಿ ಪೀಠವನ್ನಲಂಕಾರಿಸಿದ್ದಾರೆ ಶ್ರೀಮದ್ರಘುವರ್ಯತೀರ್ಥ ಶ್ರೀಪಾದಂಗಳವರು.
ಕೂರ್ಮರೂಪಿ ವ್ಯಾಸಮುಷ್ಟಿಯನ್ನು ಒಲಿಸಿಕೊಂಡು ಜಗತ್ತಿಗೆ ಅದರ ದರ್ಶನದ ಪರಮಾ ಸೌಭಾಗ್ಯವನ್ನು ಕರುಣಿಸಿದಂತಹ ಶ್ರೀಮದ್ರಘುನಾಥ ತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರು ಶ್ರೀಮದ್ರಘುವರ್ಯ ತೀರ್ಥ ಶ್ರೀಪಾದಂಗಳವರು. ಇವರು ಒಂದೊಮ್ಮೆ ಸಂಚಾರ ಮಾಡುತ್ತಾ ಶ್ರೀಮಟ್ಟೀಕಾಕೃಪಾದರ ಆರಾಧನೆಯ ದಿನವಾದ ಆಷಾಢ ಕೃಷ್ಣ ಪಂಚಮಿಯಂದು ಮಣ್ಣೂರಿನಲ್ಲಿರುವ ಶ್ರೀಮನ್ಮಾಧವ ತೀರ್ಥ ಶ್ರೀಪಾದಂಗಳವರ ಸನ್ನಿಧಾನಕ್ಕೆ ಬಂದಿದ್ದರು. ಅಲ್ಲಿ ದುಷ್ಟರ ದಾಳಿಯಿಂದ ರಕ್ಷಿಸಿಕೊಳ್ಳಲು ಭೋರ್ಗರಿಯುವ ಭೀಮಾನದಿಯನ್ನು ದಾಟಲೇಬೇಕಾದ ಪರಿಸ್ಥಿತಿ ಬಂದೊದಗಿದಾಗ, ಸಂಸ್ಥಾನಮೂರ್ತಿಗಳ ಮತ್ತು ಅಂದಿನ ಆರಾಧ್ಯದೈವರಾಗಿದ್ದ ಶ್ರೀಮಟ್ಟೀಕಾಕೃತ್ಪಾದರ ಸ್ಮರಣಾನುಗ್ರಹಗಳಿಂದ ಪರಮಾತ್ಮನ ಆಜ್ಞೆಯಂತೆ ಭೀಮನದಿಯು ದಾರಿಯನ್ನು ನೀಡಿತು. ಈ ಮಹಿಮೆಯನ್ನು ಅವರ ಚರಮಶ್ಲೋಕದಲ್ಲಿ ಕಾಣಬಹುದು.
“ಮಹಾಪ್ರವಾಹಿನೀ ಭೀಮಾ ಯಸ್ಯ ಮಾರ್ಗಮದಾನ್ಮುದಾ.
ರಘುವರ್ಯೋ ಮುದಂ ದದ್ಯಾತ್ ಕಾಮಿತಾರ್ಥಪ್ರದಾಯಕಃ “
ಎಂಬುದಾಗಿ. ಇದನ್ನು ಇಂದಿನ ಶ್ರೀಮದುತ್ತರಾದಿ ಮಠಾಧಿಪತಿಗಳಾದಂತಹ ಶ್ರೀಮತ್ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ತಾವು ರಚಿಸಿದಂತಹ ಶ್ರೀರಘುವರ್ಯ ಸ್ತೋತ್ರದಲ್ಲಿ ಉಲ್ಲೇಖಸಿದ್ದಾರೆ.“ಭೀಮಾನದೀ ದದೌ ಮಾರ್ಗಂ ಯಾಸ್ಮೈ ರಾಮಯುತಾಯ ತಂ.
ರಘುವರ್ಯಮಹಂ ವಂದೇ ನದೀಸ್ನಾನಸುಸಿದ್ಧಯೇ”
ಎಂಬುದಾಗಿ. ಹೀಗೆಯೇ ಆ ಸ್ತೋತ್ರದಲ್ಲಿ ಅವರ ಸ್ಮರಣಾಸ್ತೋತ್ರ ಸಂಸೇವನೆಗಳಿಂದ ದೇವಪೂಜಾ ಭಾಗ್ಯ, ಭವರೋಗ ನಿವೃತ್ತಿ, ಮಂತ್ರ ಜಪಸಿದ್ಧಿ, ಶಾಸ್ತ್ರಜ್ಞಾನಸಿದ್ಧಿ, ಸಂತಾನಪ್ರಾಪ್ತಿ, ಮೊದಲಾದ ಅನೇಕ ಫಲಗಳು ಲಭಿಸುತ್ತವೆ ಎಂಬುದಾಗಿಯೂ ಉಲ್ಲೇಖಸಿದ್ದಾರೆ. ಇಂತಹ ಮಹಾಮಹಿಮೋಪೇತರಾದ ಗುರುಗಳು, ಶಿಷ್ಯಪ್ರಶಿಷ್ಯರಿಗೂ ಗ್ರಂಥಗಳನ್ನು ರಚಿಸುವ ಸಾಮರ್ಥ್ಯ ಸೌಭಾಗ್ಯಗಳನ್ನು ಕರುಣಿಸುವ ಶ್ರೀಮದ್ರಘೂತ್ತಮ ತೀರ್ಥ ಶ್ರೀಪಾದಂಗಳವರಿಗೆ ತಾರೋಪದೇಶವನ್ನು ಮಾಡಿ ಜಗತ್ತಿಗೆ ನೀಡಿ ಜ್ಯೇಷ್ಠ ಕೃಷ್ಣ ತೃತೀಯಾದಂದು ಆನೆಗುಂದಿಯಲ್ಲಿ (ಈಗಿನ ನವವೃಂದಾವನ ಗಡ್ಡೆಯಲ್ಲಿ) ಮಹನೀಯರಾದ ಪದ್ಮನಾಭ ತೀರ್ಥಾದಿಗುರುಗಳ ಎದುರಿನಲ್ಲಿ ವೃಂದಾವನಸ್ಥರಾಗಿ ಈಗಲೂ ತಪಸ್ಸನ್ನು ಆಚರಿಸುತ್ತಿದ್ದಾರೆ. ನಿನ್ನೆಯ ದಿನ ಅವರ ಆರಾಧನೆಯ ಸಂದರ್ಭದಲ್ಲಿ ಶ್ರೀಮದುತ್ತರಾದಿ ಮಠಾಧೀಶರಾದ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹಾಗೂ ಕೂಡಲಿ ಆರ್ಯ ಅಕ್ಷೋಭ್ಯ ಮಠಾಧೀಶರಾದ ಶ್ರೀರಘುವಿಜಯ ತೀರ್ಥ ಶ್ರೀಪಾದಂಗಳವರು ಮಹಾಪಂಚಾಮೃತವನ್ನು ನೆರವೇರಿಸಿದರು.
ನಂತರ ಶ್ರೀಮದುತ್ತರಾಧಿ ಮಠಾಧೀಶರಿಂದ ಶ್ರೀಮನ್ಯಾಯಸುಧಾ ಪಾಠ, ಪಾದಪೂಜೆ, ಸಹಸ್ರಾರು ಜನರಿಗೆ ತಪ್ತಮುದ್ರಾಧರಣೆ, ಸಂಸ್ಥಾನಪೂಜೆ, ಹಸ್ತೋದಕ ಬ್ರಾಹ್ಮಣ ಭೂಜನಾದಿಗಳನ್ನು ಅತಿ ವಿಜೃಂಭಣೆಯಿಂದ ನೆರವೇರಿಸಿದ್ದಾರೆ. ಮಠದ ದಿವಾನರಾದ ಪಂಡಿತ ಶಶಿಧರಚಾರ್ಯರು, ಉಮರ್ಜಿ ಶ್ರೀಕರಾಚಾರ್ಯಾ, ಮಹಿಷಿ ಆನಂದ ಆಚಾರ್ಯರು,ನರಸಿಂಹ ಆಚಾರ್ಯ ಯಲಬುರ್ಗಾ, ಉಮರ್ಜಿ ರಾಮಾಚಾರ್ಯರು, ಬಳ್ಳಾರಿ ರಾಘವೇಂದ್ರ ಆಚಾರ್ಯರು, ವ್ಯವಸ್ಥಾಪಕರಾದ ಅಕ್ಕಲಕೋಟ ಆನಂದ ಆಚಾರ್ಯರು, ಹುಂಡೇಕರ್ ಜಯತೀರ್ಥಚಾರ್ಯರು ಮುರಗೋಡು ವಿಜಯ ವಿಠಲ ಆಚಾರ್ಯರು, ಮಠದ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀಪ್ರಸನ್ನಾಚಾರ್ಯ ಕಟ್ಟಿ, ವಿಷ್ಣುತೀರ್ಥ ಆಚಾರ್ಯ ಜೋಶಿ, ಪಂಢರಪುರ ಕಾರ್ತೀಕಾಚಾರ್ಯರು, ಅಖಿಲ ಆಚಾರ್ಯ ಅತ್ರೆ, ನಾರಾಯಣಚಾರ್ಯ ಹುಲಿಗಿ, ವೆಂಕಟಗಿರಿ ಆಚಾರ್ಯ ಅನ್ವೇರಿ, ಅಡವಿರಾಯರು, ವೆಂಕಟೇಶ ಕೇಸಕ್ಕಿ ಅವರನ್ನು ಒಳಗೊಂಡಂತೆ ಅನೇಕ ಮಠದ ಪಂಡಿತರು ಹಾಗೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಾಯಂಕಾಲದಲ್ಲಿ ಮೇಲೆ ತಿಳಿಸಿದ ಅನೇಕ ವಿದ್ವಾಂಸರಿಂದ ಪ್ರವಚನ, ನಂತರ ಉಭಯ ಶ್ರೀಪಾದಂಗಳವರಿಂದ ಅನುಗ್ರಹಸಂದೇಶವೂ ಜರುಗಿತು. ಅಂತಹ ಗುರುಗಳು ಅವರ ಅಂತರ್ಯಾಮಿಯಾದ ಭಾರತೀರಮಣ ಮುಖ್ಯಪ್ರಾಣನು ಎಲ್ಲರಿಗೂ ಜ್ಞಾನಭಕ್ತಿವೈರಾಗ್ಯಗಳನ್ನು ಕೊಟ್ಟು ದೇಶದಲ್ಲಿ ಸುಭಿಕ್ಷೆಯಾಗಿ ಎಲ್ಲರಿಗೂ ಸನ್ಮಾರ್ಗದಲ್ಲಿ ನಡೆಯುವ ಹಾಗೆ ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post