ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ನಾಟ್ಯಾರಾಧನಾ-14 ಸಹೃದಯರ ಮನದಲ್ಲಿ ಸದಾ ಉಳಿಯುವಂತೆ ಮೂರು ದಿನದ ಕಾರ್ಯಕ್ರಮವೂ ಸಹ ಬಹಳ ವಿಶೇಷವಾಗಿ ಆಯೋಜನೆಯಾಗಿತ್ತು. ಹೃನ್ಮನಗಳಿಗೆ ರಸದೌತಣ ನೀಡಿದ ಈ ಆಯೋಜನೆ ಶಿವಮೊಗ್ಗದ ಜನತೆಗೆ ಒದಗಿದ ಮಹಾಭಾಗ್ಯವೇ ಸರಿ.
ಮೊದಲ ದಿನ ದಾಸರ ಪದಗಳನ್ನು ನಾಟ್ಯಾಲಯದ ವಿದ್ಯಾರ್ಥಿಗಳು ಬಹು ಸುಂದರವಾಗಿ ಪ್ರದರ್ಶನ ನೀಡಿ ಗಮನ ಸೆಳೆದರು. ಅಂದಿನ ಆಯ್ಕೆಯ ಪ್ರತಿಯೊಂದು ಗೀತೆಯೂ ಸಹ ಅಷ್ಟೇ ಸೊಗಸಾಗಿತ್ತು. ಪುಟಾಣಿಗಳಿಂದ ಹಿಡಿದು ದೊಡ್ಡವರವರೆಗೂ ಇದ್ದ ನಾಟ್ಯಾಲಯದ ವಿದ್ಯಾರ್ಥಿಗಳು ಎಲ್ಲರಿಗೂ ಮನಸ್ಸಿಗೆ ಮುದ ತರುವಂತೆ ನೃತ್ಯ ಮಾಡಿ ಭಕ್ತಿ ಸುಧಾರಸದ ಔತಣ ನೀಡಿದರು. ಅಂದಿನ ವೈಶಿಷ್ಟ್ಯದಲ್ಲಿ ಎಲ್ಲರ ಗಮನ ಸೆಳೆದದ್ದು ಕದನ ಕುತೂಹಲ ರಾಗದಲ್ಲಿದ್ದ ತಿಲ್ಲಾನದ ನೃತ್ಯ. ವಿಶೇಷವಾಗಿ ಈ ರಾಗವೇ ಒಂದು ಸಂತೋಷದ ಸಂಕೇತ ಎಲ್ಲರ ಮನಸ್ಸಿಗೂ ನಾಟುವಂತಹದ್ದು ಆಕರ್ಷಕ ಸ್ವರ ಸಂಚಾರ ಹೊಂದಿ ತೀವ್ರ ಚುರುಕು ಹರ್ಷಭರಿತ ಮತ್ತು ಆನಂದ ತುಂಬಿದ ರಾಗಕ್ಕೆ ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳು ರಮಣೀಯವಾಗಿ ನರ್ತಿಸಿದರು.
ಎರಡನೆಯ ದಿನ ಆರಂಭದ ನೃತ್ಯ ನಾಟ್ಯಾಲಯದ ನೃತ್ಯ ಗುರು ಸಹನಾ ಚೇತನ್ ಅವರ ಏಕವ್ಯಕ್ತಿ ನೃತ್ಯ ಪ್ರಸ್ತುತಿಯಾದ ರಾಧಾ ಮಾಧವ ವಿಲಾಸ. ಇದನ್ನು ಜಯದೇವನ ಅಷ್ಟಪದಿಯ ಶೃಂಗಾರಮಾಲೆಯಿಂದ ಆಯ್ಕೆ ಮಾಡಿಕೊಳ್ಳಲಾಗಿತ್ತು. ಸಹನಾ ಅಂದು ಸುಮಾರು ಅರ್ಧ ಗಂಟೆಗಳ ನೃತ್ಯ ಮಾಡಿದರೆ ಅವರ ಭಾವ, ಅಭಿನಯ ನೃತ್ಯ ಎಲ್ಲವೂ ಎಲ್ಲರನ್ನೂ ಸೆಳೆದು ಸಮಯದ ಪರಿವೆಯೇ ಇಲ್ಲದಂತೆ ಮಾಡಿತೆಂದರೆ ತಪ್ಪಾಗಲಾರದು. ಜಯದೇವ ವಿರಚಿತ ಗೀತ ಗೋವಿಂದದಲ್ಲಿ ಬರುವ ಪ್ರಸಿದ್ಧ ಅಷ್ಟಪದಿಗಳಲ್ಲಿ ಒಂದಾದ ಕೃತಿ ಯಾಹಿ ಮಾಧವ ಯಾಹಿ ಕೇಶವದಲ್ಲಿ ರಾಧೆಯ ಮನೋಭಾವವನ್ನು ಜಯದೇವನು ಬಹಳ ಸೂಕ್ಷ್ಮವಾಗಿ ವರ್ಣಿಸಿದರೆ ಅದನ್ನು ಸಹನಾ ಅವರು ಅಷ್ಟೇ ಚೆನ್ನಾಗಿ ಅಭಿನಯಿಸಿದರು. ಇಲ್ಲಿ ಹೇಗೆ ಜೀವಾತ್ಮ ಸ್ವರೂಪಿಯಾದ ರಾಧೆ ಪರಮಾತ್ಮ ಸ್ವರೂಪಿಯಾದ ಕೃಷ್ಣ ತನ್ನಲ್ಲಿ ಸದಾ ನೆಲೆಸಬೇಕೆಂದು ಬಯಸುವಂತೆ ನಮಗೂ ಇನ್ನಷ್ಟು ಸಮಯ ಅವರ ನೃತ್ಯ ಬೇಕೆಂದು ಬಯಸುವಂತೆ ಮಾಡಿದ್ದಂತೂ ಸುಳ್ಳಲ್ಲ.
ನಂತರ ನಾಟ್ಯಾಲಯದ ವಿದ್ಯಾರ್ಥಿಗಳು ಅಭಂಗ್ ನೃತ್ಯ ಮಾಧುರ್ಯವನ್ನು ಬಹಳ ಚೆನ್ನಾಗಿ ನಡೆಸಿಕೊಟ್ಟರು. ಅದಕ್ಕೂ ಪ್ರಮುಖವಾಗಿ ಅಂದಿನ ಹಾಡುಗಳ ಆಯ್ಕೆ ವಿಶೇಷವಾಗಿತ್ತು ಅದರಲ್ಲೂ ಕನ್ನಡದ ಗೀತೆಯಾದ ಟೊಂಕದ ಮೇಲೆ ಕೈ ಇಟ್ಟು….ಎನ್ನುವುದಂತು ಅತ್ಯಾಪ್ತವಾಗಿತ್ತು. ಮಕ್ಕಳಂತೂ ಚಂದದ ಪ್ರಸ್ತುತಿ ನೀಡಿ ಮನಸೆಳೆದರು.
ಬಹು ಮುಖ್ಯವಾಗಿ ಹೇಳಲೇಬೇಕಾದದ್ದು ರಾಷ್ಟ್ರೀಯ ನೃತ್ಯ ಮಹೋತ್ಸವದ ಕೇಂದ್ರವಾಗಿ ಆಯೋಜನೆಯಾದ ಒಡಿಸ್ಸಿ ಮತ್ತು ಬಿಹು ನೃತ್ಯದ ಕುರಿತಾಗಿ. ಒರಿಸ್ಸಾದ ರುದ್ರಾಕ್ಷ ಫೌಂಡೇಶನ್ ಅವರು ಭಾರತದ ಎಂಟು ಶ್ರೇಷ್ಠ ಶಾಸ್ತ್ರೀಯ ನೃತ್ಯಗಳಲ್ಲಿ ಪ್ರಸಿದ್ಧವಾದ ನೃತ್ಯ ಶೈಲಿಯನ್ನು ನಮ್ಮೆದುರಿಗೆ ಅಭಿನಯಿಸುತ್ತಿದ್ದರೆ ಅದರಲ್ಲಿ ನಾವೇ ಲೀನವಾದ ಭಾವ ಉಂಟಾಗಿ ಕಣ್ಣಾಲಿಗಳಲ್ಲಿ ನೀರು ತುಂಬಿ ಬಂತು. ಆ ಸೊಬಗು, ಆ ಒನಪು, ಒಯ್ಯಾರ, ಲಯಬದ್ಧತೆ, ಲಾಸ್ಯ, ಭಾವ ಪ್ರಧಾನವಾದ ಶೈಲಿ ಇವುಗಳನ್ನು ಅಭಿನಯಿಸಿದ ರೀತಿಯಂತೂ ಮನಮೋಹಕವಾಗಿತ್ತು. ಸ್ತ್ರೀ ಪುರುಷರಿಬ್ಬರ ಅಭಿನಯ ನೃತ್ಯ ಲಾಲಿತ್ಯ, ಶೃಂಗಾರ ಎಲ್ಲವೂ ಮೈ ನವಿರೇಳಿಸುವಂತಿತ್ತು. ಒಬ್ಬರಿಗೊಬ್ಬರು ಒಂದಿನಿತು ಸ್ಪರ್ಧಿಸದೆ ಮೂಡಿಸಿದ ಶೃಂಗಾರ ಭಾವ ರೋಮಾಂಚನ ತಂದಿತ್ತು. ಸೂರ್ಯ ನಮಸ್ಕಾರವೇ ಮೊದಲಾಗಿ, ಕಾಳಿಯ ನೃತ್ಯದವರೆಗೂ ಎಲ್ಲವೂ ನಮ್ಮನ್ನ ಕಣ್ಣೆವೆ ಇಕ್ಕದೆ ನೋಡುವಂತೆ ಮಾಡಿತ್ತು. ಎಲ್ಲರೂ ಚಂದದ ನೃತ್ಯ ಮಾಡುವವರೇ, ಯಾರನ್ನು ನೋಡುವುದು ಯಾರನ್ನು ಬಿಡುವುದೆಂದು ತಿಳಿಯಲಿಲ್ಲ. ನಿಜಕ್ಕೂ ತ್ರಿಭಂಗಿಯ ಭಂಗಿ, ಶೈಲಿಯ ಲಲಿತತೆ ಮತ್ತು ಭಕ್ತಿ ಭಾವನೆಗಳಿಂದ ತುಂಬಿ ನಮ್ಮೆಲ್ಲರನ್ನು ವಿಸ್ಮಯ ಲೋಕಕ್ಕೆ ಕೊಂಡೊಯ್ದ ಅದ್ಭುತ ಶಾಸ್ತ್ರೀಯ ನೃತ್ಯವಾಗಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ.
ನಂತರ ಅಸ್ಸಾಂನ ರಂಗಧಾಲಿ ಡ್ಯಾನ್ಸ್ ರಾಜ್ಯದ ಸಾಂಸ್ಕೃತಿಕ ಹಾಗೂ ಜಾನಪದ ಶೈಲಿಯನ್ನು ಹೊಂದಿದ ನೃತ್ಯವನ್ನು ಮಾಡಿದರು. ಅದು ಸಹ ಹರ್ಷೋಲ್ಲಾಸಗಳಿಂದ ಕೂಡಿದ್ದೇ ಅಲ್ಲದೆ ವೇಗದ ಹೆಜ್ಜೆ ಕಮರು ಮತ್ತು ಕತ್ತಿನ ನಾಜೂಕಿನ ಚಲನೆ ಚಪ್ಪಾಳೆಗಳಿಂದ ಕೂಡಿದ ನೃತ್ಯ ಜನಮನಾಕರ್ಷಿಸಿತು.
ಒಟ್ಟಿನಲ್ಲಿ ಮೂರು ದಿನಗಳ ಸಾಂಸ್ಕೃತಿಕ ಹಬ್ಬ ಯಶಸ್ವಿಯಾಗಿ ಸುಸಂಪನ್ನವಾಯಿತು. ಇದು ಕಲೆಯ ಮೂಲಕ ದೇವರತ್ತ ಸಾಗುವ ಸುಂದರ ಮಾರ್ಗವಾಯಿತು. ಹೀಗಾಗಿ ನಾಟ್ಯಾರಾಧನೆ ಎಂದರೆ ಜೀವನವನ್ನು ಕಲೆಗೊಳಿಸಿ, ಕಲೆಗೆ ದೇವರ ರೂಪ ನೀಡುವ ಶ್ರೇಷ್ಠ ಸಾಧನವಾಗಿರುವುದಂತೂ ಸತ್ಯ ಹಾಗಾಗಿ ಇದರ ಆಯೋಜಕರಿಗೊಂದು ಅನಂತಾನಂತ ವಂದನೆಗಳು ಸಲ್ಲಲೇ ಬೇಕು.
ಚಿತ್ರಕೃಪೆ: ಆದಿತ್ಯ ಪ್ರಸಾದ್ ಎಮ್.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post