ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಲೇಖನ: ಕೌಸಲ್ಯಾ ರಾಮ
ಸಾಮಾನ್ಯವಾಗಿ ಊರಿಗೊಂದು ಹನುಮಪ್ಪನ ಗುಡಿ ಇರುತ್ತದೆ. ಹಾಗೆಯೇ ಮೈಸೂರು ಪ್ರಾಂತ್ಯದಲ್ಲಿ ಐತಿಹಾಸಿಕ ಆಂಜನೇಯನ ದೇಗುಲಗಳು ಅನೇಕ ಇವೆ.ಅವುಗಳ ಪೈಕಿ ಜ್ಞಾನ ಮತ್ತು ಭಕ್ತಿಗಳನ್ನು ದಯಪಾಲಿಸುವ ಮುಖ್ಯಪ್ರಾಣದೇವರ ಆಲಯವೊಂದು 700 ವರ್ಷದ ಪರಂಪರೆ ಹೊಂದಿದ್ದು, ಭಕ್ತರ ಇಷ್ಟಾರ್ಥ ಸಿದ್ಧಿ ಕ್ಷೇತ್ರವಾಗಿರುವುದು ವಿಶೇಷದಲ್ಲಿ ವಿಶೇಷ ಸಂಗತಿ.
ಪ್ರತಿನಿತ್ಯವೂ ತಂತ್ರಸಾರೋಕ್ತ ಪದ್ಧತಿಯಲ್ಲಿ ಪೂಜಾದಿಗಳು ನೆರವೇರುತ್ತವೆ. ಅಭಿಷೇಕ, ಅಲಂಕಾರ, ಹಸ್ತೋದಕ, ನೈವೇದ್ಯ ಮತ್ತು ಪ್ರಸಾದ ವಿತರಣೆವರೆಗೆ ವಿಧಿಗಳು ಶಾಸ್ತ್ರೋಕ್ತವಾಗಿ ಸಾಗುತ್ತವೆ. ಶನಿವಾರ ಮತ್ತು ಬುಧವಾರ ವಡೆಹಾರ ಸಮರ್ಪಣೆ, ಪ್ರತಿ ಶನಿವಾರ ಬೆಳಗ್ಗೆ ವಾಯುಸ್ತುತಿ ಸಹಿತ ಮಧು ಅಭಿಷೇಕ ನೆರವೇರುತ್ತದೆ. ಇದಕ್ಕಾಗಿ ಜನ ಜಂಗುಳಿಯೇನೂ ಇರುವುದಿಲ್ಲ. ಯಾರಿಗೆ ಲಭ್ಯವಿದೆಯೋ, ಯಾರು ಪ್ರಾಣದೇವರ ಅನನ್ಯ ಭಕ್ತರೋ ಅವರಿಗೆ ಮಾತ್ರ ದೈವಿಕವಾದ ದರ್ಶನ ಪ್ರಾಪ್ತವಾಗುತ್ತದೆ. ಅದೇ ಈ ಸನ್ನಿಧಾನದ ವಿಶೇಷ. ದರ್ಶನ ಭಾಗ್ಯದ ಪುಣ್ಯವಂತರನ್ನು ದೇವರು ಅವನಾಗಿಯೇ ಕರೆಸಿಕೊಳ್ಳುತ್ತಾನೆ ಎಂಬುದು ಇಲ್ಲಿನ ಪ್ರತೀತಿ.
ಮೈಸೂರಿನ ಯಾದವಗಿರಿಯ ಮುಖ್ಯರಸ್ತೆ ಕೇಂದ್ರೀಯ ಆಹಾರ ಸಂಶೋಧನಾಲಯದ ಪಕ್ಕದಲ್ಲೇ ಈ ಪ್ರಾಣದೇವರ ದೇವಸ್ಥಾನ ಇದೆ. ಲೋಕೋಪಯೋಗಿ ಇಲಾಖೆ ಅಧೀನದಲ್ಲಿದ್ದ ದೇವಾಲಯ ಮತ್ತು ಕಲ್ಯಾಣಮಂದಿರವೀಗ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿಮಠದ ಸುಪರ್ದಿಯಲ್ಲಿದೆ. ವಿವಿಧ ಧಾರ್ಮಿಕ ಚಟುವಟಿಕೆ ಮತ್ತು ವಿವಾಹಾದಿ ಕಾರ್ಯಗಳಿಗೆ ಕಲ್ಯಾಣ ಮಂದಿರ ಲಭ್ಯವಿದೆ.
ಪರಮಾತ್ಮನ ಏಕಾಂತಭಕ್ತರು ಶ್ರೀ ಮುಖ್ಯಪ್ರಾಣರು. ದೇವರು ಭೂಮಿಯಲ್ಲಿ ಅವತರಿಸಿ ಮಾಡುವ ದುಷ್ಟಸಂಹಾರಾದಿ ಕಾರ್ಯಗಳಲ್ಲಿ ಪ್ರಧಾನಾಂಗರು. ದೇವರು ನಡೆಸುವ ಜಗತ್ತಿನ ನಿಯಮನಾದಿ ವ್ಯಾಪಾರಗಳಲ್ಲಿಯೂ ಪ್ರಧಾನ ಸೇವಕರು. ಎಲ್ಲ ಜೀವರನ್ನೂ ನಿಯಮನ ಮಾಡುವ ಜೀವೋತ್ತಮರು. ಇತಿಹಾಸ-ಪುರಾಣಗಳಲ್ಲಿಯೂ ಆಂಜನೇಯನ ಮಹಿಮೆ ಪ್ರತಿಪಾದಿತವಾಗಿದೆ. ನಾವು ಏನೇ ಕರ್ಮಗಳನ್ನು ಮಾಡಿದರೂ ಮುಖ್ಯಪ್ರಾಣನ ಮೂಲಕವೇ ದೇವರಿಗೆ ಅರ್ಪಿಸಬೇಕು ಎಂಬುದು ನಮ್ಮ ಸಂದೇಶ.
–ಜಗದ್ಗುರು ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ, ಉತ್ತರಾದಿ ಮಠಾಧೀಶರು
ಮೂರ್ತಿಯ ವಿಶೇಷತೆ ಬಲ್ಲಿರಾ ?
ಪಾರಂಪರಿಕ ಶೈಲಿಯ ದೇಗುಲದ ಗರ್ಭಗುಡಿ ಸುಣ್ಣದ ಗಾರೆ ಮತ್ತು ಇಟ್ಟಿಗೆಯಿಂದ ನಿರ್ಮಾಣವಾಗಿದೆ. ಚಿಕ್ಕ ಗರ್ಭಗುಡಿ ಹಿಂಭಾಗ ದೊಡ್ಡ ಪುರಷ್ಕರಣಿ ಇದ್ದು ಅದೀಗ ಸಿಎಫ್‌ಟಿಆರ್‌ಐ ಗೆ ಸೇರಿದ್ದಾಗಿದೆ. ಆಂಜನೇಯನ ಮೂರ್ತಿ ಬೆನ್ನಿಗೆ 600 ವರ್ಷ ಹಳೆಯ ಬಹುದೊಡ್ಡ ಅಶ್ವತ್ಥವೃಕ್ಷವಿದೆ. ಅದರ ಬುಡದಲ್ಲಿ ಅಶ್ವತ್ಥನಾರಾಯಣ, ಶೇಷದೇವರ ಸನ್ನಿಧಿ ಮತ್ತು ಬಾವಿ ಇದೆ. ಸಾಲಿಗ್ರಾಮ ಶಿಲೆಯ ಆಂಜನೇಯನ ಮೂರ್ತಿ ಅಂದಾಜು ಒಂದೂವರೆ ಅಡಿಯಷ್ಟಿದೆ. ಕೆಲವರು ಈತನನ್ನು ಬಾಲಹನುಮ ಎನ್ನುತ್ತಾರೆ. ಪೂರ್ವಾಭಿ ಮುಖವಾಗಿರುವ ಮೂರ್ತಿಯು ಅಭಯಹಸ್ತ, ಕೈಯಲ್ಲಿ ಗದೆ ಹಿಡಿದಿದೆ. ಸೊಂಟಭಾಗದಲ್ಲಿ ಖಡ್ಗವಿದೆ. ಬಾಲದಲ್ಲಿ ಗಂಟೆ ಹೊಂದಿದ್ದು, ಸಂಚಾರಿ ಭಂಗಿಯಲ್ಲಿದೆ. ವಿಜಯನಗರ ಸಾಮ್ರಾಜ್ಯವನ್ನು ಆಳುವ ಮುನ್ನ (ಕ್ರಿ.ಶ. 1500ರಲ್ಲಿ) ಶ್ರೀ ವ್ಯಾಸರಾಜರು ಸಂಚಾರ ಸಂದರ್ಭ ಇಲ್ಲಿಗೆ ಆಗಮಿಸಿ ಆಂಜನೇಯನಿಗೆ ಪೂಜೆ ಸಲ್ಲಿಸಿದ್ದರಂತೆ. ಆ ನಂತರ ಅವರು ದಕ್ಷಿಣ ಭಾರತದ ವಿವಿಧೆಡೆ 732 ಆಂಜನೇಯನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ದಾಖಲೆ ನಿರ್ಮಿಸಿದರು ಎಂಬುದು ವೇದ್ಯ.
Also read: ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ: ಜಿ. ವಿಜಯ್‌ಕುಮಾರ್
ಇದು ತಪೋ ಭೂಮಿ
ಮುಖ್ಯಪ್ರಾಣನಾದ ಆಂಜನೇಯ ನೆಲೆಸಿರುವ ತಾಣ ಅತ್ಯಂತ ಪ್ರಶಾಂತ ಪರಿಸರ ಹೊಂದಿದೆ. ಹಾಗಾಗಿ ಇದು ಸಾಧು ಸಂತರಿಗೆ ಜಪ ತಪಾದಿಗಳನ್ನು ಮಾಡಲು ಪ್ರಶಸ್ತವಾಗಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ಬಹುದೊಡ್ಡದು. ಮೈಸೂರು ಸಂಸ್ಥಾನದ ಅನೇಕ ಅರಸರೂ ಇಲ್ಲಿಗೆ ಖಾಸಗಿ ಸಮಯದಲ್ಲಿ ಬಂದು ಪೂಜೆ ಸಲ್ಲಿಸುತ್ತಿದ್ದರಂತೆ. ಏಕಾಂತದಲ್ಲಿ ಕೆಲ ಸಮಯ ಕಳೆದು ಹಿಂದಿರುಗುತ್ತಿದ್ದರಂತೆ. ರಾಜವಂಶಸ್ಥರು ಮತ್ತು ಪ್ರತಿಷ್ಠಿತ ಕುಟುಂಬದ ವಿವಾಹಗಳು ಇಲ್ಲಿರುವ ಛತ್ರದಲ್ಲಿ ನೆರವೇರಿದ್ದನ್ನು ಹಿರಿಯರು ನೆನಪಿಸಿಕೊಳ್ಳುತ್ತಾರೆ.
ದೇಗುಲದಲ್ಲಿ ಅನೇಕ ಮಹನೀಯರು ಪೂಜಿಸಿದ ಪುರಾತನವಾದ ೧೮ ಸಾಲಿಗ್ರಾಮ ಇರುವುದರಿಂದ ಇದು ಕ್ಷೇತ್ರವಾಗಿದೆ. ಮಾರ್ಗಶಿರ ತ್ರಯೋದಶಿ ಈ ದೇಗುಲದಲ್ಲಿ ಹನುಮ ಜಯಂತಿ ವಿಜೃಂಭಣೆಯಿಂದ ನಡೆಯುತ್ತದೆ. ಅಂದು ೩ ಸಾವಿರಕ್ಕೂ ಹೆಚ್ಚು ಭಕ್ತರು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಎಲ್ಲರಿಗೂ ಮಹಾಪ್ರಸಾದ ವಿತರಣೆಯಾಗುತ್ತದೆ.
-ನಾಗಭೂಷಣಾಚಾರ್, ಪ್ರಧಾನ ಅರ್ಚಕ
ಪುಣ್ಯದ ಫಲ ಇದ್ದವರು ಮಾತ್ರ ಸ್ವಾಮಿ ದರ್ಶನಕ್ಕೆ ಬರುತ್ತಾರೆ. ಯಾರನ್ನು ಯಾವಾಗ, ಹೇಗೆ ಕರೆಸಿಕೊಳ್ಳಬೇಕು ಎಂಬುದು ಅವನ ಇಚ್ಛೆ. ಭಾಗ್ಯ ಇದ್ದವರನ್ನು ಅವನೇ ಆಹ್ವಾನಿಸುತ್ತಾನೆ. ಇಲ್ಲಿ ಅಂತರಂಗದ ಧನ್ಯತೆ ಮುಖ್ಯವೇ ಹೊರತೂ ಸಂಖ್ಯಾಬಲವಲ್ಲ ಎನ್ನುತ್ತಾರೆ ದೇವಾಲಯದ ಪ್ರಧಾನ ಅರ್ಚಕ ನಾಗಭೂಷಣ ಆಚಾರ್ಯ. ಹಿಮಾಲಯದ ಸಾಧುಗಳು ವರ್ಷದಲ್ಲಿ ಒಂದೆರಡು ಬಾರಿ ಇಲ್ಲಿಗೆ ಆಗಮಿಸಿ ಕೆಲ ದಿನ ತಂಗಿದ್ದು, ಅಧ್ಯಾತ್ಮ ಸಾಧನೆಯಲ್ಲಿ ತೊಡಗುತ್ತಾರೆ. ಆಂಜನೇಯನ ಆರಾಧಕರಾದ ಅವರು ಯಾವುದೇ ಪ್ರಚಾರ ಬಯಸದೆ ಕೇವಲ ಪೂಜೆ, ಜಪ, ನಾಮ ಸಂಕೀರ್ತನೆ ಮತ್ತು ಧ್ಯಾನದಲ್ಲಿರುತ್ತಾರೆ. ಇರುವ ಸ್ಥಳದಲ್ಲೇ ನಿತ್ಯಕರ್ಮಗಳನ್ನು ಪೂರೈಸಿಕೊಂಡು ಮತ್ತೆ ಹಿಮಾಲಯದತ್ತ ಸಾಗುತ್ತಾರೆ. ಹನುಮ ಪ್ರೇರಣೆ ಕೊಟ್ಟಾಗಲೆಲ್ಲಾ ಇಲ್ಲಿ ಧ್ಯಾನಕ್ಕೆ ಬರುತ್ತೇವೆ ಎಂಬುದಷ್ಟೇ ಅವರ ಸಂದೇಶವಾಗಿರುತ್ತದೆ.
ಇಲ್ಲಿ ಮತ್ತೇನಿದೆ ?
ಮುಖ್ಯ ಪ್ರಾಣದೇವರ ಸನ್ನಿಧಿಯಲ್ಲಿ ರುದ್ರ, ನಂದಿ, ಲಕ್ಷ್ಮೀ ನರಸಿಂಹ, ಶ್ರೀನಿವಾಸ, ಗೋಪಾಲಕೃಷ್ಣ, ಭೂ ವರಾಹ ಮತ್ತು ಗಣಪತಿ, ನವಗ್ರಹ ಸನ್ನಿಧಾನಗಳಿವೆ. ಏಕ ಪಾಣಿಪೀಠದಲ್ಲಿ ಪ್ರತಿಗ್ರಹಕ್ಕೂ ಚಕ್ರಾಂಕಿತ ಇರುವುದು ಮಹತ್ವದ ಸಂಗತಿ. ಸಾಮಾನ್ಯವಾಗಿ ಆಂಜನೇಯನ ದೇಗುಲದಲ್ಲಿ ರುದ್ರದೇವರು ಇರುವುದಿಲ್ಲ. ಭಕ್ತಿಗೆ ಅನ್ವರ್ಥವಾದ ಹನುಮ, ಮನೋನಿಯಾಮಕ ರುದ್ರದೇವರು ಒಂದೆಡೆ ನೆಲೆಸಿರುವ ಕಾರಣಕ್ಕಾಗಿ ಸನ್ನಿಧಿಯಲ್ಲಿ ಭಕ್ತರು ಮಾಡಿಕೊಂಡ ಸತ್ ಸಂಕಲ್ಪಗಳು, ಇಷ್ಟಾರ್ಥಗಳು ಶೀಘ್ರ ನೆರವೇರುತ್ತವೆ. ಇದರ ಫಲ ಪಡೆದವರು ಮಧು ಅಭಿಷೇಕ ಸೇರಿದಂತೆ ವಿವಿಧ ಸೇವೆ ಸಮರ್ಪಣೆ ಮಾಡಿ ಧನ್ಯತೆ ಮೆರೆಯುತ್ತಾರೆ. ಭಕ್ತರಿಗೆ ಯಾವುದೇ ಸೇವಾ ದರಪಟ್ಟಿ ಇಲ್ಲ. ಭಕ್ತರಿಗೆ ಮೊದಲು ಸಂತೃಪ್ತಿ ದೊರಕಬೇಕು ಎಂಬುದು ನಮ್ಮ ಉzಶ ಎನ್ನುತ್ತಾರೆ ಪ್ರಧಾನ ಅರ್ಚಕ ನಾಗಭೂಷಣ ಆಚಾರ್ಯ. ವಿವರಗಳಿಗೆ 8123390748 ಸಂಪರ್ಕಿಸಬಹುದು.
ವಿವಿಧ ಚಟುವಟಿಕೆ ಆಯೋಜನೆ
ಮೂರುವರೆ ಎಕರೆ ಪ್ರದೇಶದ ದೇವಾಲಯದ ಸಮಗ್ರ ಅಭಿವೃದ್ಧಿಗೆ ಉತ್ತರಾದಿಮಠ ನಿರ್ಧರಿಸಿದೆ. ಭಾರತೀಯ ಸಂಪ್ರದಾಯದ ಎಲ್ಲ ಹಬ್ಬ- ಹರಿದಿನಗಳನ್ನೂ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲು ಸಮಗ್ರವಾದ ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ ವ್ಯವಸ್ಥಾಪಕ ವಿದ್ವಾನ್ ಅನಿರುದ್ಧಾಚಾರ್ಯ ಪಾಂಡುರಂಗಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post