ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಹಿಂದೂಗಳಲ್ಲಿ ಹತ್ತು ಹಲವು ಸಂಪ್ರದಾಯಗಳಿದೆ. ಅಂಥ ಸಂಪ್ರದಾಯಗಳಲ್ಲಿ ದೇವರಿಗೆ ಮಾಲೆ ಹಾಕುವ ಸಂಪ್ರದಾಯ ಕೂಡ ಒಂದು. ಹೂವಿನ ಮಾಲೆ, ತುಳಸಿ ಮಾಲೆ, ವಡೆಯ ಮಾಲೆ, ಇನ್ನು ಹತ್ತು ಹಲವು ತರಹದ ಮಾಲೆಗಳನ್ನ ನಾವು ದೇವರಿಗೆ ಹಾಕ್ತೀವಿ.
ವೀಳ್ಯದೆಲೆಯನ್ನ ನಾವು ಪ್ರತೀ ಪೂಜೆ, ಹೋಮ ಹವನ, ಮದುವೆ ಮುಂಜಿ ಸಮಾರಂಭಗಳಲ್ಲಿ ಬಳಸುತ್ತೇವೆ. ವೀಳ್ಯದೆಲೆ ಇಲ್ಲದೇ, ಪೂಜೆ ನಡೆಯುವುದಿಲ್ಲ. ತೆಂಗಿನಕಾಯಿಗೆ ಇರುವಷ್ಟೇ ಮಹತ್ವ ವೀಳ್ಯದೆಲೆಗೆ ಇದೆ. ಇನ್ನೊಂದು ವಿಶೇಷ ವಿಷಯವೆಂದರೆ, ವೀಳ್ಯದೆಲೆಯ ಮೇಲ್ಭಾಗದಲ್ಲಿ ಲಕ್ಷ್ಮೀ, ಮಧ್ಯಭಾಗದಲ್ಲಿ ಸರಸ್ವತಿ, ಕೊನೆಯ ಭಾಗದಲ್ಲಿ ಗೌರಿಯ ವಾಸಸ್ಥಾನವಿದೆ. ಇದೇ ರೀತಿ ಕೆಲವರು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಕೈಯನ್ನು ವೀಳ್ಯದೆಲೆಯ ರೂಪದಂತೆ ಜೋಡಿಸಿಕೊಂಡು ಕರಾಗ್ರೆ ವಸತೆ ಲಕ್ಷ್ಮೀ, ಕರಮಧ್ಯೆ ಸರಸ್ವತಿ, ಕರಮೂಲೇತು ಸ್ಥಿತಾ ಗೌರಿ, ಪ್ರಭಾತೇ ಕರದರ್ಶನಂ ಎನ್ನುವ ಶ್ಲೋಕ ಹೇಳಿ ದಿನ ಆರಂಭಿಸುತ್ತಾರೆ.

ಇದರ ಜೊತೆ ವೀಳ್ಯದೆಲೆ ದೀಪವನ್ನು ಕೂಡ ಹಚ್ಚಲಾಗುತ್ತದೆ. ವೀಳ್ಯದೆಲೆಗೆ ಅರಿಷಿನ ಕುಂಕುಮ ಹಚ್ಚಿ, ಅದರ ಮೇಲೆ ಹಣತೆ ಇಟ್ಟು, ತುಪ್ಪದ ದೀಪ ಹಚ್ಚಬೇಕು. ಹೀಗೆ ಜೋಡಿ ದೀಪವನ್ನು ಹಚ್ಚುವುದರಿಂದ ಲಕ್ಷ್ಮೀ ಕೃಪೆ ಸದಾ ನಮ್ಮ ಮೇಲಿರುತ್ತದೆ, ಮಾಂಗಲ್ಯ ಭಾಗ್ಯ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ.
ಪುರಾಣಗಳ ಪ್ರಕಾರ, ಸೀತಾ ಮಾತೆಯು ಆಂಜನೇಯನಿಗೆ ಧನ್ಯವಾದ, ಗೌರವ ಅರ್ಪಿಸಲು ವೀಳ್ಯದೆಲೆ ಹಾಕಿದ್ದರು. ಆಂಜನೇಯನಿಗೆ ವೀಳ್ಯದೆಲೆ ಇದೇ ಕಾರಣಕ್ಕೆ ಬಹಳ ಪ್ರೀತಿ. ವಾಯುಪುತ್ರ, ಮುಖ್ಯಪ್ರಾಣ ದೇವರು, ಅಂಜನೀಪುತ್ರ, ಚಿರಂಜೀವಿ ಹೀಗೆ ಹಲವು ಹೆಸರುಗಳಿಂದ ಪೂಜಿಸಲ್ಪಡುವ ಆಂಜನೇಯನಿಗೆ ವೀಳ್ಯದೆಲೆಯ ಮಾಲೆಯನ್ನು ಹಾಕುವುದು ನೋಡಿರುತ್ತೇವೆ. ಆಂಜನೇಯನಿಗೆ ವೀಳ್ಯದೆಲೆಯನ್ನು ಹಾಕುವುದರ ಹಿಂದಿರುವ ಉದ್ದೇಶವೇನು? ಇದರ ಹಿಂದಿರುವ ಪೌರಾಣಿಕ ಕಥೆ ಏನು? ಆ ವಿವರಗಳು ಇಲ್ಲಿದೆ ಓದಿ. ಲಂಕಾಸುರ ರಾವಣನು ಸೀತಾ ಮಾತೆಯನ್ನು ಅಪಹರಿಸಿ ಅಶೋಕ ವನದಲ್ಲಿ ಬಂಧಿಸಿಟ್ಟಿದ್ದನು. ಶ್ರೀರಾಮನ ಆಜ್ಞೆಯಂತೆ ಆಂಜನೇಯನು ಸೀತಾ ಮಾತೆಯನ್ನು ಹುಡುಕುತ್ತಾ ಲಂಕೆಗೆ ಬಂದಾಗ, ಸೀತೆಯು ರಾಮನನ್ನು ನೆನೆಯುತ್ತಾ, ವೀಳ್ಯದೆಲೆಯ ತೋಟದಲ್ಲಿ ಕೂತಿದ್ದಳು.
ಆಂಜನೇಯನಿಗೆ ವೀಳ್ಯದೆಲೆ ಹಾರ ಹಾಕಿದ್ದ ಸೀತೆ!
ಆಂಜನೇಯನು ತಾನು ರಾಮನ ಬಂಟ, ರಾಮನ ಸಂದೇಶವನ್ನು ತಂದಿದ್ದೇನೆ ಎಂದು ತಿಳಿಸಿದಾಗ ಸೀತಾ ಮಾತೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಆಂಜನೇಯ ಸೀತೆಯ ಆಶೀರ್ವಾದ ಕೋರಿದಾಗ, ಸೀತೆಯ ಸಂತೋಷ ಮತ್ತಷ್ಟು ಹೆಚ್ಚಾಗಿ ವೀಳ್ಯದೆಲೆಗಳನ್ನು ಕಿತ್ತು, ಹಾರ ಮಾಡಿ ಆಂಜನೇಯನಿಗೆ ಹಾಕಿದಳಂತೆ.

ಸೀತಾ ಮಾತೆಯಿಂದ ವೀಳ್ಯದೆಲೆಯ ಹಾರ ಹಾಕಿಸಿಕೊಂಡು ಧನ್ಯನಾಗಿದ್ದ ಆಂಜನೇಯನು, ತನ್ನ ಭಕ್ತರು ವೀಳ್ಯದೆಲೆ ಅರ್ಪಿಸಿದಾಗ ಅವರನ್ನು ಹರಸುತ್ತಾನೆ ಎನ್ನುವ ನಂಬಿಕೆ ಇದೆ. ಆಂಜನೇಯನಿಗೆ ವೀಳ್ಯದೆಲೆ ಅರ್ಪಿಸುವುದು ಭಕ್ತಿಯ ಸಂಕೇತ. ಭಕ್ತರು ಅರ್ಪಿಸಿದ ವೀಳ್ಯದೆಲೆಯ ಮೂಲಕ ಆಂಜನೇಯ ತನ್ನ ಭಕ್ತಿಯನ್ನು ಸೀತಾರಾಮರಿಗೆ ಸಮರ್ಪಿಸುತ್ತಾನೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ಸಂಸ್ಕತಿಯಲ್ಲಿ ವೀಳ್ಯದೆಲೆಗೆ ಮಹತ್ವದ ಸ್ಥಾನವಿದೆ. ಯಾವುದೇ ಶುಭ ಸಂದರ್ಭಗಳಲ್ಲಿ ವೀಳ್ಯೆದೆಲೆಗಳನ್ನಿಷ್ಟು ತಾಂಬೂಲ ನೀಡಲಾಗುತ್ತದೆ. ಯಾವುದೇ ಪೂಜೆ ಇರಲಿ, ವೀಳ್ಯದೆಲೆ ಇರಲೇಬೇಕು. ಪೂಜೆಗೆ ಮಾತ್ರವಲ್ಲ, ವೀಳ್ಯದೆಲೆಯನ್ನು ಔಷಧವಾಗಿಯೂ ಬಳಸಲಾಗುತ್ತದೆ.
ಮುಂದಿನ ಬಾರಿ ಆಂಜನೇಯನಿಗೆ ವೀಳ್ಯದೆಲೆ ಮಾಲೆ ಹಾಕುವಾಗ, ನಿಮ್ಮ ಭಕ್ತಿ ಸೀತಾರಾಮರಿಗೂ ತಲುಪಲಿದೆ ಎನ್ನುವುದನ್ನು ಮರೆಯಬೇಡಿ.
ಸಂಗ್ರಹ ಮಾಹಿತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post