ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಜಗತ್ತಿನ ಏಳಿಗೆಗೆ ಭಾರತದ ಕೊಡುಗೆ ಅಪಾರ. ಅದರಲ್ಲಿಯೂ ಸಂಸ್ಕೃತದಲ್ಲಿನ ಮಂತ್ರಗಳು ಶ್ಲೋಕಗಳು ಮನಕುಲದ ಸರ್ವತೋಮುಖ ಏಳ್ಗೆಯಲ್ಲಿ ಬಹು ಮುಖ್ಯವಾದ ಪಾತ್ರ ವಹಿಸುತ್ತವೆ. ಭಾರತೀಯ ಸಂಸ್ಕೃತಿಯಲ್ಲಿ ನಾಮಸ್ಮರಣೆಗೆ ಅತ್ಯಂತ ಮಹತ್ವದ ಸ್ಥಾನವಿದೆ. ಸ್ತೋತ್ರಗಳ ರಾಜ ಎಂದು ಕರೆಸಿಕೊಳ್ಳುವ ಈ “ವಿಷ್ಣು ಸಹಸ್ರನಾಮ” ಮಹಾಭಾರತದ ಅನುಶಾಸನ ಪರ್ವದಲ್ಲಿ ಶರಶಯ್ಯೆಯಲ್ಲಿದ್ಧ ಭೀಷ್ಮರು ಯುಧಿಷ್ಠಿರನಿಗೆ ನೀಡಿದ ಅಮೂಲ್ಯ ಉಪದೇಶವೇ ಇದಾಗಿದೆ. ಭಗವಾನ್ ವಿಷ್ಣುವಿನ ಸಾವಿರ ನಾಮಗಳನ್ನು ಒಳಗೊಂಡ ಸ್ತೋತ್ರ, ಭಕ್ತಿ, ಜ್ಞಾನ ಮತ್ತು ಧ್ಯಾನದ ಸಮನ್ವಯ ರೂಪವೇ ಆಗಿದೆ.
ಭಗವಂತನ ನಾಮ ಜಪ ಮಾಡುವಾಗ ಅದು ಮನಸ್ಸನ್ನು ಶುದ್ಧಗೊಳಿಸಿ ಒಳಗಿನ ಚೇತನವನ್ನು ಜಾಗೃತಿಗೊಳಿಸುತ್ತದೆ. ಆದ್ದರಿಂದಲೇ ಶಾಸ್ತ್ರಗಳು ನಾಮ ಸ್ಮರಣೆಯನ್ನು ಸುಲಭ ಮತ್ತು ಶ್ರೇಷ್ಠ ಸಾಧನೆ ಎಂದು ವರ್ಣಿಸಿವೆ. ಇಂದಿನ ವೇಗದ ಜೀವನದಲ್ಲಿ ಎಲ್ಲರಿಗೂ ಮಾನಸಿಕ ಒತ್ತಡ ಸರ್ವೇಸಾಮಾನ್ಯವಾಗಿದೆ. ಚಂಚಲದ ಮನಸ್ಸು ಸ್ಥಿರವಾಗಿ ಆತಂಕ ಕಡಿಮೆಯಾಗುತ್ತದೆ. ಧ್ಯಾನದೊಂದಿಗೆ ಇದನ್ನು ಪಠಿಸುವಾಗ ಏಕಾಗ್ರತೆ ಅಧಿಕವಾಗಿ ಆಲೋಚನೆಗಳಿಗೆ ಸ್ಪಷ್ಟತೆ ದೊರೆಯುತ್ತದೆ.
ಯೋಗ ಮತ್ತು ಆಯುರ್ವೇದದ ದೃಷ್ಟಿಯಿಂದ ನೋಡುವುದಾದರೆ, ಧ್ವನಿಯ ಸ್ಪಂದನೆಗಳು ಮನುಷ್ಯನ ದೇಹದಲ್ಲಿರುವ ನಾಡಿಗಳ ಮೇಲೆ ಪರಿಣಾಮ ಬೀರುತ್ತವೆ. ಈ ಸಹಸ್ರ ನಾಮ ಪಠಣೆಯಿಂದ ದೇಹದೊಳಗಿನ ಪ್ರಾಣಶಕ್ತಿಯನ್ನು ಸಮತೋಲನಗೊಳಿಸುತ್ತದೆ. ಇದರಿಂದ ರಕ್ತದೊತ್ತಡ ನಿಯಂತ್ರಣ, ಉತ್ತಮ ನಿದ್ರೆ ಮತ್ತು ದೇಹದ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ. ನನ್ನ ಸಹೋದ್ಯೋಗಿ ಒಬ್ಬರು ಸಂಸ್ಕೃತದ ಮಹತ್ವ ಹೇಳುವಾಗ ಒಮ್ಮೆ ಈ ರೀತಿಯಾಗಿ ಹೇಳಿದ್ದು ಇಂದು ನೆನಪಿಗೆ ಬರುತ್ತದೆ. ಅವರಿಗೆ ಕೆಲಸದ ಒತ್ತಡದಿಂದ ಅಧಿಕ ರಕ್ತದೊತ್ತಡ ಬಂದಿತ್ತು ಆಗ ವೈದ್ಯರ ಬಳಿ ಹೋದಾಗ ಅವರು ನಿರ್ದೇಶನ ಮಾಡಿದ್ದು ವಿಷ್ಣು ಸಹಸ್ರನಾಮ ಹೇಳಿ ಎಂದು. ಅವರು ಹೇಳಲು ನನಗೆ ಬರುವುದಿಲ್ಲ ಎಂದಾಗ ಅದನ್ನು ಕೇಳಿ ಸಾಕು ಎಂದರು. ಅವರು ಬಿ.ಆರ್ ಪ್ರಾಜೆಕ್ಟ್ ನಿಂದ ಶಿವಮೊಗ್ಗಕ್ಕೆ ಕೆಲಸದ ನಿಮಿತ್ತ ಬರಬೇಕು, ಬರುವಾಗ ದಾರಿಯಲ್ಲಿ ಸಹಸ್ರನಾಮ ಕೇಳುತ್ತಾ ಬಂದರಂತೆ. ಸುಮಾರು 28 ದಿನಗಳು ಕಳೆದ ಮೇಲೆ ಅವರ ಸ್ಟ್ರೆಸ್ ಲೆವೆಲ್ ಹಾಗೂ ರಕ್ತದೊತ್ತಡದ ತೀವ್ರತೆ ಕಡಿಮೆ ಆಗಿರೋದು ಕಂಡುಬಂದಿತ್ತು. ಈ ಘಟನೆಯನ್ನು ಕೇಳಿದಾಗ ಸಹಸ್ರನಾಮದ ಮಹತ್ವ ನಮಗೆ ಅರಿವಾಗುತ್ತದೆ.
ಹಾಗೆ ಒಮ್ಮೆ ನನ್ನ ಮಗನಿಗೆ ಏಳಲೂ ಶಕ್ತಿ ಇಲ್ಲದ ರೀತಿಯಲ್ಲಿ ಜ್ವರ ಬಂದು ಮಲಗಿದ್ದ. ಆಗ ನನಗೇನು ಮಾಡಲು ತೋಚದೇ ಸಹಸ್ರನಾಮವನ್ನು ಕೇಳಲು ಅವನ ಮಲಗಿದ್ದ ಸ್ಥಳದಲ್ಲಿ ಜೋರಾಗಿ ಕೇಳುವಂತೆ ಟೇಪ್ ರೆಕಾರ್ಡರ್ ನಲ್ಲಿ ಹಾಕಿ ಬಂದೆ. ಸ್ವಲ್ಪ ಸಮಯದ ನಂತರ ಜ್ವರದ ತೀವ್ರತೆ ಇಳಿಯುತ್ತಾ ಬಂದಿದ್ದನ್ನು ನಾನೇ ಗಮನಿಸಿದ್ದೇನೆ. ಅದಾದ ನಂತರ ನನ್ನ ಮಗನಿಗೆ ಜ್ವರ ಬಂದಾಗೆಲ್ಲ ಸಹಸ್ರನಾಮ ಹಾಕಮ್ಮ ಜ್ವರ ಬಿಡುತ್ತೆ ಎಂದು ಹೇಳುವುದು ಸ್ವತಃ ನನ್ನ ಅನುಭವವೇ ಆಗಿದೆ. ಇದರ ವೈಶಿಷ್ಟ್ಯವೆಂದರೆ ಹೇಳುವುದರಿಂದ ಎಷ್ಟು ಲಾಭವಿದೆಯೋ ಅದನ್ನು ಶ್ರದ್ಧೆಯಿಂದ ಕೇಳಿದಾಗಲೂ ಸಹ ಅಷ್ಟೇ ಲಾಭ ಇರುವುದನ್ನು ಯ ಇದಂ ಶೃಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್ ಎನ್ನುವಲ್ಲಿ ಈ ಮಾತನ್ನೇ ಹೇಳಿರುವುದು.
ಒಮ್ಮೆ ಅನೇಕ ಕಾಯಿಲೆಗಳನ್ನು ಬಂದಂತಹ ವಿವಿಧ ಧರ್ಮದ ಜನರನ್ನು ಒಟ್ಟಾಗಿ ಸೇರಿಸಿ ಅವರನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಪ್ರತಿನಿತ್ಯ ಅವರವರ ಧರ್ಮ ಗ್ರಂಥಗಳನ್ನು ಪಠಿಸಲು ಹೇಳಲಾಯಿತು, ಅದರಲ್ಲಿ ಹಿಂದುಗಳಿಗೆ ವಿಷ್ಣು ಸಹಸ್ರನಾಮವನ್ನು ಹೇಳಲು ಸೂಚಿಸಲಾಯಿತು. ಹೀಗೆ 48 ದಿನದ ಒಂದು ಮಂಡಲ ಕಳೆದ ಮೇಲೆ ಅವರನ್ನು ಪರೀಕ್ಷಿಸಿದಾಗ ಯಾರು ವಿಷ್ಣು ಸಹಸ್ರನಾಮವನ್ನು ಹೇಳುತ್ತಿದ್ದರು ಅವರ ಕಾಯಿಲೆಗಳು ಸ್ವಲ್ಪ ಸುಧಾರಿಸಿದ್ದನ್ನು ಕಂಡರು. ಅದರಿಂದ ನಮ್ಮ ಆರೋಗ್ಯದ ಮೇಲೆ ವಿಶೇಷವಾದಂತಹ ಪ್ರಭಾವವನ್ನು ಈ ವಿಷ್ಣು ಸಹಸ್ರನಾಮ ಬೀರುತ್ತದೆ ಎಂದು ಅಧ್ಯಯನ ತಿಳಿಸುತ್ತದೆ. ಅದನ್ನೇ ರೋಗಾರ್ತೋ ಮುಚ್ಯತೇ ರೋಗಾದ್ಭದ್ದೋ ಮುಚ್ಯೇತ ಬಂಧನಾತ್ ಎನ್ನುವ ಶ್ಲೋಕದಲ್ಲಿ ಇದನ್ನೇ ತಿಳಿಸಿದೆ.
ಜೀವನದಲ್ಲಿ ಎದುರಾಗುವ ಅನೇಕ ಸಂಕಟಗಳು ಮತ್ತು ಅಡೆತಡೆಗಳು ಮನಸ್ಸನ್ನು ಕುಗ್ಗಿಸುತ್ತವೆ. ಆ ಸಂದರ್ಭಗಳಲ್ಲಿ ಆಂತರಿಕ ಧೈರ್ಯ ಹೆಚ್ಚಿಸಿ ಸಂಕಟಗಳನ್ನು ಎದುರಿಸುವ ಶಕ್ತಿ ನೀಡುವುದು ಸಹಸ್ರನಾಮ ಪಠಣ. ನಮ್ಮೊಳಗಿನ ನಕಾರಾತ್ಮಕ ಚಿಂತನೆಗಳನ್ನು ನಿವಾರಿಸಿ ಸಕಾರಾತ್ಮಕ ಮನೋಭಾವನೆ ಬೆಳೆಸುವ ಅತ್ಯಂತ ಪರಿಣಾಮಕಾರಿಯಾದ ನಾಮಸ್ಮರಣೆ ಇದಾಗಿದೆ.
ವಿದ್ಯಾರ್ಥಿಗಳು, ಉಪನ್ಯಾಸಕರು ಅಲ್ಲದೇವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಈ ವಿಷ್ಣು ಸಹಸ್ರನಾಮದ ಪಠಣವು ಅತ್ಯಂತ ಸಹಕಾರಿಯಾಗಿದೆ ಅವರಲ್ಲಿನ ಏಕಾಗ್ರತೆಯನ್ನು ಹೆಚ್ಚಿಸಿ ನಿರ್ಧಾರದ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಇದರ ನಿಯಮಿತ ಪಠಣದಿಂದ ಕೆಲಸದಲ್ಲಿನ ನಿಷ್ಠೆ ಮತ್ತು ಯಶಸ್ಸಿಗೆ ದಾರಿಯಾಗುವುದರಲ್ಲಿ ಸಂದೇಹವೇ ಇಲ್ಲ.
ಈ ವಿಷ್ಣು ಸಹಸ್ರನಾಮದಲ್ಲಿಯೇ #Vishnusahasranama ಬರುವ ಶ್ರೀ ರಾಮ ರಾಮೇತಿ ರಮೇ ರಾಮೇ ಮನೋರಮೇ l ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ ll ಎನ್ನುವ ಈ ಶ್ಲೋಕವಂತೂ ಪರಮೇಶ್ವರನು ತನ್ನ ಸತಿಯಾದ ಪಾರ್ವತಿಗೆ ಹೇಳಿದುದಾರೂ ಇದರಲ್ಲಿಯೇ ಇರುವ ವಿಶೇಷ ಹೀಗಿದೆ ರಾಮ ಎನ್ನುವಲ್ಲಿ ಯ ರ ಲ ವ ಅಕ್ಷರ ಗಳಲ್ಲಿ ರ 2 ನೆಯದು, ಮ ಇದು ಪವರ್ಗ ದಲ್ಲಿ 5 ನೆಯದು ಇವನ್ನು ಗುಣಿಸಿದರೆ 10 ಮತ್ತೆ ರಾಮ ಎಂದಾಗ 10×10=100, ಮತ್ತೆ ರಾಮ ಎಂದರೆ 100×10=1000 ಹಾಗಾಗಿ ಇದು 3 ಬಾರಿ ರಾಮ ಎಂದರೆ ಸಾವಿರ ನಾಮಗಳಿಗೆ ಸಮನಾಗಿದೆ.
ಹೀಗೆ ಬಹು ಮಹತ್ವವನ್ನು ಹೊಂದಿರುವಂತಹ ಈ ವಿಷ್ಣು ಸಹಸ್ರನಾಮವೆಂಬುದು ಕೇವಲ ಸ್ತೋತ್ರವಲ್ಲ ಅದು ಸಂಪೂರ್ಣ ಜೀವನದ ಮಾರ್ಗದರ್ಶಕವಾಗಿದ್ದು, ಮನಸ್ಸಿಗೆ ಶಾಂತಿ, ದೇಹಕ್ಕೆ ಆರೋಗ್ಯ, ಆತ್ಮಕ್ಕೆ ಶುದ್ದಿ ನೀಡುವಂತದ್ದಾಗಿದೆ. ಇಂತಹ ಅದ್ಭುತವಾದಂತಹ ಸಹಸ್ರನಾಮ ಪಠಣವನ್ನು ಪ್ರತಿಯೊಬ್ಬರೂ ಮಾಡುವಂತಾಗಿ ಸುಖ ಶಾಂತಿ ನೆಮ್ಮದಿಗಳನ್ನು ಕಂಡುಕೊಳ್ಳುವಂತಾಗಲೆಂದು ನಗರದ ಪ್ರಖ್ಯಾತ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ಭಜನಾ ಪರಿಷತ್ ಶಿವಮೊಗ್ಗ ಹಾಗೂ ಗ್ಲೋಬಲ್ ವಿಷ್ಣು ಸಹಸ್ರನಾಮ ಸಂಘ ಫೆಡರೇಶನ್ ಶಿವಮೊಗ್ಗ ಶಾಖೆ, ಇವರುಗಳ ಸಂಯುಕ್ತ ಆಶ್ರಯದಲ್ಲಿ ನಿನ್ನೆ ರಾಮನವಮಿಯಿಂದ ಆರಂಭಿಸಿ ಅನೇಕ ಮಾತೆಯರು ಈ ಪಠಣವನ್ನು ಅಭ್ಯಾಸ ಮಾಡಲಾರಂಭಿಸಿದ್ದಾರೆ. ಆ ರೀತಿ ಅಭ್ಯಾಸ ಗೈದ ಮಂತ್ರವನ್ನು ಇದೇ ಮಾರ್ಚ್ 30ರಂದು ಬೆಳಗ್ಗೆ ಕುವೆಂಪು ರಂಗಮಂದಿರದಲ್ಲಿ ಎಲ್ಲರೂ ಸೇರಿ ಏಕಕಂಠದಲ್ಲಿ ಪಾರಾಯಣ ಮಾಡುವವರಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರು ಹಾಗೂ ಬಾಳಗಾರು ಮಠದ ಕಿರಿಯ ಶ್ರಿಗಳಾದ ಶ್ರೀ ಶ್ರೀ ಅಕ್ಷೋಭ್ಯ ರಾಮಪ್ರಿಯತೀರ್ಥ ಶ್ರೀಪಾದರು ಇವರುಗಳ ಸಾನಿಧ್ಯವಿದ್ದು ಎಲ್ಲರನ್ನೂ ಅನುಗ್ರಹಿಸಲಿದ್ದಾರೆ. ಆದಕಾರಣ ಲೋಕ ಕಲ್ಯಾಣಾರ್ಥವಾದ ಈ ಕಾರ್ಯಕ್ರಮಕ್ಕೆ ನಗರದ ಎಲ್ಲಾ ಸಜ್ಜನ ಬಂಧುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶ್ರೀಗಂಧ ಸಂಸ್ಥೆಯ ಅಧ್ಯಕ್ಷರಾದ ಮಾನ್ಯ ಈಶ್ವರಪ್ಪನವರು ಹಾಗೂ ಕೋಶಾಧ್ಯಕ್ಷರಾದ ಶ್ರೀ ಕೆ. ಈ. ಕಾಂತೇಶ್ ಅವರು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















