ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಗಜ ವೃಂದಕ್ಕೆ ಅಧಿಪತಿ ಗಜೇಂದ್ರ. ಪತ್ರಿಕಾ ವೃಂದದಲ್ಲಿ ಇಂತಹ ಅಧಿಪತ್ಯ ಸ್ಥಾಪನೆ ಕಷ್ಟ ಸಾಧ್ಯ. ಆದರೆ ಪಾರುಪತ್ಯ ಸ್ಥಾಪನೆ ಅಸಾಧ್ಯವೇನಲ್ಲ. ಇಂತಹ ಅಸಾಧ್ಯತೆಯನ್ನು ಸಾಧ್ಯತೆಯನ್ನಾಗಿಸಿರುವ ತುಂಗಾ ತರಂಗ ದಿನಪತ್ರಿಕೆಯ ಸಂಪಾದಕ ಎಸ್.ಕೆ. ಗಜೇಂದ್ರ ಸ್ವಾಮಿ 50ನೇ ಜನ್ಮ ದಿನ ಪೂರೈಸಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದಾರೆ.
ಮನುಷ್ಯನ ಜೀವಿತಾವಧಿಯಲ್ಲಿ 50 ವರ್ಷ ಪೂರೈಕೆ ಮಹತ್ವದ ಮೈಲಿಗಲ್ಲು. ಗಜೇಂದ್ರ ಸ್ವಾಮಿಗೆ ಅದಾಗಲೇ 50 ವರ್ಷ ತುಂಬಿ ಹೋಯ್ತಾ ಎಂದು ಅಚ್ಚರಿ ಪಡುವಷ್ಟು ಕ್ರಿಯಾಶೀಲ, ಸಕ್ರಿಯವಾಗಿರುವ ಈ ಚಿರ ಯೌವನಿಗ ಪತ್ರಕರ್ತರಾಗಿರುವ ಜಿ. ಸ್ವಾಮಿ ಕಾಲಚಕ್ರ ಯಾರಿಗೂ ಕಾಯುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.
ಜನ್ಮ ದಿನಾಂಕ ಆಧಾರಿತ ವಯಸ್ಸು ಕೇವಲ ದೇಹಕ್ಕಷ್ಟೇ ಹೊರತು ಮನಸ್ಸಿಗಲ್ಲ. ಸಾಧಿಸಬೇಕೆಂಬ ಛಲ, ಪ್ರಯತ್ನ, ಪರಿಶ್ರಮವಿದ್ದರೆ ಉತ್ತಮ ಫಲ, ಯಶಸ್ಸು ಪಡೆಯಲು ವಯಸ್ಸು ಎಂದೂ ಅಡ್ಡಿಯಾಗುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆಯೇ ಪತ್ರಕರ್ತ ಗಜೇಂದ್ರ ಸ್ವಾಮಿ.

ವಯಸ್ಸು 50 ದಾಟಿದ್ದರೂ ತನ್ನ ಬದುಕಿನ ಅರ್ಧದಷ್ಟು ವಯಸ್ಸನ್ನು (28 ವರ್ಷ) ಪತ್ರಿಕೋದ್ಯಮದಲ್ಲಿ ಕಳೆದಿರುವ ಗಜೇಂದ್ರ ಸ್ವಾಮಿ ವೃತ್ತಿ ಬದುಕಿನಲ್ಲಿ ಸಾಗಿ ಬಂದ ಹಾದಿ ಸಲೀಸಲ್ಲ. ಸಾಕಷ್ಟು ಏಳು- ಬೀಳು, ಕಷ್ಟ- ನಷ್ಟ, ನೋವು- ನಲಿವನ್ನು ಅನುಭವಿಸಿ ಮನಸ್ಸಿದ್ದರೆ ಮಾರ್ಗ ಎಂದು “ಗಜ ಗಾಂಭಿರ್ಯ” ದಿಂದ ಸಾಗಿದ ಪರಿಣಾಮ ಯಶಸ್ಸು, ಸಾಧನೆ ಸಾಧ್ಯವಾಗಿದೆ.
ಚಿಕ್ಕ ಅಂಕುಶದಿಂದ ದೊಡ್ಡ ಗಜವನ್ನು (ಆನೆಯನ್ನು) ಬೇಕಾದರೂ ಪಳಗಿಸಬಹುದು ಎಂಬುದನ್ನು ಅರಿತಿರುವ ಗಜೇಂದ್ರ ಸ್ವಾಮಿ, ಪೆನ್ ಎಂಬ ಚಿಕ್ಕ ಅಂಕುಶ ಹಿಡಿದು ಆಡಳಿತಶಾಹಿ ಎಂಬ ಮದಗಜವನ್ನು ಸಾಮಾಜಿಕ ಹಿತಾಸಕ್ತಿ, ಬದ್ಧತೆ, ಕಾಳಜಿ, ಕಳಕಳಿಯಿಂದ ತಿವಿಯುತ್ತಿದ್ದಾರೆ. ಅದನ್ನು ಪಳಗಿಸಲು ಹರಸಾಹಸ ಪಡುತ್ತಲೇ ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಲವು ಬಾರಿ ಯಶಸ್ಸನ್ನೂ ಸಾಧಿಸಿದ್ದಾರೆ.
ಪೆನ್ನಿನ ಮೇಲೆ ಪ್ರೀತಿ: ಪೆನ್ನಿನ ಮೇಲೂ ಪ್ರೀತಿ ಹೊಂದಿರುವ ಗಜೇಂದ್ರ ಸ್ವಾಮಿ ಅವರ ಬರವಣಿಗೆಯಲ್ಲೂ ‘ಕಿಕ್’ ಇದೆ. ಎಡಪಂಥೀಯ, ಬಲಪಂಥೀಯ ಎಂಬ ಯಾವುದೇ “ಇಸಂ” ಹೊಂದದೆ ‘ಮದ್ಯ’ಪಂಥೀಯರಾಗಿ, ಯಾವುದೇ ಮತ, ಜಾತಿ, ಧರ್ಮ, ಪಕ್ಷದ ಚೌಕಟ್ಟು ಹಾಕಿ ಕೊಳ್ಳದೆ ಆನೆ ನಡೆದದ್ದೇ ಹಾದಿ ಎಂಬಂತೆ ಗಜೇಂದ್ರ ಸ್ವಾಮಿ ಸಾಗುತಿದ್ದಾರೆ.

ಬ್ರೋ (ಬ್ರದರ್), ಸಿಸ್ (ಸಿಸ್ಟರ್) ಎಂದು ಕರೆಯುವುದು ಫ್ಯಾಷನ್ ಆಗಿರುವ ಇಂದಿನ ಕಾಲಮಾನದಲ್ಲಿ ತನಗಿಂತಲೂ ಕಿರಿಯ ವಯಸ್ಸಿನವರನ್ನೂ ಸಹ ಅಣ್ಣಾ ಹೇಳಿ, ಅಕ್ಕ ಹೇಳಿ ಎಂದು ಸಹೋದರತ್ವದ ಮನೋಭಾವದಿಂದ ಮೊಬೈಲ್ ಕರೆ ಸ್ವೀಕರಿಸಿ ಮಾತನಾಡು ಮನೋಭಾವ ಸ್ವಾಮಿಯವರದ್ದು. ಸಿಡುಕುತನ, ಮನೋಭಾವದ ಬದಲಾವಣೆ ಇಲ್ಲವೆಂದಲ್ಲ, ಆದರೆ ಅದು ಸಂದರ್ಭಕ್ಕೆ ಮಾತ್ರ ಸೀಮಿತ.
ಇವರ ಯಶಸ್ಸಿನ ಹುಡುಕಾಟದ ವರದಿಯ ನಡುವೆಯೂ ಹುಡುಕಾಟ, ಕುಲುಕಾಟವಿದ್ದರೂ ಅವರನ್ನು ಸ್ಥಿತಪ್ರಜ್ಞತೆಯಿಂದ ಸಹಿಸಿ, ಸೈರಿಸಿಕೊಂಡಿರುವ ಸಹಧರ್ಮಿಣಿ, ಸರ್ಕಾರಿ ಶಾಲೆಯ ಶಿಕ್ಷಕಿ ವೀಣಾ ಟೀಚರ್, ಅಪ್ಪನ ಮುದ್ದು ಮಗಳಾಗಿರುವ ಇಂಜಿನಿಯರಿಂಗ್ ವಿದ್ಯಾರ್ಥಿನಿ ದೀಪಿಕಾ ಜಿ. ಸ್ವಾಮಿ, ಕುಲಪುತ್ರ ಬಿ ಫಾರ್ಮಸಿ ಓದುತ್ತಿರುವ ದರ್ಶನ್ ಜಿ. ಸ್ವಾಮಿಯವರನ್ನು ಒಳಗೊಂಡ ಸುಖಿ ಕುಟುಂಬ ಇವರದ್ದು. ತಂದೆ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಹಾಗೂ ತಾಯಿ ಶಕುಂತಲಮ್ಮ ಅವರೊಂದಿಗೆ ಗುರುಹಿರಿಯರ ಮಾರ್ಗದರ್ಶನವನ್ನು ಅವರು ಸದಾ ಸ್ಮರಿಸುತ್ತಾರೆ.
ಪತ್ರಿಕೋದ್ಯಮದೊಂದಿಗೆ ಕೃಷಿಯಲ್ಲಿಯೂ ತೊಡಗಿಕೊಂಡಿರುವ ಗಜೇಂದ್ರ ಸ್ವಾಮಿ ಅಸಲಿ ಮಣ್ಣಿನ ಮಗ. ಅವರಿಗೆ ಅದರ ಬಗ್ಗೆ ವಿಶೇಷ ಆಸಕ್ತಿ. ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ, ನಾಟಕ, ರಂಗಭೂಮಿ ಮತ್ತಿತರೆ ಕ್ಷೇತ್ರಗಳಲ್ಲೂ ಇಂದಿಗೂ ಇವರ ಬರವಣಿಗೆಯ ಆಸಕ್ತಿ ಕುಂದಿಲ್ಲ. ಹಲವು ಪುಸ್ತಕಗಳನ್ನು ಸಂಪಾದಿಸಿದ್ದಾರೆ, ಸ್ವಂತ ರಚಿಸಿದ್ದಾರೆ. ಊಟಕ್ಕೆ ಒಂದಿಷ್ಟು ಉಪ್ಪಿನಕಾಯಿ ಎಂಬಂತೆ ಅವರ ವರದಿಯಲ್ಲಿ ಕ್ರೈಂ, ಸೆಕ್ಸ್ ವರದಿಗಳೂ ಉಂಟು. ಎಲ್ಲಿಯೂ ಅತಿರೇಖದ ವೈಭವೀಕರಣ ಇರೊಲ್ಲ. ಓದುಗರನ್ನು ಸೆಳೆಯುವ ಬರಹ ಅವರದು.

ನುಡಿದಂತೆ ನಡೆಯುವ, ಬರೆದಂತೆ ಬದುಕುವ ಗಜೇಂದ್ರ ಸ್ವಾಮಿ ಪರಿಪಕ್ವ ಪರ್ತಕರ್ತರಾಗಿ ರೂಪುಗೊಂಡಿದ್ದಾರೆ. ಫೆ. 24ರ ಶನಿವಾರ ಇವರು 50 ವರ್ಷ ಪೂರೈಸಿ 51ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದಾಗ ‘ವಿಧಾತ ಸುಧೀರ್’ ಎಂದೇ ಹೆಸರಾಗಿರುವ ಸಹ್ಯಾದ್ರಿ ಸುದ್ದಿ ದಿನಪತ್ರಿಕೆಯ ಸಂಪಾದಕ ಸುಧೀರ್ ಸೋಷಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದ ಗಜೇಂದ್ರ ಸ್ವಾಮಿಯವರ ಫೋಟೊ ಹಾಕಿ 51 ನಾಟ್ ಔಟ್ ಎಂದು ಶುಭ ಹಾರೈಸಿದ್ದರು. ಪೆನ್ ಎಂಬ ಬ್ಯಾಟ್ ಹಿಡಿದಿರುವ ಈ ದೈತ್ಯ ದಾಂಡಿಗ ಪತ್ರಕರ್ತ ಬದುಕಿನ ಮ್ಯಾಚ್‌ನಲ್ಲೂ ಸೆಂಚುರಿ ಬಾರಿಸಲಿ ಎಂಬುವುದೇ ಹಿತೈಷಿಗಳ ಹಾರೈಕೆ.
ಲೇಖಕರು: ಸಂತೋಷ್ ಎಲಿಗಾರ್, ಮೊ: 7848851966
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post