ಕಲ್ಪ ಮೀಡಿಯಾ ಹೌಸ್ | ವಿಶೇಷ ವರದಿ |
ಸಮರ್ಪಕ ನಿರ್ವಹಣೆ ಕೊರತೆಯಿಂದ ಕಳೆದ ಮೂರ್ನಾಲ್ಕು ವರ್ಷಗಳಿಂದ ತ್ಯಾಜ್ಯ ಸಂಸ್ಕರಣಾ ಘಟಕ ಸಂಪೂರ್ಣ ಕಾರ್ಯ ಸ್ಥಗಿತಗೊಂಡಿರುವುದು ನಗರದ ಮಲೀನ ನೀರಿನ ಬಹುದೊಡ್ಡ ಸಮಸ್ಯೆಯಾಗಿತ್ತು. ನಿರ್ಮಲ ತುಂಗಾ ಅಭಿಯಾನ ತಂಡವು ನಗರದ ಸಂಪೂರ್ಣ ಕೊಳಚೆ ನೀರು ನೇರವಾಗಿ ತುಂಗಾ ನದಿಗೆ ಸೇರುತ್ತಿರುವ ವಿಚಾರವನ್ನು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಈ ದಿಶೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತ್ತು.
ಎಪ್ರಿಲ್ 4 ರಿಂದ ಗುಂಡಪ್ಪ ಶೆಡ್ ನಲ್ಲಿರುವ ವೆಟ್ ವೆಲ್ ಪ್ಲಾಂಟ್ ಹಾಗೂ ತ್ಯಾವರೆ ಚಟ್ನಳ್ಳಿಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣ ಘಟಕಗಳ ಹೂಳೆತ್ತುವಿಗೆ ಹಾಗೂ ಕೊಳಗಳಲ್ಲಿನ ಕಳೆ ಗಿಡಗಳ ತೆರವು, ಕೆಟ್ಟು ನಿಂತ ಸುಮಾರು 36 ಮೋಟಾರುಗಳ ದುರಸ್ತಿ, ವಿದ್ಯುತ್ ಕೇಬಲ್ ಗಳ ದುರಸ್ತಿ ಸೇರಿದಂತೆ ವಿವಿಧ ಬೃಹತ್ ಕಾರ್ಯ ಚಟುವಟಿಕೆಗಳು ಆರಂಭವಾದವು. ಈ ಸಂದರ್ಭದಲ್ಲಿ ನಿರ್ಮಲ ತುಂಗಾ ಅಭಿಯಾನ ತಂಡವು ಸ್ಥಳಕ್ಕೆ ಭೇಟಿ ನೀಡಿ ಕಾರ್ಯ ಪರಿಶೀಲನೆ ನಡೆಸಿದ್ದಲ್ಲದೆ, ಜಿಲ್ಲಾಧಿಕಾರಿಗಳ ಜೊತೆ ಈ ವಿಚಾರಗಳನ್ನು ಚರ್ಚಿಸಿ ಕಾಮಗಾರಿಗಳಿಗೆ ವೇಗ ಪಡೆಯುವಂತೆ ಮಾಡಿದರು. ಜಿಲ್ಲಾಧಿಕಾರಿಗಳು ಸಹ STP ಘಟಕಗಳ ಪುನರಾರಂಭಕ್ಕೆ ತೀವ್ರ ಆಸಕ್ತಿ ವಹಿಸಿದ್ದು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆಗಳನ್ನೂ ನೀಡಿದರು.

Also read: ಒಳ ಮೀಸಲಾತಿ ವಿರೋಧಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ
ಗುಂಡಪ್ಪ ಶೆಡ್ ನ ವೆಟ್ ವೆಲ್ ನಿಂದ ಪಂಪ್ ಮಾಡಲಾದ ನೀರು ಬಿ ಮತ್ತು ಸಿ ಪಾಂಡ್ ಗಳಲ್ಲಿ ಶೇಖರಣೆಯಾಗಿ ತಿಳಿ ನೀರು ಮುಂದೆ ಹೋಗುವ ವ್ಯವಸ್ಥೆ ಮಾಡಲಾಗಿದೆ. ಮುಂದೆ ಎ ಯಿಂದ ಬಿ ಗೆ, ಬಿ ಯಿಂದ ಸಿಗೆ, ಸಿ ಯಿಂದ ತಿಳಿನೀರು ಕೊಳಕ್ಕೆ ಸಾಗುವ ಯೋಜನೆ ರೂಪಿಸಿರುವ ಮಾಹಿತಿ ಇದ್ದು ಇದಕ್ಕೆ ಈಗಾಗಲೇ ಅನೇಕ ಬೃಹತ್ ಪೈಪುಗಳು ಬಂದಿವೆ. ಕಛೇರಿ ಕಟ್ಟಡದ ಕಾಮಗಾರಿಯೂ ನಡೆಯುತ್ತಿದ್ದು ಒಟ್ಟಿನಲ್ಲಿ ಸದ್ಯದಲ್ಲೇ ವ್ಯವಸ್ಥಿತ ತ್ಯಾಜ್ಯ ನೀರು ಸಂಸ್ಕರಣೆ ನಡೆಯುವ ಆಶಾಭಾವನೆ ಮೂಡಿಸಿದೆ.

ವರದಿ: ತ್ಯಾಗರಾಜ ಮಿತ್ಯಾಂತ










Discussion about this post