ಕಲ್ಪ ಮೀಡಿಯಾ ಹೌಸ್
ಯೇ ದೌಲತ್ ಭೀ ಲೇ ಲೋ, ಯೇ ಶೋಹರತ್ ಭೀ ಲೇ ಲೋ
ಭಲೇ ಚೀನ್ ಲೋ ಮುಝಸೆ ಮೇರಿ ಜವಾನಿ
ಮಗರ್ ಮುಝಕೋ ಲೌಟ ದೊ ಬಚಪನ್ ಕಾ ಸಾವನ್
ವೊ ಕಾಗಜ್ ಕೀ ಕಸ್ತಿ ವೊ ಬಾರೀಶ್ ಕಾ ಪಾನಿ
ಸುದರ್ಶನ್ ಅವರ ಕೆಲವು ಸಾಲುಗಳು ನೆನಪಾದವು.
ಈ ಸಿರಿವಂತಿಕೆಯ ತಗೋ, ಈ ಕೀರ್ತಿಯ ತಗೋ,
ಇನ್ನೂ ಬೇಕೆಂದರೆ ನನ್ನ ಯೌವ್ವನ ಎಲ್ಲವನ್ನು ಕಿತ್ತುಕೊ
ಆದರೆ, ನನ್ನ ಬಾಲ್ಯವ ಮರಳಿ ಕೊಟ್ಟುಬಿಡು,
ಅದೇ ಕಾಗದದ ದೋಣಿ, ಮಳೆ ನೀರಿನ ಓಣಿ,
ಎಷ್ಟು ಚಂದದ ಸಾಲುಗಳು. ಅವಿಸ್ಮರಣೀಯ ರೀತಿಯ ಸವಿಯುವ ಕ್ಷಣಗಳಲ್ಲಿ ಬಾಲ್ಯವು ಒಂದು. ಬಹುಷಃ ಆ ಬೆರಳೆಣಿಕೆಯ ವರ್ಷಗಳನ್ನು ನಾವು ಇರುವ ಕೊನೆ ನಿಮಿಷದ ತನಕ ಮೆಲುಕು ಹಾಕುತ್ತಲೇ ಇರುತ್ತೇವೆ. ಇಲ್ಲಿ ಕವಿ ಹೇಳುವುದು ಅದನ್ನೇ, ದೇವರು ಏನಾದರೂ ಮರಳಿ ತೆಗೆದುಕೊಂಡು, ಮತ್ತೆ ಏನಾದರೂ ಕೊಡೊ ಹಾಗಿದ್ದರೆ ಈ ಹಣ, ಐಶ್ವರ್ಯ, ಕೀರ್ತಿ ಎಲ್ಲವನ್ನು ಕೊಂಡು ಹೋಗಲಿ. ಆದರೆ ಬಾಲ್ಯವನ್ನು ಕೊಡಲಿ ಅಂತ.
ಈ ಸಲ ಮತ್ತೊಂದು ಚಂದದ ಚಿತ್ರದ ಜೊತೆ ಸ್ವಲ್ಪ ಸಮಯ. ಸಧ್ಯ ನೋಡಿಲ್ಲ, ಆದರೆ ಒಂದಿಷ್ಟು ವರ್ಷಗಳ ಹಿಂದೆಲ್ಲ ಐಕ್ಯೂ ಟೆಸ್ಟ್ ಅಂತೆಲ್ಲ ಮಕ್ಕಳಿಗೆ ಮಾಡ್ತಾ ಇದ್ದರು. ಅಂದರೆ ಇನ್ನೂ ಏನೂ ಅರಿಯದ ಕಂದಮ್ಮಗಳ ಎಳೆದು ತಂದು ಅವರ ಬುದ್ದಿಮತ್ತೆಯ ಪರೀಕ್ಷಿಸುವ ಒಂದಿಷ್ಟು ವಿಧಾನಗಳು. ಇವನು ಆಲ್ಬರ್ಟ್ ಐನ್ಸ್ಟೈನ್ ಮೀರಿಸಿದವ, ಇವನು ನ್ಯೂಟನ್ ಮೀರಿಸಿದವ ಅಂತೆಲ್ಲ ಹೇಳಿಕೊಂಡು ತಮ್ಮ ಬೆನ್ನು ತಾವೇ ತಟ್ಟಿಕೊಂಡು ಹೊರಡುತ್ತಿದ್ದ ಒಂದಿಷ್ಟು ಪೋಷಕರು ಇದ್ದರು. ಹಾಗಾದರೆ ಎಲ್ಲಿ ಹೋದರು ಆ ಬುದ್ದಿವಂತರು? ಈ ವಿಷಯ ಹೊತ್ತ ಅನೇಕ ಲೇಖನಗಳು ಬಂದಿವೆ, ಚರ್ಚೆಗಳು ನಡೆದಿವೆ ಹಾಗೂ ನಡೆಯುತ್ತಲೇ ಇವೆ. ಅಂತಹುದೆ ವಿಷಯ ಒಂದು ಅದ್ಭುತವಾದ ಚಿತ್ರ Gifted. ಇದೊಂದು 2017 ರಲ್ಲಿ ತೆರೆ ಕಂಡ ಇಂಗ್ಲಿಷ್ ಸಿನಿಮಾ. ಹೆಸರೇ ಹೇಳುವಂತೆ ವಿಶೇಷ ವಿಷಯ ಒಂದರ ಕುರಿತು ಹೇಳುವ ಕಥೆ. Gifted ಪದ ಕೆಲವೊಮ್ಮೆ ದೇವರಿಂದ ಆಶೀರ್ವದಿತ ಎಂಬರ್ಥವನ್ನು ಕೊಡುತ್ತದೆ. ಮೇರಿ ಚಿತ್ರದ ಕೇಂದ್ರ ಬಿಂದು. ಅವಳು ಇನ್ನೂ ಏಳರ ಹರೆಯದ ಪುಟ್ಟ ಬಾಲೆ. ಅವಳಿಗೆ ಗಣಿತದಲ್ಲಿ ಅದೆಂಥಹ ಆಸಕ್ತಿ ಎಂದರೆ ಸ್ನಾತಕೋತ್ತರ ಸಾಲಿನ ಗಣಿತವನ್ನು ಸುಲಭವಾಗಿ ಪರಿಹರಿಸಬಲ್ಲ ಪರಿಣಿತೆ.
ಅಂತಹ ಪರಿಣಿತೆ ಪುಟಾಣಿ ಮುಂಗೋಪಿ, ತನ್ನ ತಂದೆಯ ಜೊತೆ ಇರುತ್ತಾಳೆ. ಆ ತಂದೆಗೆ ಅವಳಿಗೆ ಒಂದು ಸಾಮಾನ್ಯ ಜೀವನ ಕೊಡುವ ಆಸೆ. ನಿಮಗೆ ಕೇಳಿಯೇ ವಿಶೇಷ ಅನ್ನಿಸಬಹುದು, ಅಂತಹ ಮಗಳಿಗೆ ಅವಕಾಶ ಕೊಡಿಸಿ ದೊಡ್ಡ ವ್ಯಕ್ತಿ ಮಾಡುವ ಬದಲು ಇದೆಂಥ ಆಸೆ ಎಂದು. ಆದರೆ ಕಥೆ ನಿಮಗೆ ಎಲ್ಲವನ್ನೂ ವಿವರಿಸುತ್ತದೆ. ಅವನು ಅವಳ ತಂದೆಯೇ ಆಗಿರುವುದಿಲ್ಲ, ಬದಲಾಗಿ ಸೋದರ ಮಾವ ಆಗಿರುತ್ತಾನೆ. ಆ ಮಗುವಿನ ತಾಯಿ, ಅಜ್ಜಿ ಎಲ್ಲರೂ ಗಣಿತದ ಅದ್ಭುತ ಪಂಡಿತರೇ ಆಗಿರುತ್ತಾರೆ. ಯಾಕೆ ಅವಳಿಗೆ ಸಹಜ ಬದುಕು ಕೊಡಿಸುವ ಆಸೆ, ಅವಳ ಪಾತ್ರ ತಾಯಿ, ಅಜ್ಜಿ, ಸೋದರ ಮಾವನ ಆಸೆಗಳಿಗೆ ಹೇಗೆ ಪ್ರತಿ ಸ್ಪಂದನೆ ಮಾಡುತ್ತದೆ? ಇಂತಹ ಹಲವು ನೈತಿಕ ಪ್ರಶ್ನೆಗಳಿಗೆ ಸಮಂಜಸ ರೀತಿಯ ಉತ್ತರ ಚಿತ್ರ ಖಂಡಿತವಾಗಿ ಕೊಟ್ಟಿದೆ ಎನ್ನಿಸುತ್ತದೆ. ಪ್ರಮುಖ ಪಾತ್ರಗಳಲ್ಲಿ ಮೆಕೆನ್ನಾ ಗ್ರೇಸ್, ಕ್ರಿಸ್ ಇವನ್ಸ್, ಜೇನ್ನಿ ಸ್ಟೇಟ್, ಒಕ್ಟೆವಿಯ, ಲಿಂಡ್ಸೆ ಡಂಕನ್ ಇದ್ದಾರೆ. 2017ರಲ್ಲಿ ತೆರೆ ಕಂಡ ಮಾರ್ಕ್ ವೆಬ್ ರ ಈ ಚಿತ್ರ ಅತಿ ಸರಳವಾಗಿ, ಅತ್ಯಾವಶ್ಯಕ ವಿಷಯವನ್ನು ತಲುಪುತ್ತದೆ. ಒಮ್ಮೆ ಆದರೂ ಚಿತ್ರ ನೋಡಿ ಆನಂದಿಸಿ.
ಒಂದೇ ಒಂದು ಜನ್ಮದಲಿ
ಒಂದೇ ಬಾಲ್ಯ, ಒಂದೇ ಹರೆಯ
ನಮಗದಷ್ಟೇ ಏತಕೋ…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post