ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿಗೆ ದೇವರ ಸ್ಥಾನವನ್ನು ನೀಡಲಾಗಿದೆ.ನಮ್ಮ ಪ್ರತಿಯೊಂದು ಹಬ್ಬವೂ ಪ್ರಕೃತಿಯೊಂದಿಗೆ ಬೆರೆತಿದೆ.ದೇಶದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಗಣೇಶ ಚತುರ್ಥಿಯೂ #Ganesha Festival ಇದಕ್ಕೆ ಹೊರತಲ್ಲ. ನಗರದಲ್ಲಿ ಈಚೆಗೆ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಗಣಪತಿ ಮೂರ್ತಿಗಳ ಬಳಕೆ ಹೆಚ್ಚುತ್ತಿದೆ.ಇದರ ಬೆನ್ನಿಗೇ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಬಳಕೆ ಹೆಚ್ಚಬೇಕು ಎಂಬ ಕೂಗೂ ಸಹ ಕೇಳಲು ಆರಂಭಿಸಿದೆ.
ಪಿಒಪಿ ಗಣಪ ಮೂರ್ತಿಗಳಲ್ಲಿ ಆಡಂಬರ ಎದ್ದು ಕಂಂಡರೆ, ಪರಿಸರ ಸ್ನೇಹಿ ಮಣ್ಣಿನ ಗಣಪ ಮೂರ್ತಿಗಳಲ್ಲಿ ಸರಳತೆ ಮೈದುಂಬಿರುತ್ತದೆ.ಪಿಒಪಿ ಗಣಪನ ಎದರು ಸಾಂಪ್ರದಾಯಿಕ ಶೈಲಿಯ ಆವೆಮಣ್ಣಿನ (ಜೇಡಿಮಣ್ಣು) ಗಣಪ ಭಕ್ತರಿಗೆ ಸಪ್ಪೆ ಎನಿಸಿದ ಕಾರಣ ಸಾಂಪ್ರದಾಯಿಕ ಶೈಲಿಯ ಕಲಾವಿದರೂ ಸಂಕಷ್ಟ ಸ್ಥಿತಿ ಅನುಭವಿಸುವಂತಾಯಿತು.
ನಮಗೆ ಬದುಕು ಕೊಟ್ಟಿರುವುದು ನಮ್ಮ ಕಲೆ. ಅದನ್ನು ಬಿಟ್ಟುಕೊಡಲು ಸಾಧ್ಯವಿಲ್ಲ’ ಎನ್ನುವ ಕಲಾವಿದ ಕರಿಬಸಪ್ಪ ಕಳೆದ ಕಳೆದ ಇಪ್ಪತ್ತು ವರ್ಷಗಳಿಂದ ನಗರದ ಬನಶಂಕರಿ 1ನೇ ಹಂತ ಶ್ರೀನಗರ ಅಪೆಕ್ಸ್ ಬ್ಯಾಂಕ ಸಮೀಪ ಆವೆಮಣ್ಣಿನ ಗಣೇಶ ವಿಗ್ರಹ ಸಿದ್ಧಪಡಿಸುತ್ತಿದ್ದಾರೆ.
ನಮ್ಮ ತಂದೆಯವರ ಕಾಲದಿಂದಲೂ ಮಣ್ಣಿನ ಗಣೇಶ ವಿಗ್ರಹಗಳನ್ನು ತಯಾರಿಸುತ್ತಾ ಬಂದಿದ್ದೇವೆ. ಮೊದಲು `ಪಿಒಪಿ’ ಗಣಪ ಸಿಗುತ್ತಿರಲಿಲ್ಲ. 80ರ ದಶಕದಲ್ಲಿ `ಪಿಒಪಿ’ ಗಣಪನ ಚಂದಕ್ಕೆ ಜನರು ಮಾರು ಹೋದರು.ಇದರಿಂದ ನಮ್ಮ ವ್ಯಾಪಾರಕ್ಕೂ ಅಲ್ಪ ಹಿನ್ನೆಡೆಯಾಯಿತು’ ಎಂದು ಗಣಪತಿ ವಿಗ್ರಹದ ವಿನ್ಯಾಸ, ನಿರ್ಮಾಣ ತಂತ್ರ ಮತ್ತು ಭಕ್ತರ ಅಭಿರುಚಿ ಬದಲಾದ ಬಗ್ಗೆ ವಿವರಿಸುತ್ತಾರೆ ಅವರು.
ನಮ್ಮ ಸಾಂಪ್ರದಾಯಿಕ ಶೈಲಿಯ ಗಣೇಶ ವಿಗ್ರಹಗಳ ವಿನ್ಯಾಸ ಸೀಮಿತ. ಕೆಲಸವೂ ತುಸು ನಿಧಾನ. ಹೀಗಾಗಿ ನಾವು ತಯಾರಿಸುವ ಗಣೇಶನ ವಿಗ್ರಹಗಳಿಗೆ ಬೇಡಿಕೆ ಕಡಿಮೆಯಾಯಿತು’ ಎಂದು ತಮ್ಮ ಸಂದಿಗ್ಧ ಪರಿಸ್ಥಿತಿಯ ಮಾಹಿತಿ ನೀಡುತ್ತಾರೆ. ಆದರೆ ಈಗ ಕಾಲ ಮತ್ತೆ ಬದಲಾಗುತ್ತಿದೆ. ಪರಿಸರ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ಸಹಜ ರೀತಿಯಲ್ಲಿ ತಯಾರಿಸಿದ ಮಣ್ಣಿನ ಗಣಪತಿ ವಿಗ್ರಹಗಳನ್ನೇ ಇಷ್ಟಪಡುತ್ತಿದಾರೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ.
ಸಹಜ ಗಣಪನೇ ಬೇಕು
ಕಳೆದ ವರ್ಷದವರೆಗೆ ನಾವು ಮನೆಯಲ್ಲಿ `ಪಿಒಪಿ’ ಗಣೇಶನ ಮೂರ್ತಿ ಸ್ಥಾಪಿಸಿದ್ದೇವು.ಇಂಥ ಗಣಪತಿ ಮೂರ್ತಿಗಳನ್ನು ವಿಸರ್ಜಿಸಿದ ಕೆರೆಗಳಿಗೆ ಮಾಲಿನ್ಯದ ಶಾಪ ತಟ್ಟುತ್ತದೆ ಎಂದು ನಮಗೆ ಇದೀಗ ಅರಿವಾಗಿದೆ. ಹೀಗಾಗಿ ಈ ಬಾರಿ ಮಣ್ಣಿನ ಗಣೇಶನ ಮೂರ್ತಿಯನ್ನೇ ಸ್ಥಾಪಿಸಿ, ಪೂಜಿಸಲು ನಿರ್ಧರಿಸಿದ್ದೇವೆ. ಇದರಿಂದ ಪರಿಸರ ರಕ್ಷಣೆಗೆ ನಮ್ಮಿಂದಾಗುವ ಕೊಂಚ ಕಾಣಿಕೆ ನೀಡುವ ಪ್ರಯತ್ನ ಮಾಡುತ್ತೇವೆ ಎಂದು ಗಣಪನ ಮೂರ್ತಿ ಖರೀದಿಸಲು ಬಂದಿದ್ದ ಮಹಿಳೆ ಆಶಾ ಹೇಳಿದರು.
ಪರಿಸರ ಸ್ನೇಹಿ ಗಣಪ ಮೂರ್ತಿ
ಪ್ರಕೃತಿಯೊಂದಿಗೆ ಮನುಷ್ಯರ ಸಂಬಂಧ ಬೆಸೆಯುವ ಅಪರೂಪದ ಪರಿಕಲ್ಪನೆಯನ್ನು ಗಣೇಶ ಅಭಿವ್ಯಕ್ತಿಸುತ್ತಾನೆ. ಇಂಥ ಗಣಪನ ಮೂರ್ತಿಗಳು ಪ್ರಕೃತಿ ಸ್ನೇಹಿಯಾಗಿರಬೇಕು .ಆಗ ಮಾತ್ರ ಹಬ್ಬದ ಆಚರಣೆ ಸಾರ್ಥಕ ಎನಿಸಲು ಸಾಧ್ಯ.
ಕಳೆದ ಕೆಲವು ವರ್ಷಗಳಿಂದ ಹೆಚ್ಚು ಪ್ರಚಾರ ಪಡೆಯುತ್ತಿರುವ ಪರಿಸರ ಗಣಪನ ಮಾರಾಟವೂ ವರ್ಷದಿಂದ ವರ್ಷಕ್ಕೆ ಗಣನೀಯ ಹೆಚ್ಚಳ ಕಾಣುತ್ತಿದೆ.ನಗರದ ಪ್ರಮುಖ ಭಾಗದಲ್ಲಿ ಇಂದು ಬಣ್ಣದ ಗಣಪನ ಜತೆ ಪರಿಸರ ಗಣೇಶನ ಮೂರ್ತಿಯೂ ಗೋಚರಿಸುತ್ತಿದೆ. ಮಾರಾಟ ಹಾಗೂ ಆಕರ್ಷಣೆ ದೃಷ್ಟಿಯಿಂದಲೂ ಬಣ್ಣದ ಗಣಪನ ಎತ್ತರಕ್ಕೆ ಪರಿಸರ ಗಣಪ ಬೆಳೆದು ನಿಂತಿದ್ದಾನೆ. ಇದಕ್ಕೆ ಕಾರಣಗಳೆಂದರೆ ಕಡಿಮೆ ದರ, ಪರಿಸರ ಸ್ನೇಹಿ, ಸುಂದರ, ನೈಜ ಬಣ್ಣ ಇದೆಲ್ಲ ಪರಿಸರ ಗಣಪನ ಇಲ್ಲಿಲ್ಲ. ವೆಜಿಟೆಬಲ್ ಬಣ್ಣಗಳಿಂದ ಸಿಂಗಾರವಾದ ಆದರೆ ಪರಿಸರಕ್ಕೆ ಯಾವುದೇ ಹಾನಿಯಿಲ್ಲದ ಗಣೇಶ ಕೂಡ ಎಲ್ಲೆಡೆ ಗಮನ ಸೆಳೆಯುತ್ತಿದ್ದಾನೆ.
ಒಟ್ಟಿನಲ್ಲಿ ಈ ವರ್ಷವಂತೂ ಎಲ್ಲೆಡೆ ಗಣೇಶ ಸರಳವಾಗಿಯೇ ತನ್ನ ಸೌಂದರ್ಯ ಹೆಚ್ಚಿಸಿಕೊಂಡು ಜನರನ್ನು ಮರುಳು ಮಾಡುತ್ತಿದ್ದಾನೆ. ಇದೀಗ ಏನಿದ್ದರೂ ಗ್ರಾಹಕ ನಿರೀಕ್ಷೆ. ಗಾತ್ರ, ಬಣ್ಣ ಅಥವಾ ಸುಂದರ ವದನಕ್ಕೆ ಮರಳಾಗುವ ಮಂದಿ ಸಮೀಪಿಸಿ ಮತ್ತೆ ದೂರ ಸರಿದು ಹೋದಾಗ ಮತ್ತೆ ಮುಂದುವರಿಯುವ ಕಾಯುವಿಕೆ.ಯಾವ ಬಣ್ಣ, ಇನ್ಯಾವ ವದನಕ್ಕೆ ಗ್ರಾಹಕ ಸೋಲುವನೋ ಗೊತ್ತಿಲ್ಲ, ರಸ್ತೆ ಬದಿಯಲ್ಲೆಲ್ಲೋ ಒಂದಿಷ್ಟು ನಿರೀಕ್ಷೆಗಳನ್ನುಟ್ಟುಕೊಂಡು ಗಣೇಶನನ್ನು ಮುಂದಿಟ್ಟುಕೊಂಡ ವ್ಯಾಪಾರಿಗೂ ಮುಗಿಯದ ನಿರೀಕ್ಷೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post