ಕಲ್ಪ ಮೀಡಿಯಾ ಹೌಸ್
ಒಮ್ಮೆಯಾದರೂ ನೋಡಲೇಬೇಕಾದ ಬಹಳಷ್ಟು ಚಲನಚಿತ್ರಗಳ ಪಟ್ಟಿ ಎಲ್ಲರ ಮುಂದೆ ಇರುತ್ತದೆ. ಆದರೆ ಭಾರತದ ಇತಿಹಾಸವನ್ನು ಮೆಲುಕು ಹಾಕಿದಾಗ ಹೆಚ್ಚೇನೂ ಅಲ್ಲ ಕೇವಲ 53 ವರ್ಷಗಳ ಹಿಂದೆಯಷ್ಟೇ ಪ್ರಧಾನಿಯೊಬ್ಬರು ವಿದೇಶಕ್ಕೆ (ಉಜ್ಬೇಕಿಸ್ತಾನ) ರಾಜತಾಂತ್ರಿಕ ಕಾರಣಗಳಿಂದಲೇ ತೆರಳಿ ಶವವಾಗಿ ಮರಳುತ್ತಾರೆ.
ಭಾರತಕ್ಕೆ ತಂದ ಅವರ ಮೃತ ದೇಹವನ್ನು ಅವರ ಕುಟುಂಬದ ವಿರೋಧದ ನಡುವೆಯೂ ಪೋಸ್ಟ್ ಮಾರ್ಟಮ್ ಕೂಡ ಮಾಡದೇ ಸಂಸ್ಕಾರ ಮಾಡಲಾಗುತ್ತದೆ. ಭಾರತೀಯ ಮಾಧ್ಯಮಗಳ ಸಹಕಾರದೊಂದಿಗೆ ಒಂದು ಘೋರ ಸತ್ಯ ಮಣ್ಣಿನಲ್ಲಿ ಸೇರಿ ಹೋಗುತ್ತದೆ. ಈ ಸತ್ಯದ ಎಳೆಯ ಮೇಲೆ ಅತ್ಯಂತ ಪ್ರಬುದ್ಧವಾಗಿ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ದಿ ತಾಷ್ಕೆಂಟ್ ಫೈಲ್ಸ್ ಚಿತ್ರ ತಯಾರಿಸಿದ್ದಾರೆ.
ಬಲಪಂಥೀಯರು ಎಂದು ಹಣೆಪಟ್ಟಿ ಕಟ್ಟಿಸಿಕೊಂಡಿರುವ ವಿವೇಕ್ ಚಿತ್ರದಲ್ಲಿ ಅಂತಹ ಯಾವುದೇ ವಿಷಯವಿಲ್ಲದೇ ಪ್ರತಿ ಎಡ ಬಲ ಮತ್ತು ಮಧ್ಯಮ ಚಿಂತನೆಗಳಿಗೂ ಅವಕಾಶ ನೀಡಿದ್ದಾರೆ. ಪಾತ್ರಧಾರಿಗಳ ವಿಷಯಕ್ಕೆ ಬಂದರೆ ಮೇರು ನಟರ ದಂಡೇ ಇದೆ. ಮಿಥುನ್ ಚಕ್ರವರ್ತಿ, ಶ್ವೇತಾ ಬಸು ಪ್ರಸಾದ್, ಮಂದಿರಾ ಬೇಡಿ, ಪಲ್ಲವಿ ಜೋಷಿ, ರಾಜೇಶ್ ಶರ್ಮಾ ಮತ್ತು ಪಂಕಜ್ ತ್ರಿಪಾಠಿ ಮುಂತಾದವರು ಇದ್ದಾರೆ. ಇತ್ತೀಚೆಗೆ ಭಾರತ ಅಸಹಿಷ್ಣು ಎಂದು ಕೂಗು ಹಾಕಿದ ನಾಸಿರುದ್ದೀನ್ ಷಾ ಇದ್ದು, ಕನ್ನಡಿಗರಾದ ಪ್ರಕಾಶ್ ಬೆಳವಾಡಿ ಕೂಡ ಅತ್ಯುತ್ತಮವಾಗಿ ನಟಿಸಿದ್ದಾರೆ.
ಚಿತ್ರ ಆರಂಭವಾಗುವುದೇ ಹಾಗೆ, ಸತ್ಯದ ಕಠೋರ ಮುಖ ತೋರಿಸುತ್ತಾ. ಮಾಧ್ಯಮಗಳು ಅದು ದೃಶ್ಯ, ಪತ್ರಿಕಾ ಅಥವಾ ಇನ್ನಾವುದೇ ರೀತಿಯ ಮಾಧ್ಯಮಗಳಿರಬಹುದು. ಅಲ್ಲಿ ಗಾಸಿಪ್ ಇದ್ದರಷ್ಟೇ ಬೆಲೆ. ಉಪ್ಪು ಹುಳಿ ಖಾರ ಹಚ್ಚಿರದ ಮೇಲೆ ಅದು ಸಪ್ಪೆ. ಅಂತಹುದೇ ಮಸಾಲೆಭರಿತ ಸುದ್ಧಿ ಕೊಡುವ ಪ್ರಯತ್ನದಲ್ಲಿರುವ ಯುವ ಪತ್ರಕರ್ತೆ ರಾಗಿಣಿಯ ಪಾತ್ರದಲ್ಲಿ ಶ್ವೇತಾ ಬಸು ಪ್ರಸಾದ್ ಅದ್ಭುತವಾಗಿ ನಟಿಸಿದ್ದಾರೆ. ಆಕೆ ತರುವ ಸುದ್ದಿಗಳಲ್ಲಿ ಸತ್ಯವೇ ಇರುವುದಿಲ್ಲ ಎಂಬುದು ಅವರ ಸಂಪಾದಕನಿಗೆ ಕೊರಗು. ಅಲ್ಲದೆ ಅದರಿಂದ ಪತ್ರಿಕೆಗೂ ಲಾಭವಿಲ್ಲ ಎಂಬುದು ಸಂಪಾದಕನ ಆರೋಪ.
ಆದರೆ ಆ ಸಮಯದಲ್ಲಿ ಆಕೆಗೆ ಬರುವ ಅನಾಮಿಕ ಕರೆಯು ಒಂದಷ್ಟು ರಹಸ್ಯ ದಾಖಲೆಗಳನ್ನು ನೀಡಿ, ಅದನ್ನು ಬರೆಯಲು ತಿಳಿಸುತ್ತದೆ. ಅದು ಭಾರತ ಕಂಡ ಅದ್ವಿತೀಯ ನಾಯಕ ಮತ್ತು ಸ್ವತಂತ್ರ ಭಾರತದ ಎರಡನೆಯ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿನ ಕುರಿತಾಗಿ ಇರುತ್ತದೆ. ಅದನ್ನು ಪ್ರಕಟಿಸಲು ತೊಡಗಿದ ಮೇಲೆ ಪತ್ರಿಕೆ ಮತ್ತು ರಾಗಿಣಿಗೆ ಇನ್ನಿಲ್ಲದ ಪ್ರಚಾರ ಸಿಗುತ್ತದೆ. ಶಾಸ್ತ್ರಿಯವರ ಸಾವಿನ ಬಗ್ಗೆ ಪ್ರಶ್ನೆಗಳೆದ್ದು ಸರ್ಕಾರಕ್ಕೆ ತಲೆ ನೋವಾಗಿಯೂ ಪರಿಣಮಿಸುತ್ತದೆ. ಆಗ ಸರ್ಕಾರ ಮುತ್ಸದ್ದಿ ರಾಜಕಾರಣಿ ಮಿಥುನ್ ಚಕ್ರವರ್ತಿ ನೇತೃತ್ವದಲ್ಲಿ ಸಮಿತಿಯ ರಚಿಸಲಾಗುತ್ತದೆ. ಸದಸ್ಯರಾಗಿ ಪ್ರಸ್ತುತ ಸಮಾಜದ ಅನೇಕ ಮುಖಗಳನ್ನು ನಾಮ ನಿರ್ದೇಶನ ಮಾಡಲಾಗುತ್ತದೆ. ಉದ್ಯಮಿ, ರಾಜಕಾರಣಿ, ನಿವೃತ್ತ ನ್ಯಾಯಾಧೀಶ, ಇತಿಹಾಸಕಾರ್ತಿ, ಸಾಮಾಜಿಕ ಕಾರ್ಯಕರ್ತೆ ಹೀಗೆ ಇಂದಿನ ಆಧುನಿಕ ಸಮಾಜದ ಯಾರೆಲ್ಲ ತಮ್ಮ ಹಿಡಿತವನ್ನು ಹೊಂದಿರುವರೋ ಅವರೆಲ್ಲರಿಗೂ ಅಲ್ಲಿ ಅವಕಾಶವಿದೆ.
ಗಮನಿಸಬೇಕಾದ ಅಂಶವೆಂದರೆ ಆ ಸಮಿತಿಯ ಪ್ರತಿ ಸದಸ್ಯನೂ ತಾನು ಅರಿತದ್ದೇ ಸತ್ಯ ಎಂಬ ತಗಾದೆಯವರು. ಎಲ್ಲರೂ ಅವರವರ ವೈಯಕ್ತಿಕ ಹಿತಾಸಕ್ತಿಗಳನ್ನು ಕಾಯಲು ಸೇರಿರುತ್ತಾರೆ. ಸಮಿತಿಯು ಆರಂಭವಾದ ಮೇಲೆ ರಾಗಿಣಿ ಕಲೆ ಹಾಕುವ ಪ್ರತಿ ಮಾಹಿತಿಗೂ ಅಲ್ಲಿ ದೊಡ್ಡ ಮಟ್ಟದ ವಿರೋಧ ಮತ್ತು ಅಷ್ಟೇ ಬೆಂಬಲ ಎದುರಾಗುತ್ತದೆ. ಸಾವಿನ ಕುರಿತಾದ ಸತ್ಯವನ್ನು ಪ್ರತಿಯೊಂದು ದೃಷ್ಟಿಕೋನದಲ್ಲೂ ತೋರಿಸುವ ಪ್ರಯತ್ನ ಮಾಡಿ ವಿವೇಕ್ ಅಗ್ನಿಹೋತ್ರಿ ಗೆದ್ದಿದ್ದಾರೆ.
ಚಿತ್ರದ ವಿಷಯಕ್ಕೆ ಬಂದರೆ ಲಾಲ್ ಬಹದ್ದೂರ್ ಶಾಸ್ತ್ರಿಯವರು ದುರ್ಘಟನೆಯ ರಾತ್ರಿ ಆರಾಮಾಗಿಯೇ ಇದ್ದರು, ಚೆನ್ನಾಗಿ ಓಡಾಡುತ್ತಲೇ ಇದ್ದರು, ತಾಷ್ಕೆಂಟ್‌ನಲ್ಲಿ ಅವರು ಉಳಿಯುವ ಸ್ಥಳವನ್ನು ಕೊನೆಯ ಗಳಿಗೆಯಲ್ಲಿ ಬದಲಾಯಿಸಲಾಯಿತು, ಅಲ್ಲಿ ಆಮ್ಲಜನಕದ ವ್ಯವಸ್ಥೆ ಕೂಡ ಇರಲಿಲ್ಲ, ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರ ಸಹಿಗಳಲ್ಲಿ ವ್ಯತ್ಯಾಸ, ಆ ದಿನ ಅವರೊಂದಿಗೆ ಮಾಮೂಲಿ ಅಡಿಗೆಯವನು ಇರಲಿಲ್ಲ, ಆರು ದಿನಗಳ ಪ್ರಯತ್ನದ ನಂತರ ಭಾರತ ಪಾಕ್ ಒಂದು ತುಂಬಾ ಒಳ್ಳೆಯ ಒಪ್ಪಂದಕ್ಕೆ ಸಹಿ ಹಾಕಿದ್ದವು, ಅವರ ದೇಹ ನೀಲಿ ಬಣ್ಣಕ್ಕೆ ತಿರುಗಿತ್ತು, ಅವರ ದೇಹದ ಮೇಲೆ ಕೊಯ್ದ ಗುರುತುಗಳಿದ್ದವು ಹೀಗೆ ಅನೇಕ ಸತ್ಯಗಳು ದಾಖಲೆ ಸಮೇತವಾಗಿ ರುಜುವಾತು ಆಗುತ್ತಲೇ ಹೋಗುತ್ತದೆ. ಆಗೆಲ್ಲಾ ದಿನಂಪ್ರತಿ ನಡೆಯುವಂತೆ ಸಮಿತಿಯ ಇತರ ಸದಸ್ಯರಾದ ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ತಳ್ಳಿ ಹಾಕಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ.
ಯಾವಾಗೆಲ್ಲಾ ಸತ್ಯದ ಕೂಗು ಏಳುತ್ತದೆಯೋ ಆಗೆಲ್ಲ ಮೇಲಿನ ‘ವರ್ಗ’ ಆ ಕೂಗನ್ನು ಅದುಮಲು ಯತ್ನಿಸಿದೆ. ಅದು ಬೋಸರ ಹತ್ಯೆಯೇ ಇರಬಹುದು, ಶಾಸ್ತ್ರಿಗಳ ವಿಷಯವೇ ಇರಬಹುದು. ಆದರೆ ಈ ಚಿತ್ರದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಕುಟುಂಬವು ಸಂಪೂರ್ಣ ಸಹಕಾರ ನೀಡಿದ್ದು ದಾಖಲೆಗಳ ವಿಷಯದಲ್ಲಿ ಕಿಂಚಿತ್ತೂ ಕೊರತೆ ಕಾಣುವುದಿಲ್ಲ. ಕೆಜಿಬಿಯ ಅಧಿಕಾರಿಗಳು ಬರೆದ ಪುಸ್ತಕಗಳು, ಸಮಾನಾಂತರ ಕಾಲದ ಅನೇಕ ವಿದೇಶಿ ಪತ್ರಿಕೆ ಮತ್ತು ಲೇಖಕರು ಬರೆದಿರುವ ಹಲವು ದಾಖಲೆಗಳು ಸಿಗುತ್ತವೆ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಭಾರತದ ಪ್ರಧಾನಮಂತ್ರಿಯಾಗಿ ಇರುವಾಗಲೇ ರಕ್ತಸಿಕ್ತವಾಗಿ ಶವವಾಗಿ ಮರಳುತ್ತಾರೆ. ಆದರೆ ಭಾರತದ ಸರ್ವೋಚ್ಚ ಸರ್ಕಾರ ಅದನ್ನು ಏನೂ ಆಗೇ ಇಲ್ಲವೇನೋ ಎಂಬಂತೆ ನಿಗೂಢವಾಗಿ ತೆರೆಮರೆಗೆ ಸರಿಸುತ್ತದೆ.
ದಾಖಲೆಗಳ ಹುಡುಕಾಟದಲ್ಲಿ ಶಾಸ್ತ್ರಿಯವರ ನಿಕಟವರ್ತಿ ಭಕ್ಷಿಯವರ ಭೇಟಿಯಾಗುವ ರಾಗಿಣಿ ಅಮೂಲ್ಯ ದಾಖಲೆಗಳನ್ನು ಪಡೆಯುತ್ತಾಳೆ. ಆದರೆ ಅವಳನ್ನು ಹಿಂಬಾಲಿಸುತ್ತಿದ್ದವರು ಭಕ್ಷಿಯವರನ್ನು ಬಸ್ ಅಪಘಾತ ಮಾಡಿ ಕೊಲೆ ಮಾಡಲಾಗುತ್ತದೆ. ಆಗ ಸಮಿತಿಯಿಂದ ರಾಗಿಣಿಯನ್ನು ತೆಗೆದು ಹಾಕಲಾಗುತ್ತದೆ. ಅವಳಿಗೆ ದೇಶದ್ರೋಹಿಯ ಪಟ್ಟ ಕಟ್ಟಲಾಗುತ್ತದೆ. ಹಠ ಬಿಡದ ಪತ್ರಕರ್ತೆ ಸಮಿತಿಯಲ್ಲಿ ಸದಸ್ಯರಾಗಿ ಇನ್ನೊಂದು ಅವಕಾಶ ಗಿಟ್ಟಿಸುತ್ತಾಳೆ. ಅದೊಂದು ಅದ್ಭುತ ದೃಶ್ಯ.
ರಾಗಿಣಿ ಮತ್ತೆ ಸಮಿತಿ ಸೇರುವುದಕ್ಕೆ ಸಮಿತಿಯ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತದೆ. ಆಗ ಸರ್ಕಾರದ ಪರವಾಗಿ ಬಂದಿದ್ದ ಯುವ ನೇತಾರ ರಾಗಿಣಿಯನ್ನು ಉಗ್ರಗಾಮಿ ಎಂದು ಕರೆಯುತ್ತಾನೆ. ಅದಕ್ಕೆ ಆಯೋಗದ ಅಧ್ಯಕ್ಷರಾದ ಮಿಥುನ್ ಚಕ್ರವರ್ತಿ ಪಶ್ಚಾತ್ತಾಪದಿಂದ ಮತ್ತು ನ್ಯಾಯಯುತವಾಗಿ ಪ್ರತಿಯೊಬ್ಬ ಸದಸ್ಯನ ಉದ್ದೇಶವನ್ನು ತಿಳಿಸುತ್ತಾರೆ. ಅದು ಹೀಗಿದೆ. “ಉಗ್ರಗಾಮಿ?!
ಉಗ್ರಗಾಮಿ ಯಾರು ಎಂದು ನನಗೂ ಗೊತ್ತಿದೆ. ಒಬ್ಬ ಭಯೋತ್ಪಾದಕ ಇಷ್ಟು ವರ್ಷಗಳ ಪ್ರಯತ್ನದ ನಂತರವೂ ಮಾಡದನ್ನು ನಾವು, ದೇಶದ ವಿವಿಧ ಚಹರೆಗಳು ನಾವು ಮಾಡುತ್ತಿದ್ದೇವೆ. ರಾಜಕೀಯದ ಭಯೋತ್ಪಾದಕರಾಗಿ ದೇಶವನ್ನು ವಿಭಜಿಸಿದ್ದೇವೆ. ಜನರಿಂದ ಸತ್ಯವನ್ನು ಮತ್ತು ಅದಕ್ಕಾಗಿ ಹೋರಾಡುವ ಶಕ್ತಿಯನ್ನು ಕಿತ್ತುಕೊಂಡೆವು.”
“ಸರ್ಕಾರೇತರ ಸಂಸ್ಥೆಗಳು (NGOs), ಇವಕ್ಕೆ ಸತ್ಯ ಯಾಕೆ ಬೇಕು ಎಂದರೆ ಸರ್ಕಾರವನ್ನು ಒತ್ತಾಯಿಸಲು, ಹಿಡಿತದಲ್ಲಿ ಇಟ್ಟುಕೊಳ್ಳಲು ಮತ್ತು ಯಾವುದೇ ಸರ್ಕಾರ ತಮ್ಮ ಸುದ್ದಿಗೆ ಬರದಂತೆ ತಡೆಯಲು. ಇವರು ಸಾಮಾಜಿಕ ಉಗ್ರಗಾಮಿಗಳು.”
“ನ್ಯಾಯಾಧೀಶರು, ಇವರಿಗೆ ಯಾಕೆ ಸತ್ಯ ಬೇಕು ಎಂದರೆ, ಅವರೀಗ ನಿವೃತ್ತರು. ಸರ್ಕಾರದಿಂದ ಹೆಚ್ಚಿನದನ್ನು ಪಡೆಯಬಹುದು, ಸರ್ಕಾರಿ ದಾಖಲೆಗಳಲ್ಲಿ ಒಳ್ಳೆಯ ಹೆಸರಿನೊಂದಿಗೆ ಅಜರಾಮರಾಗಬಹುದು. ಇವರು ನ್ಯಾಯಾಂಗದ ಉಗ್ರರು.”
“ಇತಿಹಾಸಕಾರರಾಗಿ ಹೊಸ ಹೊಸ ಸತ್ಯಗಳನ್ನು ಒಪ್ಪಿಕೊಂಡರೆ ಅವರ ಹಳೆಯ ಪುಸ್ತಕಗಳ ಬೆಲೆ ಏನು? ಸಮಾಜದಲ್ಲಿ ಅವರ ಮೌಲ್ಯ ಕುಸಿದುಹೋಗುತ್ತದೆ. ಅವರಿಗೆ ರಾಯಧನದ (Royalty) ಚಿಂತೆ. ಇವರಿಗೂ ನಿಜವಾದ ಸತ್ಯ ಬೇಕಿಲ್ಲ. ಇವರು ಬೌದ್ಧಿಕ ಉಗ್ರರು.”
ಹೀಗೆ ಸಾಗುವ ದೃಶ್ಯ ಅಕ್ಷರಶಃ ಇಂದಿನ ಸಮಾಜವನ್ನು ಕಣ್ಣೆದುರು ತರುತ್ತದೆ. ಮಾಧ್ಯಮಗಳ ಮತ್ತು ಸಮಿತಿಯ ಸಮ್ಮುಖದಲ್ಲಿ ರಾಗಿಣಿ ದಾಖಲೆಗಳನ್ನು ಪ್ರಸ್ತುತ ಪಡಿಸುತ್ತಾಳೆ. ಆ ಅನಾಮಿಕ ವ್ಯಕ್ತಿ ಬೇರಾರೂ ಆಗಿರದೇ ಸಮಿತಿಯ ಸದಸ್ಯರಲ್ಲೇ ಒಬ್ಬರು ಎಂಬ ವಿಷಯವೂ ತಿಳಿಯುತ್ತದೆ. ಕೊನೆಯಲ್ಲಿ ರಾಜಕಾರಣಿ ಪತ್ರಕರ್ತೆಗೆ ನಿನಗೆ ರಾಜಕಾರಣಕ್ಕೆ ಸ್ವಾಗತ ಎಂದು ಹೇಳುವಾಗ ಪ್ರಸಕ್ತ ರಾಜಕೀಯ ಸ್ಥಿತಿಗತಿ ಕಣ್ಣ ಮುಂದೆ ಬರುತ್ತದೆ. ಇತ್ತೀಚಿನ ಪ್ರತಿ ಹೋರಾಟಗಾರರು ರಾಜಕೀಯದ ಸಾಗರವನ್ನು ಸೇರಿದ ಮೇಲೆ ಕೊನೆಗೆ ತಾವು ನಂಬಿದ ಮತ್ತು ಜನತೆಗೆ ತೋರಿದ ಸತ್ಯಕ್ಕೆ ಸಮಾಧಿ ಕಟ್ಟಿ ರಾಜಕಾರಣಿಯೇ ಆಗಿ ಹೋಗುತ್ತಾರೆ. ಅಂತೆಯೇ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕುಟುಂಬದ ಸಹಯೋಗದಿಂದ ನಿರ್ಮಿಸಿದ ಈ ಚಿತ್ರದಲ್ಲಿ ಶಾಸ್ತ್ರಿಯವರ ಸಾವಿನ ಹಿಂದಿನ ಸತ್ಯವನ್ನು ಅರಿಯಲು ನೀವು ಖಂಡಿತ ಚಿತ್ರವನ್ನು ನೋಡಲೇಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post