ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಅವಂತಿಕಾ | ಪುರೀ ದ್ವಾರಾವತೀ ಚೈವ ಸಪ್ತೈತೇ ಮೋಕ್ಷದಾಯಿಕಾಃ ||
ಅಖಂಡ ಭಾರತದ #AkhandaBharat ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ಪ್ರಮುಖವಾದ ಪುಣ್ಯಕ್ಷೇತ್ರಗಳೇ ಸಪ್ತ ಮೋಕ್ಷದಾಯಕ ಕ್ಷೇತ್ರಗಳೆಂದು ಕರೆಯಲ್ಪಡುತ್ತದೆ. ಮನುಷ್ಯನು ತನ್ನ ಜೀವನದಲ್ಲಿ ಒಮ್ಮೆಯಾದರೂ ಈ ಏಳು ಪುಣ್ಯ ಸ್ಥಳಗಳ ದರ್ಶನ ಮಾಡಿದರೆ ಅವನ ಪಾಪ ಕರ್ಮಗಳೆಲ್ಲವೂ ನಾಶವಾಗಿ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಭಾರತಿಯರಲ್ಲಿ ಬಲವಾಗಿ ಬೇರೂರಿದೆ.
ಹಿಂದೆ ಮಹಾಭಾರತದ ಕಾಲದಲ್ಲಿ ಪಾಂಡವರು ಸಹ ಕುರುಕ್ಷೇತ್ರ ಯುದ್ಧದ ತರುವಾಯ ರಣಭೂಮಿಯಲ್ಲಿ ತಮ್ಮಿಂದಾದ ಹತ್ಯೆಯ ಪಾಪಗಳನ್ನು ನಿವಾರಿಸಿಕೊಳ್ಳಲು ಈ ಪವಿತ್ರವಾದ ಏಳು ಕ್ಷೇತ್ರಗಳಿಗೆ ತೆರಳಿ ಅಲ್ಲಿರುವ ಪ್ರಮುಖ ದೇವರುಗಳ ದರ್ಶನ ಪಡೆದು ತಮ್ಮೆಲ್ಲ ಪಾಪ ಕರ್ಮಗಳಿಂದ ಮುಕ್ತರಾಗಿ ಸ್ವರ್ಗಕ್ಕೆ ಪ್ರಯಾಣಿಸಿದರು ಎಂಬ ಪ್ರತೀತಿ ಇದೆ.
ಈ ಏಳು ಕ್ಷೇತ್ರಗಳು ಮೂಲತಃ ವಿಷ್ಣುವಿನ ವಿವಿಧ ಅವತಾರಗಳು ಜನ್ಮವೆತ್ತಿದ ಹಾಗೂ ಉಚ್ಚಮಟ್ಟದ ದೈವಿ ಪ್ರಭಾವವನ್ನು ಪ್ರತಿನಿಧಿಸುವ ಪರಮ ಪಾವನ ಕ್ಷೇತ್ರಗಳಾಗಿವೆ. ಈ ಪುಣ್ಯಕ್ಷೇತ್ರಗಳು ಪ್ರಾಚೀನ ಕಾಲದಿಂದಲೂ ನಮ್ಮ ರಾಷ್ಟ್ರ ಭಾವದೊಂದಿಗೆ ಸ್ಪಂದಿಸುತ್ತಾ ಬಂದಿದೆ. ಅವು ಸಮನ್ವಯದ ಸಾಧನಗಳಾಗಿಯೂ, ಭಾರತದ ಏಕತೆಯ ಜೀವಂತ ಸಾಕ್ಷಿಗಳಂತೆಯು ಕೆಲಸ ಮಾಡಿವೆ. ನಮ್ಮ ಶ್ರೇಷ್ಠವಾದ ಸಂಸ್ಕೃತಿ, ನಡವಳಿಕೆಗಳ ವಿಕಾಸ ಮತ್ತು ಪ್ರಸಾರಗಳಲ್ಲಿ ಈ ಕ್ಷೇತ್ರಗಳ ಕೊಡುಗೆ ಅಪೂರ್ವವಾದದ್ದಾಗಿದೆ. ಈ ಕ್ಷೇತ್ರಗಳಿಂದ ನಮ್ಮ ಸಮಾಜಕ್ಕೆ ಅಧ್ಯಾತ್ಮಿಕ ಚಿಂತನದ ಜೊತೆಯಲ್ಲಿ ಭೌತಿಕ ಅಭ್ಯುದಯದ ಮಾರ್ಗದರ್ಶನವೂ ಸಿಕ್ಕಿದೆ. ಇವು ನಮ್ಮ ನಾಡಿನ ಮೌಲ್ಯಗಳ ರಕ್ಷಣಾ ಕೇಂದ್ರಗಳು. ಇಂತಹ ಪರಮ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಪ್ರಮುಖವಾದ ಅಯೋಧ್ಯೆ ಹಾಗೂ ಕಾಶಿ ಕ್ಷೇತ್ರಗಳಿಗೆ ಶ್ರೀಯುತ ಸನ್ಮಾನ್ಯ ಈಶ್ವರಪ್ಪನವರು #KSEshwarappa ಹಾಗೂ ಶ್ರೀಕಾಂತೇಶ್ ರವರು ಶಿವಮೊಗ್ಗದ #Shivamogga ಜನತೆಗಂದೇ ವಿಶೇಷ ರೈಲಿನಲ್ಲಿ ಯಾತ್ರೆ ಏರ್ಪಡಿಸಿ, ಅದು ಸಾರ್ಥಕತೆಯ ಭಾವದೊಂದಿಗೆ ಸಂಪನ್ನಗೊಂಡಿದೆ. ಯಾತ್ರೆಯ ಅನುಭವಗಳೇ ಅಲ್ಲದೆ ಅಲ್ಲಿ ನಾಕಂಡ ಅನೇಕ ವೈಶಿಷ್ಟ್ಯತೆಗಳನ್ನು ಹಂಚಿಕೊಳ್ಳುವ ಸಲುವಾಗಿಯ ಬರೆದ ಲೇಖನ ಇದು. ಮೊದಲನೆಯದಾಗಿ ಅಯೋಧ್ಯೆ ಮತ್ತು ಕಾಶಿಯ ಕುರಿತಾಗಿ ಸ್ವಲ್ಪ ತಿಳಿದುಕೊಳ್ಳೋಣ-

ಮೋಕ್ಷ ನೀಡುವ ಏಳು ನಗರಗಳಲ್ಲಿ ಮೊದಲನೆಯ ಅಯೋಧ್ಯೆ. ಯುದ್ಧದ ಕಲ್ಪನೆಯನ್ನು ಮಾಡದಿರುವಂತಹ ಶಾಂತಿ ಪ್ರಿಯರ ನಗರವಾಗಬೇಕೆಂಬ ಭಾವನೆಯಿಂದ ಇದನ್ನು ಅಯೋಧ್ಯ ಎಂದು ಕರೆದದ್ದು. ಮನು ಚಕ್ರವರ್ತಿಯು ಈ ನಗರ ನಿರ್ಮಾತೃ ಎಂದು ರಾಮಾಯಣದಲ್ಲಿದೆ. ಭಗವಾನ್ ವಿಷ್ಣುವಿನ ಶೀರ್ಷ ಸ್ಥಾನದಂತಿರುವ ಅಯೋಧ್ಯೆಯು ಮತ್ಸ್ಯಾಕಾರದಲ್ಲಿದೆ ಎಂದು ಸ್ಕಾಂದ ಪುರಾಣದಲ್ಲಿದೆ. ಶ್ರೀರಾಮನ ಕಾಲದಲ್ಲಿ ಅಯೋಧ್ಯೆಯು #Ayodhya 12 ಯೋಜನ ಉದ್ದ ಮತ್ತು 3 ಯೋಜ ಅಗಲದ ಒಂದು ಮಹಾನಗರವಾಗಿತ್ತು. ವ್ಯವಸ್ಥಿತವಾದ ಮಾರುಕಟ್ಟೆ,ಗಗನಚುಂಬಿ ಕಟ್ಟಡಗಳು,ವಿಶಾಲವಾದ ರಾಜಬೀದಿಗಳು, ಬಲಿಷ್ಟವಾದ ಶಸ್ತ್ರ ಸಜ್ಜಿತ ಸೇನೆ, ಕೊರತೆ ಇಲ್ಲದ ಅರ್ಥ ವ್ಯವಸ್ಥೆ, ದುಃಖ ದೈನ್ಯಗಳಿಂದ ಮುಕ್ತವಾದ ದೇಶ ಭಕ್ತ ಪ್ರಜಾ ಕೋಟಿ ಒಟ್ಟಿನಲ್ಲಿ ದೇವದುರ್ಲಭವಾದ ನಗರ. ಸಂತ ತುಳಸಿದಾಸರು ಅಯೋಧ್ಯೆಯ ಕುರಿತು ಹೇಳುವಾಗ ” ವೇದ – ಪುರಾಣಗಳು ವೈಕುಂಠ ನಗರದ ವರ್ಣನೆ ಮಾಡಿದ್ದರೂ, ಅಯ್ಯೋದ್ಯೆಗಿಂತ ಹೆಚ್ಚಿನ ಆನಂದ ಇನ್ನೆಲ್ಲೂ ಸಿಗದು” ಎಂದಿದ್ದಾರೆ. ಈ ಪವಿತ್ರ ನಗರ ಸರಯೂ ತೀರದಲ್ಲಿದೆ. ಆಳವಾಗಿ, ಅಗಲವಾಗಿ ಹರಿಯುವ ಸರಯೂ ಧನ್ಯೆ. ರಾಮನ ಸೇವೆ ಮಾಡಿದ ಆಕೆ ಕೊನೆಗೊಮ್ಮೆ ಅವನನ್ನು ತನ್ನ ಬಸಿರಲ್ಲೇ ಅಡಗಿಸಿಕೊಂಡ ಪಾವನೆ.
ರಾಮನಾಮೋಚ್ಛಾರದಿಂದ ದರೋಡೆಕೋರನಾಗಿದ್ದ ರತ್ನಾಕರ ವಾಲ್ಮೀಕಿಯಾದ. ರಾಮ ಕಥೆಯಿಂದ ತುಳಸಿದಾಸರೇ ಮೊದಲಾಗಿ ಆಧುನಿಕ ಕಾಲದಲ್ಲಿ ಕುವೆಂಪು, ಡಿ.ವಿ.ಜಿ ಹೀಗೆ ಅನೇಕ ಶ್ರೇಷ್ಠ ಕವಿಪುಂಗವರನ್ನು ಭಾರತಕ್ಕೆ ನೀಡಿದೆ. ಶ್ರೀರಾಮ ರಾಷ್ಟ್ರಪುರುಷ. ಅವನ ಗಾಂಭೀರ್ಯವನ್ನು ದಕ್ಷಿಣದ ಸಾಗರದೊಂದಿಗೆ ಮತ್ತು ಧೈರ್ಯವನ್ನು ಉತ್ತರದ ಹಿಮಾಲಯದೊಂದಿಗೆ ಹೋಲಿಸುತ್ತಾರೆ ದೈವೀ ಪುರುಷನ ಹೆಮ್ಮೆಯ ನಗರ ಮನುಕುಲದ ಮೊದಲ ರಾಜಧಾನಿ ಅಯೋಧ್ಯೆ.
ಈ ನಗರ ಸಿಖ್ಖರು, ಬೌದ್ಧರು ಹೀಗೆ ಎಲ್ಲರಿಗೂ ಶ್ರದ್ಧಾ ಕೇಂದ್ರವಾಗಿದ್ದರೂ ಅದು ಮುಸಲ್ಮಾನರ ಧಾಳಿಗೆ ಒಳಗಾಗಿ ತನ್ನ ಭವ್ಯತೆಯನ್ನೇ ಕಳೆದುಕೊಂಡಿತ್ತು. ನಂತರ ಅಸಂಖ್ಯಾತ ಹಿಂದುಗಳ ಬಹು ವರ್ಷದ ಹೋರಾಟದ ಫಲವಾಗಿ, ತ್ಯಾಗ ಬಲಿದಾನಕ್ಕೆ ನ್ಯಾಯ ದೊರಕಿ ಪ್ರಭು ಶ್ರೀರಾಮಚಂದ್ರನು ರಾಮಲಲ್ಲಾ ಆಗಿ ಅಯೋಧ್ಯೆಯಲ್ಲಿ ಪುನರ್ ಪ್ರತಿಷ್ಠಾಪನೆಯಾಗಿ ಭವ್ಯವಾದ ರಾಮ ಮಂದಿರ ತಲೆಯೆತ್ತಿ ನಿಂತಿದೆ. ಅದನ್ನು ನೋಡಿ ಕಣ್ತುಂಬಿಸಿಕೊಳ್ಳುವುದೇ ಒಂದು ಪುಣ್ಯದ ಕ್ಷಣ.
ಕಾಶಿ
ಇದು ಅತ್ಯಂತ ಪುರಾತನ ತೀರ್ಥಕ್ಷೇತ್ರಗಳಲ್ಲಿ ಒಂದು. ಇದನ್ನು ಆದಿ ಕ್ಷೇತ್ರ ಎಂದು ಕರೆಯುತ್ತಾರೆ. “ಕಾಶ್ಯಾಂ ಮರಣಾನ್ಮುಕ್ತಿಃ”. ಅಂದರೆ ಕಾಶಿಯಲ್ಲಿ ಶರೀರ ಬಿಟ್ಟವರಿಗೆ ಮುಕ್ತಿ ದೊರೆಯುತ್ತದೆ ಎಂದು ಹಿಂದುಗಳ ಅಚಲ ವಿಶ್ವಾಸ. ಗಂಗೆಯ ದಡದಲ್ಲಿರುವ ದಿವ್ಯ ಕ್ಷೇತ್ರವು ಎಲ್ಲ ಭಾರತೀಯರ ಮತ್ತು ವಿಶೇಷವಾಗಿ ಶಿವಭಕ್ತರ ಪರಮ ಶ್ರದ್ಧಾ ಕೇಂದ್ರವಾಗಿದೆ. ಔರಂಗಜೇಬನ ಕಾಲದಲ್ಲಿ ಇದು ದಾಸ್ಯಕ್ಕೆ ಒಳಗಾಗಿತ್ತು ಈ ದಿವ್ಯ ಕ್ಷೇತ್ರವನ್ನು ದಾಸ್ಯದಿಂದ ಮುಕ್ತಗೊಳಿಸಬೇಕೆಂದು ಶಿವಾಜಿ ಮಹಾರಾಜನು ಬಯಸಿದ್ದರು.
ಔರಂಗಜೇಬನು ದೇವಾಲಯ ಒಡೆದು ಮಸೀದಿ ಮಾಡಿದ್ದು ದೇವಸ್ಥಾನಕ್ಕೆ ಎಸಗಿದ ಅತ್ಯಾಚಾರವೇ ಆಗಿದೆ. ಈ ಅತ್ಯಾಚಾರದ ಬಳಿಕ ಪುನಃ ಒಂದು ಶತಮಾನ ಶಿವ ಮಂದಿರವಿಲ್ಲದೆ ಕಾಶಿ, #Kashi ಕಳೆಗುಂದಿತ್ತು. ಇಂದು ಕಾಶಿಯಲ್ಲಿರುವ ವಿಶ್ವನಾಥ ಮಂದಿರವು ಇಂದೋರಿನ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರಳಿಂದ 1766 ರಲ್ಲಿ ಕಟ್ಟಿಸಲ್ಪಟ್ಟಿದ್ದು. ಆಕೆಗೆ ವಿಶ್ವೇಶ್ವರನು ಕನಸಿನಲ್ಲಿ ಕಂಡು ಮಂದಿರವನ್ನು ನಿರ್ಮಿಸುವಂತೆ ಹೇಳಿದುದರಿಂದ ಆಕೆ ಇದನ್ನು ಕಟ್ಟಿಸಿದಳು. ಇದರಿಂದ ಹಿಂದೂ ಸಮಾಜದ ಕೊರಗೊಂದು ದೂರವಾಯಿತು. ಕಾಶಿ ಬೌದ್ಧರೇ ಮೊದಲಾಗಿ ಎಲ್ಲರ ತೀರ್ಥಕ್ಷೇತ್ರವು ಹೌದು. ಇಲ್ಲಿ ಅನ್ನಪೂರ್ಣೇಶ್ವರಿ ಮಂದಿರ ಕಾಶಿ ಅರಮನೆ, ಗಂಗೆಯ ದಡದ ಘಟ್ಟಗಳ ಸೊಬಗು ಇತ್ಯಾದಿ ಅಸಂಖ್ಯಾತ ಸ್ಥಾನಗಳಿವೆ. ಕಾಶಿ, ಮಾನವ ಇತಿಹಾಸದಲ್ಲಿನ ಅತ್ಯಂತ ಪ್ರಾಚೀನ ವಿಶ್ವವಿದ್ಯಾನಿಲಯ. ಸಾಂಪ್ರದಾಯಿಕ ಅಧ್ಯಯನದ ಅಂತಿಮ ಘಟ್ಟ ಪ್ರಾಪ್ತವಾಗುವುದು ಕಾಶಿಯಲ್ಲಿ. ಇದು ಅನೇಕ ಬ್ರಹ್ಮರ್ಷಿಗಳ ಪಾದಸ್ಪರ್ಶದಿಂದ ಪುನೀತವಾಗಿರುವ ಮತ್ತು ಸ್ವತಃ ಶಂಕರನ ರಾಜಧಾನಿಯಾಗಿರುವ ಭಾರತದ ಹೃದಯವೆಂದರೆ ಅತಿಶಯೋಕ್ತಿಯಾಗಲಾರದು.
ಇಂತಹ ಪರಮ ಪವಿತ್ರ ತೀರ್ಥಕ್ಷೇತ್ರಗಳನ್ನು ನನಗೆ ನೋಡುವ ಭಾಗ್ಯ ದೊರೆತಿದ್ದು ಒಂದು ಮನೆದೈವವಾದ ಆಂಜನೇಯನ ಕೃಪೆಯಾದರೆ, ಇನ್ನೊಂದು ನಮ್ಮ ಅತ್ತೆಯವರಿಂದ. ಮಾವನವರಿಲ್ಲದ ಕಾರಣ ಬೇರೆ ಯಾರೋ ಕಳೆದ ಬಾರಿ ಕಾಶಿಗೆ ಹೊರಟಿದ್ದರು ಅವರೊಂದಿಗೆ ನೀವು ಹೋಗುವಿರಾ ಎಂದರೆ ಏನೆಂದರೂ ಅತ್ತೆಯವರು ಒಪ್ಪಲೇ ಇಲ್ಲ. ಆದರೆ ಈ ಬಾರಿ ಶಿವಮೊಗ್ಗದಿಂದಲೇ ರೈಲು ಹೊರಟು ಇಲ್ಲಿಗೇ ಕರೆತಂದು ಬಿಡುತ್ತದೆ ಎಂದಾಗ ಅತ್ತೆಯವರು ನೀ ಬರುವುದಾದರೆ ನಾನು ಹೋಗುವೆ ಎಂದರು. ಹಾಗಾಗಿ ನಾನು ಕಾಲೇಜಿಗೆ ರಜೆ ಹಾಕಿ ಹೊರಡಬೇಕಾಯಿತು. ಮಗ ಸಿದ್ದಾರ್ಥನನ್ನು ಕರೆದುಕೊಂಡು ಹೋಗು ಎಂದು ಮನೆಯವರು ಹೇಳಿದಾಗ ಅವನ ಶಾಲೆಯಲ್ಲಿ ರಜೆ ನೀಡಿದ್ದರಿಂದ ಎಲ್ಲರೂ ಅಯೋಧ್ಯೆ ಕಾಶಿ ಯಾತ್ರೆ ಮಾಡುವಂತೆ ಆಯಿತು.
23ರ ಶನಿವಾರ ಬೆಳಗ್ಗೆ 6.30ಕ್ಕೆ ಜೈ ಶ್ರೀ ರಾಮ್ ಹರ ಹರ ಮಹಾದೇವ್ ಎಂಬ ಜೈಕಾರದೊಂದಿಗೆ ಆರಂಭವಾದ ನಮ್ಮ ಯಾತ್ರೆ ಹೋಗುವಾಗ ಭೋಗಿ ಭೋಗಿಗಳಲ್ಲಿ ವಿಷ್ಣು ಸಹಸ್ರನಾಮ ಲಲಿತಾ ಸಹಸ್ರನಾಮ ಪಾರಾಯಣವೇ ಮೊದಲಾಗಿ ರಾಮರಕ್ಷಾ ಸ್ತೋತ್ರ ಹನುಮಾನ್ ಚಾಲೀಸಾ ರಾಮ ತಾರಕ ಮಂತ್ರಗಳಿಂದ ಅಲ್ಲದೆ ಭಜನೆ ಕುಣಿತವೆ ಮೊದಲಾಗಿ ನಿಜವಾಗಿಯೂ ತೀರ್ಥಯಾತ್ರೆಗೆ ಒಂದು ಕಳೆ ಬಂದಿತ್ತು. ಎಲ್ಲೆಡೆಯೂ ಕೇಳಿ ಬರುತ್ತಿದ್ದ ರಾಮ ತಾರಕ ಮಂತ್ರ ಇಂಪಾಗಿ ಮಧುರವಾಗಿ ಆನಂದ ತರುವಂತಿತ್ತು. ಯಾತ್ರೆಗೆ ಹೊರಟದ್ದು 1450ಕ್ಕೂ ಹೆಚ್ಚು ಮಂದಿ 19 ಭೋಗಿಗಳಲ್ಲಿ ಜನ ಹೊರಟಿದ್ದೆವು. ಅದರಲ್ಲಿಯೂ ಮುಕ್ಕಾಲು ಪಾಲು ಜನರು ಮಹಿಳೆಯರೇ ಇದ್ದರು. ಆದರೂ ಒಬ್ಬರು ಕಿತ್ತಾಡದೆ ಜಗಳವಾಡದೆ ಯಾತ್ರೆ ಸಂಪನ್ನಗೊಳಿಸಿದರು. ವಿವಿಧ ಸಮುದಾಯದವರೆಲ್ಲ ಸೇರಿ ಹೊರಟ ಈ ಯಾತ್ರೆ, ನಾವೆಲ್ಲ ಹಿಂದೂ ನಾವೆಲ್ಲ ಬಂಧು ಎಂಬ ಭಾವ ಮೂಡಿಸುವಂತಿತ್ತು.

ಒಂದಿನ ನೀರಿಗಾಗಿ ಅರ್ಧ ಗಂಟೆಗೂ ಹೆಚ್ಚು ನಿಲ್ಲದ ರೈಲು ಅಲ್ಲಿ ವ್ಯವಸ್ಥೆ ಏರುಪೇರಾಗಿದ್ದರಿಂದ ಅದು ಸರಿಯಾಗುವವರೆಗೂ ನಮ್ಮನ್ನು ಬಿಟ್ಟು ಹೊರಟಿರಲಿಲ್ಲ. ಎಲ್ಲವನ್ನು ಖುದ್ದಾಗಿ ಈಶ್ವರಪ್ಪ ಹಾಗೂ ಕಾಂತೇಶ್ ರವರೆ ಗಮನಿಸಿಕೊಳ್ಳುತ್ತಿದ್ದು ವಿಶೇಷವಾಗಿತ್ತು. ಪ್ರತಿ ಭೋಗಿಗಳಿಗೂ ತೆರಳಿ ತಂದೆ ಮಗ ಎಲ್ಲರ ಯೋಗಕ್ಷೇಮ ವಿಚಾರಿಸುತ್ತಿದ್ದರು. ಅಷ್ಟು ದೂರದ ಪ್ರಯಾಣ ಆರೋಗ್ಯ ಸಮಸ್ಯೆ ಬರಬಹುದೆಂದು ಒಬ್ಬ ವೈದ್ಯ ನರ್ಸ್ ಹಾಗೂ ಮೆಡಿಸಿನ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಯಾರಿಗಾದರೂ ತೊಂದರೆಯಾಗಿದೆ ಎಂದು ಹೇಳಿದ ಕೂಡಲೇ ಬಂದು ಅವರನ್ನು ತಪಾಸಣೆ ಮಾಡುತ್ತಿದ್ದು ಸಹ ವಿಶೇಷವೇ.
ಸೋಮವಾರ ಮಧ್ಯಾಹ್ನ 11ಕ್ಕೆ ಹೋಗಬೇಕಾದ ಟ್ರೈನ್ ಅಯೋಧ್ಯೆ ತಲುಪಿದ್ದು 12:30 ಆಗಿತ್ತು. ತಕ್ಷಣ ಆಟೋಗಳು ನಮಗಾಗಿ ಕಾದಿದ್ದವು ವ್ಯವಸ್ಥಿತವಾಗಿ ಏಳು ಜನರ ತಂಡ ಅದಕ್ಕೊಬ್ಬ ಮುಖ್ಯಸ್ಥನನ್ನಾಗಿ ಮಾಡಿ ಸರಯೂ ತೀರಕ್ಕೆ ಹೋಗಿ ಸ್ನಾನ ಮುಗಿಸಿ ಊಟಕ್ಕೆ ಬಂದೆವು. ಪವಿತ್ರ ಸರಯೂ ಸ್ನಾನ ನಮ್ಮನ್ನು ಪುಳಕಿತರನ್ನಾಗಿಸಿದ್ದರಿಂದ ಊಟದ ಹಸಿವು ಆಗದೆ ಮೊದಲು ರಾಮನನ್ನೇ ನೋಡೋಣ ಎಂದು ಹೊರಟು ಪ್ರಭು ಶ್ರೀರಾಮನ ದರ್ಶನ ಮಾಡಿ ಕಣ್ಣಾಲಿಗಳು ತುಂಬಿದವು. ನಂತರ ಪ್ರಸಾದ ತೆಗೆದುಕೊಂಡು ಹೊರಬರುವ ಕಡೆ, ಕಾಲು ನೋವಾಗಿರಬಹುದು ಎಂದು ಉಚಿತ ಮಾತ್ರೆಯ ವ್ಯವಸ್ಥೆಯನ್ನು ರಾಮಜನ್ಮಭೂಮಿ ಟ್ರಸ್ಟ್ ನವರೆ ಮಾಡಿದ್ದು ವಿಶೇಷ. ನಂತರ ಹನುಮಾನ್ ಗಡಿ ನೋಡಿ ಹಾಗೆ ಸೀದಾ ಗೋಪಾಲ್ ಜೀಯವರ ಮಾತುಗಳನ್ನು ಕೇಳಲು ಮರಳಿದೆವು. ಅಷ್ಟೊಂದು ಜನಜಂಗುಳಿಯ ಪ್ರದೇಶದಲ್ಲೂ ನಮ್ಮ ತಂಡದವರನ್ನು ಯಶಸ್ವಿಯಾಗಿ ಮುನ್ನಡೆಸಿದ ಶ್ರೀ ಮಂಜಣ್ಣನವರನ್ನು ನಾವು ಮರೆಯುವಂತೆಯೇ ಇಲ್ಲ.
ಇಷ್ಟೆಲ್ಲ ಮುಗಿಸಿ ಕೊನೆಗೆ ನಮಗೆ ಬೆಳಗ್ಗೆ ಕರೆ ತಂದ ಆಟೋ ಸಿದ್ದವಾಗಿ ನಿಂತಿತ್ತು ಊಟ ಮುಗಿಸಿ ರಾತ್ರಿ 11ಕ್ಕೆ ಅಯೋಧ್ಯೆಯಿಂದ ಹೊರಟು ಬೆಳಗ್ಗೆ 5.30ರ ಸುಮಾರಿಗೆ ಕಾಶಿ ತಲುಪಿದೆವು ಅಲ್ಲೂ ಸಹ 14 ಜನರ ತಂಡವನ್ನು ಮಾಡಿ ಕರೆದೊಯ್ದು ಜಂಗಮವಾಡಿ ಮಠಕ್ಕೆ ಬಿಡಲು ಟ್ರ್ಯಾಕ್ಸ್ ಗಳು ಸಿದ್ಧವಾಗಿ ನಿಂತಿತ್ತು. ನಂತರ ಮಠಕ್ಕೆ ತೆರಳಿ ಅಲ್ಲಿನ ವ್ಯವಸ್ಥೆಗಳು ಸಹ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಇಡ್ಲಿ ಚಿತ್ರಾನ್ನ ತಿಂಡಿ ನಮಗಾಗಿ ಕಾದಿತ್ತು.
ನಂತರ ಅಲ್ಲಿಂದ ಎಲ್ಲರೂ ಒಬ್ಬೊಬ್ಬರಾಗಿ ಬೇರೆಡೆ ಸಾಗಿದರು ಕೆಲವರು ಗಂಗಾ ಸ್ನಾನ ವಿಶ್ವನಾಥನ ದರ್ಶನ ಎಂದು ಹೊರಟರೆ ಅವರವರು ಸ್ವತಂತ್ರವಾಗಿ ಗುಂಪು ಗುಂಪಾಗಿ ತೆರಳಲು ಮಾಹಿತಿ ನೀಡಿದ್ದರು. ಸಂಜೆ ಬೋಟ್ ವ್ಯವಸ್ಥೆ ಮಾಡಿಸಿ ಅಲ್ಲಿ ಗಂಗಾರತಿ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಎಲ್ಲಾ ಘಾಟ್ ಗಳ ಪರಿಚಯ ಮಾಡಿ ಕಾಶಿ ಕಾರಿಡಾರ್ ನೋಡಿ ಅಲ್ಲೇ ಮೂಕ ವಿಸ್ಮಿತರಾಗಿ ಮೋದಿಯವರಿಗೊಂದು ಸಲ್ಯೂಟ್ ಹೊಡೆದು, ಮುಂದೆ ಹೋದರೆ ವಿಶ್ವನಾಥನ ದರ್ಶನ ಮಹಾಮಂಗಳಾರತಿಯೊಂದಿಗೆ ಆಗಿದ್ದೇ ನಮಗಾದ ಸಂತೋಷಗಳಲ್ಲಿ ಬಹು ಮುಖ್ಯವಾದದ್ದು. ಕಾಶಿಯ ಗಲ್ಲಿ ಗಲ್ಲಿಗಳಲ್ಲಿ ತಿರುಗಿ ಸಂತೋಷಪಟ್ಟೆವು. ಕಾಲಭೈರವನೇ ಮೊದಲಾಗಿ ಸಾಕ್ಷಿ ಗಣಪತಿ ವಿಶಾಲಾಕ್ಷಿ ಅನೇಕ ಮಂದಿರಗಳನ್ನು ದರ್ಶನ ಮಾಡಿ, ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದನ್ನು ನೋಡಿ ಮಲಗಿದೆವು.
ಮರುದಿನ ಬೆಳಗ್ಗೆ ಎದ್ದು ಎಲ್ಲ ಭೋಗಿಗಳಿಗೂ ಓಡಾಡಿದಾಗ ಹೀಗೆ ಕುತೂಹಲಕ್ಕೆಂದು ಅನೇಕರನ್ನು ಮಾತನಾಡಿಸಿದೆ. ಅವರ ಸಂತೋಷ ನೋಡಿ ನನಗೆ ಧನ್ಯತೆಯ ಭಾವ ಮೂಡಿತ್ತು. ನಾವೇ ಮನೆಯವರು ತೆರಳಿದರೂ ಈ ರೀತಿಯ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಕರಿಬಸಪ್ಪನವರು ಹೇಳಿದರೆ, ಸಂಸ್ಕೃತ ಟೀಮಿನಿಂದ ಬಂದ ಶ್ರೀಮತಿ ಮನು ಚವ್ಹಾಣ್ ದಂಪತಿಗಳು ಮಾತನಾಡಿ ಯಾವುದೇ ತರದ ಏನೂ ಕೊರತೆಯಾಗದೇ ಎಲ್ಲರೂ ಒಂದು ಕುಟುಂಬದವರ ಹಾಗೆ ಹೊಂದಿಕೊಂಡು ಹೋಗಿಬಂದೆವು ಎಂದು ಹೇಳಿದರು. ಅನೇಕರಿಗೆ ಸ್ವತಃ ಈಶ್ವರಪ್ಪನವರ ಕುಟುಂಬ ಜೊತೆಯಲ್ಲಿದ್ದು ಸಂತಸ ಮೂಡಿಸಿದರೆ, ಮಂತ್ರಿಯ ಸ್ಥಾನದಲ್ಲಿದ್ದು ಯಾರೂ ಮಾಡೋದನ್ನ ಇವರು ಮಾಡಿದ್ದಾರೆ ಎಂದು ಆನಂದ ಪಟ್ಟರು. ಹನ್ನೆರಡು ವರ್ಷಗಳ ಹಿಂದೆ ಹೋಗಿದ್ದರು ಇಂದು ಕಾಶಿ, ಮೋದಿಯವರ ಕಾರಣದಿಂದ ತುಂಬಾ ಚೆನ್ನಾಗಿ ಆಗಿದೆ ಎಂದು ರಾಜೇಶ್ವರಿ ಅವರು ಹೇಳಿದರು. ಭೋಗಿಯಲ್ಲಿದ್ದ ಯಾತ್ರಿಕರಲ್ಲೊಬ್ಬರಾದ ಸುರೇಶ್ ಅವರು ದೇವರ ದರ್ಶನ ಮಾಡಿ ಯಾವುದೇ ಅನಾರೋಗ್ಯ ಆಗದೆ ತಂದ ಮಾತ್ರೆಗಳನ್ನು ಹಾಗೆಯೇ ಕೊಂಡೊಯ್ಯುತ್ತಿದ್ದೇವೆ ಎಂದರು.
ಒಟ್ಟಾರೆಯಾಗಿ ಒಂದೊಳ್ಳೆ ಯಾತ್ರೆ ಮಾಡಿ ನಾವು ಪುನೀತರಾದೆವು. ಹಾಗೆ ಅನೇಕರ ಪರಿಚಯವಾಗಿ ಹಾಡು ಕುಣಿತ ಅಂತ್ಯಾಕ್ಷರಿ ಪಗಡೆಯಾಟ ಇತ್ಯಾದಿಗಳು ಎಲ್ಲರ ಮನಸ್ಸಲ್ಲೂ ಹಾಗೆಯೇ ಉಳಿಯುವಂತಾಯ್ತು. ಯಾತ್ರಾರ್ಥಿಯಲ್ಲಿ ಒಬ್ಬರಾದ ಕಮಲಕ್ಕನವರಂತೂ ಈಶ್ವರಪ್ಪ ಹಾಗೂ ಕಾಂತೇಶ್ ಕುಟುಂಬದವರ ಕುರಿತಾಗಿ ಕವನ ರಚಿಸಿ ಹಾಡಿ ಜನಮನ ಸೆಳೆದರು. ಶಬರೀಶಣ್ಣನ ಭಜನೆ, ಅವರ ತಾಯಿ ಭಾವುಕರಾದ ಕ್ಷಣ, ಅಲ್ಲದೇ ಎಲ್ಲರೂ ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದು, ಎಲ್ಲರಿಗೂ ಸ್ಪಂದಿಸಿ ಯಾತ್ರೆ ಮಾಡಿದ ಈಶ್ವರಪ್ಪನವರ ಕುಟುಂಬ ಎಲ್ಲವೂ ಒಂದು ರೀತಿಯ ವಿಶೇಷವೇ ಸರಿ. ನಿಜವಾಗಿಯೂ ನಾಯಕ ಎಂದೆನಿಸಿಕೊಳ್ಳುವುದು ಕಷ್ಟ. ಅದರಲ್ಲೂ ಜನನಾಯಕ ಹೇಗಿರಬೇಕು ಎಂಬುದನ್ನು ತಾನು ಸ್ವತಃ ನಡೆದು ತೋರಿಸಿದ ಶ್ರೀಯುತ ಈಶ್ವರಪ್ಪನವರು ಎಲ್ಲರಿಗೂ ಆದರ್ಶಪ್ರಾಯರು. ಹಿಂದಿರುಗಿ ಬರುವಾಗ ಅಯೋಧ್ಯೆಯಲ್ಲಿ ಸೇವೆ ಮಾಡಿದ ಶ್ರೀನಿತಿನ್ ರಾಯ್ಕರ್ ಅವರ ಪರಿಚಯ ನಮಗೆ ಅಯೋಧ್ಯೆಯ ಕುರಿತಾಗಿ ಇನ್ನಷ್ಟು ಪ್ರದೇಶಗಳ ಪರಿಚಯವನ್ನು ನಮಗೆ ಮಾಡಿಸಿದರು. ಕೆಲವೊಂದು ಲೋಪದೋಷಗಳು ಕಂಡುಬಂದರೂ ಸಹ ಈ ವ್ಯವಸ್ಥೆಗೆ ಅವೆಲ್ಲವೂ ನಗಣ್ಯ. ಇನ್ನೂ ಅನೇಕ ನೆನಪಿನ ಬುತ್ತಿಗಳು ಒಡಲೊಳಗಿದ್ದರೂ ಈವರೆಗೆ ಯಾರೂ ಮಾಡಿಸದ ಇತಿಹಾಸ ನಿರ್ಮಿಸಿದ ಇಂತಹ ಸ್ಮರಣೀಯ ಯಾತ್ರೆಯನ್ನು ಮಾಡಿಸಿದ ಈಶ್ವರಪ್ಪನವರು ಹಾಗೂ ಅವರ ಕುಟುಂಬಕ್ಕೆ ಒಳಿತಾಗಲೆಂದು ಯಾತ್ರಾರ್ಥಿಗಳೆಲ್ಲರ ಪರವಾಗಿ ಈ ಮೂಲಕ ಪ್ರಾರ್ಥಿಸುವೆ.
ಲೇಖನ: ಡಾ. ಮೈತ್ರೇಯಿ ಆದಿತ್ಯ ಪ್ರಸಾದ್, ಉಪನ್ಯಾಸಕರು, ಪೇಸ್ ಕಾಲೇಜ್, ಶಿವಮೊಗ್ಗ
ಚಿತ್ರ ಕೃಪೆ : ಸಿದ್ಧಾರ್ಥ ಎ ಕಶ್ಯಪ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post