ಕಲ್ಪ ಮೀಡಿಯಾ ಹೌಸ್
ನಾಗಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಶ್ರದ್ಧೆಯಿಂದ ಆಚರಿಸುವ ಒಂದು ಹಬ್ಬವಾಗಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯೆಂದು ಇದನ್ನು ಆಚರಿಸಲಾಗುತ್ತದೆ. ಈ ದಿನದಂದು, ನಾಗ ದೇವರನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಾಲಯಕ್ಕೆ ಹಾಗೂ ಹುತ್ತಗಳಿಗೆ ನಮಿಸುವುದು ಪರಂಪರೆಯಾಗಿದೆ.
ನಾಗನಿಗೆ ಹಾಲೆರೆದು, ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸುವುದು ಸಂಪ್ರದಾಯವಾಗಿದೆ. ನಾಗರ ಪಂಚಮಿ ಆಚರಣೆಯ ಪದ್ದತಿಯು ಮುಂದುವರೆಯಲು ಸಾಕಷ್ಟು ಕಾರಣಗಳಿವೆ. ಅದಕ್ಕಾಗಿ ಪುರಾಣಕಥೆಗಳು ಇವೆ. ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹುತ್ತಕ್ಕೆ ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ. ಈ ಹಬ್ಬವನ್ನು ಅಣ್ಣ ಮತ್ತು ತಂಗಿ ಇಬ್ಬರು ಸೇರಿ ಹೆಚ್ಚು ಸಂಭ್ರಮದಿಂದ ಆಚರಿಸುವುದು ಪದ್ಧತಿಯಾಗಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ನಾಗರ ಪಂಚಮಿ ಹಬ್ಬವನ್ನು ಕುಟುಂಬದವರು ಹಬ್ಬದ ಅಡಿಗೆಗಳನ್ನು ಮಾಡಿ, ಹೊಸ ಹೊಸ ಬಟ್ಟೆಯುಟ್ಟು ಸಂಭ್ರಮಿಸುವುದು, ಸೋದರ ಮತ್ತು ಸೋದರಿಯರು ಭಾಂದ್ಯವದ ಬೆಸುಗೆಯನ್ನು ಇನ್ನಷ್ಟು ಗಟ್ಟಿ ಮಾಡುವ ನಾಗರ ಪಂಚಮಿ ಎಲ್ಲರಿಗೂ ಪ್ರಿಯವಾದ ಹಬ್ಬ.
ಆದರೆ ಕೆಲವರು ಇಂದಿಗೂ ನಾಗರ ಪಂಚಮಿಯಂದು ಹುತ್ತಕ್ಕೆ ಹಾಲೆರೆಯುವ ಪರಿಪಾಟವನ್ನು ಮುಂದುವರೆಸಿದ್ದಾರೆ. ಹಾಲೆರೆಯುವ ಪದ್ಧತಿಯಿಂದ ನಾಗರ ಹಾವಿಗೆ ಆಗುವ ತೊಂದರೆಯನ್ನು ಅರಿತು ವಿಚಾರ ಮಾಡುವುದು ಒಳ್ಳೆಯದು.
ಬಸವಣ್ಣನವರು ವಚನ “ಕಲ್ಲು ನಾಗರ ಕಂಡರೆ ಹಾಲನೆರೆವರಯ್ಯ, ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯಾ” ಎಂಬುವುದು ಮಾನವನ ಮನಸ್ಥಿತಿಗೆ ಹಿಡಿದ ಕನ್ನಡಿ. ಕೆಲವೊಮ್ಮೆ ಹಾವು ಹಾಲು ಕುಡಿಯುವುದೇ ಒಂದು ವೇಳೆ ಕುಡಿದರೂ ಅದು ಇಷ್ಟವಾದ ಆಹಾರವೇ ಎಂಬುವುದು ಸಂದೇಹಾಸ್ಪದ ಸಂಗತಿಯಾಗಿದೆ. ಪಂಚಮಿ ಹಬ್ಬಕ್ಕೆಂದು ಒಂದು ದಿನ ಹಾವಿಗೆ ಹಾಲೆರೆಯುವ ಜನ ವರ್ಷದ ಉಳಿದ ದಿನಗಳಲ್ಲಿ ಅದಕ್ಕೆ ಹಾಲು ಎಲ್ಲಿ ಸಿಗುತ್ತದೆ ಎಂದು ಯೋಚಿಸಬೇಕಾದ ವಿಷಯವಾಗಿದೆ. ಹುತ್ತಕ್ಕೆ ಹಾಲು ಎರೆಯುವುದರಿಂದ ಹುತ್ತ ಹಾನಿಯಾಗುತ್ತದೆ. ಇದರಿಂದ ಹಾವು ಹಿಂಸೆ ಅನುಭವಿಸುತ್ತದೆ.
ನಾಗ ದೇವರಿಗೆ ತೊಂದರೆ ಕೊಟ್ಟು ನಾವು ಹೆಚ್ಚು ಸಂಭ್ರಮದಿಂದ ಆಚರಣೆ ಮಾಡುವುದು ಎಷ್ಟು ಸರಿ..?ನಗರ ಪ್ರದೇಶಗಳಲ್ಲಿ ಹಾವಿಗೆ ಬದುಕುವುದಕ್ಕೆ ಅವಕಾಶವೇ ಇಲ್ಲ. ಇನ್ನೂ ಗ್ರಾಮೀಣ ಭಾಗಗಳಲ್ಲಿ ಸ್ವಲ್ಪ ಮಟ್ಟಿಗೆ ಅವುಗಳ ಅಸ್ತಿತ್ವವನ್ನು ಕಾಣಬಹುದಾಗಿದೆ. ಹೀಗೆ ನಾವು ತಿಳಿದು ತಿಳಿದು ತಪ್ಪು ಮಾಡುವ ಕೆಲಸವನ್ನು ಬಿಟ್ಟು ಕಲ್ಲಿನ ನಾಗರಕ್ಕೆ ಹಾಲೆರೆಯುವ ಬದಲಿಗೆ ಕಷ್ಟದಲ್ಲಿ ಇರುವಂತಹ ವ್ಯಕ್ತಿಗಳಿಗೆ, ಹಸಿವಿನಿಂದ ನರಳುವ ವ್ಯಕ್ತಿಗೆ ಅದನ್ನು ನೀಡಿದರೆ, ಅವರು ಸಂತೋಷದಿಂದ ಮಾಡುವಂತಹ ಆಶೀರ್ವಾದ ಶ್ರೇಷ್ಟವಾಗಿರುತ್ತದೆ.
ಸಂಪ್ರದಾಯವಾದಿಗಳು ಹಲವು ಪ್ರಶ್ನೆಗಳಿಗೆ ಸಮಂಜಸ ಉತ್ತರ ಸಿಗಲಾರದು ಮತ್ತು ಎಷ್ಟೋ ವಿಷಯಗಳು ತರ್ಕಕ್ಕೆ ನಿಲುಕಲಾರವು ಎಂದು ಹೇಳುತ್ತಾರಾದರೂ, ಆಚರಣೆಗಳ ಹಿಂದಿನ ತಾರ್ಕಿಕತೆಯನ್ನು ಅರಿತುಕೊಳ್ಳುವುದು ಬಹಳ ಮುಖ್ಯ. “ಅಪ್ಪ ಹಾಕಿದ ಆಲದ ಮರವೆಂದು ನೇಣು ಹಾಕಿಕೊಳ್ಳಲು ಹೋಗದೆ ಅದರ ನೆರಳಿನಲ್ಲಿ ಬಾಳುವುದು” ಮುಖ್ಯವಾಗಿರುತ್ತದೆ. ಈ ರೀತಿಯ ಕುರುಡು ಆಚರಣೆಗಳನ್ನು ಅರ್ಥಪೂರ್ಣ ಆಚರಣೆಗಳನ್ನಾಗಿ ಮಾರ್ಪಡಿಸಿಕೊಳ್ಳುವುದು ಅಗತ್ಯವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post