ಕಲ್ಪ ಮೀಡಿಯಾ ಹೌಸ್
ಗುರು ಎಂದರೆ ಯಾರು? ಅವರ ನೋಡಲು ಹೇಗಿರುತ್ತಾರೆ? ಅವರ ಬಳಿ ಏನು ವರವನ್ನು ಕೇಳಬೇಕು? ಎಂಬೆಲ್ಲಾ ಪ್ರಶ್ನೆಗಳು ನಮ್ಮಲ್ಲಿ ಮೂಡಿರಬಹುದು. ಹೌದು ನಾವು ಹುಟ್ಟಿದಂದಿನಿಂದ ನಮ್ಮೊಡನೆ ಗುರುಭಾವ ನಮಗೆ ಗೊತ್ತಿಲ್ಲದಂತೆ ನಮ್ಮನ್ನು ಪಾಲನೆ ಪೋಷಣೆ ಮಾಡುತ್ತಿದೆ. ಹಸುಕಂದಮ್ಮನಾಗಿದ್ದಾಗ ಅಮ್ಮ ನಮ್ಮನ್ನು ಪಾಲನೆ ಪೋಷಣೆ ಮಾಡಿ ಮಾತು ಕಲಿಸುತ್ತಾಳೆ, ನಮಗೆ ಬಟ್ಟೆಬರೆಗಳನ್ನು ಉಡಿಸಿ ಸಂತಸಪಡುತ್ತಾಳೆ. ಮೊಟ್ಟಮೊದಲಿಗೆ ಅಕ್ಷರಭ್ಯಾಸ ಮಾಡಿಸುವ ಶಿಕ್ಷಕಿಯೇ ತಾನಾಗಿ ಗುರು ಎನಿಸಿಕೊಳ್ಳುತ್ತಾಳೆ. ಅದಕ್ಕೆಂದೆ ಮನೆಯೆ ಮೊದಲ ಪಾಠ ಶಾಲೆ. ತಾಯಿ ಮೊದಲ ಗುರುವು ಎಂಬ ಮಾತೊಂದಿದೆ. ಅಪ್ಪ ನಾವು ತಪ್ಪು ಮಾಡಿದಾಗ ತಿದ್ದಿ ನಡೆಸುವ ಗುರುವಾಗುತ್ತಾನೆ.
ಮುಂದಿನ ನಮ್ಮ ಜೀವನದಲ್ಲಿ ಅಕ್ಷರಭ್ಯಾಸವನ್ನು ಕಲಿತು, ಜೀವನೋಪಾಯಕ್ಕಾಗಿ ವೃತ್ತಿಗೆ ಉಪಯೋಗವಾಗುವಂತ ಅನೇಕ ಶಿಕ್ಷಣಗಳನ್ನು ಪಡೆದು ಕೀರ್ತಿ ಯಶಸ್ಸು, ಸಂಪತ್ತು ಐಶ್ವರ್ಯಗಳನ್ನು ಪಡೆದು ಸುಖ ಜೀವನವನ್ನು ನಡೆಸುವ ಯಶಸ್ವಿ ಪುರುಷರಾಗುತ್ತೇವೆ. ಪ್ರತಿಯೊಂದು ಸಮಯದಲ್ಲೂ ಒಂದಿಲ್ಲೊಂದು ರೂಪದಲ್ಲಿ ನಮಗೆ ಜ್ಞಾನವನ್ನು ಬೋದಿಸುತ್ತಾ, ನಮ್ಮ ಅವಶ್ಯಕತೆಗಳನ್ನು ಪೂರೈಸುತ್ತಾ ನಮ್ಮನ್ನು ಪೊರೆಯುತ್ತಿರುವ ಗುರು ಎಂಬ ಭಾವ ನಮಗೆ ಅರಿವಿಗೆ ಬರುವುದಿಲ್ಲ.
ಗುರುವನ್ನು ಕಂಡಾಕ್ಷಣ ಅವರು ಕಾವಿಯ ವಸ್ತ್ರವೇ ಧರಿಸಿರಬೇಕು, ಕೈಯಲ್ಲಿ ದಂಡ ಕಮಂಡಲ ಹಿಡಿದಿರಬೇಕು ಎಂಬೆಲ್ಲಾ ಕಲ್ಪನೆಗಳು ದಿಟವಾದರೂ ನಿಜವಾದ ಗುರುವು ನಮ್ಮ ಆಸೆಗಳನ್ನು ನಿರ್ಲೇಪ ಮಾಡಿ ನಮ್ಮ ಮನಸ್ಸನ್ನು ಯಾವುದು ಅಶಾಶ್ವತವಾಗಿ ಉಳಿಯಬಲ್ಲದೋ ಅದರೆಡೆಗೆ ನಮ್ಮ ಮನಸ್ಸನ್ನು ಸದಾ ನೆಲೆನಿಲ್ಲುವಂತೆ ಮಾಡಬಲ್ಲವನೇ ನಿಜವಾದ ಗುರು.
ಜೀವಿಯ ಸಂಕುಲದಲ್ಲಿ ಅತಿ ಬುದ್ದಿವಂತನೆನೆಸಿಕೊಂಡಿರುವ ನರ ಮಾನವನಿಗೆ ಆಸೆಗಳು ಹುಟ್ಟಿನಿಂದಲೇ ಬೆಳೆಯುತ್ತವೆ. ವಯಸ್ಸಿಗೆ ಬಂದಂತೆಲ್ಲಾ ಐದಂಕಿ, ಆರಂಕಿಯ ಸಂಬಳ ಪಡೆಯಬೇಕು, ದೊಡ್ಡದಾದ ಮಹಲಿನಂತ ಮನೆಯ ಕಟ್ಟಬೇಕು, ಸುಂದರವಾದ ಹೆಂಡತಿ ಮುದ್ದಾದ ಮಕ್ಕಳನ್ನು ಪಡೆಯಬೇಕು. ಸುಖವಾಗಿ ಯಾವುದೇ ದುಃಖ ದುಮ್ಮಾನಗಳಿಲ್ಲದೆ ಅತಿ ಹೆಚ್ಚು ಕಾಲ ಬಾಳಬೇಕು. ಎಂಬೆಲ್ಲ ಆಸೆಗಳು ಮಾನವನಲ್ಲಿ ಸಹಜವಾಗಿಯೇ ಅರಳುತ್ತವೆ.
ಆದರೆ ಈ ಆಸೆಗಳ ಸಾಲಿನಲ್ಲಿ ತನ್ನನ್ನು ತಾನು ಅರಿಯಬೇಕು. ತಾನು ಯಾತಕ್ಕಾಗಿ ಜನ್ಮ ತಾಳಿದೆ. ತನಗೆ ಪ್ರತಿನಿತ್ಯ ಉಸಿರಾಡಿಸುತ್ತಿರುವ ಭಗವಂತನನ್ನು ಭಜಿಸಬೇಕು. ಆತನ ಕರುಣೆಗೆ ಧನ್ಯವಾದ ಹೇಳಲಿಕ್ಕಾಗಿ ಸಮಯ ಮೀಸಲಿಡಬೇಕು ಎಂಬೆಲ್ಲಾ ಆಸೆಗಳು ಅರಳುವುದೇ ಕಡಿಮೆ. ಮಾನವ ತನ್ನ ಜೀವನದ ಕ್ಷಣಕ್ಷಣವನ್ನು ಸಂತೋಷವಾಗಿರಲು ಸುಕೋಮಲ ಗಾಳಿ, ಬೆಳಕು, ನೀರು ಎಲ್ಲಾ ಸೌಕರ್ಯಗಳನ್ನು ಕಾಲಕಾಲಕ್ಕೆ ಅನುಕೂಲ ಮಾಡಿಕೊಟ್ಟ ದೇವನನ್ನು ತೋರಿಸಲಿಕ್ಕಾಗಿ ಒಬ್ಬ ಗುರು ಬೇಕು. ಆತನಲ್ಲಿ ಒಂದಿಷ್ಟು ಕೃತಜ್ಞತಾ ಭಾವವನ್ನು ಬೆಳೆಸಿಕೊಳ್ಳಲಿಕ್ಕಾಗಿ ಸದ್ಗುರು ಒಬ್ಬ ಬೇಕೆ ಬೇಕು.
ಅಂತಹ ಸದ್ಗುರುಗಳ ಸಾಲಿಗೆ ನಿಲ್ಲಬಲ್ಲಂತಹ ಒಬ್ಬ ಗುರುಗಳೆಂದರೇ ಅವರೇ ನಮ್ಮ ಮುಗ್ದ ಮಲ್ಲಣ್ಣನವರು. ಚಿತ್ರದುರ್ಗದ ಚಳ್ಳಕೆರೆಯ ಸಮೀಪ ಉಪ್ಪಾರಹಟ್ಟಿಯಲ್ಲಿ ಜನಿಸಿದ ಮಲ್ಲಣ್ಣನವರ ಜೀವನವೇ ಒಂದು ಆಧ್ಯಾತ್ಮದ ಕಡಲು. ಅವರ ಜೀವನದ ಒಂದೊಂದು ಘಟನೆಗಳು ಕೂಡ ಮೈ ರೋಮಾಂಚನಗೊಳಿಸುತ್ತವೆ. ಅವರೇ ಬರೆದು ಮುದ್ರಿಸಿದ ಮಹದಾಶ್ಚರ್ಯ ಮತ್ತು ಭಗವದಾಶ್ಚರ್ಯ ಕೃತಿಗಳು ಮಲ್ಲಯ್ಯನವರ ಮುಗ್ದ ಭಕ್ತಿಯ ಮೇಲೆ ಬೆಳಕು ಚೆಲ್ಲುತ್ತವೆ.
ಮಲ್ಲಣ್ಣ ಚಿಕ್ಕಂದಿನಿಂದ ತನ್ನ ತಂದೆಯವರು ಹೇಳುತಿದ್ದ ಕೆಲಸಗಳನ್ನು ಚಾಚುತಪ್ಪದೆ ಮಾಡುತ್ತಿದ್ದರು. ಅದರಲ್ಲಿ ಅವರದ್ದು ರೈತರ ಮನೆಯಾಗಿದ್ದರಿಂದ ಹಸುಗಳನ್ನು ಮೇಯಿಸುವುದು ಅವರ ದಿನನಿತ್ಯದ ಕೆಲಸವಾಗಿತ್ತು. ಅದನ್ನು ಶ್ರದ್ದೆಯಿಂದ ಮಾಡುತ್ತಿದ್ದ ಮಲ್ಲಣ್ಣನವರಿಗೆ ಕನ್ನೇಶನೆಂಬ ದೇಗುಲ ಕಣ್ಣಿಗೆ ಬಿತ್ತು.
ಅವರಿಗೆ ನಿತ್ಯ ಆರಾಧ್ಯದೈವ ವಾಗಿದ್ದ ಶಿವನ ನಾಮವನ್ನು ಹಗಲಿರುಳು ನೆನೆಸುತ್ತಿದ್ದ ಮಲ್ಲಣ್ಣನಿಗೆ ಕನ್ನೇಶನ ದೇಗುಲದಲ್ಲಿ ಲಿಂಗವನ್ನು ದರ್ಶನ ಮಾಡಿದ್ದು ಒಂದು ಪವಾಡದಂತೆಯೇ ನಡೆಯುತ್ತದೆ. ರಾತ್ರಿ 12ರ ಸಮಯದಲ್ಲಿ ತಮ್ಮ ಮನೆಯ ಹಿಂಭಾಗದಲ್ಲಿ ಬೆಳೆದ ಚೆಂಡು ಹೂಗಳನ್ನು ತಮ್ಮ ಹೊದೆಯುವ ರಗ್ಗಿನಲ್ಲಿ ತುಂಬಿಕೊಂಡು ಹೊರಲಾರದ ಬಾರವನ್ನು ಹೊತ್ತು ಪಾಳುಬಿದ್ದಿದ್ದ ಕನ್ನೇಶನ ದೇಗುಲದಲ್ಲಿ, ಹಗಲೊತ್ತಿನಲ್ಲೇ ಜನರು ಹೋಗಲು ಹೆದರುವಂತ ಸ್ಥಳಕ್ಕೆ, ಲಿಂಗವಿದೆಯೋ ಇಲ್ಲವೋ ಎಂಬುದು ಸಹ ಗೊತ್ತಿಲ್ಲದೆ ಅದರ ಬಾಗಿಲನ್ನು ತೆಗೆದು ಕಗ್ಗತ್ತಲ್ಲಲ್ಲಿ ಲಿಂಗದ ಮೇಲೆ ಕೈಯಾಡಿಸಿ ರಗ್ಗಿನಲ್ಲಿ ತಂದಿದ್ದ ಹೂಗಳನ್ನು ಶಿವನ ಮೈಮೇಲೆ ಸುರಿದು ನಿನ್ನ ಪಾಲನ್ನು ನಿನಗರ್ಪಿಸಿದ್ದೇನೆ ಎಂಬ ಕೃತಜ್ಞತಾ ಭಾವದಲ್ಲಿ ವಾಪಾಸ್ ತೆರಳುತ್ತಾರೆ. ಇದಕ್ಕೆ ಪ್ರೇರಣೆ ಮಲ್ಲಣ್ಣನಿಗೆ ಆ ರಾತ್ರಿ ಸ್ವಪ್ನದಲ್ಲಿ ಮೂರು ಬಾಲಯತಿಗಳು ಬಂದು ಶಿವನಿಗೆ ಹೂ ಬೇಕಂತೆ ತಂದುಕೊಡು ಎಂಬುದಾಗಿ ಕೇಳಿಕೊಂಡಿರುತ್ತಾರೆ.
ಅಂದಿನಿಂದ ಕನ್ನೇಶ ಲಿಂಗಕ್ಕೂ ಮಲ್ಲಣ್ಣನಿಗೂ ಅವಿನಾಭಾವ ಸಂಬಂದವೇರ್ಪಡುತ್ತದೆ. ದಿನನಿತ್ಯ ಅಡವಿಯಲ್ಲಿ ಸಿಗುತ್ತಿದ್ದ ಹೂ ಹಣ್ಣುಗಳನ್ನು ಅರ್ಪಿಸಿ ಪೂಜಿಸುತ್ತಿದ್ದ ಮಲ್ಲಣ್ಣನನ್ನು ನೋಡುತ್ತಿದ್ದ ಹನುಮಂತಜ್ಜ ಎಂಬ ಮಹಾಜ್ಞಾನಿಗಳಾಗಿದ್ದ ಅಜ್ಜನವರು ಮಲ್ಲಣ್ಣನ ಭಕ್ತಿಯನ್ನು ಗಮನಿಸಿ ಆತನಿಗೆ ಆಧ್ಯಾತ್ಮದ ದೀಕ್ಷೆಯನ್ನು ನೀಡುತ್ತಾರೆ. ಅಂದಿನಿಂದ ಮಲ್ಲಣ್ಣನಿಗೆ ಹನುಮಂತಜ್ಜ ಆಧ್ಯಾತ್ಮಿಕ ಗುರುಗಳಾಗಿ ಸತ್ಸಂಗದ ಮಹತ್ವವನ್ನು ತಿಳಿಸುತ್ತಾರೆ.
ಮಲ್ಲಣ್ಣನಿಗೆ ತಾನು ನಂಬಿರುವ ಕನ್ನೇಶ ಶಿವನಿಂದ ಉಸಿರುಗಟ್ಟಿಸುವಂತಹ ಸಂದರ್ಭಗಳನ್ನು ಪಾಸುಮಾಡುತ್ತಾರೆ. ಇದರಿಂದಾಗಿ ಮಲ್ಲಣ್ಣ ಅನೇಕ ಮಂದಿ ಸಿದ್ದ ಅವದೂತರನ್ನು ದರ್ಶಿಸುತ್ತಾರೆ. ಅವರ ಸಾಂಗತ್ಯ ದೊರೆಯುತ್ತದೆ. ಹನುಮಂತಜ್ಜ ತನ್ನ ಕಾಲಾವದಿಯ ಒಳಗಾಗಿ ಮಲ್ಲಣ್ಣನಿಗೆ ಸತ್ಸಂಗ ಬಂಧುಗಳ ಸಮ್ಮುಖದಲ್ಲಿ ಮರುನಾಮಕರಣ ಮಾಡಿ ಆಕಾಶದಲ್ಲಿ ಹೊಳೆಯುತ್ತಿರುವ ಶ್ರೀಸತ್‌ಉಪಾಸಿ ಎಂಬ ನಾಮವನ್ನು ನಾಮಕರಣ ಮಾಡುತ್ತಾರೆ.ಅಂದಿನಿಂದ ಮಲ್ಲಣ್ಣ ಶ್ರೀಸತ್‌ಉಪಾಸಿ ಯಾಗಿ ಲಕ್ಷಾಂತರ ಭಕ್ತರ ಮನೆಗಳಿಗೆ ಅವಧೂತ ಗುರು ದತ್ತಾತ್ರೇಯರನ್ನು ಪರಿಚಯಿಸಿ ಸತ್ಸಂಗ ಭಜನೆ ಪಾರಾಯಣಗಳ ಮುಖಾಂತರ ಭಕ್ತಿಯ ಬೀಜವನ್ನು ಬಿತ್ತುತ್ತಿದ್ದಾರೆ.
ಶಿವಮೊಗ್ಗದ ವಿದ್ಯಾನಗರದ ಸಹ್ಯಾದ್ರಿ ಹಾಸ್ಟೆಲ್ ಹಿಂಬಾಗದಲ್ಲಿರುವ (ಶ್ರೀಪಾದವಲ್ಲಭ ಕ್ಷೇತ್ರ) ದತ್ತಾತ್ರೇಯ ಆಶ್ರಮದಲ್ಲಿ ಡಿಸೆಂಬರ್ 18, 19 ಶನಿವಾರ ಮತ್ತು ಭಾನುವಾರಗಳಂದು ಶ್ರೀದತ್ತಜಯಂತಿ ಮಹೋತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಪೂಜ್ಯರಾದ ಪರಮಹಂಸ ಸದ್ಗುರು ಶ್ರೀಸತ್‌ಉಪಾಸಿಯವರ ಸಮ್ಮುಖದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅಪ್ಪನವರ ಬರುವಿಕೆಯನ್ನು ಭಕ್ತರು ಕಾತರದಿಂದ ಕಾಯುತ್ತಿರುತ್ತಾರೆ. ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುವ ಸದ್ಗುರು ದೊಡ್ಡೆರಿಯಿಂದ ಬರುತ್ತಾರೆ ಎಂಬ ಸಂತಸ ಎಲ್ಲರಲ್ಲೂ ಮನೆಮಾಡಿರುತ್ತದೆ. ಹಾಡಿ ಕುಣಿದು ಭಕ್ತಿಯಿಂದ ಗುರುವನ್ನು ಸ್ವಾಗತಿಸುವ ಅಪರೂಪದ ವರ್ಣನೆಯನ್ನು ನೋಡಿಯೇ ಆನಂದಿಸಬೇಕು. ಗುರುವಿನ ಕರುಣೆಗೆ ಪಾತ್ರರಾಗಲು ಯೋಗಾಯೋಗವಿರಬೇಕಂತೆ, ಅಂತಹ ಶುಭಯೋಗವನ್ನು ನಾವ್ಯಾರು ಕಳೆದುಕೊಳ್ಳದೆ, ದರ್ಶನ ಪಡೆದು ಧನ್ಯರಾಗೋಣ ಬನ್ನಿ.
ಈಗಾಗಲೇ ಆಯ್ದ ಬೀದಿಗಳಲ್ಲಿ ದತ್ತಬಿಕ್ಷೆಯ ಸಂಭ್ರಮವು ಜರುಗುತ್ತಿದೆ. ಹಬ್ಬದ ರೀತಿಯಲ್ಲಿ ಭಕ್ತರು ದೇಹಭಾವವನ್ನು ಮರೆತು ಭಜನೆಗಳನ್ನು ಹಾಡುತ್ತಾ ಕುಣಿಯುತ್ತ ಸಾಗುವ ಮಧುಕರಿ ಭಿಕ್ಷಾಪರಿಕ್ರಮ ದತ್ತನಿಗೆ ಬಹಳ ಇಷ್ಟವಂತೆ. ಅದೇ ರೀತಿ ಶಿವಮೊಗ್ಗದ ದತ್ತಭಕ್ತರು ಮತ್ತೂರು ಸೇರಿದಂತೆ ಆನೇಕ ಬೀದಿಗಳಲ್ಲಿ ಭಿಕ್ಷೆ ಪಡೆದು ದತ್ತಜಯಂತಿಯ ಸಂಬ್ರಮವನ್ನು ಕಳೆಗಟ್ಟುವಂತೆ ಮಾಡುತ್ತಾರೆ. ಭಿಕ್ಷೆಯಿಂದ ಅಹಂಕಾರ ಅರಿವಿಲ್ಲದಂತೆ ಅಳಿಯುವುದಂತೆ. ದತ್ತನಿಗೆ ಭಿಕ್ಷೆ ಎನ್ನುವುದೊಂದು ನೆಪಮಾತ್ರ, ಆತ ಭಿಕ್ಷೆಯ ಬೇಡಿ ತಮ್ಮ ಅಹಂಕಾರವನ್ನು ದಹಿಸಿಕೊಳ್ಳುವ ಭಕ್ತರಿಗೆ ಪಾಪಕರ್ಮಗಳನ್ನು ತೊಳೆದು ಮುಕ್ತಿಯ ಹಾದಿಯ ಸುಗಮಗೊಳಿಸುತ್ತಾರೆಂಬ ನಂಬಿಕೆ ಹಿಂದು ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿದೆ.
ವಿದ್ಯಾನಗರದ ದತ್ತನಾಲಯದಲ್ಲಿ ದತ್ತಜಯಂತಿಯಂದು ಮುಂಜಾನೆಯಿಂದಲೇ ಕ್ಷೀರ, ಬೆಣ್ಣೆ, ತುಪ್ಪ ಅಭಿಷೇಕಗಳಿಂದ ಮಜ್ಜನಗೊಳ್ಳುವ ಶ್ರೀದತ್ತಾತ್ರೇಯ, ಶ್ರೀಪಾದವಲ್ಲಭರು ಮತ್ತು ಶ್ರೀನರಸಿಂಹ ಸರಸ್ವತಿ ಗುರುಗಳು ಹೂವಿನ ಅಲಂಕಾರದಲ್ಲಿ ಶೃಂಗಾರಗೊಂಡು ಬಾಲಕೃಷ್ಣರಂತೆ ಮುದ್ದಾಗಿ ಕಾಣುತ್ತಾರೆ. ಅಪ್ಪಾಜಿಯವರನ್ನು ಆಶ್ರಮಕ್ಕೆ ಬರಮಾಡಿಕೊಳ್ಳುವ ಸಂಭ್ರಮ ಡಿಸೆಂಬರ್ 18ರ ಶನಿವಾರ ಸಂಜೆ ನಡೆಯುತ್ತದೆ. ಭಜನೆಯ ನಿನಾದಕ್ಕೆ ಮೈಮರೆತು ಕುಣಿದು ಕುಪ್ಪಳಿಸಿ ಸದ್ಗುರುಗಳನ್ನು ಸ್ವಾಗತ ಮಾಡುವುದು ನೋಡಲು ಕಣ್ಣಿಗೆ ಹಬ್ಬವೇ ಸರಿ. ಪೂಜ್ಯ ಸದ್ಗುರುಗಳಿಂದ ಹೊಸದಾಗಿ ನಿರ್ಮಿತವಾದ ಗುರುಭವನದ ಲೋಕಾರ್ಪಣೆ ಆಗಲಿದೆ. ಅಲ್ಲಿ ಶ್ರೀದತ್ತಾತ್ರೇಯನನ್ನು ತೊಟ್ಟಿಲಲ್ಲಿಟ್ಟು ತೂಗಿ ಸಂಭ್ರಮಪಡುತ್ತಾರೆ. ನಂತರ ದತ್ತಹೋಮ, ಮಹಾಪ್ರಸಾದಗಳು ನಡೆಯುತ್ತವೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವೂ ಇದೆ. ಮುಂಜಾನೆಯವರೆಗೆ ಭಕ್ತರಿಂದ ಅಖಂಡ ಭಜನೆಯು ನಡೆಯುತ್ತದೆ.
ಡಿ.19ರ ಭಾನುವಾರ ಮುಂಜಾನೆ ೨೧ ಅಡಿ ಎತ್ತರದ ಮನಮೋಹಕವಾದ ರಥದಲ್ಲಿ ಅದ್ದೂರಿ ಶ್ರೀದತ್ತಾತ್ರೇಯರ ರಥೋತ್ಸವ ನಡೆಯುತ್ತದೆ. ಅದರಲ್ಲಿ ದತ್ತಾತ್ರೇಯನ ನೋಡುವುದೇ ಚಿತ್ತಾಕರ್ಷಕ. ದತ್ತನನ್ನು ಹಾಡಿಹೊಗಳುವ ಭಜನೆಗಳೊಂದಿಗೆ, ಹಾಗೂ ನಾನಾ ಕಲಾತಂಡಗಳ ಭೇರಿ ಮೃದಂಗಗಳ ನೃತ್ಯ ಸಂಗಮವು ಜರುಗಲಿದೆ.
ಸಂತರು ಭಕ್ತರಿಂದ ಸತ್ಸಂಗ ಸಮಾರಂಭದಲ್ಲಿ ದತ್ತನ ಕರುಣೆಯನ್ನು ಅನುಭವಗಳನ್ನು ಭಕ್ತರಿಗೆ ತಲುಪಿಸಿ ಭಕ್ತಿಮಾರ್ಗದೆಡೆಗೆ ಸೆಳೆಯುವ ಕಾರ್ಯಕ್ರಮವು ಇದಾಗಿದೆ. ಭಾನುವಾರ ಮದ್ಯಾಹ್ನ ಮಹಾಪ್ರಸಾದ ವಿನಿಯೋಗವಿರುತ್ತದೆ. ನಾವೆಲ್ಲ ನಮ್ಮ ಬಂಧು ವರ್ಗದೊಂದಿಗೆ ಈ ಅಗಣಿತ ಆನಂದವನ್ನು ಸವಿಯಲಿಕ್ಕೆ ಪಾಲುದಾರರಾಗೋಣ ಬನ್ನಿ.
ಕೊನೆಯಲ್ಲಿ ಈ ವರವನ್ನು ಕೊಡುವ ಗುರುವಿನಲ್ಲಿ ಏನನ್ನು ಕೇಳಬೇಕು ಎಂದರೆ. ಪ್ರಾಪಂಚಿಕ ಕಷ್ಟನಷ್ಟ, ನೋವುಗಳು ಗುರುವಿನ ಸೇವೆ ಮತ್ತು ಅವರ ಸ್ಮರಣೆಯಿಂದ ತನ್ನಿಂದ ತಾನಾಗಿಯೇ ದೂರಾಗುತ್ತವೆ. ಯಾತಕ್ಕಾಗಿ ಈ ಮಾನವ ಜನ್ಮ ಪ್ರಾಪ್ತವಾಗಿದಿಯೋ ಅದನ್ನು ಅರಿಯುವಂತಹ ವರವನ್ನೇ ಬೇಡಬೇಕು. ಸದಾ ನೋವಿನಲ್ಲೇ ತುಂಬಿರುವ ಹುಟ್ಟು ಸಾವಿನ ಚಕ್ರದಿಂದ ನಮ್ಮನ್ನು ಪಾರುಮಾಡಿ ಮುಕ್ತಿ ಎಂಬ ವರವನ್ನು ನೀಡಿ ನಿನ್ನಬಳಿಯೇ ಇರುವ ಸಾಯುಜ್ಯವನ್ನು ದಯಪಾಲಿಸು ಎಂಬುದಾಗಿ ಕೇಳಿ ಸದ್ಗುರುವಿನಲ್ಲಿ ಕೇಳುವುದಕ್ಕೆ ಬರುತ್ತೀರಲ್ಲವೇ?
ಶ್ರೀಹರಿ ಎಸ್ ವಿ, ವಿದ್ಯಾನಗರ ಶಿವಮೊಗ್ಗ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post